ಜೀವಪ್ರೀತಿ ಇಲ್ಲದ ನೆಲದಲ್ಲಿ ಸತ್ಯಾಗ್ರಹ ಮತ್ತು ನ್ಯಾಯ

ಸಾವಿಗೆ ಮರುಗದ ಸಮಾಜವೊಂದು ನಮ್ಮ ಕಣ್ಮುಂದೆಯೇ ಆಲದ ಮರದಂತೆ ವ್ಯಾಪಿಸುತ್ತಿದೆ
ಭಾರತದ ನೆಲದಲ್ಲಿ ಪ್ರಜಾಪ್ರಭುತ್ವದ ಲಕ್ಷಣಗಳು ಬೇರೂರಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್‌ ಪದೇ ಪದೇ ಹೇಳುತ್ತಿದ್ದುದುಂಟು. ರಾಜಕೀಯವಾಗಿ ಇದು ಎಂಟು ದಶಕಗಳು ಕಳೆದರೂ ಬದಲಾಗಿಲ್ಲ. ಪ್ರಜಾತಾಂತ್ರಿಕ ಮೌಲ್ಯಗಳ ಚಿಗುರು, ಸಸಿ ಅಲ್ಲಲ್ಲಿ ಕಾಣುತ್ತಿದ್ದರೂ, ಸಮಾಜದ ಪ್ರತಿ ವ್ಯಕ್ತಿಯನ್ನೂ ತನ್ನಂತೆಯೇ ಭಾವಿಸುವ ಒಂದು ಜೀವನ ಮೌಲ್ಯ 2026ರಲ್ಲೂ ಕಾಣಲಾಗುವುದಿಲ್ಲ. ಈ ಕಟು ವಾಸ್ತವವನ್ನು ನಿರೂಪಿಸುವಂತಹ ನೂರಾರು ಅಮಾನುಷ ಕೃತ್ಯಗಳು, ಚಟುವಟಿಕೆಗಳು, ವ್ಯವಸ್ಥಿತ ಹತ್ಯಾಕಾಂಡಗಳು ನಮ್ಮಲ್ಲಿ ನಡೆದುಹೋಗಿವೆ. ಸಾವನ್ನು ಸಂಭ್ರಮಿಸುವ ಮತಾಂಧರ ಅತಿರೇಕ ಒಂದೆಡೆಯಾದರೆ, ನಮ್ಮವರಲ್ಲದ  ಅಥವಾ ಅನ್ಯರ ಸಾವು-ಹತ್ಯೆಯನ್ನು ಮೌನವಾಗಿ ಸಹಿಸಿಕೊಳ್ಳುವ ದುರಭಿಮಾನ ಮತ್ತೊಂದೆಡೆ ಕಾಣುತ್ತದೆ. ಜೀವಪ್ರೀತಿ

– ನಾ ದಿವಾಕರ

ರಾಜಕೀಯ ಮಸೂರದಿಂದ ನೋಡಿದಾಗ, ಕೆಲವರ ಸಾವಿಗೆ/ಹತ್ಯೆಗೆ ಸಂತಾಪ ವ್ಯಕ್ತಪಡಿಸುವುದೂ ಸಹ ಕಾನೂನು ದೃಷ್ಟಿಯಲ್ಲಿ ಅಪರಾಧವಾಗುವುದನ್ನೂ ನೋಡುತ್ತಿದ್ದೇವೆ (ಗೌರಿ ಕಲ್ಬುರ್ಗಿ ಪನ್ಸಾರೆ ಮೊದಲಾದವರು). ಅಂದರೆ ಸಮಾಜವೊಂದು ತನ್ನ ಅಸೂಕ್ಷ್ಮತೆಗಳನ್ನು ಕ್ರಮೇಣ ಕಳೆದುಕೊಂಡು ಸೂಕ್ಷ್ಮ ಸಂವೇದನೆಯನ್ನು ಬೆಳೆಸಿಕೊಳ್ಳುವ ಔದಾತ್ಯಕ್ಕೆ ಭಾರತೀಯ ಸಮಾಜದ ಹೊರತಾಗಿದೆ. ʻನಮ್ಮವರಲ್ಲದವರನ್ನು ʼ ಇಲ್ಲವಾಗಿಸುವ ಸೈದ್ದಾಂತಿಕ ನೆಲೆಗಳು ವ್ಯವಸ್ಥಿತವಾಗಿ ಬೆಳೆಯುತ್ತಿವೆ. ಇಲ್ಲಿ ಹಂತಕರು ಮತ್ತು ಸಂತ್ರಸ್ತರು (ಬಲಿಯಾಗುವವರು) ಸಾಪೇಕ್ಷ ನೆಲೆಯಲ್ಲಿ (Relative terms) ಗುರುತಿಸಲ್ಪಡುತ್ತಾರೆ. ಈ ಸಾಪೇಕ್ಷತೆಯ (Relativity) ಚೌಕಟ್ಟಿನೊಳಗೆ ಜಾತಿ, ಮತ, ಧರ್ಮ, ಸಮುದಾಯ, ವರ್ಗ ಮತ್ತು ಕೆಲವೊಮ್ಮೆ ನಿರ್ದಿಷ್ಟ ಸಮಾಜಗಳೂ ಸಹ ಸೇರಿಕೊಳ್ಳುತ್ತವೆ.

