ಯು.ಕೆ.ಯಲ್ಲಿ ಕಳೆದ 10 ವರ್ಷಗಳಲ್ಲಿ 7 ಪ್ರಧಾನಿಗಳು ಏಕೆ? ಬ್ರೆಕ್ಸಿಟ್ ಈ ರಾಜಕೀಯ ಅಸ್ಥಿರತೆಗೆ ಕಾರಣ?

ಜೂನ್ 22ರಂದು ಯು.ಕೆ.ಯ ಪ್ರದಾನಿ ಕೀರ್ ಸ್ಟಾರ್ಮರ್ ಅವರ ಲೇಬರ್ ಪಕ್ಷಕ್ಕೆ ಮೂರನೇ ಎರಡರಷ್ಟು ಸುಭದ್ರ ಪಾರ್ಲಿಮೆಂಟರಿ ಬಹುಮತವಿದ್ದೂ, ಎರಡು ವರ್ಷಗಳ ಒಳಗೇನೇ  ತಮ್ಮ 5 ವರ್ಷಗಳ ಅವಧಿ ಪೂರೈಸುವ ಮೊದಲೇ ರಾಜೀನಾಮೆ ಕೊಟ್ಟರು, ಆಂಡಿ ಬರ್ನ್ ಹಮ್  ಜುಲೈ 20ರಂದು ಹೊಸ ಪ್ರಧಾನಿಯಾದರು.  ಇವರು ಕಳೆದ 10 ವರ್ಷಗಳಲ್ಲಿ 7ನೇ ಪ್ರಧಾನಿ. 2016ರ  ಬ್ರೆಕ್ಸಿಟ್ ಜನಮತಸಂಗ್ರಹದಿಂದ ಆರಂಭವಾಗುವಂತೆ ಕಾಣುವ ಈ ರಾಜಕೀಯ ಅಸ್ಥಿರತೆಗೆ ಕಾರಣಗಳೇನು ಎಂದು ವಿಶ್ಲೇಷಿಸುವ ಲೇಖನ.

– ವಸಂತರಾಜ ಎನ್.ಕೆ

ಜೂನ್ 22ರಂದು ಯು.ಕೆ.ಯ ಪ್ರದಾನಿ ಕೀರ್ ಸ್ಟಾರ್ಮರ್ ಎರಡು ವರ್ಷಗಳ ಒಳಗೇನೇ  ತಮ್ಮ 5 ವರ್ಷಗಳ ಅವಧಿ ಪೂರೈಸುವ ಮೊದಲೇ ರಾಜೀನಾಮೆ ಕೊಟ್ಟರು, ಆಂಡಿ ಬರ್ನ್ ಹಮ್  ಜುಲೈ 20ರಂದು ಹೊಸ ಪ್ರಧಾನಿಯಾದರು.  ಕಳೆದ (ಜುಲೈ 2024) ಪಾರ್ಲಿಮೆಂಟರಿ ಚುನಾವಣೆಗಳಲ್ಲಿ 14 ವರ್ಷಗಳ ಟೋರಿ (ಕನ್ಸರ್ವೇಟಿವ್) ಪಕ್ಷಗಳ ಆಳ್ವಿಕೆಯ ನಂತರ, ಸ್ಟಾರ್ಮರ್ ಲೇಬರ್ ಪಕ್ಷವನ್ನು ಅಭೂತಪೂರ್ವ ವಿಜಯದತ್ತ ನಡೆಸುವ ನಾಯಕತ್ವ ವಹಿಸಿದ್ದರು.

ಆದರೆ ಮೇ 2026ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪರಾಭವ ಹೊಂದಿದಂದಿನಿಂದ ಲೇಬರ್ ಪಕ್ಷದೊಳಗೆ ಅವರ ರಾಜೀನಾಮೆಗೆ ಒತ್ತಾಯ ಆರಂಭವಾಗಿತ್ತು. ಹಲವು ಚುನಾವಣಾ ಆಶ್ವಾಸನೆಗಳನ್ನು ಈಡೇರಿಸದೆ, ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಗಂಭೀರ ಪ್ರಯತ್ನಗಳನ್ನು ಮಾಡದೆ, ‘ಎಪ್ ಸ್ಟೀನ್ ಫೈಲ್ಸ್’ ಗೆ ನಂಟು ಹೊಂದಿರುವ ಯು.ಎಸ್. ಗೆ  ಯು.ಕೆ ರಾಯಭಾರಿ ಮೆಂಡೆಲ್ಸನ್ ನೇಮಕದ ಹಗರಣದಲ್ಲಿ ಭಾಗಿಯಾಗಿ – ಹೀಗೆ ಹಲವು ವಿಷಯಗಳಿಗೆ ಒಟ್ಟಾಗಿ ಸ್ಟಾರ್ಮರ್ ಮತ್ತು ಲೇಬರ್ ಆಳ್ವಿಕೆಯ ವಿರುದ್ಧ ತೀವ್ರ ಅತೃಫ್ತಿ ಹರಡಿದ್ದು, ಅವರ ರಾಜೀನಾಮೆಗೆ ಕಾರಣವಾಯಿತು. ಆದರೆ ಸ್ಟಾರ್ಮರ್ ರಾಜೀನಾಮೆ ಬರಿಯ ಒಂದು ಬಿಡಿ ವಿದ್ಯಮಾನವಲ್ಲ.

