ಸುಮಾರು 8 ಮಿಲಿಯನ್ ವರ್ಷಗಳ ಹಿಂದೆ, ಜಿರಾಫೆಯ ಪೂರ್ವಜರು ಕಾಡುಗಳಲ್ಲಿ ವಾಸಿಸುತ್ತಿದ್ದರು. ಕಾಡುಗಳು ತೆರೆದ ಹುಲ್ಲುಗಾವಲುಗಳಾಗಿ ಬದಲಾದಂತೆ, ನೆಲದ ಬಳಿ ಆಹಾರವು ವಿರಳವಾಗಿತ್ತು. ಜಿರಾಫೆಗಳ ಪೂರ್ವಜರುಗಳ ಕುತ್ತಿಗೆ ಗಿಡ್ಡವಾಗಿತ್ತು, ಇದರಿಂದ ಅವುಗಳಿಗೆ ಆಹಾರ ಕ್ಷಾಮ ಒದಗಿ ಬಂದಿತು. ಉದ್ದನೆಯ ಮರಗಳಲ್ಲಿ ಹೇರಳ ಹಸಿರು ಎಲೆಗಳು ಇದ್ದರೂ ಸಹ ಇವು ತಿನ್ನಲು ಜಿರಾಫೆಗಳ ಪೂರ್ವಜರುಗಳಿಗೆ ಸಿಗುತ್ತಿರಲಿಲ್ಲ. ನಿರಂತರವಾಗಿ ಕುತ್ತಿಗೆಯನ್ನು ಹಿಗ್ಗಿಸುವುದರಿಂದ ಅನೇಕ ಲಕ್ಷ ವರ್ಷಗಳ ನಂತರ ನೈಸರ್ಗಿಕವಾಗಿಯೇ ಅವುಗಳ ಕುತ್ತಿಗೆ ಉದ್ದವಾಯಿತು ಎನ್ನಲಾಗಿದೆ. ಕುತ್ತಿಗೆ
– ಡಾ| ಎನ್. ಬಿ. ಶ್ರೀಧರ
ಜಿರಾಫೆಯ ಸಾಮಾನ್ಯ ಆಹಾರವಾದ ಅಕೇಶಿಯಾ ಮರಗಳ ಎಲೆಗಳನ್ನು ತಿನ್ನಲು ಅದರ ಉದ್ದನೆಯ ಕುತ್ತಿಗೆ ಬಹಳ ಸಹಾಯ ಮಾಡುತ್ತದೆ. ಗಂಡು ಜಿರಾಫೆಗಳು ತಮ್ಮ ಸಂಗಾತಿಯನ್ನು ಮೆಚ್ಚಿಸಲು ಅಥವಾ ಕಾದಾಡುವ ಸಮಯದಲ್ಲಿ ತಮ್ಮ ಎತ್ತರದ ಕುತ್ತಿಗೆಯನ್ನು ಬಳಸುತ್ತಿದ್ದು ಇದನ್ನು “ನೆಕ್ಕಿಂಗ್” ಎನ್ನಲಾಗುತ್ತದೆ.
ಜಿರಾಫೆ ಎಂದರೆ ಹಲವರಿಗೆ ಮೊದಲು ನೆನಪಾಗುವುದು ಅದರ ಎತ್ತರ. ಆದರೆ ಜಿರಾಫೆಯ ವೈಜ್ಞಾನಿಕ ಕಥೆ ಕೇವಲ ಉದ್ದನೆಯ ಕತ್ತಿನ ಕಥೆಯಲ್ಲ. ಅದರ ದೇಹದ ಪ್ರತಿಯೊಂದು ಭಾಗವೂ ಎತ್ತರದ ಬದುಕಿಗೆ ಹೊಂದಿಕೊಂಡಿದೆ. ಹೃದಯ, ರಕ್ತದೊತ್ತಡ, ನಾಲಿಗೆ, ಚರ್ಮದ ಚುಕ್ಕೆಗಳು, ಕಾಲುಗಳು, ಆಹಾರ ಪದ್ಧತಿ, ಮರಿ ಜನನ ಹೀಗೆ ಎಲ್ಲದರಲ್ಲಿಯೂ ವಿಶೇಷ ಜೀವವಿಜ್ಞಾನ ಅಡಗಿದೆ. ಕುತ್ತಿಗೆ
ಇದನ್ನೂ ಓದಿ: ನಮ್ಮ ಮೆಟ್ರೋ ಬ್ಲೂ ಲೈನ್‌ಗೆ ಅಕ್ಟೋಬರ್‌ನಿಂದ ಟ್ರಯಲ್ ರನ್: 2027ಕ್ಕೆ ವಾಣಿಜ್ಯ ಸಂಚಾರ
ಮೂಲ ಯಾವುದು?