ಸತ್ಯಾಗ್ರಹ ಮತ್ತು ನ್ಯಾಯದ ಕೂಗು

ಇಂತಹ ಒಂದು ಸಮಾಜದಲ್ಲಿ ನ್ಯಾಯಕ್ಕಾಗಿ ಅಥವಾ ಸತ್ಯಶೋಧನೆಗಾಗಿ ನಡೆಯುವ ಹೋರಾಟಗಳಲ್ಲಿ ʻಆಮರಣಾಂತ ಉಪವಾಸ ಸತ್ಯಾಗ್ರಹ ʼ ಎಂಬ ಗಾಂಧಿಯ ಕಲ್ಪನೆ ಹೇಗೆ ಕಾಣಲು ಸಾಧ್ಯ ? ಹಸಿವು ಮತ್ತು ಉಪವಾಸ ಈ ಎರಡನ್ನೂ ಪ್ರತ್ಯೇಕಿಸಿ ನೋಡಿದಾಗ, ವ್ಯಕ್ತಿಯು ತಮ್ಮ ಮೇಲೆ ಸ್ವಪ್ರೇರಣೆಯಿಂದ ಹೇರಿಕೊಳ್ಳುವ ಉಪವಾಸ ನಮ್ಮಲ್ಲಿ ಉದಾತ್ತ ನಡವಳಿಕೆಯಾಗಿ ಪರಿಗಣಿಸಲ್ಪಡುತ್ತದೆ. ಆದರೆ ತಮ್ಮ ಕೈಮೀರಿ ಜನರು ಅನುಭವಿಸುವ ಹಸಿವು ಸ್ವಾಭಾವಿಕ ಸಾಮಾಜಿಕ ವಿದ್ಯಮಾನವಾಗಿಬಿಡುತ್ತದೆ. ಸಾಂಪ್ರದಾಯಿಕ ಅರ್ಥದಲ್ಲಿ ʻಪಾಪ ಕರ್ಮಗಳುʼ ಇದನ್ನು ನಿರ್ದೇಶಿಸುತ್ತವೆ. ಹಾಗಾಗಿಯೇ ಡಿಜಿಟಲ್‌ ಭಾರತದಲ್ಲೂ ಸಹ ಹಸಿವಿನಿಂದ ಸಾಯುವ ಬಡ ಜನರು, ಕೂಳಿಲ್ಲದೆ ಜೀವ ಕಳೆದುಕೊಳ್ಳುವ ಕೆಳಸ್ಗರದ ಜನರು ಸದಾ ನಗಣ್ಯವಾಗಿಯೇ ಕಾಣಲ್ಪಡುತ್ತಾರೆ. (ಕೋವಿದ್‌—ಲಾಕ್‌ಡೌನ್‌ ಸಂದರ್ಭದಲ್ಲಿ ಇದು ಸ್ಪಷ್ಟವಾಗಿ ಕಂಡಿತ್ತು). ಜೀವಪ್ರೀತಿ

ಇದನ್ನೂ ಓದಿ: ಫಾರ್ಮ್‌ ೬ರಲ್ಲಿ ಕಡ್ಡಾಯ ಘೋಷಣೆ ಸೇರ್ಪಡೆ:ತಕ್ಷಣವೇ ಹಿಂತೆಗೆದುಕೊಳ್ಳಿ- ಮುಖ್ಯ ಚುನಾವಣಾ ಆಯುಕ್ತರಿಗೆ ಜಾನ್‌ ಬ್ರಿಟ್ಟಾಸ್‌ ಪತ್ರ

ಈ ತಾತ್ವಿಕ ದೃಷ್ಟಿಕೋನದಿಂದಲೇ ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರು ಎದುರಿಸುವ ಅನ್ಯಾಯಗಳ ವಿರುದ್ಧ ಹೋರಾಡುವ ಒಂದು ಮಾರ್ಗವಾಗಿ ʼಉಪವಾಸ ಸತ್ಯಾಗ್ರಹʼವನ್ನೂ ಗಮನಿಸಬೇಕಾಗುತ್ತದೆ. ತಮ್ಮ ಜೀವ ಕಾಪಾಡಿಕೊಳ್ಳಲು ಅನ್ಯ ಮಾರ್ಗವಿಲ್ಲದೆ ಉಪವಾಸ ಇರುವ ಲಕ್ಷಾಂತರ ಬಡ ಜನರ ಹಸಿವು ಈ ಚೌಕಟ್ಟಿನಲ್ಲಿ ಜಾಗವನ್ನೇ ಪಡೆಯುವುದಿಲ್ಲ. ಏಕೆಂದರೆ ಅವರು ಹೋರಾಡುವುದು ಸ್ವತಃ ತಮ್ಮ ವಿರುದ್ಧವೇ ಆಗಿರುತ್ತದೆ. ಬಾಹ್ಯ ಸಮಾಜದಲ್ಲಿ ಜನಸಾಮಾನ್ಯರಿಗೆ, ತಳಸ್ತರದ ಸಮುದಾಯಗಳಿಗೆ, ಶೋಷಿತರಿಗೆ, ಪರಿಸರ-ಜೀವ ವೈವಿಧ್ಯಗಳಿಗೆ, ಜಲ-ಅರಣ್ಯ-ನಿಸರ್ಗ ಸಂಪನ್ಮೂಲಗಳಿಗೆ ಧಕ್ಕೆ ಉಂಟಾದಾಗಲೆಲ್ಲಾ ಸಮಾಜದ ಕೆಲವು ಮನಸ್ಸುಗಳಾದರೂ ವ್ಯವಸ್ಥೆಯ ವಿರುದ್ಧ ಬಂಡಾಯ ಹೂಡುತ್ತವೆ. ಅನ್ಯಾಯದ ವಿರುದ್ಧದ ಹೋರಾಟಕ್ಕೆ ‘ಸಿದ್ಧಪಡಿಸಿದ ಮಾದರಿಗಳು’ (Readymade Models) ಇರುವುದಿಲ್ಲ. ಸಾಂದರ್ಭಿಕವಾಗಿ ಅದು ತನ್ನದೇ ಆದ ವಿಶಿಷ್ಟ ಮಾರ್ಗಗಳನ್ನು ಅನುಸರಿಸುತ್ತದೆ. ಜೀವಪ್ರೀತಿ

ಹಾಗಾಗಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಕಳೆದ ಹಲವು ದಿನಗಳಿಂದ ಹೋರಾಡುತ್ತಿರುವ ವಿದ್ಯಾರ್ಥಿ-ಯುವ ಜನರ ಪ್ರತಿರೋಧದ ದನಿಗೆ ದನಿಗೂಡಿಸಿರುವ ಸಾಮಾಜಿಕ ಹೋರಾಟಗಾರ ಸೋನಮ್‌ ವಾಂಗ್ಚುಕ್‌ ಅವರ ʻಆಮರಣಾಂತ ಉಪವಾಸ ಸತ್ಯಾಗ್ರಹʼ ವನ್ನು ಅಗತ್ಯ-ಅನಗತ್ಯ ಅಥವಾ ತಪ್ಪು-ಸರಿಯ ನೆಲೆಯಲ್ಲಿ ನಿಷ್ಕರ್ಷೆ ಮಾಡಲಾಗುವುದಿಲ್ಲ. ದೇಶದ ಯುವ ಜನಾಂಗ ನೀಟ್‌ ಪರೀಕ್ಷೆಯ ಹಗರಣಗಳ ವಿರುದ್ಧ, ಭ್ರಷ್ಟಕೂಪಗಳಿಗೆ ಬಲಿಯಾದ 20ಕ್ಕೂ ಹೆಚ್ಚು ಶಿಕ್ಷಣಾರ್ಥಿಗಳ ಪರವಾಗಿ , ಸಾಂವಿಧಾನಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಒಂದು ಹಂತದಲ್ಲಿ ಇದು ಆಳುವ ವರ್ಗಗಳಲ್ಲಿ ಕಂಪನ ಸೃಷ್ಟಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಜೀವಪ್ರೀತಿ

ವಿದ್ಯಾರ್ಥಿ ಯುವಜನರ ಭವಿಷ್ಯ

ಯುವ ಸಮೂಹವೇ ಹುಟ್ಟುಹಾಕಿದ ಕಾಕ್ರೋಚ್‌ ಜನತಾ ಪಕ್ಷ ಎಂಬ ಹೊಸ ಸಂಘಟನೆ ಈ ಹೋರಾಟದ ಮುಂಚೂಣಿಯಲ್ಲಿದ್ದರೂ, ದೇಶದ ಸಮಸ್ತ ವಿದ್ಯಾರ್ಥಿ ಸಮೂಹ ತಮ್ಮ ಸಾಂಘಿಕ ಭಿನ್ನ ಭೇದಗಳನ್ನೂ ಬದಿಗೊತ್ತಿ ದನಿಗೂಡಿಸಿವೆ. ಲಡಾಖ್‌ ಪ್ರಾಂತ್ಯದ ಪ್ರತ್ಯೇಕ ರಾಜ್ಯದ ಸ್ಥಾನಮಾನಕ್ಕಾಗಿ ಹೋರಾಡುತ್ತಲೇ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿರುವ ಪರಿಸರವಾದಿ ಸೋನಂ ವಾಂಗ್ಚುಕ್‌ ಈ ಯುವ ಜನಾಂಗದ ಹೋರಾಟಕ್ಕೆ ಹೊಸ ಆಯಾಮವನ್ನು ನೀಡಿದ್ದಾರೆ. ʼಉಪವಾಸ ಸತ್ಯಾಗ್ರಹʼ ದ ಗಾಂಧಿ ಮಾರ್ಗದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗಾಗಿ ಆಗ್ರಹಿಸುತ್ತಿದ್ದಾರೆ.  ಇದರ ಔಚಿತ್ಯ ಚರ್ಚಾಸ್ಪದವಾದರೂ, ಉದ್ದೇಶ ಪ್ರಶ್ನಾತೀತ. ಜೀವಪ್ರೀತಿ

ಲಕ್ಷಾಂತರ ಶಿಕ್ಷಣಾರ್ಥಿಗಳ ಭವಿಷ್ಯವನ್ನೇ ಅಲುಗಾಡಿಸುವಂತಹ ಬೃಹತ್‌ ಭ್ರಷ್ಟಾಚಾರದ ಹಗರಣಕ್ಕೆ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕಿತ್ತು. ಆದರೆ ಹೀಗೆ ಯೋಚಿಸಬೇಕಾದರೆ ನಾವು 50 ವರ್ಷಗಳಷ್ಟು ಹಿಂದಕ್ಕೆ ಜಾರಬೇಕು. ಏಕೆಂದರೆ ಡಿಜಿಟಲ್‌ ಯುಗದ ನವ ಭಾರತ ತನ್ನ ವಿಕಾಸದ ಹಾದಿಯಲ್ಲಿ ಈ ನೈತಿಕ ಮೌಲ್ಯಗಳಿಗೆ ಮಾನ್ಯತೆಯನ್ನೇ ಕೊಡುವುದಿಲ್ಲ. “ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಸಚಿವ ” ಎಂಬ ಪತ್ರಿಕೆಗಳ-ಟಿವಿ ವಾಹಿನಿಗಳ ಹೆಡ್‌ಲೈನ್‌ ಮಿಲೆನಿಯಲ್‌ ಯುಗದ ಯುವ ಜನಾಂಗಕ್ಕೆ ಪರಿಚಯವೇ ಇಲ್ಲ. ಏಕೆಂದರೆ ಭಾರತ ಬದಲಾಗಿದೆ. ಬದಲಾಗುತ್ತಿದೆ. ಈ ಸಚಿವರನ್ನು ಪದಚ್ಯುತಗೊಳಿಸುವಷ್ಟು ಸೂಕ್ಷ್ಮತೆ-ಸಾಂವಿಧಾನಿಕ ಮೌಲ್ಯಗಳನ್ನು ಸರ್ಕಾರಗಳು ಎಂದೋ ಕಳೆದುಕೊಂಡಿವೆ. ಜೀವಪ್ರೀತಿ