ಇದನ್ನೂ ಓದಿ: ಬಲವಾದ ಗಾಳಿಗೆ ಮಳೆ ಸಹಕಾರ ಇಲ್ಲ: ಕರ್ನಾಟಕದಲ್ಲಿ ಮಳೆಯ ಕೊರತೆ ಮುಂದುವರಿಕೆ

ಕಳೆದ 10 ವರ್ಷಗಳಲ್ಲಿ ಕೀರ್ ಸ್ಟಾರ್ಮರ್ ರಾಜೀನಾಮೆಯ ಮೊದಲು 5 ಟೋರಿ ಪ್ರಧಾನಿಗಳೂ  ರಾಜೀನಾಮೆ ಕೊಡಬೇಕಾಗಿ ಬಂದಿದೆ.  ಕಳೆದ 10 ವರ್ಷಗಳಲ್ಲಿ ಬರ್ನ್ ಹರ್ಮ್ 7ನೇ ಪ್ರಧಾನಿ. ಆಳುವ ಲೇಬರ್ ಪಕ್ಷಕ್ಕೆ ಪಾರ್ಲಿಮೆಂಟಿನಲ್ಲಿ ಭಾರೀ (ಹೆಚ್ಚು ಕಡಿಮೆ 2/3 ರಷ್ಟು) ಬಹುಮತವಿದ್ದರೂ ರಾಜಕೀಯ ಬಿಕ್ಕಟ್ಟು ಇಲ್ಲಿನ ವಿಶೇಷ. ಇದು ಹಿಂದಿನ ಟೋರಿ ಪ್ರಧಾನಿಗಳ  ಬಗೆಗೂ ನಿಜ.  ಅವರಿಗೂ ಹೆಚ್ಚಾಗಿ ಭದ್ರ ಪಾರ್ಲಿಮೆಂಟರಿ ಬಹುಮತವಿತ್ತು. ಆದರೂ ರಾಜೀನಾಮೆ ಕೊಡಬೇಕಾಯಿತು. ಯಾಕೆ?

ಸ್ಟಾರ್ಮರ್ ರಾಜೀನಾಮೆಗೆ ಕಾರಣವಾದ ಇತ್ತೀಚಿನ ಬೆಳವಣಿಗೆಗಳನ್ನು ಮೊದಲು ನೋಡೋಣ. ಜುಲೈ 2024 ಪಾರ್ಲಿಮೆಂಟರಿ ಚುನಾವಣೆಗಳಲ್ಲಿ ಲೇಬರ್ ಗೆದ್ದಿದ್ದರೂ, ಅದರ ಜನಾದೇಶ ಬಹಳ ದುರ್ಬಲವಾಗಿತ್ತು. ಲೇಬರ್ ಕೇವಲ 33.7% ಮತ ಗಳಿಸಿತ್ತು. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಕೇವಲ 1.9% ಮತ ಏರಿಕೆಯೊಂದಿಗೆ 211 ಹೆಚ್ಚು ಸೀಟು ಗಳಿಸಿತು. ಟೋರಿ ಪಕ್ಷ ಕಳೆದುಕೊಂಡ 19.9% ಮತಗಳ ಬಹುಪಾಲು 14.9% ಮತ ಪಡೆದ ಉಗ್ರ ಬಲಪಂಥೀಯ ಪಕ್ಷ ರಿಫೊರ್ಮ್ ಯು.ಕೆ.ಗೆ ಹೋಯಿತು. ಲೇಬರ್ ಪಕ್ಷ ಜನರನ್ನು ಆಕರ್ಷಿಸುವ ಹೊಸ ಕಾರ್ಯಕ್ರಮಗಳನ್ನೇನೂ ಪ್ರಕಟಿಸಿರಲಿಲ್ಲ.

ಹಿಂದಿನ ಸರಕಾರದ ಮೇಲಿನ ಪೂರ್ಣ ವಿಶ್ವಾಸ ಕಳೆದುಕೊಂಡದ್ದರಿಂದ ಅದನ್ನು ಇಳಿಸುವುದರ ಮೇಲೆ ಹೆಚ್ಚಿನ ಒತ್ತು ಇತ್ತು.  ಸರಕಾರ ರಚನೆಯಾದ ಮೇಲೂ ತಂದ ಕೆಲವು ನೀತಿಗಳು ಜನತೆಯಲ್ಲಿ ಬಹಳ ಆಕ್ರೋಶ ತಂದವು. ಪೆನ್ಶನ್ ದಾರರಿಗೆ ಚಳಿಗಾಲದಲ್ಲಿ ಬೆಚ್ಚಗಿರಿಸುವ ಇಂಧನ ವೆಚ್ಚ ರಿಯಾಯಿತಿಯನ್ನು ನಿಲ್ಲಿಸಲಾಯಿತು ಮತ್ತು ಉಳಿದವರಿಗೂ ರಿಯಾಯಿತಿಗೆ ಹೊಸ ಶರತ್ತುಗಳನ್ನು ಹಾಕಲಾಯಿತು. ವಿಮೆ ಮತ್ತು ತೆರಿಗೆ ಹೊರೆಯನ್ನು ಹೆಚ್ಚಿಸುವುದರೊಂದಿಗೆ ಹೆಚ್ಚೆಚ್ಚು ‘ಮಿತವ್ಯವಯ’ದ (ಕಲ್ಯಾಣ ಕ್ರಮಗಳಲ್ಲಿ ಕಡಿತ) ನೀತಿಗಳ ಜಾರಿ ಮಾಡಲಾಯಿತು. ರಾಷ್ಟ್ರೀಯ ಆರೋಗ್ಯ ಸೇವೆಯನ್ನು ಉತ್ತಮಗೊಳಿಸುವ ಗಂಭೀರ ಪ್ರಯತ್ನಗಳ ಮತ್ತು ಸಾರ್ವಜನಿಕ ಕ್ಷೇತ್ರದ ಸುಧಾರಣೆಗಳ ಅಭಾವ ಅತೃಪ್ತಿಯನ್ನು ಹೆಚ್ಚಿಸಿತು.

