ಬೆಂಗಳೂರು: ಬೆಂಗಳೂರು-ದೆಹಲಿ ಮಾರ್ಗದ ರೈಲಿನಲ್ಲಿ ಅನಧಿಕೃತ ಆಹಾರ ಮಾರಾಟಗಾರರು ಹಾಗೂ ರೈಲ್ವೆಯ ಪ್ಯಾಂಟ್ರಿ ಸಿಬ್ಬಂದಿ ನಡುವೆ ನಡೆದ ವಾಗ್ವಾದ ಹಿಂಸಾತ್ಮಕ ರೂಪ ಪಡೆದು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ರೈಲಿನಲ್ಲಿ ಆಹಾರ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅನಧಿಕೃತ ಮಾರಾಟಗಾರರು ಹಾಗೂ ಪ್ಯಾಂಟ್ರಿ ಕಾರಿನ ಸಿಬ್ಬಂದಿ ನಡುವೆ ಆರಂಭವಾದ ಮಾತಿನ ಚಕಮಕಿ ಬಳಿಕ ಉದ್ವಿಗ್ನತೆ ಹೆಚ್ಚಾಗಿದೆ. ಪರಿಸ್ಥಿತಿ ನಿಯಂತ್ರಣ ತಪ್ಪಿ ಚಾಕು ಇರಿತದ ಮಟ್ಟಕ್ಕೆ ತಲುಪಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : ನಾಗ್ಪುರ ವಿದ್ಯಾರ್ಥಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ: ನೀಟ್ ಮರುಪರೀಕ್ಷೆಗೆ ಒಂದು ದಿನ ಬಾಕಿ ಇರುವಾಗ ಎನ್‌ಟಿಎ ಎಡವಟ್ಟು
ಗಾಯಗೊಂಡವರಲ್ಲಿ ಪ್ಯಾಂಟ್ರಿ ವಿಭಾಗದ ಸಿಬ್ಬಂದಿಯೂ ಸೇರಿದ್ದು, ಅವರಿಗೆ ತಕ್ಷಣ ಚಿಕಿತ್ಸೆ ಒದಗಿಸಲಾಗಿದೆ. ಘಟನೆಯಿಂದ ರೈಲಿನಲ್ಲಿದ್ದ ಪ್ರಯಾಣಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಈ ಘಟನೆ ರೈಲುಗಳಲ್ಲಿ ಅನಧಿಕೃತ ಮಾರಾಟಗಾರರ ಹಾವಳಿ ಹಾಗೂ ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಯ ಸುರಕ್ಷತೆ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ರೈಲ್ವೆ ಅಧಿಕಾರಿಗಳು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ರೈಲುಗಳಲ್ಲಿ ಅನಧಿಕೃತ ಮಾರಾಟಗಾರರ ಪ್ರವೇಶವನ್ನು ತಡೆಯಲು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಇದನ್ನೂ ನೋಡಿ : ಭೂಮಿ ಹೋಯ್ತು, ಉದ್ಯೋಗ ಸಿಗಲಿಲ್ಲ! 13 ವರ್ಷ ಕಳೆದರೂ ಸಿಗದ ನ್ಯಾಯ! Janashakthi Media
