ಹುಬ್ಬಳ್ಳಿ: ನೆನೆಗುದಿಗೆ ಬಿದ್ದಿರುವ ಮಹದಾಯಿ ಕಳಸಾ-ಬಂಡೂರಿ ಯೋಜನೆಗೆ ಅಗತ್ಯ ಅನುಮತಿಗಳನ್ನು ತ್ವರಿತವಾಗಿ ನೀಡಬೇಕು ಎಂದು ಆಗ್ರಹಿಸಿ ಮಹದಾಯಿ ಕಳಸಾ-ಬಂಡೂರಿ ಹೋರಾಟ ಸಮಿತಿ ನೇತೃತ್ವದಲ್ಲಿ ಶನಿವಾರ ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಹಾಗೂ ಹೋರಾಟಗಾರರನ್ನು ಪೊಲೀಸರು ಏಕಾಏಕಿ ಬಂಧಿಸಿದ್ದು, ಬಳಿಕ ಬಿಡುಗಡೆ ಮಾಡಿದರು.
ಮಹದಾಯಿ ಕಳಸಾ-ಬಂಡೂರಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ನ್ಯಾಯಾಲಯದಲ್ಲಿರುವ ವ್ಯಾಜ್ಯ, ಗೋವಾ ರಾಜ್ಯದ ಆಕ್ಷೇಪ ಸೇರಿದಂತೆ ವಿವಿಧ ಕಾರಣಗಳನ್ನು ಉಲ್ಲೇಖಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ವಾಪಸ್ ಕಳುಹಿಸಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.
ಯೋಜನೆ ಜಾರಿಗೆ ಎದುರಾಗಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸಿ ಅಗತ್ಯ ಅನುಮತಿಗಳನ್ನು ಪಡೆಯುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ರಾಜ್ಯದ ಸಂಸದರು ವಿಫಲರಾಗಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದರು. ಕೇಂದ್ರದ ಮೇಲೆ ಹೊಣೆ ಹೊರಿಸಿ ಕಾಲಹರಣ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನೂ ಅವರು ಟೀಕಿಸಿದರು.
ಇದನ್ನೂ ಓದಿ : ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಗೊಂದಲ: ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಯಾವಾಗ?
ಪ್ರತಿಭಟನೆಯ ವೇಳೆ “ಮಹದಾಯಿ ನೀರು ನಮ್ಮ ಹಕ್ಕು”, “ಕುಡಿಯುವ ನೀರಿನಲ್ಲಿ ನೀಚ ರಾಜಕಾರಣ ನಿಲ್ಲಿಸಿ”, “ಮಹದಾಯಿ ನೀರನ್ನು ಮಲಪ್ರಭೆಗೆ ಹರಿಸಿ” ಎಂಬ ಘೋಷಣೆಗಳನ್ನು ಕೂಗಿ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಹದಾಯಿ ಕಳಸಾ-ಬಂಡೂರಿ ಯೋಜನೆಯನ್ನು ಯಾವುದೇ ವಿಳಂಬವಿಲ್ಲದೆ ಜಾರಿಗೆ ತಂದು ಉತ್ತರ ಕರ್ನಾಟಕದ ಜನರಿಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಹೋರಾಟ ಸಮಿತಿ ಒತ್ತಾಯಿಸಿತು.
ಇದನ್ನೂ ನೋಡಿ : ಭಗತ್ ಸಿಂಗ್ ಮೆಮೋರಿಯಲ್ ಟ್ರಸ್ಟ್ | ಕರಾವಳಿಯ ಸಾಂಸ್ಕೃತಿಕ ರಾಜಕಾರಣ ಅಳವು ಅರಿಯದ ಭಾಷೆ | ಅಭಿಮತ ಮಂಗಳೂರು