ಗ್ರಾಮೀಣ ಕೃಷಿ ಆಸ್ತಿ ತೆರಿಗೆ ರಚನೆಯಲ್ಲಿ ಬದಲಾವಣೆಗಳೂ ಗ್ರಾಮೀಣ ಸಮುದಾಯಗಳಲ್ಲಿ ಅತೃಪ್ತಿಯನ್ನು ಹೆಚ್ಚಿಸಿದವು.  ಸ್ಟಾರ್ಮರ್ ಸರಕಾರದ ವಿರುದ್ಧ ಜನರಲ್ಲಿ ಮಡುಗಟ್ಟಿದ ಅತೃಪ್ತಿ, ಆಕ್ರೋಶ ಸ್ಥಳೀಯ ಸಂಸ್ಥೆ (ಮುನಿಸಿಪಾಲಿಟಿ) ಇತ್ಯಾದಿ ಚುನಾವಣೆಗಳಲ್ಲಿ ಕಟ್ಟೊಡೆಯಿತು. ಲೇಬರ್ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ 66 ರಲ್ಲಿ 38 ಮುನಿಸಿಪಲ್ ಕೌನ್ಸಿಲ್ ಗಳನ್ನು, 2566 ಕೌನ್ಸಿಲರ್ ಸೀಟುಗಳಲ್ಲಿ1498 ಕೌನ್ಸಿಲರ್ ಸೀಟುಗಳನ್ನು ಕಳೆದುಕೊಂಡು ಭಾರೀ ಪರಾಭವ ಅನುಭವಿಸಿತು. ಉಗ್ರಗಾಮಿ ರಿಫೊರ್ಮ್ ಯುಕೆ ಪಕ್ಷ 2 ಸೀಟುಗಳಿಂದ 1454 ಕೌನ್ಸಿಲರ್ ಸೀಟುಗಳನ್ನು, 0 ಕೌನ್ಸಿಲ್ ಗಳಿಂದ 14 ಕೌನ್ಸಿಲ್ ಗಳನ್ನು ಗಳಿಸಿತು.  ಹಿಂದೆ ಪ್ರಮುಖ ಪಕ್ಷಗಳಾಗಿದ್ದ ಲೇಬರ್, ಟೋರಿ, ಲಿಬರಲ್ ತಲಾ 16-17% ಕ್ಕೆ ಸೀಮಿತವಾದರೆ ಉಗ್ರಗಾಮಿ ರಿಫೊರ್ಮ್ ಯುಕೆ ಪಕ್ಷ 26% ಮತ ಪಡೆದು ಮೊದಲ ಸ್ಥಾನದಲ್ಲಿ, ಗ್ರೀನ್ ಪಕ್ಷ 18% ದೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಈ ಚುನಾವಣಾ ಫಲಿತಾಂಶದಿಂದ ಆಳುವ ಲೇಬರ್ ಪಕ್ಷದ ಸಂಸತ್ ಸದಸ್ಯರಲ್ಲಿ ಭೂಕಂಪವೇ ಆಯಿತು, ಇದು ತೀವ್ರ ಆತಂಕ ಸೃಷ್ಟಿಸಿತು.  ಇದೇ ಸ್ಟಾರ್ಮರ್ ಅವರ ಫ್ರಧಾನಿ ಪಟ್ಟದ ಅಂತ್ಯದ ಆರಂಭವಾಗಿತ್ತು.

ಆದರೆ ಕಳೆದ 10 ವರ್ಷಗಳಲ್ಲಿ ಅಂದರೆ 2016ರಿಂದ 7 ಪ್ರಧಾನಿಗಳು ಯಾಕೆ ಆದರು ಎಂಬುದನ್ನು ಇದು ವಿವರಿಸುವುದಿಲ್ಲ. ಯು.ಕೆಯಲ್ಲಿ  ‘ಬ್ರೆಕ್ಸಿಟ್’ (ಯುರೋ ಕೂಟದಲ್ಲಿ ಬ್ರಿಟನ್ ಅಥವಾ ಯುಕೆ ಇರಬೇಕೆ ಅಥವಾ ಬಿಡಬೇಕೆ) ಜನಮತಸಂಗ್ರಹ ನಡೆದಿದ್ದು 2016ರಲ್ಲಿ.   ಯುರೋ ಕೂಟದಲ್ಲಿ ಬ್ರಿಟನ್ ಅಥವಾ ಯುಕೆ ಇರಬೇಕೆ ಅಥವಾ ಬಿಡಬೇಕೆ ಎಂಬ ಈ ಪ್ರಶ್ನೆ ಇಡೀ ದೇಶವನ್ನು ಲಂಬವಾಗಿ ಒಡೆದಿತ್ತು. ಯು.ಕೆ.ಯ ಪ್ರಮುಖ ಪಕ್ಷಗಳಾಧ – ಟೋರಿ, ಲೆಬರ್, ಲಿಬರಲ್, ಪ್ರಮುಖ ವರ್ಗಗಳಾದ ಉದ್ಯಮಿಗಳು, ಕಾರ್ಮಿಕರು, ಮಧ್ಯಮ ವರ್ಗದ ವಿಭಾಗಗಳು, ಎಲ್ಲವೂ ಲಂಬವಾಗಿ ಒಡೆದಿದ್ದವು.  ಯುರೋಕೂಟದಲ್ಲಿ ಇರಬೇಕೆ ಅಥವಾ ಬಿಡಬೇಕೆ ಎಂಬ ಪ್ರಶ್ನೆಗೆ ವಿವಿಧ ಜನವಿಭಾಗಗಳು ವಿವಿಧ ಕಾರಣಗಳಿಗೆ ಕೆಲವೊಮ್ಮೆ ವಿರುದ್ಧ ಕಾರಣಗಳಿಗೆ ತಮ್ಮ ಉತ್ತರವನ್ನು ನೀಡಿದ್ದರು.

ಈ ಪ್ರಶ್ನೆ ಜನಮತಸಂಗ್ರಹದ ತೀರ್ಪಿನ ಜತೆ ಇತ್ಯರ್ಥವಾಗಲಿಲ್ಲ. ಜನಮತಸಂಗ್ರಹಕವನ್ನು ನಡೆಸಿದ ಆಗಿನ ಟೋರಿ ಪ್ರಧಾನಿ ಕೆಮರೊನ್ ಅದನ್ನು ನಿಜವಾಗಿಯೂ ಪ್ರಾಮಾಣಿಕವಾಗಿ ಜನರ ಅಭಿಪ್ರಾಯ ಕೇಳುವ ಉದ್ದೇಶದಿಂದ ಅದನ್ನು ಮಾಡಲಿಲ್ಲ. ಯು.ಕೆ ಯುರೋಕೂಟದಲ್ಲಿ ಇರಬೇಕು ಎಂಬುದು ಕೆಮರೂನ್ ಅಭಿಪ್ರಾಯ. ಜನತೆಯ ಅಭಿಪ್ರಾಯವೂ ಅದೇ ಎಂಬುದು ಅವರಿಗಿದ್ದ “ಖಚಿತ’ ಮಾಹಿತಿ!  ಹಾಗಾಗಿ ಟೋರಿ ಪಕ್ಷದೊಳಗೆ ಇದ್ದ ‘ಯುರೋಕೂಟ ಬಿಡಬೇಕು’ ಗುಂಪಿನ ಬಾಯಿ ಮುಚ್ಚಿಸಲು ಈ ಜನಮತಸಂಗ್ರಹಕ್ಕೆ ಮುಂದಾಗಿದ್ದರು. ಜನಮತಸಂಗ್ರಹದಲ್ಲಿ ಟೋರಿ, ಲೇಬರ್ ಪಕ್ಷದ ದೊಡ್ಡ ವಿಭಾಗಗಳು ‘ಯುರೋಕೂಟದಲ್ಲಿ ಇರಬೇಕು’ ಪರ ಇದ್ದವು. ಅಲ್ಲದೆ ಉದ್ಯಮಿಗಳ, ಮಾಧ್ಯಮದ ದೊಡ್ಡ ವಿಭಾಗವೂ ಅದಕ್ಕೆ ಪರವಾಗಿತ್ತು. ಸಮೀಕ್ಷೆಗಳು ‘ಇರಬೇಕು’ ಗೆ ಭಾರೀ ಬಹುಮತ ಬರುತ್ತದೆ ಎಂದು ಹೇಳಿದ್ದವು. ಆದರೆ ಇವೆಲ್ಲವನ್ನು ತಲೆಕೆಳಗಾಗಿಸುವಂತೆ ‘ಶಾಕ್’ ಫಲಿತಾಂಶ ಬಂತು. ಜನಮತಸಂಗ್ರಹದಲ್ಲಿ ಯು.ಕೆ ‘ಯುರೋಕೂಟವನ್ನು ಬಿಡಬೇಕು’ ಎಂಬುದರ ಪರ 51.8% ಜನ ಬೆಂಬಲಿಸಿದ್ದರು.

