ಬೆಂಗಳೂರು: ರಾಜ್ಯದಲ್ಲಿ ಪರಿಷ್ಕರಣೆಗೊಂಡು ಜಾರಿಯಲ್ಲಿರುವ ಕನಿಷ್ಠ ವೇತನವನ್ನು ಪುನರ್ಪರಿಶೀಲಿಸುವ ನಿರ್ಧಾರವನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಶ್ರಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಕಾರ್ಮಿಕರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಜುಲೈ 30ರಂದು ಪ್ರತಿಭಟನಾ ಧರಣಿ ನಡೆಸಿದರು.
ಕನಿಷ್ಠ ವೇತನ ಪರಿಷ್ಕರಣೆಯನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಕಾರ್ಮಿಕ ಸಮುದಾಯದಲ್ಲಿ ತೀವ್ರ ಅಸಮಾಧಾನ ಮತ್ತು ಆಘಾತಕ್ಕೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು. 2017–18ರಿಂದ ಬಾಕಿ ಉಳಿದಿದ್ದ ಕನಿಷ್ಠ ವೇತನ ಪರಿಷ್ಕರಣೆಯನ್ನು ಎಂಟು ವರ್ಷಗಳ ಬಳಿಕ ಜಾರಿಗೊಳಿಸಲಾಗಿದ್ದು, ಇದೀಗ ಅದನ್ನು ಹಿಂಪಡೆಯಲು ಮುಂದಾಗಿರುವುದು ಕಾರ್ಮಿಕ ವಿರೋಧಿ ಕ್ರಮ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
2026ರ ಕನಿಷ್ಠ ವೇತನ ಪರಿಷ್ಕರಣೆಯಿಂದ ರಾಜ್ಯದ ಒಂದು ಕೋಟಿಗೂ ಹೆಚ್ಚು ಶ್ರಮಿಕ ವರ್ಗದ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಹೆಚ್ಚಿದ ವೇತನದಿಂದ ಕಾರ್ಮಿಕರ ಖರೀದಿ ಸಾಮರ್ಥ್ಯ ಹೆಚ್ಚುವುದರ ಜೊತೆಗೆ ರಾಜ್ಯದ ಆರ್ಥಿಕತೆಯಲ್ಲಿನ ಒಟ್ಟಾರೆ ಬೇಡಿಕೆಯೂ ವೃದ್ಧಿಯಾಗಲಿದೆ. ಹೀಗಾಗಿ ಜಾರಿಯಲ್ಲಿರುವ ಕನಿಷ್ಠ ವೇತನ ಪರಿಷ್ಕರಣೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಎನ್ಡಿಎ ಸಭೆಯಲ್ಲಿ ಟಿಎಂಸಿ ಬಂಡಾಯ ಸಂಸದರು ; ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ
ಕನಿಷ್ಠ ವೇತನ ಪರಿಷ್ಕರಣೆ ಪ್ರಕ್ರಿಯೆಯು ವೈಜ್ಞಾನಿಕ ಮತ್ತು ಕಾನೂನುಬದ್ಧ ವಿಧಾನದಲ್ಲಿ ನಡೆದಿದೆ ಎಂದು ಸಂಘಟನೆಗಳು ತಿಳಿಸಿವೆ. 2025ರ ಏಪ್ರಿಲ್ನಲ್ಲಿ ಕರಡು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆ ಸಲ್ಲಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿತ್ತು. 15ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಮಾನದಂಡಗಳು ಹಾಗೂ ಆಹಾರ, ಬಟ್ಟೆ ಮತ್ತು ವಸತಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳನ್ನು ಆಧರಿಸಿ ಪರಿಷ್ಕೃತ ವೇತನ ದರಗಳನ್ನು ಲೆಕ್ಕಹಾಕಲಾಗಿದೆ. ಈ ಕುರಿತು 2025ರ ಜುಲೈ ಮತ್ತು ಆಗಸ್ಟ್ನಲ್ಲಿ ಸುದೀರ್ಘ ಚರ್ಚೆಯೂ ನಡೆದಿತ್ತು ಎಂದು ಪ್ರತಿಭಟನಾಕಾರರು ಹೇಳಿದರು.