ಜಿರಾಫೆಗಳು ಆಫ್ರಿಕಾದ ಎತ್ತರದ ಹುಲ್ಲುಗಳು ಮತ್ತು ಚದುರಿದ ಮರಗಳಿಂದ ಪ್ರಾಬಲ್ಯ ಹೊಂದಿರುವ ಉಷ್ಣವಲಯದ ಹುಲ್ಲುಗಾವಲು ಪ್ರದೇಶದಲ್ಲಿರುವ ಸಸ್ಯಾಹಾರಿ ಜಿರಾಫಿಡೆ (ಜಿರಫಾ ಕ್ಯಾಮೆಲೊಪರ್ಡಾಲಿಸ್) ಕುಟುಂಬಕ್ಕೆ ಸೇರಿದ ಸ್ತನಿಗಳು. ಇದೇ ಕುಟುಂಬದಲ್ಲಿ ಜಿರಾಫೆಯ ಹತ್ತಿರದ ಜೀವಂತ ಸಂಬಂಧಿಯಾದ ಒಕಾಪಿಯೂ ಸೇರಿದೆ. ಹಿಂದೆ ಜಿರಾಫೆಯನ್ನು ಒಂದೇ ಪ್ರಭೇದವಾಗಿ ವಿವರಿಸುವುದು ಸಾಮಾನ್ಯ. ಕುತ್ತಿಗೆ
ಜಿರಾಫೆಗಳಲ್ಲಿ ಬೇರೆ ಬೇರೆ ಸ್ವತಂತ್ರ ಪ್ರಭೇದಗಳಿದ್ದು ನಾಲ್ಕು ಮುಖ್ಯ ಜಿರಾಫೆ ಪ್ರಭೇದಗಳೆಂದರೆ ಉತ್ತರ ಜಿರಾಫೆ, ರೆಟಿಕ್ಯುಲೇಟೆಡ್ ಜಿರಾಫೆ, ಮಸಾಯಿ ಜಿರಾಫೆ ಮತ್ತು ದಕ್ಷಿಣ ಜಿರಾಫೆ. ಕುತ್ತಿಗೆ

ಇವುಗಳ ದೇಹದ ಚುಕ್ಕೆಗಳ ವಿನ್ಯಾಸ, ಭೌಗೋಳಿಕ ವಾಸಸ್ಥಳ ಮತ್ತು ಅನುವಂಶಿಕ ವಿಷಯಗಳಲ್ಲಿ ಒಂದಿಷ್ಟ ವ್ಯತ್ಯಾಸಗಳಿವೆ. ಭಾರತದಲ್ಲಿ ಜಿರಾಫೆಗಳು ಮ್ರಗಾಲಯದಲ್ಲಿ ಮಾತ್ರ ಇವೆ. ಕುತ್ತಿಗೆ
ಸಾಮಾನ್ಯವಾಗಿ ಜಿರಾಫೆಯ ಎತ್ತರ 4.3 ರಿಂದ 5.7 ಮೀಟರ್, ತೂಕ: 800 ರಿಂದ 1,200 ಕಿಲೋಗ್ರಾಂ, ಹೃದಯದ ಸರಾಸರಿ ತೂಕ 11 ಕಿಲೋ, ಗರ್ಭಾವಧಿ 15 ತಿಂಗಳು (450 ರಿಂದ 465 ದಿನಗಳು) ಇದ್ದರೆ ಅದು ಒಂದು ಸಲಕ್ಕೆ ಒಂದೇ ಮರಿ ಹಾಕುವುದು. ಇದರ ಕುತ್ತಿಗೆಯ ತೂಕ ಸರಾಸರಿ ೨೦೦ ಇರುತ್ತದೆ.
ಇವು ಅಷ್ಟೇಕೆ ಎತ್ತರ ?