ಈ ರಾಜಕೀಯ ‘ಶಾಕ್’’ ನ ದಿನದಿಂದ ರಾಜಕೀಯ ಅಸ್ಥಿರತೆ ಆರಂಭವಾಯಿತು. ಇದು ಕಳೆದ ಹತ್ತು ವರ್ಷಗಳಲ್ಲಿ ಯು.ಕೆ.ಯನ್ನು ಬೇತಾಳದಂತೆ ಕಾಡುತ್ತಿದೆ ಎಂದು ಹೇಳಲಾಗುತ್ತದೆ. ಏಕೆಂದರೆ ಈ ಪ್ರಶ್ನೆ ಇತ್ಯರ್ಥವೇ ಆಗಲಿಲ್ಲ. 2015ರಲ್ಲಿ ಎರಡನೇ ಬಾರಿ ಪ್ರಧಾನಿಯಾಗಿ ಚುನಾಯಿತರಾಗಿದ್ದ ಕೆಮರೊನ್ ಈ ‘ಬ್ರೆಕ್ಸಿಟ್’ ಬೇತಾಳದ ಮೊದಲ ಬಲಿಪಶುವಾದರು. ಜುಲೈ 2016ರಲ್ಲಿ ಟೋರಿ ಪಕ್ಷದಲ್ಲಿ ‘ಬ್ರೆಕ್ಸಿಟ್’ ಪರವಾಗಿದ್ದ ಗುಂಪಿನ ನಾಯಕಿಯಾಗಿದ್ದ ಥೆರೆಸಾ ಮೇ ಅವರು ಪ್ರಧಾನಿಯಾಗಿ ಆಯ್ಕೆಯಾದರು. ಯುರೋ ಕೂಟದ ಸಂವಿಧಾನದ ಪ್ರಕಾರ ಒಂದು ದೇಶ ಯುರೋಕೂಟ ಬಿಡುವುದಕ್ಕೆ ದೀರ್ಘ, ಸಂಕೀರ್ಣ ಪ್ರಕ್ರಿಯೆಯಿದೆ.

ಇದರ ಪ್ರಕಾರ ಯುರೋಕೂಟದ ಒಪ್ಪಂದದ ಕಲಮು 50 ರ ಪ್ರಕಾರ ನೋಟೀಸ್ ಕೊಡಬೇಕು.  ಅಂದಿನಿಂದ ಕನಿಷ್ಠ ಎರಡು ವರ್ಷಗಳ ಸಂಕ್ರಮಣದ ಅವಧಿ ಆರಂಭವಾಗುತ್ತದೆ. ಈ ಅವಧಿಯಲ್ಲಿ ಯುರೋಕೂಟ ಮತ್ತು ಯು.ಕೆ ಸರಕಾರ ಗಳ ನಡುವೆ ಕೂಟ ಬಿಡುವುದರ ಹಣಕಾಸು ಇತ್ಯರ್ಧದ ಮತ್ತು ಇತರ ಶರತ್ತುಗಳ ವಿಧಾನಗಳ ಕುರಿತು ಮಾತುಕತೆಗಳಾಗಿ ಒಂದು ಪರಸ್ಪರ ಒಪ್ಪಿತ (ಡೈವೋರ್ಸ್ ಒಪ್ಪಂದ!) ದಸ್ತಾವೇಜು ತಯಾರಾಗಬೇಕು. ಈ ಒಪ್ಪಂದವನ್ನು ಯು.ಕೆ. ಪಾರ್ಲಿಮೆಂಟು ಅನುಮೋದಿಸಬೇಕು. ಅದರ ನಂತರ ಸುಮಾರು ಒಂದು ವರ್ಷ ಹೊಸ ವಾಣಿಜ್ಯ ಒಪ್ಪಂದಕ್ಕೆ ಮಾತುಕತೆಗಳು ಆಗಬೇಕು. ಹೊಸ ಒಪ್ಪಂದವನ್ನು ಅಂತಿಮಗೊಳಿಸುವವರೆಗೆ ಹಳೆಯ ವಾಣಿಜ್ಯ ವ್ಯವಸ್ಥೆ ಮುಂದುವರಿಯುತ್ತದೆ. ಈ ಹಿನ್ನೆಲೆಯಲ್ಲಿ “ಡೈವೋರ್ಸ್ ಒಪ್ಪಂದ”ದ ಮಾತುಕತೆ ಸಹಜವಾಗಿಯೇ ಕಷ್ಟದಾಯಕವಾಗಿತ್ತು.