ಕಣ್ಣಿಗೆ ಕಾಣುವಂತೆ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ಈವೇಳೆಗಾಗಲೇ ವಿಸ್ಮೃತಿಗೆ ಜಾರಿರುವ 20ಕ್ಕೂ ಹೆಚ್ಚು ಶಿಕ್ಷಣಾರ್ಥಿಗಳ ಆತ್ಮಹತ್ಯೆಗಳು, ಸೂಕ್ಷ್ಮ ಸಂವೇದನೆ ಇರುವ ಯಾವುದೇ ಆಡಳಿತ ವ್ಯವಸ್ಥೆಯಲ್ಲಿ ಕಂಪನ ಮೂಡಿಸಬೇಕಿತ್ತು. ಸಂಬಂಧಪಟ್ಟ ಸಚಿವರು ಸ್ವಪ್ರೇರಣೆಯಿಂದ ಕೆಳಗಿಳಿಯಬೇಕಿತ್ತು. ಅಥವಾ ಪಾರದರ್ಶಕ-ಜವಾಬ್ದಾರಿಯುತ ಆಡಳಿತವಾಗಿದ್ದಲ್ಲಿ ಸರ್ಕಾರ ಸಚಿವರನ್ನು ಪದಚ್ಯುತಗೊಳಿಸಬೇಕಿತ್ತು. ಆದರೆ ಈ ಒಂದು ಬೇಡಿಕೆಗಾಗಿ ಹಿರಿಯ ಪರಿಸರವಾದಿಯೊಬ್ಬರು ತಮ್ಮ ಜೀವ ಪಣಕ್ಕಿಟ್ಟು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈಗಾಗಲೇ 19 ದಿನಗಳು ಕಳೆದು ಸೋನಂ ವಾಂಗ್ಚುಕ್‌ ಅವರ ಆರೋಗ್ಯ ಕ್ಷೀಣಿಸುತ್ತಲೇ ಇದೆ. ದಿನೇದಿನೇ ಕೃಷವಾಗುತ್ತಿರುವ ವಾಂಗ್ಚುಕ್‌ ಅವರಿಗಾಗಿ ಇಡೀ ದೇಶವೇ ಮರುಗುತ್ತಿದೆ. ಜೀವಪ್ರೀತಿ

ಈ ಮರುಗುವ  ಮನಸ್ಸುಗಳನ್ನು ಅರ್ಬನ್‌ ನಕ್ಷಲ್‌ಗಳೆಂದೋ ಅಥವಾ ಆಂದೋಲನ ಜೀವಿಗಳೆಂದೋ ಹೀಗಳೆಯಲಾಗುತ್ತದೆ. ಸಾಮಾಜಿಕ ತಾಣಗಳ (Social Media) ಟ್ರೋಲ್‌ ಕಾರ್ಖಾನೆಗಳಲ್ಲಿ ಉತ್ಪಾದಿತವಾಗುವ ರೋಚಕ ಮಾತುಗಳು ವಾಸ್ತವವನ್ನು ಮರೆಮಾಚಲಾಗುವುದಿಲ್ಲ. ವಾಂಗ್ಚುಕ್‌ ತಮಗಾಗಿ ಜೀವ ಪಣಕ್ಕಿಟ್ಟಿಲ್ಲ. ಅಥವಾ ತಮ್ಮ ತಾಯ್ನೆಲ ಲಡಾಖ್‌ಗಾಗಿ ಅನ್ನ ನೀರಿಲ್ಲದೆ ಕುಳಿತಿಲ್ಲ. ಅವರು ಪ್ರತಿನಿಧಿಸುತ್ತಿರುವುದು ಭವಿಷ್ಯದ ಸಮಾಜವನ್ನು, ವರ್ತಮಾನದ ಯುವ ಜನಾಂಗವನ್ನು ಮತ್ತು ನೊಂದ ಯುವ ಮನಸ್ಸುಗಳನ್ನು. ವಾಂಗ್ಚುಕ್‌ ಅವರಿಗಾಗಿ ಮರುಗುವುದು ಎಂದರೆ ಈ ಯುವ ಜನಾಂಗದ ನೋವಿನ ಕೂಗಿಗೆ ಸ್ಪಂದಿಸುವುದು ಎಂದೇ ಅರ್ಥ ಅಲ್ಲವೇ ? ಜೀವಪ್ರೀತಿ

ಶೈಕ್ಷಣಿಕ ಮಾರುಕಟ್ಟೆಯ ಸಮಸ್ಯೆ

ಈ ವಿದ್ಯಾರ್ಥಿ ಸಮೂಹದ-ಯುವ ಜನಾಂಗದ ಕೂಗು ಏನು ಹೇಳುತ್ತಿದೆ ? ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ಕೇಳುತ್ತಿಲ್ಲ. ಶಿಕ್ಷಣದ ರಾಷ್ಟ್ರೀಕರಣಕ್ಕಾಗಿ ಆಗ್ರಹಿಸುತ್ತಿಲ್ಲ.  ಶಿಕ್ಷಣ ಕ್ಷೇತ್ರವನ್ನು, ವಿಶೇಷವಾಗಿ ಉನ್ನತ ಶಿಕ್ಷಣವನ್ನು ಕಾರ್ಪೋರೇಟ್‌ ಮಾರುಕಟ್ಟೆಯ ಸಂಕೋಲೆಗಳಿಂದ ಮುಕ್ತಗೊಳಿಸಲು ಕೋರುತ್ತಿಲ್ಲ. ಇವರ ಆಗ್ರಹ ಇರುವುದು ಕೇಂದ್ರ ಶಿಕ್ಷಣ ಸಚಿವರ, ತನ್ಮೂಲಕ ಕೇಂದ್ರ ಸರ್ಕಾರದ, ನೈತಿಕ ಹೊಣೆಗಾರಿಕೆಯ ನಿರ್ವಹಣೆ ಅಷ್ಟೇ ಅಲ್ಲವೇ ? ಇವರ ಪ್ರತಿಭಟನೆ ಶಾಂತಿಯುತವಾಗಿದೆ, ಕಾನೂನು ಭಂಗ ಮಾಡದೆಯೇ ತಮ್ಮ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. ಪ್ರಜಾತಂತ್ರ ಮತ್ತು ಸಂವಿಧಾನದ ಮೌಲ್ಯಗಳಿಗೆ ಬೆಲೆಕೊಟ್ಟು, ಸಾಂವಿಧಾನಿಕ ಮಾರ್ಗದಲ್ಲೇ ನ್ಯಾಯ ಕೋರುತ್ತಿದ್ದಾರೆ. ಜೀವಪ್ರೀತಿ