ಜಿರಾಫೆಯ ಎತ್ತರ ಅದರ ಅತ್ಯಂತ ಮಹತ್ವದ ಲಕ್ಷಣ. ಗಂಡು ಜಿರಾಫೆಗಳು ಹೆಣ್ಣು ಜಿರಾಫೆಗಳಿಗಿಂತ ಸಾಮಾನ್ಯವಾಗಿ ಹೆಚ್ಚು ಎತ್ತರವಾಗಿರುತ್ತವೆ. ಈ ಎತ್ತರವು ಅದಕ್ಕೆ ಆಹಾರ ದೊರಕಲು ಮಾಡಿಕೊಂಡ ಲಕ್ಷಾಂತರ ವರ್ಷಗಳ ಜೀವ ವಿಕಾಸದ ಪ್ರತಿಫಲ. ಕುತ್ತಿಗೆ
ಸವನ್ನಾ ಪ್ರದೇಶದಲ್ಲಿ ಮರಗಳ ಮೇಲ್ಭಾಗದ ಎಲೆಗಳನ್ನು, ವಿಶೇಷವಾಗಿ ಅಕೇಶಿಯಾ ಮರಗಳ ಎಲೆಗಳನ್ನು ತಲುಪಲು ಜಿರಾಫೆಯ ಉದ್ದನೆಯ ಕತ್ತು ಮತ್ತು ಎತ್ತರದ ಕಾಲುಗಳು ಸಹಾಯಕ. ನೆಲದ ಬಳಿ ಮೇಯುವ ಅನೇಕ ಪ್ರಾಣಿಗಳಿಗೆ ಸಿಗದ ಎತ್ತರದ ಎಲೆಗಳನ್ನು ಜಿರಾಫೆ ತಿನ್ನಬಲ್ಲದು. ಕುತ್ತಿಗೆ

ಇದರಿಂದ ಆಹಾರದ ಸ್ಪರ್ಧೆ ಕೆಲವು ಸಂದರ್ಭಗಳಲ್ಲಿ ಕಡಿಮೆಯಾಗುತ್ತದೆ. ಆದರೆ ಎತ್ತರದ ಲಾಭದ ಜೊತೆಗೆ ಕೆಲವು ಸವಾಲುಗಳೂ ಇವೆ. ಇಷ್ಟು ಎತ್ತರಕ್ಕೆ ರಕ್ತವನ್ನು ಪಂಪ್ ಮಾಡುವುದು, ನೀರು ಕುಡಿಯಲು ತಲೆ ತಗ್ಗಿಸುವುದು, ಓಡುವಾಗ ಸಮತೋಲನ ಕಾಯುವುದು ಇವೆಲ್ಲ ಜಿರಾಫೆಯ ಎತ್ತರದ ದೇಹದ ಸವಾಲುಗಳು.
ಉದ್ದ ಕತ್ತು ಆದರೆ ಕುತ್ತಿಗೆ ಮೂಳೆ ಸಂಖ್ಯೆ ಮಾತ್ರ ಸ್ಥಿರ
ಜಿರಾಫೆಯ ಕತ್ತು ತುಂಬಾ ಉದ್ದವಾಗಿದೆ. ಆದರೆ ಆಶ್ಚರ್ಯದ ಸಂಗತಿ ಏನೆಂದರೆ, ಇತರ ಕಶೇರುಕ ಸ್ತನಿಗಳಂತೆ ಜಿರಾಫೆಯಲ್ಲಿಯೂ ಕುತ್ತಿಗೆಯ ಕಶೇರುಕಗಳ ಸಂಖ್ಯೆ ಏಳು ಮಾತ್ರ. ಆದರೆ ಕಶೇರುಕ ಮಣಿಗಳ ಸಂಖ್ಯೆ ಮಾತ್ರ ಅತ್ಯಂತ ಉದ್ದ. ಕುತ್ತಿಗೆ

ಇದು ವಿಕಾಸದ ಉತ್ತಮ ಉದಾಹರಣೆ. ಪ್ರಕೃತಿ ಹೊಸ ಎಲುಬುಗಳನ್ನು ಸೇರಿಸಿಲ್ಲ; ಇರುವ ಮೂಲ ವಿನ್ಯಾಸವನ್ನೇ ಉದ್ದಗೊಳಿಸಿ ಹೊಸ ಕೆಲಸಕ್ಕೆ ಹೊಂದಿಸಿದೆ.