ಜನಮತಸಂಗ್ರಹದ ಫಲಿತಾಂಶದ ನಂತರ ಯು.ಕೆ ಸರಕಾರ ಅಧಿಕೃತವಾಗಿ ಮಾರ್ಚ್ 2017ರಂದು ಕಲಮು 50ರ ಪ್ರಕಾರ ನೋಟೀಸ್ ಕೊಟ್ಟಿತು. ಯುರೋಕೂಟದೊಂದಿಗೆ ಮಾತುಕತೆಗಳಿಗೆ ಜನತೆಯಿಂದ ಇನ್ನಷ್ಟು ಸ್ಪಷ್ಟ ಭದ್ರ ವ್ಯಾಪಕ ಜನಾದೇಶ ಬೇಕೆಂದು ಪ್ರಧಾನಿ ಥೆರೆಸಾ ಜೂನ್ 2017ರಲ್ಲಿ ಮಧ್ಯಂತರ ಚುನಾವಣೆ ನಡೆಸಿದರು. ಈ ಚುನಾವಣೆಯಲ್ಲಿ ಟೋರಿ ಪಕ್ಷ ಬಹುಮತ ಕಳೆದುಕೊಂಡಿತು. ಆದರೆ ಉತ್ತರ ಐರ್ಲೆಂಡಿನ ಡಿ.ಯು.ಪಿ ಪಕ್ಷದ ಬೆಂಬಲದೊಂದಿಗೆ ಸರಕಾರ ನಡೆಸಿತು. ಪ್ರಧಾನಿ ಥೆರೆಸಾ ಯುರೋಕೂಟದ ಜತೆ ಮಾತುಕತೆಗಳ ನಂತರ ಮಂಡಿಸಿದ ಮೂರು ಕರಡು ಒಪ್ಪಂದಗಳನ್ನು ಯು.ಕೆ ಪಾರ್ಲಿಮೆಂಟ್ ತಿರಸ್ಕರಿಸಿತು. ಮಂಜೂರು ಮಾಡಲಿಲ್ಲ.

ಮೂರು ವೈಫಲ್ಯಗಳ ನಂತರ ಪ್ರಧಾನಿ ಥೆರೆಸಾ ಜುಲೈ 2019ರಲ್ಲಿ ರಾಜೀನಾಮೆ ಕೊಟ್ಟು ‘ಬ್ರೆಕ್ಸಿಟ್’ ಬೇತಾಳದ ಎರಡನೇ ಬಲಿಯಾದರು. ಬೊರಿಸ್ ಜಾನ್ಸನ್ ಪ್ರಧಾನಿಯಾಗಿ ಅಕ್ಟೋಬರ್  2019ರಲ್ಲಿ ಮಂಡಿಸಿದ ಕರಡು ಒಪ್ಪಂದವನ್ನು ಪಾರ್ಲಿಮೆಂಟ್ ತಿರಸ್ಕರಿಸದಿದ್ದರೂ ಅದನ್ನು ವೇಗವಾಗಿ ಮಂಜೂರು ಮಾಡುವ ವೇಳಾಪಟ್ಟಿಯನ್ನು ತಿರಸ್ಕರಿಸಿತು. ಇದರಿಂದ ಹತಾಶರಾದ ಜಾನ್ಸನ್ ಅಕ್ಟೋಬರ್ 2019ರಲ್ಲಿ ಮತ್ತೆ ಮಧ್ಯಂತರ ಚುನಾವಣೆ ನಡೆಸಿದರು. ಈ ಬಾರಿ ಟೋರಿ ಪಕ್ಷ 80 ಸೀಟುಗಳ ಉತ್ತಮ ಬಹುಮತ ಪಡೆಯಿತು. ಕೊನೆಗೂ ಪ್ರಧಾನಿ ಜಾನ್ಸನ್ ಜನವರಿ 2020ರಲ್ಲಿ ಕರಡು ಒಪ್ಪಂದಕ್ಕೆ ಪಾರ್ಲಿಮೆಂಟರಿ ಮಂಜೂರಾತಿ ಪಡೆದರು. ಒಂದು ಕಡೆ ಯುರೋಕೂಟ-ಯುಕೆ ಸರಕಾರಗಳ ನಡುವಿನ ಮತ್ತು ಇನ್ನೊಂದು ಕಡೆ ಯುಕೆ ಸರಕಾರ-ವಿವಿಧ ಪಕ್ಷಗಳ ಗುಂಪುಗಳ ನಡುವಿನ ವಾಗ್ವಾದಗಳು, ಈ ಮೂರು ವರ್ಷಗಳಲ್ಲಿ ನಾಲ್ಕು ಕರಡು ಒಪ್ಪಂದಗಳ ಬಗ್ಗೆ ನಡೆದು ದೇಶಧಲ್ಲಿ ತೀವ್ರ ರಾಜಕೀಯ ಅಸ್ಥಿರತೆ, (ಪಕ್ಷದೊಳಗೂ) ಅನೈಕ್ಯತೆ ಉಂಟು ಮಾಡಿದವು.

ರಾಜಕೀಯ-ಆರ್ಥಿಕ ಬಿಕ್ಕಟ್ಟು ಸೃಷ್ಟಿಸಿದವು. ಅತ್ಯಂತ ವಿವಾದಾಸ್ಪದ ಮತ್ತು ಸವಾಲಿನ ಆಂಶವಾಗಿದ್ದು ಐರ್ಲೆಂಡ್ ಮತ್ತು ಯು,ಕೆ ನಡುವಿನ ಸುಂಕದ ಗಡಿಯ ಸ್ಥಳದ್ದು. ಯುರೋಕೂಟದ ಒಳಗೆ ಜನರ ಮತ್ತು ಸರಕುಗಳ ಚಲನೆಗೆ ಮುಕ್ತವಾಗಿದ್ದು, ಉಳಿದ ದೇಶಗಳ ಜತೆಗಿನ ಗಡಿಯಲ್ಲಿ ಕಸ್ಟಮ್ಸ್ ಮತ್ತು ಪಾಸ್ ಪೋರ್ಟ್ ಚೆಕ್ ಪೋಸ್ಟ್ ಗಳನ್ನು ಎಲ್ಲಿ ಹಾಕುವುದು ಎಂಬ ಪ್ರಶ್ನೆ ಇಕ್ಕಟ್ಟಿನದ್ದಾಯಿತು. ಸಹಜವಾಗಿ ಇನ್ನೂ ಯುರೋಕೂಟದಲ್ಲಿ ಮುಂದುವರೆಯುತ್ತಿದ್ದ ಐರ್ಲೆಂಡ್ ಮತ್ತು ಯು.ಕೆ ಯ ಭಾಗವಾಗಿರುವ ಉತ್ತರ ಐರ್ಲೆಂಡಿನ ಗಡಿಯಲ್ಲಿ ಹಾಕಬೇಕಾಗಿತ್ತು. ಆದರೆ ಐರ್ಲೆಂಡ್ ನ ದಶಕಗಳ ಸಮಸ್ಯೆಯ ಪರಿಹಾರವಾಗಿ 1998ರಲ್ಲಿ ಈ ಗಡಿಯಲ್ಲಿದ್ದ ಮಿಲಿಟರಿ ಮತ್ತು ಕಸ್ಟಮ್ಸ್ ಗಳನ್ನು ತೆಗೆದು ಹಾಕಿದ್ದು, ಮತ್ತೆ ಅದನ್ನು ಸ್ಥಾಪಿಸುವುದು ತೀವ್ರ ರಾಜಕೀಯ ಅತೃಪ್ತಿಗೆ ಕಾರಣವಾಗುತ್ತದೆ ಎಂಬ ಯು.ಕೆ ವಾದವನ್ನು ಯುರೋಕೂಟ ಒಪ್ಪಲು ತಯಾರಿರಲಿಲ್ಲ. ಕೊನೆಗೆ ಹಲವು ಸುತ್ತಿನ ಮಾತುಕತೆಗಳ ನಂತರ ಯು.ಕೆ ಮತ್ತು ಐರ್ಲೆಂಡ್ ನ ನಡುವಿನ ಐರಿಶ್ ಸಮುದ್ರದಲ್ಲಿ ಸ್ಥಾಪಿಸಲು ನಿರ್ಧರಿಸಲಾಯಿತು.

