ನವದೆಹಲಿ: 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ ಇದೀಗ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸುತ್ತಿಲ್ಲ ಎಂದು ರಾಜಧಾನಿಯ ಹಲವು ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಮತದಾರರ ಹಕ್ಕುಗಳ ಕುರಿತು ಪ್ರಶ್ನೆಗಳು ಎದ್ದಿವೆ. 2025ರಲ್ಲಿ
ದೆಹಲಿಯ ಜೆಜೆ ಬೇಲಾ ಎಸ್ಟೇಟ್ ಸೇರಿದಂತೆ ಕೆಲವು ಪ್ರದೇಶಗಳ ನಿವಾಸಿಗಳು ಹಲವು ವರ್ಷಗಳಿಂದ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಹಿಂದಿನ ಚುನಾವಣೆಗಳಲ್ಲೂ ಮತ ಚಲಾಯಿಸಿದ್ದೇವೆ. ಆದರೆ ಇದೀಗ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ. ಕೆಲವರು 2025ರ ವಿಧಾನಸಭಾ ಚುನಾವಣೆಯಲ್ಲೇ ಮತ ಹಾಕಿದ್ದರೂ, ನಂತರದ ಪಟ್ಟಿಯಲ್ಲಿ ತಮ್ಮ ಹೆಸರು ಕಾಣೆಯಾಗಿರುವುದನ್ನು ಗಮನಿಸಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿರುವುದಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲ ಎಂಬುದು ತಿಳಿಯುವಷ್ಟರಲ್ಲಿ ಚುನಾವಣಾ ಪ್ರಕ್ರಿಯೆಯ ಮತ್ತೊಂದು ಹಂತಕ್ಕೆ ತಲುಪಿರುವುದರಿಂದ, ಮತ್ತೆ ಮತದಾರರಾಗಿ ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಎದುರಾಗಿದೆ ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ SIR ಆರಂಭಕ್ಕೂ ಮುನ್ನವೇ ಮತದಾರರ ಪಟ್ಟಿಯಿಂದ ಸುಮಾರು 11 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ವರದಿಗಳೂ ಹೊರಬಂದಿವೆ. ಈ ಪೈಕಿ ಕೆಲವು ಮತದಾರರಿಗೆ ತಮ್ಮ ಹೆಸರು ತೆಗೆದುಹಾಕಲಾಗಿದೆ ಎಂಬ ಮಾಹಿತಿಯೇ ಇರಲಿಲ್ಲ ಎಂದು ವರದಿಯಾಗಿದೆ. 2025ರಲ್ಲಿ
ಇದನ್ನೂ ಓದಿ : ಕರ್ನಾಟಕದಲ್ಲಿ 38,960 ಜಲಮೂಲಗಳ ಗಣತಿ ಪೂರ್ಣ; ನೀರು ಸಂರಕ್ಷಣೆಗೆ ಬಳಸಲು ಸರ್ಕಾರಕ್ಕೆ ಮಹತ್ವದ ಮಾಹಿತಿ
ಮತದಾರರ ಹೆಸರುಗಳನ್ನು ತೆಗೆದುಹಾಕುವಾಗ ಕಾರಣ, ಪರಿಶೀಲನಾ ಪ್ರಕ್ರಿಯೆ ಮತ್ತು ಸಂಬಂಧಪಟ್ಟ ಮತದಾರರಿಗೆ ನೀಡಲಾಗಿರುವ ಅವಕಾಶಗಳ ಬಗ್ಗೆ ಪಾರದರ್ಶಕತೆ ಇರಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ವಿಶೇಷವಾಗಿ ಇತ್ತೀಚಿನ ಚುನಾವಣೆಯಲ್ಲೇ ಮತ ಚಲಾಯಿಸಿರುವ ವ್ಯಕ್ತಿಯ ಹೆಸರು ಕೆಲವೇ ತಿಂಗಳುಗಳಲ್ಲಿ ಪಟ್ಟಿಯಿಂದ ಕಾಣೆಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಇದೇ ವೇಳೆ ದೆಹಲಿ ಕಾಂಗ್ರೆಸ್ ಕೂಡ SIR ಪ್ರಕ್ರಿಯೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದು, SIR ಆರಂಭಕ್ಕೂ ಮುನ್ನವೇ ಲಕ್ಷಾಂತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿರುವುದು ಸೂಕ್ತ ಪ್ರಕ್ರಿಯೆ ಅನುಸರಿಸಲಾಗಿದೆಯೇ ಎಂಬ ಅನುಮಾನ ಮೂಡಿಸಿದೆ ಎಂದು ಆರೋಪಿಸಿದೆ.
SIRನ ಉದ್ದೇಶ ಮತದಾರರ ಪಟ್ಟಿಯನ್ನು ನಿಖರಗೊಳಿಸುವುದಾದರೂ, ಅರ್ಹ ಮತದಾರರ ಹೆಸರುಗಳು ತಪ್ಪಾಗಿ ಕೈಬಿಡದಂತೆ ನೋಡಿಕೊಳ್ಳುವುದು ಚುನಾವಣಾ ವ್ಯವಸ್ಥೆಯ ಪ್ರಮುಖ ಜವಾಬ್ದಾರಿ. 2025ರಲ್ಲೇ ಮತ ಚಲಾಯಿಸಿದ್ದೇವೆ ಎನ್ನುವ ನಿವಾಸಿಗಳ ಹೆಸರುಗಳು ಇದೀಗ ಕಾಣೆಯಾಗಿರುವ ಪ್ರಕರಣಗಳು ಈ ಪ್ರಕ್ರಿಯೆಯಲ್ಲಿ ಮರುಪರಿಶೀಲನೆ ಮತ್ತು ಪಾರದರ್ಶಕತೆಯ ಅಗತ್ಯವನ್ನು ಮುಂದಿಟ್ಟಿವೆ.
“ನಿನ್ನೆ ಮತ ಹಾಕಿದವರು ಇಂದು ಮತದಾರರ ಪಟ್ಟಿಯಲ್ಲೇ ಇಲ್ಲ” ಎಂಬ ಪ್ರಶ್ನೆ ಇದೀಗ ದೆಹಲಿಯ SIR ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಬಗ್ಗೆಯೇ ಚರ್ಚೆ ಹುಟ್ಟುಹಾಕಿದೆ. 2025ರಲ್ಲಿ
ಇದನ್ನೂ ನೋಡಿ :ಜಿಡಿಪಿ ಬೆಳವಣಿಗೆ ಎಂದರೆ ಅಸಮಾನತೆ, ನಿರುದ್ಯೋಗದ ಬೆಳವಣಿಗೆಯೇ? Janashakthi Media