ಈ ನೊಂದ ಯುವ ಮನಸ್ಸುಗಳು ಅವರ ಪರವಾಗಿ, ಸೋನಂ ವಾಂಗ್ಚುಕ್‌ ಗಾಂಧಿ ಮಾರ್ಗದಲ್ಲಿ ಹೋರಾಡುವ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ. ಕೊಂಚ ಅವಸರ ಎನಿಸಿದರೂ, ಅವರು ಕೈಗೊಂಡಿರುವ ಆಮರಣಾಂತ ಉಪವಾಸ ಸತ್ಯಾಗ್ರಹದ ಔಚಿತ್ಯವನ್ನು ಪ್ರಶ್ನಿಸಲಾಗುವುದಿಲ್ಲ, ಅವರ ಗುರಿಯನ್ನು ಅನುಮಾನಿಸಲಾಗುವುದಿಲ್ಲ. ಬಹುಶಃ ವಾಂಗ್ಚುಕ್‌ ಮತ್ತು ಜಂತರ್‌ ಮಂತರ್‌ನಲ್ಲಿ ನೆರೆದಿರುವ ಯುವ ಮನಸ್ಸುಗಳಿಗೆ ಅರ್ಥವಾಗದಿರುವ ಅಂಶ ಎಂದರೆ, ಉಪವಾಸ ಸತ್ಯಾಗ್ರಹ ನಿರತ ವ್ಯಕ್ತಿಯ ಜೀವ ಅಪಾಯಕ್ಕೊಳಗಾದಾಗ, ಓಡೋಡಿ ಬಂದು ಅವರ ಅಹವಾಲು ಆಲಿಸಿ ಸಾಂತ್ವನ ಹೇಳುವ ಒಂದು ಆಡಳಿತ ವ್ಯವಸ್ಥೆಯಾಗಲೀ, ರಾಜಕೀಯ ಆಳ್ವಿಕೆಯಾಗಲೀ ಭಾರತದಲ್ಲಿ ಉಳಿದಿಲ್ಲ. ಜೀವಪ್ರೀತಿ

ಅಥವಾ ತಮ್ಮ ಸ್ವಪ್ರತಿಷ್ಠೆ, ಸ್ವ-ಹಿತಾಸಕ್ತಿ, ಆತ್ಯಂತಿಕ ಗುರಿ, ತಾವು ಪ್ರತಿನಿಧಿಸುವ ಸಮುದಾಯದ ಭವಿಷ್ಯ ಎಲ್ಲವನ್ನೂ ಬದಿಗೊತ್ತಿ ಸತ್ಯಾಗ್ರಹಿಯ ಜೀವ ಉಳಿಸುವ ಡಾ. ಅಂಬೇಡ್ಕರ್‌ ಅವರಂತಹ ಉದಾತ್ತ ರಾಜಕೀಯ ನಾಯಕನನ್ನು  80 ವರ್ಷಗಳ ಭಾರತ ರೂಪಿಸಿಯೇ ಇಲ್ಲ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಚುನಾವಣೆಗಳ ದೃಷ್ಟಿಯಿಂದ ಜನಪ್ರತಿನಿಧಿಯಾದರೂ, ಸಚಿವ ಹುದ್ದೆಯಲ್ಲಿ ಕುಳಿತಾಗ ಅವರು ಪ್ರತಿನಿಧಿಸುವುದು ಕಾರ್ಪೋರೇಟ್‌ ಔದ್ಯಮಿಕ ಭಾಗಿದಾರರನ್ನು ಮತ್ತು ಅವರ ಹಿತಾಸಕ್ತಿಗಳನ್ನು. ಇಡೀ NEET ವ್ಯವಸ್ಥೆ ಈ ಮಾರುಕಟ್ಟೆ ಆವರಣದಲ್ಲಿ ಕಾರ್ಯನಿರ್ವಹಿಸುವ ಒಂದು ಶೈಕ್ಷಣಿಕ ಪ್ರಕ್ರಿಯೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಚುನಾಯಿತ ಜನಪ್ರತಿನಿಧಿಯಾಗಿ ರಾಜೀನಾಮೆ ನೀಡಬೇಕಾದ ಧರ್ಮೆಂದ್ರ ಪ್ರಧಾನ್‌, ಕಾರ್ಪೊರೇಟ್‌ ಹಿತಾಸಕ್ತಿಗಳ ಪ್ರತಿನಿಧಿಯಾಗಿ ತಮ್ಮ ಸಚಿವ ಹುದ್ದೆಗೆ ಆತುಕೊಂಡಿರುತ್ತಾರೆ. ಜೀವಪ್ರೀತಿ

ಅಧಿಕಾರ ಮತ್ತು ಮನುಜ ಸಂವೇದನೆ

ಅಧಿಕಾರ ರಾಜಕಾರಣ ಮತ್ತು ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕತೆ ಒಂದಾದಾಗ ಆಡಳಿತ ವ್ಯವಸ್ಥೆಯಲ್ಲಿ ಈ ಕ್ರೌರ್ಯ, ಅಸೂಕ್ಷ್ಮತೆ ಸಹಜವಾಗಿ ಸೃಷ್ಟಿಯಾಗುತ್ತದೆ. ಇದರ ಸಮಾನಾಂತರ ಸನ್ನಿವೇಶವನ್ನು 2020ರ ಒಂದು ವರ್ಷದ ರೈತ ಮುಷ್ಕರದಲ್ಲಿ ಗುರುತಿಸಬಹುದು. ಈ ಅಸೂಕ್ಷ್ಮತೆ ಮತ್ತು ಅನೈತಿಕ ಧೋರಣೆಯೇ ಆಡಳಿತ ವ್ಯವಸ್ಥೆಯ ಮನುಜ ಸಂವೇದನೆಯನ್ನೂ ಕಸಿದುಕೊಳ್ಳುತ್ತದೆ. ಸತ್ಯಾಗ್ರಹ ನಿರತ ವಾಂಗ್ಚುಕ್‌ ಮತ್ತು ವಿದ್ಯಾರ್ಥಿ ಯುವ ಸಮೂಹದ ಬೇಡಿಕೆಗಳೇನೇ ಇರಲಿ, 60+ ವಯೋಮಾನದ ಹಿರಿಯ ಹೋರಾಟಗಾರರೊಬ್ಬರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವಾಗ, ಅವರ ಆರೋಗ್ಯ ಕ್ಷೀಣಿಸುತ್ತಾ, ಅಪಾಯದ ಮಟ್ಟ ತಲುಪುತ್ತಿರುವಾಗ, ಅವರನ್ನು ಖುದ್ದಾಗಿ ಸಂಪರ್ಕಿಸಿ ಮಾತುಕತೆ ನಡೆಸುವ ಸೌಜನ್ಯವನ್ನೂ ತೋರದ ಸರ್ಕಾರಕ್ಕೆ, ಸಚಿವರಿಗೆ ಏನು ಹೇಳುವುದು?