ಜೂನ್ 2016ರ ಬ್ರೆಕ್ಸಿಟ್ ಜನಮತಸಂಗ್ರಹದಿಂದ ಜನವರ 2020ರಲ್ಲಿ  ಒಪ್ಪಂದಕ್ಕೆ ಸಹಿ ಹಾಕುವ ನಡುವಿನ ಸುಮಾರು ಮೂರುವರೆ ವರ್ಷಗಳಲ್ಲಿ ಈ ತೀವ್ರ ಅನಿಶ್ಚಿತತೆಯಿಂದ ಯು.ಕೆ. ಯ ಆರ್ಥಿಕ ತೀರಾ ಹದಗೆಟ್ಟಿತು. ಅತಿ ದೊಡ್ಡ ವಾಣಿಜ್ಯ ಸಹಚರನಾಗಿದ್ದ ಯುರೋಕೂಟಕ್ಕೆ 2015ರಲ್ಲಿ ಯು.ಕೆಯ 42.3% ರಫ್ತು ಹೋಗುತ್ತಿದ್ದು , 52.5% ಆಮದು ಯುರೋಕೂಟದಿಂದ ಬರುತ್ತಿತ್ತು. ಯು.ಕೆ ಗೆ ವಲಸೆ ಬರುವವರಲ್ಲಿ 43% ಯುರೋಕೂಟದಿಂದ ಬರುತ್ತಿದ್ದು ಯು.ಕೆ ಮತ್ತು ಯುರೋಕೂಟಗಳ ನಡುವೆ ಘನಿಷ್ಟ ಸಂಬಂಧವಿತ್ತು. ಈ ಸಂಬಂಧದಲ್ಲಿ ತೀವ್ರ ಅನಿಶ್ಚಿತತೆ ಸಹಜವಾಗಿಯೇ ಆರ್ಥಿಕ ಏರುಪೇರು ಉಂಟು ಮಾಡಿತು. ಈಗಾಗಲೇ ಯು.ಕೆ ಯುರೋಪಿನಲ್ಲೇ ಅತ್ಯಂತ ದುರ್ಬಲ ಆರ್ಥಿಕತೆಯಾಗಿತ್ತು.

1980ರ ದಶಕದಿಂದಲೇ ಕಾರ್ಮಿಕ ಚಳುವಳಿಯನ್ನು ಹತ್ತಿಕ್ಕಿ, ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗೀಕರಿಸುವ, ನವ-ಉದಾರವಾದಿ ಕ್ರಮಗಳು ಆರಂಭವಾಗಿದ್ದು ಥ್ಯಾಚರ್ ಆಳ್ವಿಕೆಯ ಕಾಲದಲ್ಲಿ ಯು.ಕೆ,ಯಲ್ಲೇ. ಅದರ ಭಾಗವಾಗಿಯೂ ನಂತರವೂ ‘ಮಿತವ್ಯಯ’ದ ಹೆಸರಲ್ಲಿ ಜನತೆಯ ಎಲ್ಲ ಹಕ್ಕುಗಳನ್ನು ಕಲ್ಯಾಣ ಕ್ರಮಗಳನ್ನು ಹಿಂತೆಗೆಯುವ ಪ್ರಕ್ರಿಯೆ ಆರಂಭವಾಗಿತ್ತು. ಲೇಬರ್ ಸೇರಿದಂತೆ ಯು.ಕೆಯ ‘ಮುಖ್ಯವಾಹಿನಿ’ಯ ಪಕ್ಷಗಳು ಈ ನಿಲುವನ್ನೇ ಅನುಸರಿಸುತ್ತಿದ್ದು  ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದವು. ನವ-ಉದಾರವಾದದ ಜತೆಗೆ ಅಪ-ಕೈಗಾರಿಕೀಕರಣ ಆರಂಭವಾಗಿ ಉತ್ತಮ ಉದ್ಯೋಗಗಳು ಮಾಯವಾಗುತ್ತಿದ್ದವು.  ಹೊಸ ಉದ್ಯೋಗ ಸೃಷ್ಟಿಯಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಯುರೋಕೂಟದಿಂದ ಬರುತ್ತಿರುವ ಭಾರೀ ವಲಸೆ ಕಾರ್ಮಿಕರಲ್ಲಿ ಆತಂಕ ಸೃಷ್ಟಿಸಿತ್ತು.