ಎತ್ತರಕ್ಕೆ ರಕ್ತ ತಲುಪಿಸುವ ಹೃದಯ
ರಕ್ತವನ್ನು ತಲೆಯವರೆಗೆ ತಲುಪಿಸುವುದು ಜಿರಾಫೆಯ ಹೃದಯದ ಕಠಿಣ ಕಾರ್ಯ. ನೆಲದಿಂದ ೫ ಮೀಟರ್ ಅಥವಾ ೧೫ ಅಡಿ ಎತ್ತರದಲ್ಲಿರುವ ಮೆದುಳಿಗೆ ರಕ್ತ ತಲುಪಬೇಕಾದರೆ, ಹೃದಯವು ಬಹಳ ಬಲವಾಗಿ ಕೆಲಸ ಮಾಡಬೇಕು. ಇದಕ್ಕಾಗಿ ಜಿರಾಫೆಯ ಹೃದಯವು ಬಲಿಷ್ಠವಾದ ಸ್ನಾಯುಗಳನ್ನು ಹೊಂದಿದ್ದು ಅದರ ರಕ್ತದೊತ್ತಡವೂ ಇತರ ಅನೇಕ ಸ್ತನಿಗಳಿಗಿಂತ ಹೆಚ್ಚು. ಮನುಷ್ಯನ ರಕ್ತದ ಒತ್ತಡ 120/180 ಇದ್ದರೆ ಜಿರಾಫೆಯ ರಕ್ತದೊತ್ತಡ 300/180. ಕುತ್ತಿಗೆ
ಈ ಹೆಚ್ಚಿದ ರಕ್ತದೊತ್ತಡವೇ ಮೆದುಳಿಗೆ ರಕ್ತ ತಲುಪಲು ಸಹಾಯ ಮಾಡುತ್ತದೆ. ಆದರೂ, ಜಿರಾಫೆಯು ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯಿಂದ ಬಳಲುವುದಿಲ್ಲ. ಜಿರಾಫೆ ನೀರು ಕುಡಿಯಲು ತಲೆ ಕೆಳಗಿಳಿಸಿದಾಗ, ರಕ್ತ ಮೆದುಳಿಗೆ ಅತಿಯಾಗಿ ಹರಿಯಬಾರದು.

ಮತ್ತೆ ತಲೆ ಎತ್ತಿದಾಗ ರಕ್ತದೊತ್ತಡ ತಕ್ಷಣ ಕುಸಿದು ಅದು ತಲೆಸುತ್ತುವಂತಾಗಬಾರದು. ಇದಕ್ಕಾಗಿ ಜಿರಾಫೆಯ ರಕ್ತನಾಳಗಳಲ್ಲಿ ಮತ್ತು ಕುತ್ತಿಗೆಯ ಭಾಗದಲ್ಲಿ ವಿಶೇಷ ನಿಯಂತ್ರಣ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತವೆ. ದೇಹದ ಕೆಳಭಾಗದಲ್ಲಿ ದಟ್ಟ ಸಂಪರ್ಕಕೋಶಗಳ ಆವರಣವೂ ಕಾಲುಗಳಲ್ಲಿ ದ್ರವ ಜಮೆಯಾಗದಂತೆ ಸಹಾಯಕವಾಗುತ್ತದೆ. ಇವುಗಳೆಲ್ಲ ಎತ್ತರದ ದೇಹದಲ್ಲಿ ರಕ್ತಸಂಚಲನವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುವ ಪರಿಸರದ ಹೊಂದಾಣಿಕೆಗಳು.
ಜಿರಾಫೆಯು ತನ್ನ ತಲೆಯನ್ನು ಕುಡಿಯಲು ಕೆಳಕ್ಕೆ ಇಳಿಸಿದರೆ, ಗುರುತ್ವಾಕರ್ಷಣೆಯು ಸಿದ್ದಾಂತದಿಂದ ಅದರ ಮೆದುಳಿನಲ್ಲಿರುವ ನಾಳಗಳನ್ನು ಛಿದ್ರಗೊಳಿಸುವ ಬೃಹತ್ ಒತ್ತಡದಿಂದ ಆಗುವ ಪಾರ್ಶ್ವವಾಯುವನ್ನು ತಡೆಗಟ್ಟಲು, ಜಿರಾಫೆಯು ರೀಟ್ ಮಿರಾಬೈಲ್ ಎಂಬ ವಿಶೇಷ ರಕ್ತನಾಳ ರಚನೆಯನ್ನು ಹೊದಿದೆ. ಮೆದುಳಿನ ತಳದಲ್ಲಿ ನೆಲೆಗೊಂಡಿರುವ ಈ ಸ್ಥಿತಿಸ್ಥಾಪಕ ನಾಳಗಳ ಜಾಲವು ಒತ್ತಡವನ್ನು ತಗ್ಗಿಸುವ ಸ್ಪಂಜಿನಂತೆ ಕಾರ್ಯನಿರ್ವಹಿಸುತ್ತದೆ. ತಲೆ ಕೆಳಗಿರುವಾಗ ಉಲ್ಬಣವನ್ನು ಹೀರಿಕೊಳ್ಳಲು ತಲೆಯನ್ನು ಹಿಂದಕ್ಕೆ ಎಳೆದಾಗ ಸಂಕುಚಿತಗೊಳ್ಳುತ್ತದೆ.