ನವ ಭಾರತದಲ್ಲಿ ಇದೇನೂ ಅಚ್ಚರಿ ಮೂಡಿಸಬೇಕಿಲ್ಲ. ಸ್ವಾಮಿ ಗ್ಯಾನ್‌ ಸ್ವರೂಪ್‌ ಸಾನಂದ್‌ (ಪೂರ್ವಾಶ್ರಮದ ಹೆಸರು ಜಿ.ಡಿ. ಅಗರ್ವಾಲ್)‌ ಒಬ್ಬ ನಿವೃತ್ತ ಐಐಟಿ ಪ್ರಾಧ್ಯಾಪಕರು ಮತ್ತು ಪರಿಸರ ತಂತ್ರಜ್ಞರು. ಒಬ್ಬ ವಿಜ್ಞಾನಿಯಾಗಿ, ಪರಿಸರವಾದಿಯಾಗಿ ಸ್ವಾಮಿ ಸಾನಂದ್‌, ಪರಿಸರ ರಕ್ಷಣೆಯ ಸಾಮಾಜಿಕ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದರು. ಪರಿಸರ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿ ಪಡೆದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮೊದಲ ಸದಸ್ಯ-ಕಾರ್ಯದರ್ಶಿಯಾಗಿದ್ದರು. ಅವರು ತಮ್ಮ ನಿವೃತ್ತಿ ನಂತರದ ವರ್ಷಗಳನ್ನು ಸಂಪೂರ್ಣವಾಗಿ ಗಂಗಾ ನದಿಯನ್ನು ಸಂರಕ್ಷಿಸಲು ಮೀಸಲಿಟ್ಟರು, ವಿನಾಶಕಾರಿ ಜಲವಿದ್ಯುತ್ ಅಣೆಕಟ್ಟುಗಳು, ಅಕ್ರಮ ಗಣಿಗಾರಿಕೆ ಮತ್ತು ಅನಿಯಂತ್ರಿತ ಮಾಲಿನ್ಯವನ್ನು ನಿಷೇಧಿಸುವ ಮೂಲಕ ನದಿಯ ನಿರಂತರ ಹರಿವನ್ನು ಪುನಃಸ್ಥಾಪಿಸಲು ಒತ್ತಾಯಿಸಿದರು. ಜೀವಪ್ರೀತಿ

ಗಾಂಧಿ ಮಾರ್ಗದಲ್ಲೇ ತಮ್ಮ ಹೋರಾಟ ನಡೆಸಿದ್ದ ಸ್ವಾಮಿ ಸಾನಂದ್‌ 2008ರಲ್ಲಿ ಮೊದಲ ಸಲ ಗಂಗಾನದಿಯ ರಕ್ಷಣೆಯಲ್ಲಿ ಸರ್ಕಾರದ ಉತ್ತರದಾಯಿತ್ವವನ್ನು ಪ್ರಶ್ನಿಸಿ ಉಪವಾಸ ಸತ್ಯಾಗ್ರಹ ಮಾಡಿದ್ದರು. ಸರ್ಕಾರದ ಆಶ್ವಾಸನೆಗೆ ಮಣಿದು ನಿರಶನ ಹಿಂಪಡೆದಿದ್ದರು. ಪುನಃ 2009ರ ಜನವರಿ 14 ರಿಂದ ಫೆಬ್ರವರಿ 20ರವರೆಗೆ ,  2010ರ ಜುಲೈ 20 ರಿಂದ ಆಗಸ್ಟ್‌ 23ರವರೆಗೆ ಜಲವಿದ್ಯುತ್‌ ಘಟಕಗಳ ಸ್ಥಾಪನೆಯನ್ನು ವಿರೋಧಿಸಿ ಸತ್ಯಾಗ್ರಹ ನಡೆಸಿದ್ದರು. ಇವರ ಹೋರಾಟಕ್ಕೆ ಮಣಿದ ಸರ್ಕಾರ ಯೋಜನೆಯನ್ನು ರದ್ದುಪಡಿಸಿದ್ದೇ ಅಲ್ಲದೆ, ಭಾಗೀರತಿ ನದಿಯ 125 ಕಿಲೋಮೀಟರ್‌ ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (Eco sensitive zone) ಎಂದು ಘೋಷಿಸಿತ್ತು. ಕೇಂದ್ರ ಸರ್ಕಾರವು ರಾಷ್ಟ್ರೀಯ ಗಂಗಾನದಿ‌ ಜಲಾನಯನ ಪ್ರದೇಶ ಪ್ರಾಧಿಕಾರವನ್ನೂ ರಚಿಸಿತ್ತು. ಆದರೂ ಈ ಪ್ರಾಧಿಕಾರದ ನಿಷ್ಕ್ರಿಯತೆಯನ್ನು ಖಂಡಿಸಿ ಸ್ವಾಮಿ ಸಾನಂದ್‌ 2012 ಮತ್ತು 2013ರಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ್ದರು.  2013ರಲ್ಲಿ ಅವರನ್ನು ಬಂಧಿಸಿ ಸೆರೆಮನೆಯಲ್ಲಿರಿಸಲಾಗಿತ್ತು.