ಯು.ಕೆಯ ಸರಕಾರದ ನೀತಿಗಳ ಮೇಲೆ ತಮ್ಮ ನಿಯಂತ್ರಣವಿಲ್ಲ ಎಂಬ ಆಕ್ರೋಶ ಜನರಿಗಿರುವಾಗ ದೂರದ ಇನ್ನೂ ಹೆಚ್ಚು ಅಧಿಕಾರಶಾಹಿ ಯುರೋ ಕೂಟದಲ್ಲಿ ಅವರಿಗೆ ನಂಬಿಕೆ ಬರುವುದು ಸಾಧ್ಯವಿರಲಿಲ್ಲ. ಹಾಗಾಗಿ ಕಾರ್ಮಿಕರ ಒಂದು ದೊಡ್ಡ ವಿಭಾಗ ಯುರೋಕೂಟಕ್ಕೆ ಸೇರುವುದಕ್ಕೆ ವಿರೋಧವಾಗಿಯೇ ಇತ್ತು. ಅದು ಲೇಬರ್ ಸೇರಿದಂತೆ ಯು.ಕೆಯ ‘ಮುಖ್ಯವಾಹಿನಿ’ಯ ಪಕ್ಷಗಳಿಗೆ ಅರ್ಥವಾಗಿರಲಿಲ್ಲ.  ಜನವರಿ 2020ರಲ್ಲಿ ಬ್ರೆಕ್ಸಿಟ್ ಒಪ್ಪಂದಕ್ಕೆ ಸಹಿ ಹಾಕಿ ಸ್ವಲ್ಪ ಸಮಯದಲ್ಲೇ ಕೊವಿಡ್ ಆರಂಭವಾಗಿ ಆರ್ಥಿಕ ಇನ್ನಷ್ಟು ಡೋಲಾಯಮಾನವಾಯಿತು. ಅದೇ ಹೊತ್ತಿನಲ್ಲಿ ವ್ಯಾಕ್ಸೀನ್ ಕಂಪನಿಗಳು ಮತ್ತು ಇತರ ಹಲವು ಕಾರ್ಪೊರೆಟುಗಳ ಲಾಭ ಹೆಚ್ಚಾಯಿತು.  ಅಸಮಾನತೆ ಹಿಂದೆಂದಿಗಿಂತಲೂ ಹೆಚ್ಚು ಕಣ್ಣಿಗೆ ಕುಕ್ಕುವಂತಿತ್ತು. ಈ ನಡುವೆ ಜನತೆಯ ಮೇಲೆ ಚಲನೆಗೂ ತೀವ್ರ ನಿರ್ಬಂಧವಿರುವಾಗ ಪ್ರಧಾನಿ ಜಾನ್ಸನ್ ‘ಪಾರ್ಟಿ ಮಾಡಿ ಮಜಾ ಮಾಡುತ್ತಿದ್ದರು’ ಮತ್ತು ಇತರ ಹಲವು ಹಗರಣಗಳು, ನೈತಿಕ ಆಪಾದನೆಗಳಿಂದಾಗಿ ಅವರು ಸೆಪ್ಟೆಂಬರ್ 2022ರ ಹೊತ್ತಿಗೆ ರಾಜೀನಾಮೆ ಕೊಡಬೇಕಾಯಿತು.

ಆ ಮೇಲೆ ಪ್ರಧಾನಿಯಾದ ಲಿಸ್ ಟ್ರಸ್ ರಾಜೀನಾಮೆ ಕೊಡಬೇಕಾಯಿತು. ಅವರು ತಮ್ಮ ಮಿನಿ ಬಜೆಟ್ ನಲ್ಲಿ ಹಲವು ಭಾರೀ ತೆರಿಗೆ ಕಡಿತಗಳನ್ನು ಘೋಷಿಸಿ ಕೊರತೆ ಬಜೆಟಿಂಗ್ ನೀತಿ ಅನುಸರಿಸಬೇಕಾಗಬಹುದು ಎಂಬ ಆತಂಕವನ್ನು ಹಣಕಾಸು ಬಂಡವಾಳದಲ್ಲಿ ಸೃಷ್ಟಿಸಿತು.  ಅದು ಹಣಕಾಸು, ಶೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಅವರು ಕೇವಲ 45 ದಿನಗಳಲ್ಲಿ ರಾಜಿನಾಮೆ ಕೊಡಬೇಕಾಯಿತು. ಆ ಮೇಲೆ ಪ್ರಧಾನಿಯಾದ ರಿಷಿ ಸುನಕ್ ಸಹ ಪ್ರಮುಖವಾಗಿ ‘ಮಿತವ್ಯಯ’ ಕ್ರಮಗಳನ್ನು ಮುಂದುವರೆಸಿದ್ದು, ಜನರ ಸಮಸ್ಯೆಗಳಿಗೆ ಯಾವುದೇ ಪರಿಹಾರ ಕೊಡುವ ಕ್ರಮಗಳನ್ನು ಕೊಟ್ಟಿಲ್ಲ. ಈ ನಡುವೆ ಆರಂಭವಾದ ಉಕ್ರೇನ್ ಯುದ್ಧ ಮತ್ತು ರಶ್ಯಾದ ಮೇಲೆ ಹೇರಿದ ‘ಆತ್ಮಹತ್ಯಾಕಾರಿ’  ಆರ್ಥಿಕ ದಿಗ್ಬಂಧನದ ಕ್ರಮಗಳಿಂದ  ಯು.ಕೆ ಮತ್ತು ಯುರೋಕೂಟದ ದೇಶಗಳ ಆರ್ಥಿಕ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಇಂಧನ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆಗಳು ಮುಗಿಲು ಮುಟ್ಟಿದ್ದು, ಕೈಗಾರಿಕೆಗಳು ಉದ್ಮಮಗಳು ಸ್ಥಗಿತವಾಗಿವೆ. ಉಕ್ರೇನ್ ಯುದ್ಧಕ್ಕೆ ಯು.ಕೆ.ಯ ಬೆಂಬಲಕ್ಕೆ ಜನತೆಯ ಭಾರೀ ವಿರೋಧವಿದೆ. ಇವೆಲ್ಲ ಒಟ್ಟಾಗಿ ರಿಶಿ ಸುನಕ್ ಅವರ ಟೋರಿ ಪಕ್ಷ ಪರಾಭವ ಅನುಭವಿಸಿತು. ಲೇಬರ್ ಪಕ್ಷ ಕೀರ್ ಸ್ಟಾಮರ್ ನಾಯಕತ್ವದಲ್ಲಿ ಬಂದ ಸರಕಾರ ಅವೇ ನೀತಿಗಳನ್ನು ಅನುಸರಿಸುತ್ತಿದ್ದು ಮತ್ತೆ ಅವರು ರಾಜಿನಾಮೆ ಕೊಡಬೇಕಾಗಿ ಬಂದಿದೆ.