ಚುಕ್ಕೆಗಳ ರಹಸ್ಯ
ಜಿರಾಫೆಯ ದೇಹದ ಚುಕ್ಕೆಗಳು ಕೇವಲ ಅಲಂಕಾರವಲ್ಲ. ಮರಗಳ ನೆರಳು, ಒಣ ಹುಲ್ಲು, ಸೂರ್ಯಕಿರಣ ಮತ್ತು ನೆರಳಿನ ಮಿಶ್ರ ಪರಿಸರದಲ್ಲಿ ಜಿರಾಫೆಯ ಚುಕ್ಕೆಗಳು ದೇಹದ ಆಕಾರವನ್ನು ತುಂಡು ತುಂಡಾಗಿ ಕಾಣುವಂತೆ ಮಾಡಿ ಹಿಂಸ್ರ ಪ್ರಾಣಿಗಳಿಗೆ ಸುಲಭವಾಗಿ ಆಹಾರವಾಗದಂತೆ ತಡೆಯಲು ಸಹಕಾರಿ. ಅದರಲ್ಲೂ ಮರಿಗಳಿಗೆ ಇದು ಹೆಇನ ರಕ್ಷಣಾತ್ಮಕ ಪ್ರಯೋಜನ ನೀಡುತ್ತದೆ.

ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ, ಪ್ರತಿಯೊಂದು ಜಿರಾಫೆಯ ಚುಕ್ಕೆಗಳ ವಿನ್ಯಾಸ ವಿಭಿನ್ನವಾಗಿರುತ್ತದೆ. ಮನುಷ್ಯರ ಬೆರಳಚ್ಚಿನಂತೆ ನಿಖರವಾಗಿ ಹೋಲಿಸಲು ಆಗದಿದ್ದರೂ, ಅವುಗಳನ್ನು ಗುರುತಿಸಲು ಮತ್ತು ಸಂಶೋಧನಾ ಕಾರ್ಯದಲ್ಲಿ ಇದು ಉಪಯುಕ್ತ.
ಚುಕ್ಕೆಗಳ ಕೆಳಗಿನ ಚರ್ಮ ಮತ್ತು ರಕ್ತನಾಳಗಳ ವ್ಯವಸ್ಥೆ ದೇಹದ ತಾಪ ನಿಯಂತ್ರಣದಲ್ಲಿಯೂ ಪಾತ್ರವಹಿಸಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ.
ಉದ್ದನೆಯ ಮುಳ್ಳಿನ ನಾಲಿಗೆ
ಜಿರಾಫೆಯ ಆಹಾರದಲ್ಲಿ ಅಕೇಶಿಯಾ ಮರಗಳ ಎಲೆಗಳು ಪ್ರಮುಖ. ಆದರೆ ಅಕೇಶಿಯಾ ಮರಗಳ ಎಲೆಗಳು ಒರಟು ಮತ್ತು ಮುಳ್ಳುಗಳಿಂದ ಕೂಡಿರುತ್ತವೆ. ಜಿರಾಫೆ ಇಂತಹ ಮರಗಳಲ್ಲಿ ಆಹಾರ ತೆಗೆದುಕೊಳ್ಳಲು ಉದ್ದನೆಯ, ಬಲವಾದ ಮತ್ತು ಚುರುಕಾಗಿ ಚಲಿಸುವ ನಾಲಿಗೆಯನ್ನು ಬಳಸುತ್ತದೆ.

ಜಿರಾಫೆಯ ನಾಲಿಗೆ ಮುಳ್ಳುಗಳನ್ನು ತಪ್ಪಿಸಿ ಎಲೆಗಳನ್ನು ಸೆಳೆಯಲು ಸಹಾಯಕ. ಜೊತೆಗೆ ಇದರ ದಪ್ಪ ತುಟಿಗಳು ಮತ್ತು ಬಲವಾದ ಬಾಯಿಯ ಒಳಭಾಗವೂ ಮುಳ್ಳುಗಳ ನಡುವೆ ಆಹಾರ ತೆಗೆದುಕೊಳ್ಳಲು ನೆರವಾಗುತ್ತವೆ.
ಇದರ ನಾಲಿಕೆ 20 ಇಂಚ್ ಇರುತ್ತದೆ. ನಾಲಿಗೆ ಕಡು ನೇರಳೆ/ಕಪ್ಪು. ಮುಳ್ಳಿನ ಅಕೇಶಿಯ ಮರಗಳಿಂದ ಎಲೆಗಳನ್ನು ಕೀಳುವಾಗ ಬಿಸಿಲಿನ ಬೇಗೆಯನ್ನು ಇದು ತಡೆಯುತ್ತದೆ.
ಲಾಲಾರಸದ ತಡೆಗೋಡೆ
ಜಿರಾಫೆ ಜೊಲ್ಲು ಅಥವಾ ಲಾಲಾರಸವು ದಪ್ಪವಾಗಿರುತ್ತದೆ, ಅಂಟು ತರಹದ್ದು, ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿರುತ್ತದೆ.