ಸರ್ಕಾರದ ಈ ಯಾವುದೇ ಭರವಸೆಗಳು ಈಡೇರದೆ ಇದ್ದುದರಿಂದ ಸ್ವಾಮಿ ಸಾನಂದ್‌, ಗಂಗಾನದಿಯನ್ನು ಸ್ವಚ್ಛಗೊಳಿಸಲು ಹಾಗೂ ಮಾಲಿನ್ಯರಹಿತವಾಗಿ ಕಾಪಾಡಲು ಆಗ್ರಹಿಸಿ  2018ರ ಜೂನ್‌ 22ರಂದು ಪುನಃ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. 111 ದಿನಗಳ ಕಾಲ ಸತತ ಉಪವಾಸ ನಿರಶನ ನಡೆಸಿದ ಸ್ವಾಮಿ ಸಾನಂದ್‌ ಅಲಿಯಾಸ್‌ ಜಿ ಡಿ ಅಗರ್ವಾಲ್‌ ಅಕ್ಟೋಬರ್‌ 11 2018ರಲ್ಲಿ ಋಷಿಕೇಷದ ಏಮ್ಸ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ದೀರ್ಘ ಮುಷ್ಕರದ ಅವಧಿಯಲ್ಲಿ ಪ್ರಧಾನಮಂತ್ರಿಗಳಿಗೆ ಹಲವು ಪತ್ರಗಳನ್ನು ಬರೆದು ಗಂಗಾನದಿಯನ್ನು ಸ್ವಚ್ಛಗೊಳಿಸಲು ಆಗ್ರಹಿಸಿದ್ದರು. ಆದರೆ ಒಂದು ಪತ್ರಕ್ಕೂ ಪ್ರಧಾನಿಗಳ ಕಚೇರಿಯಿಂದ ನೇರವಾದ ಉತ್ತರ ದೊರೆಯಲಿಲ್ಲ. ಕೇಂದ್ರ ಸಚಿವರಾಗಿದ್ದ ಉಮಾಭಾರತಿ ಮತ್ತು ನಿತಿನ್‌ ಗಡ್ಕರಿ ಸ್ವಾಮಿ ಸಾನಂದ್‌ ಅವರನ್ನು ಸಂಪರ್ಕಿಸಿದ್ದರು. ಆದರೆ ಪ್ರಧಾನಿ ಮೋದಿ ಒಮ್ಮೆಯೂ ಅವರನ್ನು ಭೇಟಿ ಮಾಡಿರಲಿಲ್ಲ. ಆದರೆ ಅವರ ನಿಧನಾನಂತರ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿತ್ತು.

ಅಸೂಕ್ಷ್ಮ ಆಡಳಿತ ವ್ಯವಸ್ಥೆಯಲ್ಲಿ

ಸಮಾನಾಂತರವಾಗಿ ನೋಡಿದಾಗ, ಕೇಂದ್ರ ಸರ್ಕಾರದ ಹಾಗೂ ಸಚಿವರ ಇದೇ ಅಸೂಕ್ಷ್ಮತೆಯನ್ನೇ ಸೋನಂ ವಾಂಗ್ಚುಕ್‌ ಅವರ ಹೋರಾಟದಲ್ಲೂ ಕಾಣುತ್ತಿದ್ದೇವೆ. 18 ದಿನಗಳ ಉಪವಾಸ ಮುಷ್ಕರದಲ್ಲಿ ವಾಂಗ್ಚುಕ್‌ ಅವರನ್ನು ಯಾವುದೇ ಕೇಂದ್ರ ಸಚಿವರು ಭೇಟಿಯಾಗಿಲ್ಲ. ಅವರ ಬೇಡಿಕೆಗಳಿಗೆ ಕಿವಿಗೊಟ್ಟಿಲ್ಲ. ವಿದ್ಯಾರ್ಥಿ ಯುವ ಜನಾಂಗದ ನೋವು, ಹತಾಶೆ, ಆಕ್ರೋಶ ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಧ್ವನಿಸುತ್ತಿದ್ದರೂ, ಕೇಂದ್ರ ಸರ್ಕಾರ ನಿರ್ಲಿಪ್ತವಾಗಿದೆ. ನಾಳೆ ವಾಂಗ್ಚುಕ್‌ ಅವರ ಜೀವಕ್ಕೆ ಅಪಾಯವಾದರೂ ಯಾರೂ ಸಹ ಉತ್ತರದಾಯಿಯಾಗುವುದಿಲ್ಲ. ರೈತ ಮುಷ್ಕರದಲ್ಲಿ ಮಡಿದ 700ಕ್ಕೂ ಹೆಚ್ಚು ರೈತರಂತೆಯೇ ಮಾನ್ಯತೆ ಇಲ್ಲದ ಹುತಾತ್ಮರಾಗಿಬಿಡುತ್ತಾರೆ. ಹಾಗಾಗಲು ಈ ದೇಶದ ಪ್ರಜ್ಞಾವಂತ ಜನತೆ ಅವಕಾಶ ಕೊಡುವುದಿಲ್ಲ ಎನ್ನುವುದು ಈಗಾಗಲೇ ಸ್ಪಷ್ಟವಾಗುತ್ತಿದೆ.

ದೇಶದೆಲ್ಲೆಡೆ ಸೊನಂ ವಾಂಗ್ಚುಕ್‌ ಅವರ ಪರ ವಹಿಸಿ ಪ್ರತಿಭಟನೆಗಳು ನಡೆಯುತ್ತಿವೆ, ಕೇಂದ್ರ ಸರ್ಕಾರ ಕಾಕ್ರೋಚ್‌ ಪಕ್ಷದ ಯುವ ಜನಾಂಗ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲಾಗುತ್ತಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗಾಗಿ ಆಗ್ರಹ ತೀವ್ರವಾಗುತ್ತಿದೆ. ಇಲ್ಲಿ ಪ್ರಶ್ನೆ ಇರುವುದು ಕೇವಲ ಅಂತಿಮ ಫಲಿತಾಂಶ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ಅಲ್ಲಿ ಆಳ್ವಿಕೆ ನಡೆಸುವವರಲ್ಲಿ ತಾಯ್ಮಮತೆ ಇರಬೇಕು. ದೇಶದ ಜನತೆಯ ನೋವು ಹತಾಶೆಗಳಿಗೆ ಕೂಡಲೇ ಸ್ಪಂದಿಸುವ ಮನುಜ ಸಂವೇದನೆ ಇರಬೇಕು. ಜೀವ ಕಳೆದುಕೊಳ್ಳುವ ಅಮಾಯಕ ಜನರ ಬಗ್ಗೆ ಕಾಳಜಿ ಇರಬೇಕು. ನ್ಯಾಯಕ್ಕಾಗಿ ಹೋರಾಡುವ ಜನಸಮೂಹಗಳ ನೊಂದ ದನಿಯನ್ನು ಆಲಿಸುವ ಸೌಜನ್ಯ, ಸಂಯಮ ಇರಬೇಕು. ಸಾಂವಿಧಾನಿಕವಾಗಿ ಸಮ್ಮತಿಸಬಹುದಾದ ರೀತಿಯಲ್ಲಿ ನೊಂದ ಜನರ ಹಕ್ಕೊತ್ತಾಯಗಳನ್ನು ಈಡೇರಿಸುವ ವ್ಯವಧಾನ ಇರಬೇಕು.