ಹಿಂದೊಮ್ಮೆ ಏಕಮಾತ್ರ ಜಾಗತಿಕ ಸುಪರ್ ಪವರ್ ಆಗಿದ್ದು ಈಗ ದುರ್ಬಲ ಸ್ಥಿತಿಯಲ್ಲಿರುವ ಯು.ಕೆ ಬಂಡವಾಳಶಾಹಿಯಲ್ಲಿ ತೀವ್ರ ಬಿಕ್ಕಟ್ಟು ಈ ರಾಜಕೀಯ ಅಸ್ಥಿರತೆಯ ಹಿಂದಿರುವ ನಿಜವಾದ ಕಾರಣ. ಎರಡನೇ ಮಹಾಯುದ್ಧದ ನಂತರ ಯು.ಎಸ್ ಸಾಮ್ರಾಜ್ಯಶಾಹಿಗೆ ತನ್ನ ಸುಪರ್ ಪವರ್ ಸ್ಥಾನ ಬಿಟ್ಟುಕೊಟ್ಟು ಯುರೋಪಿನಲ್ಲಿ ಅದರ ನಂಭಿಕಸ್ತ ಏಜೆಂಟ್ ಆಗಿ ಕೆಲಸ ನಿರ್ವಹಿಸಲು ಆರಂಭಿಸಿತು. ಯುರೋಪಿನ ಮತ್ತು ಯು.ಕೆ ಬಂಡವಾಳಶಾಹಿಗಳ ನಡುವೆ ಪರಸ್ಪರ ಅನುಮಾನ, ವೈರಗಳು ಇದ್ದು 1975ರ ವರೆಗೆ ಯು.ಕೆ, ಯುರೋಕೋಟದ ಹಿಂದಿನ ಅವತಾರಗಳನ್ನು ಸೇರಿರಲಿಲ್ಲ.

ಸೇರಿದ ಮೇಲೆ ಸಹ ಅದು ಯು.ಎಸ್ ಪರವಾಗಿ ಯುರೋ ಕೂಟವನ್ನು ಯು.ಎಸ್ ನಿಯಂತ್ರಣದಲ್ಲಿಡುವ ಹೊಣೆ ಸಹ ವಹಿಸಿತ್ತು. 1980-90ರ ನವ-ಉದಾರವಾದಿ ಅಲೆಯಲ್ಲಿ ಹಣಕಾಸು ಬಂಡವಾಳದ ಜಾಗತಿಕರಣವಾದಂತೆ ಅದು ಹೆಚ್ಚೆಚ್ಚು ಸಮಗ್ರೀಕೃತವಾಗುತ್ತಾ ಹೋಗಿದೆ. ಆದರೆ ಒಂದು ಕಡೆ ಯು.ಎಸ್ ಪರವಾಗಿ ಯುರೋಕೂಟದೊಳಗೆ ಯುಕೆಯ ಅಧಿಪತ್ಯದ ಪ್ರಯತ್ನ ಮತ್ತು ಇನ್ನೊಂದು ಕಡೆ ಯು.ಕೆ ಬಂಡವಾಳಶಾಹಿಯ ಒಂದು ವಿಭಾಗದಲ್ಲಿ (ಸ್ವಲ್ಪ ಮಟ್ಟಿಗೆ ತನ್ನ ಹಳೆಯ ಸುಪರ್ ಪವರ್ ಸ್ಥಿತಿ ಮರೆಯಲಾಗದೆ) ಹಿಂದ ಸಿಂಗಾಪುರ ಮತ್ತು ಹಾಂಗ್ ಕಾಂಗ್ ಮಾಡಿದಂತೆ ನವ-ಉದಾರವಾದಿ ಬಂಡವಾಳದ ಸ್ವತಂತ್ರ ದ್ವೀಪವಾಗುವ ಕನಸು, ಯುರೋಕೂಟದ ಬಂಡವಾಳಶಾಹಿ ಜತೆ ತಿಕ್ಕಾಟ ಸೃಷ್ಟಿಸಿದೆ.

ನವ-ಉದಾರವಾದಿ ವ್ಯವಸ್ಥೆಯೊಳಗೆ ಈ ಎರಡು ಭಿನ್ನ ಹಾದಿಗಳ ನಡುವೆ ಯು.ಕೆ ಬಂಡವಾಳಶಾಹಿಯೊಳಗೆ ತೀವ್ರ ಭಿನ್ನಾಭಿಪ್ರಾಯ ‘ಬ್ರೆಕ್ಸಿಟ್’ ಬಿಕ್ಕಟ್ಟಿಗೆ ಕಾರಣ. ಎಡ-ಪ್ರಗತಿಪರ ರಾಜಕಾರಣದಲ್ಲೂ ಯುರೋಕೂಟ ಸಮಾಜವಾದಿ ಯುರೋಪಿನತ್ತ ಒಂದ ಹಂತವಾಗಬಹುದು ಎಂಬ ಹುಸಿನಿರೀಕ್ಷೆ ಮತ್ತು ಯು.ಕೆ ಯನ್ನು ಬಂಡವಾಳಶಾಹಿ-ವಿರೋಧಿ ಸಮಾಜವಾದಿ ರಾಜಕಾರಣದತ್ತ ಒಯ್ಯಬೇಕು ಎರಡು ನಿಲುವುಗಳ ನಡುವೆ ವಿಭಜನೆ ಈ ರಾಜಕೀಯ ಬಿಕ್ಕಟ್ಟನ್ನು ತೀವ್ರಗೊಳಿಸಿದೆ. ಇದೇ 10 ವರ್ಷಗಳಲ್ಲಿ ಯು.ಕೆಯಲ್ಲಿ 7 ಪ್ರಧಾನಿಗಳಾಗಲು ಕಾರಣವೆನ್ನಬಹುದು.

ಇದನ್ನೂ ನೋಡಿ: ಕನಿಷ್ಠ ವೇತನ ಪುನರ್‌ಪರಿಶೀಲಿಸಿದರೆ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ! | ಕಾರ್ಮಿಕರ ಎಚ್ಚರಿಕೆ Janashakthi Media

Donate Janashakthi Media

Leave a Reply

Your email address will not be published. Required fields are marked *