ಹಾಸನ: ಹಿರಿಯ ಕಾರ್ಮಿಕ ಮುಖಂಡ ಹಾಗೂ ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾಗಿದ್ದ ಜಿ.ಪಿ. ಸತ್ಯನಾರಾಯಣ (71) ಅವರು ಜೂನ್ 20ರಂದು ಅಕಾಲಿಕವಾಗಿ ನಿಧನರಾದರು. ಅವರ ನಿಧನಕ್ಕೆ ಸಿಐಟಿಯು ಹಾಗೂ ಸಿಪಿಐ(ಎಂ) ಹಾಸನ ಜಿಲ್ಲಾ ಸಮಿತಿಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ. ಮುಖಂಡ
1980ರ ದಶಕದಲ್ಲಿ ಹಾಸನ ಜಿಲ್ಲೆಯ ಕಾಫಿ ಕ್ಯೂರಿಂಗ್ ಕಾರ್ಮಿಕರಾಗಿ ದುಡಿಯುತ್ತಿದ್ದ ಸತ್ಯನಾರಾಯಣ ಅವರು ಕಾರ್ಮಿಕ ಸಂಘಟನೆಯನ್ನು ಕಟ್ಟುವ ಮೂಲಕ ಕಾರ್ಮಿಕ ಚಳುವಳಿಯನ್ನು ಮುನ್ನಡೆಸಿದ್ದರು. ನಂತರ ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ವಿವಿಧ ಕಾರ್ಮಿಕ ವರ್ಗಗಳ ಹೋರಾಟಗಳಿಗೆ ನೇತೃತ್ವ ವಹಿಸಿದ್ದರು. ಮುಖಂಡ
ರವೀಂದ್ರನಗರದಲ್ಲಿರುವ ಅವರ ಸ್ವಗೃಹದಲ್ಲಿ ಸಿಐಟಿಯು ಮತ್ತು ಸಿಪಿಐ(ಎಂ) ಕಾರ್ಯಕರ್ತರು ಪಾರ್ಥಿವ ಶರೀರದ ಮೇಲೆ ಕೆಂಪು ಬಾವುಟ ಹೊದಿಸಿ ಗೌರವಪೂರ್ವಕವಾಗಿ ಅಂತಿಮ ನಮನ ಸಲ್ಲಿಸಿದರು.
ಇದನ್ನೂ ಓದಿ: ಪದವಿ ವಿದ್ಯಾರ್ಥಿಗಳ ಪರೀಕ್ಷೆ ಶುಲ್ಕ ಹೆಚ್ಚಳ ಖಂಡಿಸಿ ಎಸ್ಎಫ್ಐ ಪ್ರತಿಭಟನೆ
ಕಾಫಿ ಕ್ಯೂರಿಂಗ್, ತೋಟ, ಕೈಗಾರಿಕಾ, ಪೌರ, ಆಸ್ಪತ್ರೆ, ಗುತ್ತಿಗೆ ಕಾರ್ಮಿಕರು, ಅಂಗನವಾಡಿ ನೌಕರರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಬಿಸಿಯೂಟ ನೌಕರರು ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕರನ್ನು ಸಂಘಟಿಸಿ ಅವರ ಹಕ್ಕುಗಳಿಗಾಗಿ ಅನೇಕ ಹೋರಾಟಗಳನ್ನು ಸತ್ಯನಾರಾಯಣ ನಡೆಸಿದ್ದರು. ಜಿಲ್ಲೆಯ ಕಾರ್ಮಿಕ ನಾಯಕ ವಿ. ಸುಕುಮಾರ್ ಅವರೊಂದಿಗೆ ಸೇರಿ ಹಾಸನ ಜಿಲ್ಲೆಯಲ್ಲಿ ಎಡಪಂಥೀಯ ಹಾಗೂ ಕಾರ್ಮಿಕ ಚಳುವಳಿಯನ್ನು ಬೆಳೆಸಲು ಮಹತ್ವದ ಕೊಡುಗೆ ನೀಡಿದ್ದರು.

ಕೋಮುವಾದಿ ಹಾಗೂ ಜಾತಿವಾದಿ ಶಕ್ತಿಗಳ ವಿರುದ್ಧ ನಡೆದ ಹೋರಾಟಗಳಲ್ಲಿಯೂ ಅವರು ಸಕ್ರಿಯ ಪಾತ್ರ ವಹಿಸಿದ್ದರು. ಕಿರಿಯ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದ ಸತ್ಯನಾರಾಯಣ ಅವರ ನಿಧನದಿಂದ ಕಾರ್ಮಿಕ ಚಳುವಳಿಗೆ ಅಪಾರ ನಷ್ಟ ಉಂಟಾಗಿದೆ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ಧರ್ಮೇಶ್ ಹಾಗೂ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್ ತಿಳಿಸಿದ್ದಾರೆ.
ಸತ್ಯನಾರಾಯಣ ಅವರು ಜೀವನಪೂರ್ತಿ ದುಡಿಯುವ ವರ್ಗದ ಹಿತಾಸಕ್ತಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಅವರ ನೆನಪಿನಲ್ಲಿ ಮುಂದಿನ ವಾರ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಹಾಗೂ ಜಿಲ್ಲೆಯಾದ್ಯಂತ ವಿವಿಧ ಸ್ಮರಣಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ನೋಡಿ: ಹೋರ್ಮುಜ್ ಜಲಸಂಧಿ | 107 ದಿನಗಳಿಂದ ಸಮುದ್ರದಲ್ಲೇ ಸಿಲುಕಿರುವ 562 ಭಾರತೀಯ ನಾವಿಕರು Janashakthi Media