ಜಿರಾಫೆಯು ಆಕಸ್ಮಿಕವಾಗಿ ನುಂಗುವ ಯಾವುದೇ ಮುಳ್ಳುಗಳನ್ನು ಇದು ಲೇಪಿಸುತ್ತದೆ, ಆಂತರಿಕ ಸೀಳುವಿಕೆಗೆ ಕಾರಣವಾಗದೆ ಜೀರ್ಣಾಂಗವ್ಯೂಹದ ಮೂಲಕ ಹಾದುಹೋಗಲು ಅನುವು ಮಾಡಿಕೊಡುತ್ತದೆ.
ಹೊಟ್ಟೆಯೊಳಗಿನ ಜೀರ್ಣಶಾಸ್ತ್ರ
ಜಿರಾಫೆ ಒಂದು ಮೆಲುಕಾಡಿಸುವ ಪ್ರಾಣಿ. ಹಸುಗಳಂತೆ ಅದೂ ಸಸ್ಯದ ಆಹಾರವನ್ನು ಜೀರ್ಣಿಸಲು ವಿಶೇಷವಾದ ನಾಲ್ಕು ಹೊಟ್ಟೆಯ ವ್ಯವಸ್ಥೆ ಹೊಂದಿದೆ. ಮೊದಲು ತಿಂದ ಆಹಾರ ರುಮೆನ್ ಅಥವಾ ಮೆಲುಕು ಚೀಲದೊಳಗೆ ಹೊಟ್ಟೆಯೊಳಗೆ ಮೃದುವಾಗಿ ಸಂಸ್ಕರಿಸಲ್ಪಡುತ್ತದೆ.
ನಂತರ ಅದು ಮತ್ತೆ ಬಾಯಿಗೆ ಬಂದು ಚೆನ್ನಾಗಿ ಅರೆದು ಮರುನುಂಗಿದ ನಂತರ ಜಾಲ ಜಠರ (ರೆಟಿಕ್ಯುಲಂ), ಪದರ ಜಠರ (ಒಮ್ಯಾಸಂ) ಮತ್ತು ರಸ ಜಠರ (ಅಬೋಮಾಸಂ)ದ ಮೂಲಕ ಕರುಳಿಗೆ ಸಾಗಿ ಜೀರ್ಣವಾಗುತ್ತದೆ.
ಜಿರಾಫೆಯ ಲಾಲಾರಸವು ದಪ್ಪ ಅಂಟಿನಂತಿದ್ದು, ನಂಜುನಿರೋಧಕ ಗುಣಗಳನ್ನು ಹೊಂದಿರುತ್ತದೆ. ಜಿರಾಫೆ ಆಕಸ್ಮಿಕವಾಗಿ ನುಂಗುವ ಯಾವುದೇ ಮುಳ್ಳನ್ನು ಇದು ಆವರಿಸಿ ಜೀರ್ಣಾಂಗಕ್ಕೆ ಗಾಯವಾಗದಂತೆ ಕರುಳಿನ ಮೂಲಕ ಹಾದುಹೋಗಲು ಅನುವು ಮಾಡಿಕೊಡುತ್ತದೆ.
ಪ್ರಣಯ ಮತ್ತು ಮಿಲನ
ಗಂಡು ಜಿರಾಫೆ ಮೊದಲು ಹೆಣ್ಣು ಜಿರಾಫೆಯ ಸಮೀಪಕ್ಕೆ ಬಂದು ಅದರ ಸಂತಾನೋತ್ಪತ್ತಿ ಸಿದ್ಧತೆಯನ್ನು ಪರಿಶೀಲಿಸುತ್ತದೆ. ಇದಕ್ಕಾಗಿ ಅದು ಹೆಣ್ಣಿನ ಮೂತ್ರದ ವಾಸನೆಯನ್ನು ಪರಿಶೀಲಿಸಿ, ಮೇಲಿನ ತುಟಿಯನ್ನು ಸ್ವಲ್ಪ ಮೇಲಕ್ಕೆ ಎತ್ತುವ ಕ್ರಿಯೆ ತೋರಿಸುತ್ತದೆ. ಈ ವರ್ತನೆಯನ್ನು ಫ್ಲೆಮೆನ್ ಪ್ರತಿಕ್ರಿಯೆ ಎನ್ನುತ್ತಾರೆ.

