ನಾಗ್ಪುರ: ದೇಶಾದ್ಯಂತ ಜೂನ್ 21ರಂದು ನಡೆಯಲಿರುವ ನೀಟ್-ಯುಜಿ 2026 ಮರುಪರೀಕ್ಷೆಗೆ ಕೇವಲ ಒಂದು ದಿನ ಬಾಕಿ ಇರುವಾಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ)ಯ ಗಂಭೀರ ಎಡವಟ್ಟೊಂದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಗ್ಪುರ ಮೂಲದ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷಾ ಕೇಂದ್ರವನ್ನು ಸಾವಿರಾರು ಕಿಲೋಮೀಟರ್ ದೂರದ ಯುಎಇಯ ಅಬುಧಾಬಿಯಲ್ಲಿ ನಿಗದಿಪಡಿಸಿರುವುದು ವಿದ್ಯಾರ್ಥಿ ಹಾಗೂ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು.
18 ವರ್ಷದ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಎಂಬ ವಿದ್ಯಾರ್ಥಿ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಮರುಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ಪರೀಕ್ಷಾ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡಾಗ ತನ್ನ ಪರೀಕ್ಷಾ ಕೇಂದ್ರ ಅಬುಧಾಬಿಯಲ್ಲಿದೆ ಎಂಬುದನ್ನು ಕಂಡು ಆತ ಬೆಚ್ಚಿಬಿದ್ದಿದ್ದಾನೆ. ತನ್ನ ಆಯ್ಕೆಯ ನಗರಗಳ ಪಟ್ಟಿಯಲ್ಲಿ ಅಬುಧಾಬಿ ಇರಲಿಲ್ಲ ಎಂದು ಕುಟುಂಬ ಹೇಳಿದೆ.
ವಿದ್ಯಾರ್ಥಿಯ ಕುಟುಂಬದ ಪ್ರಕಾರ, ಅಬ್ದುಲ್ಲಾ ಬಳಿ ಪಾಸ್ಪೋರ್ಟ್ ಕೂಡ ಇಲ್ಲ. ಹೀಗಿರುವಾಗ ಒಂದು ದಿನದೊಳಗೆ ವಿದೇಶಕ್ಕೆ ತೆರಳಿ ಪರೀಕ್ಷೆ ಬರೆಯುವುದು ಅಸಾಧ್ಯ. ಈ ಬೆಳವಣಿಗೆಯಿಂದ ವಿದ್ಯಾರ್ಥಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಕುಟುಂಬ ಸದಸ್ಯರು ಕೂಡ ಆತಂಕಕ್ಕೀಡಾಗಿದ್ದಾರೆ.
ಈ ಕುರಿತು ಎನ್ಟಿಎ ಅಧಿಕಾರಿಗಳನ್ನು ಸಂಪರ್ಕಿಸಿದ ನಂತರ, ಇದು ತಾಂತ್ರಿಕ ದೋಷದಿಂದ ಉಂಟಾದ ಸಮಸ್ಯೆಯಾಗಿದ್ದು, ವಿದ್ಯಾರ್ಥಿಗೆ ಹೊಸ ಪ್ರವೇಶ ಪತ್ರ ನೀಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ನಾಗ್ಪುರದಲ್ಲೇ ಅಥವಾ ಸಮೀಪದ ಪ್ರದೇಶದಲ್ಲಿ ಹೊಸ ಪರೀಕ್ಷಾ ಕೇಂದ್ರವನ್ನು ಹಂಚಿಕೆ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : NEET ಮರುಪರೀಕ್ಷೆ ಹಿನ್ನಲೆ: ಟೆಲಿಗ್ರಾಂ ತಾತ್ಕಾಲಿಕ ನಿರ್ಬಂಧಕ್ಕೆ ದೆಹಲಿ ಹೈಕೋರ್ಟ್ ಮನ್ನಣೆ
ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ವಹಣೆಯಲ್ಲಿ ಎನ್ಟಿಎಯ ಕಾರ್ಯವೈಖರಿ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ. ಈಗಾಗಲೇ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ಆರೋಪಗಳಿಂದ ಟೀಕೆಗೆ ಗುರಿಯಾಗಿರುವ ಎನ್ಟಿಎ, ಮರುಪರೀಕ್ಷೆಯ ಸಂದರ್ಭದಲ್ಲೂ ಇಂತಹ ಎಡವಟ್ಟಿನಿಂದ ಮುಜುಗರಕ್ಕೆ ಒಳಗಾಗಿದೆ.
ದೇಶದಾದ್ಯಂತ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್-ಯುಜಿ 2026 ಮರುಪರೀಕ್ಷೆಗೆ ಹಾಜರಾಗಲಿದ್ದು, ಪರೀಕ್ಷೆಯ ಸುರಕ್ಷತೆ ಹಾಗೂ ಪಾರದರ್ಶಕತೆಗೆ ಎನ್ಟಿಎ ವಿಶೇಷ ಕ್ರಮಗಳನ್ನು ಕೈಗೊಂಡಿದೆ ಎಂದು ಸಂಸ್ಥೆ ಹೇಳಿದೆ. ಆದರೆ ನಾಗ್ಪುರ ವಿದ್ಯಾರ್ಥಿಯ ಪ್ರಕರಣವು ಪರೀಕ್ಷಾ ಕೇಂದ್ರಗಳ ಹಂಚಿಕೆ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಬಹಿರಂಗಪಡಿಸಿದೆ.
“ಪಾಸ್ಪೋರ್ಟ್ ಕೂಡ ಇಲ್ಲದ ವಿದ್ಯಾರ್ಥಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ ನೀಡಿರುವುದು ಎಷ್ಟು ದೊಡ್ಡ ಆಡಳಿತಾತ್ಮಕ ಎಡವಟ್ಟು ಎಂಬುದನ್ನು ಈ ಘಟನೆ ತೋರಿಸುತ್ತದೆ” ಎಂದು ಶಿಕ್ಷಣ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ನೋಡಿ : ಭೂಮಿ ಹೋಯ್ತು, ಉದ್ಯೋಗ ಸಿಗಲಿಲ್ಲ! 13 ವರ್ಷ ಕಳೆದರೂ ಸಿಗದ ನ್ಯಾಯ! Janashakthi Media