ಬಹುಶಃ ವಿಕಾಸದ ಹಾದಿಯಲ್ಲಿ ಸಾಗುತ್ತಿರುವ ನವ ಭಾರತ ಇವೆಲ್ಲವನ್ನೂ ಕಳೆದುಕೊಂಡಿದೆ. ಸೋನಂ ವಾಂಗ್ಚುಕ್‌ ಚೇತರಿಸಿಕೊಳ್ಳುತ್ತಾರೆ, ವಿದ್ಯಾರ್ಥಿ ಯುವ ಸಮೂಹದ ಬೇಡಿಕೆ ಈಡೇರುವುದೋ ಇಲ್ಲವೋ ಕಾದುನೋಡಬೇಕಿದೆ. ಏಕೆಂದರೆ ನಾವು ಉತ್ತರದಾಯಿತ್ವ ಇಲ್ಲದ ವ್ಯವಸ್ಥೆಯಲ್ಲಿ ಸಾಗುತ್ತಿದ್ದೇವೆ. ಅಂತಿಮ ಫಲಿತಾಂಶ ಏನೇ ಆಗಲಿ , ಪ್ರಜಾತಂತ್ರ ಮತ್ತು ಸಂವಿಧಾನವನ್ನು ಗೌರವಿಸುವ ದೇಶದ ಜನತೆಯ ದೃಷ್ಟಿಯಲ್ಲಿ ಈ ಹೋರಾಟವನ್ನು ಪ್ರಶ್ನಾತೀತವಾಗಿ ಬೆಂಬಲಿಸಬೇಕಿದೆ. ಉಪವಾಸ ಸತ್ಯಾಗ್ರಹ ಯಾವುದೇ ಹೋರಾಟದ ಆತ್ಯಂತಿಕ ಹಾದಿಯಾಗಿರಬೇಕೇ ಹೊರತು, ಆರಂಭದ ಹೆಜ್ಜೆಯಲ್ಲ. ಆದರೂ ಸೋನಂ ವಾಂಗ್ಚುಕ್‌ ತಮ್ಮ ಹೋರಾಟದಲ್ಲಿ ಪ್ರಾಮಾಣಿಕವಾಗಿ ತೊಡಗಿದ್ದಾರೆ. ಕಾಕ್ರೋಚ್‌ ಜನತಾ ಪಕ್ಷದ ಆದ್ಯತೆ ಸಿದ್ಧಾಂತಗಳು ಏನೇ ಇದ್ದರೂ, ಜಂತರ್‌ ಮಂತರ್‌ನಲ್ಲಿ ಕೇಳಿಬರುತ್ತಿರುವ ಬೇಡಿಕೆಗಳ ಕೂಗು ಸರ್ವಸಮ್ಮತವಾಗಿದೆ. ಜೀವಪ್ರೀತಿ

ದುರದೃಷ್ಟವಶಾತ್ ಒಬ್ಬ ವ್ಯಕ್ತಿಯ ಜೀವಕ್ಕಾಗಿ ಮರುಗುವ‌, ಜೀವಪ್ರೀತಿ ಇರುವ ಸಮಾಜವನ್ನು ನಾವು ಕಟ್ಟಿಲ್ಲ ಹಾಗಾಗಿ ಅಂತಹ ಸರ್ಕಾರವನ್ನು ಸಹ ನಾವು ಆಯ್ಕೆ ಮಾಡಲಾಗಿಲ್ಲ. ಜನಾಂದೋಲನಗಳಿಗೆ ಕಿವಿಗೊಡುವ ಆಡಳಿತ ವ್ಯವಸ್ಥೆಯನ್ನೂ ನಾವು ಹೊಂದಿಲ್ಲ. ಮಾನವೀಯ ಸ್ಪಂದನೆ ಮತ್ತು ಸಂವೇದನಾಶೀಲ ಪ್ರತಿಕ್ರಿಯೆಯ ಸಾಮಾಜಿಕ ಔನ್ನತ್ಯವನ್ನು ಕಳೆದುಕೊಂಡಿರುವ ಸನ್ನಿವೇಶದಲ್ಲಿ ನಾವು ವಿಕಾಸದ ಹಾದಿಯಲ್ಲಿ ಸಾಗುತ್ತಿದ್ದೇವೆ. ಈ ಹಾದಿಯಲ್ಲೇ ಸಾಂವಿಧಾನಿಕ ನ್ಯಾಯ ಮತ್ತು ಮಾನವೀಯ ಮೌಲ್ಯಗಳಿಗಾಗಿ ನಿರಂತರ ಹೋರಾಡಬೇಕಿದೆ. ಸೋನಂ ವಾಂಗ್ಚುಕ್‌ ಮಾಡುತ್ತಿರುವುದೂ ಇದನ್ನೇ. ಜೀವಪ್ರೀತಿ

ಇದನ್ನೂ ನೋಡಿ: ಬಿಎಲ್‌ಒ ಕಾರ್ಯದಿಂದ ಮುಕ್ತಗೊಳಿಸಿ: ಜಿಲ್ಲಾಧಿಕಾರಿ ಕಚೇರಿಗೆ ಅಂಗನವಾಡಿ ನೌಕರರ ಮುತ್ತಿಗೆ Janashakthi Media

Donate Janashakthi Media

Leave a Reply

Your email address will not be published. Required fields are marked *