ಇದರ ಮೂಲಕ ಹೆಣ್ಣು ಜಿರಾಫೆ ಬೆದೆಯ ಸ್ಥಿತಿಯಲ್ಲಿದೆಯೇ ಎಂಬುದನ್ನು ಗಂಡು ಗ್ರಹಿಸುತ್ತದೆ. ಹಲವಾರು ಗಂಡುಗಳು ಒಂದೇ ಹೆಣ್ಣಿನ ಸಹವಾಸ ಬಯಸಿದಾಗ ಗಂಡುಗಳ ನಡುವೆ ಕತ್ತು ಬಳಸಿ ಪರಸ್ಪರ ಹೊಡೆದುಕೊಳ್ಳುವ ನೆಕ್ಕಿಂಗ್ ವರ್ತನೆ ಕಂಡುಬರುತ್ತದೆ. ಇದು ಗಂಡಿನ ಬಲ, ವಯಸ್ಸು ಮತ್ತು ಪ್ರಾಬಲ್ಯವನ್ನು ತೋರಿಸುವ ಪರೀಕ್ಷೆ. ಗೆಲ್ಲುವ ಬಲಿಷ್ಠ ಗಂಡು ಹೆಣ್ಣಿನ ಹತ್ತಿರ ಉಳಿದು ಮಿಲನದ ಅವಕಾಶ ಪಡೆಯುತ್ತದೆ.
ಜನನದ ಮೊದಲ ಕ್ಷಣ
ಜಿರಾಫೆ ಮರಿ ಹುಟ್ಟುವ ಕ್ಷಣವೇ ಅದರ ಬದುಕಿನ ಮೊದಲ ಪರೀಕ್ಷೆ. ಹೆಣ್ಣು ಜಿರಾಫೆ ಸಾಮಾನ್ಯವಾಗಿ ನಿಂತಿರುವ ಸ್ಥಿತಿಯಲ್ಲೇ ಮರಿಯನ್ನು ಹೆರುತ್ತದೆ. ಮರಿ ನೆಲಕ್ಕೆ ಸಾಕಷ್ಟು ಎತ್ತರದಿಂದ ಬೀಳುತ್ತದೆ. ಈ ಬೀಳುವಿಕೆಯ ಆಘಾತದಿಂದ ಮರಿ ಸಾಮಾನ್ಯವಾಗಿ ಬೇಗನೆ ಚೇತರಿಸಿಕೊಂಡು, ಸ್ವಲ್ಪ ಸಮಯದಲ್ಲೇ ನಿಲ್ಲಲು ಪ್ರಯತ್ನಿಸುತ್ತದೆ.

ಜನನದ ಕೆಲವೇ ಸಮಯದಲ್ಲಿ ನಿಲ್ಲುವುದು ಮತ್ತು ತಾಯಿಯ ಹಾಲು ಕುಡಿಯಲು ಸಾಧ್ಯವಾಗುವುದು ಮರಿ ಬದುಕುಳಿಯಲು ಮುಖ್ಯ. ತೆರೆದ ಸವನ್ನಾ ಪ್ರದೇಶದಲ್ಲಿ ಸಿಂಹ, ಚಿರತೆ, ಹೈನಾಗಳಂತಹ ಬೇಟೆಗಾರರ ಅಪಾಯವಿರುವುದರಿಂದ ಮರಿ ಬೇಗ ಚಲಿಸಬಲ್ಲ ಸ್ಥಿತಿಗೆ ಬರಬೇಕು. ತಾಯಿ ಜಿರಾಫೆ ಮರಿಗೆ ರಕ್ಷಣೆ ನೀಡುತ್ತದೆ; ಕೆಲವೊಮ್ಮೆ ಬಲವಾದ ಕಾಲಿನ ಹೊಡೆತದಿಂದ ಬೇಟೆಗಾರನನ್ನು ತಡೆಯಬಹುದು.
ನಿಧಾನ ಕಾಣುವ, ವೇಗದ ಓಟಗಾರ
ಜಿರಾಫೆ ನಿಧಾನವಾಗಿ ನಡೆಯುವ ಉದ್ದ ಕಾಲುಗಳ ಪ್ರಾಣಿ. ಆದರೆ ಅಗತ್ಯವಾದಾಗ ಅದು ವೇಗವಾಗಿ ಓಡಬಲ್ಲದು. ದೊಡ್ಡ ದೇಹ ಮತ್ತು ಉದ್ದ ಕಾಲುಗಳಿದ್ದರೂ, ಜಿರಾಫೆಯ ಚಲನೆ ಸಮತೋಲನಯುತವಾಗಿರುತ್ತದೆ.