ಕನಿಷ್ಠ ವೇತನದ ಹೆಚ್ಚಳವು ಸರಿಸುಮಾರು ಶೇ.40ರಷ್ಟೇ ಇದ್ದು, ಉದ್ಯೋಗದಾತರು ಪ್ರತಿಪಾದಿಸುತ್ತಿರುವಂತೆ ಶೇ.60ರಷ್ಟು ಅಲ್ಲ ಎಂದು ಸಂಘಟನೆಗಳು ಸ್ಪಷ್ಟಪಡಿಸಿದವು. ಈಗಾಗಲೇ ಕೆಪಿಟಿಸಿಎಲ್ ಸೇರಿದಂತೆ ಹಲವು ಮಂಡಳಿಗಳು, ನಿಗಮಗಳು ಹಾಗೂ ಖಾಸಗಿ ಸಂಸ್ಥೆಗಳು ಪರಿಷ್ಕೃತ ವೇತನ ದರಗಳನ್ನು ಜಾರಿಗೆ ತಂದಿವೆ. ಹೀಗಾಗಿ ಕಾರ್ಮಿಕರಿಗೆ ದೊರೆತಿರುವ ಹಕ್ಕನ್ನು ಹಿಂಪಡೆಯುವುದು ಕಾನೂನುಬಾಹಿರವಾಗಲಿದೆ ಎಂದು ಮುಖಂಡರು ಎಚ್ಚರಿಸಿದರು.
3.8 ಲಕ್ಷ ಗುತ್ತಿಗೆ ಹಾಗೂ ಹೊರಗುತ್ತಿಗೆ ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ ಜಾರಿಗೊಳಿಸಲು ವಾರ್ಷಿಕ ಸುಮಾರು ₹3,200 ಕೋಟಿ ವೆಚ್ಚವಾಗಲಿದೆ. ಇದು ರಾಜ್ಯದ ಒಟ್ಟಾರೆ ಬಜೆಟ್ಗೆ ಹೋಲಿಸಿದರೆ ಅತ್ಯಲ್ಪ ಮೊತ್ತವಾಗಿದ್ದು, ಕಾರ್ಮಿಕರ ಜೀವನಮಟ್ಟ ಸುಧಾರಣೆಯ ದೃಷ್ಟಿಯಿಂದ ಸರ್ಕಾರ ಇದನ್ನು ಹೊರೆಯಾಗಿ ಪರಿಗಣಿಸಬಾರದು ಎಂದು ಒತ್ತಾಯಿಸಿದರು.

ಉದ್ಯೋಗದಾತರ ಒತ್ತಡಕ್ಕೆ ಮಣಿದು ಕನಿಷ್ಠ ವೇತನ ಪರಿಷ್ಕರಣೆಯನ್ನು ಮರುಪರಿಶೀಲಿಸುವ ಅಥವಾ ಹಿಂಪಡೆಯುವ ಯಾವುದೇ ಪ್ರಯತ್ನವನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳ ಮುಂದೆ ಪಿಕೆಟಿಂಗ್, ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆಗಳು ಹಾಗೂ ರಾಜ್ಯ ಮಟ್ಟದ ಬಂದ್ ಸೇರಿದಂತೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕಾರ್ಮಿಕ ಸಂಘಟನೆಗಳು ಎಚ್ಚರಿಕೆ ನೀಡಿದವು.
ಪ್ರತಿಭಟನೆಯಲ್ಲಿ ಜೆಸಿಟಿಯು ರಾಜ್ಯ ಸಂಚಾಲಕ ಕೆ.ವಿ. ಭಟ್, ಸಿಐಟಿಯು ರಾಜ್ಯ ಅಧ್ಯಕ್ಷ ಮೀನಾಕ್ಷಿ ಸುಂದರಂ, ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮೀ, ಎಐಸಿಸಿಟಿಯು ರಾಜ್ಯಾಧ್ಯಕ್ಷ ಅಪ್ಪಣ್ಣ, ರಾಜ್ಯ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್, ಐಎನ್ಟಿಯುಸಿಯ ಶಾಮಣ್ಣ ರೆಡ್ಡಿ, ಟಿಯುಸಿಸಿಯ ಶಿವಶಂಕರ್, ಮುಖಂಡರಾದ ಕಾಳಪ್ಪ, ಪ್ರದೀಪ್ ಕುಮಾರ್ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ನೂರಾರು ಕಾರ್ಮಿಕರು ಭಾಗವಹಿಸಿದ್ದರು.
ಇದನ್ನೂ ನೋಡಿ: ನೀಟ್ ಹಗರಣ | ವಿದ್ಯಾರ್ಥಿಗಳೇ ಎದ್ದೇಳಿ! ಹೋರಾಟಕ್ಕೆ ಜೊತೆಯಾಗಿ — ನಟ ಕಿಶೋರ್ ಮನವಿ Janashakthi Media