ನೀರು ಕುಡಿಯುವಾಗ ಮಾತ್ರ ಜಿರಾಫೆ ಹೆಚ್ಚು ಅಸುರಕ್ಷಿತ ಸ್ಥಿತಿಗೆ ಬರುತ್ತದೆ. ತಲೆ ಕೆಳಗಿಳಿಸಲು ಕಾಲುಗಳನ್ನು ಅಗಲವಾಗಿ ಇಡಬೇಕು. ಈ ಸ್ಥಿತಿಯಲ್ಲಿ ಬೇಟೆಗಾರರ ಮೇಲೆ ಗಮನ ಕಡಿಮೆಯಾಗಬಹುದು. ಆದ್ದರಿಂದ ಜಿರಾಫೆಗಳು ನೀರು ಕುಡಿಯುವಾಗ ಎಚ್ಚರಿಕೆಯಿಂದಿರುತ್ತವೆ.
ಮೌನದಲ್ಲಿರುವ ಸಂವಹನ
ಜಿರಾಫೆಗಳು ಬಹಳ ಗದ್ದಲ ಮಾಡುವ ಪ್ರಾಣಿಯಲ್ಲ. ಆದರೆ ಅವು ಸಂಪೂರ್ಣ ಮೌನ ಜೀವಿಗಳೂ ಅಲ್ಲ. ದೇಹಭಾಷೆ, ನೋಟ, ಚಲನೆ, ಕತ್ತು ಚಲನೆ ಮತ್ತು ಕೆಲವು ಕಡಿಮೆ ಆವೃತ್ತಿಯ ಧ್ವನಿಗಳ ಮೂಲಕ ಅವು ಸಂವಹನ ಮಾಡುತ್ತವೆ.

ಗುಂಪಿನೊಳಗೆ ತಾಯಿ-ಮರಿ ಸಂವಹನ, ಗಂಡುಗಳ ಸ್ಪರ್ಧೆ, ಎಚ್ಚರಿಕೆ ಮತ್ತು ಚಲನೆಯ ಸಮನ್ವಯ ಇವುಗಳೆಲ್ಲ ಶಾಂತವಾಗಿ ನಡೆಯುವ ಚಟುವಟಿಕೆಗಳು.
ಜಿರಾಫೆಗಳು ಜಗತ್ತಿನಲ್ಲಿರಲಿ
ಜಿರಾಫೆಗಳು ಆಫ್ರಿಕಾದ ಹಲವು ಪ್ರದೇಶಗಳಲ್ಲಿ ಕಂಡುಬಂದರೂ, ಎಲ್ಲ ಕಡೆ ಅವುಗಳ ಸ್ಥಿತಿ ಒಂದೇ ರೀತಿಯಲ್ಲ. ಕೆಲವು ಪ್ರದೇಶಗಳಲ್ಲಿ ಜನಸಂಖ್ಯೆ ಸ್ಥಿರವಾಗಿದ್ದರೆ, ಕೆಲವು ಪ್ರಭೇದಗಳು ಅಥವಾ ಉಪ ಪ್ರಭೇದಗಳು ಗಂಭೀರ ಕುಸಿತವನ್ನು ಕಂಡಿವೆ. ವಾಸಸ್ಥಳ ನಾಶ, ಕೃಷಿ ವಿಸ್ತರಣೆ, ಮಾನವ-ವನ್ಯಜೀವಿ ಘರ್ಷಣೆ, ಅನಧಿಕೃತ ಬೇಟೆ ಮತ್ತು ರಾಜಕೀಯ ಅಸ್ಥಿರತೆಗಳು ಜಿರಾಫೆಗಳ ಉಳಿವಿಗೆ ಅಪಾಯ ಉಂಟು ಮಾಡಿವೆ.
ಜಿರಾಫೆಯ ಎತ್ತರ ಅದನ್ನು ಮರಗಳ ಮೇಲೆ ಆಹಾರ ತಲುಪುವ ಪ್ರಾಣಿಯನ್ನಾಗಿ ಮಾಡಿದೆ. ಆದರೆ ಅದೇ ಎತ್ತರ ಅದನ್ನು ಮಾನವ ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೆ. ಇದೇ ಅವುಗಳನ್ನು ಅಳಿವಿನಂಚಿಗೆ ದೂಡಿದೆ. ಇದು ಹೀಗೆಯೇ ಮುಂದುವರೆದಲ್ಲಿ ಜಿರಾಫೆಗಳ ನಿರ್ನಾಮವಾಗುವ ದಿನಗಳು ದೂರವಿಲ್ಲ.
ಇದನ್ನೂ ನೋಡಿ: ನೀಟ್ ಹಗರಣ | ವಿದ್ಯಾರ್ಥಿಗಳೇ ಎದ್ದೇಳಿ! ಹೋರಾಟಕ್ಕೆ ಜೊತೆಯಾಗಿ — ನಟ ಕಿಶೋರ್ ಮನವಿ Janashakthi Media
