ವಿದೇಶದಲ್ಲಿ ” ಮಾನವತೆ ಒಂದೇ ಎಂಬ ಮಾತು ” …. ದೇಶದೊಳಗೆ ಜಾತಿ ತಾರತಮ್ಯದ ಬಗ್ಗೆ ಏಕೆ ಮೌನ?

ಜಾತಿ-ಧರ್ಮದ ಗೋಡೆಗಳನ್ನು ಕೆಡವಿದಾಗ ಮಾತ್ರ ನಿಜವಾದ ಸಾಮಾಜಿಕ ಏಕತೆ ಸಾಧ್ಯ
ನಾಗರಾಜ ನಂಜುಂಡಯ್ಯ
RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ “ಮಾನವತೆ ಒಂದೇ ಎಂಬುದರ ಬಗ್ಗೆ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ಸಮಾನ ಘನತೆ ಇದೆ ಮತ್ತು ಪ್ರತಿಯೊಬ್ಬರನ್ನು ಸಹ ಮಾನವನಾಗಿ ಸ್ವೀಕರಿಸಬೇಕು ಎಂದು ಒತ್ತಿ ಹೇಳಿದ್ದಾರೆ”. ಮಾನವತೆ, ಸಮಾನತೆ ಮತ್ತು ಏಕತೆಯ ಬಗ್ಗೆ ಮಾತನಾಡುವುದು ಖಂಡಿತವಾಗಿಯೂ ಸ್ವಾಗತಾರ್ಹ. ಆದರೆ ಈ ಮಾತುಗಳು ವಿದೇಶದ ವೇದಿಕೆಗಳಿಗೆ ಮಾತ್ರ ಸೀಮಿತವಾಗಬಾರದು; ಅವು ಭಾರತದಲ್ಲಿ ಆಚರಣೆಯಲ್ಲಿಯೂ ಪ್ರತಿಫಲಿಸಬೇಕು. ಏಕೆಂದರೆ ನಮ್ಮ ದೇಶದಲ್ಲಿ ಇಂದಿಗೂ ಜಾತಿ ತಾರತಮ್ಯ, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ ಮತ್ತು ಧಾರ್ಮಿಕ ದ್ವೇಷದ ಘಟನೆಗಳು ಮುಂದುವರೆದಿವೆ. ವಿದೇಶದಲ್ಲಿ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಎಂಬ ಕಾರಣಕ್ಕೆ ಹಲ್ದ್ವಾನಿಯಲ್ಲಿ “ಶುದ್ಧೀಕರಣ” ಆಚರಣೆಗೆ ಒಳಗಾದರು ಎಂಬ ಆರೋಪಗಳು ಅತ್ಯಂತ ಆತಂಕಕಾರಿ. ಹುಟ್ಟಿನ ಕಾರಣಕ್ಕೆ ವ್ಯಕ್ತಿಯನ್ನು ಅಶುದ್ಧ ಎಂದು ಪರಿಗಣಿಸುವುದು ಯಾವುದೇ ನಾಗರಿಕ ಸಮಾಜದಲ್ಲಿ ಇರಬಾರದು. ಜಾತಿ ಆಧಾರದ ಮೇಲೆ ವ್ಯಕ್ತಿಯ ಘನತೆಯನ್ನು ನಿರ್ಧರಿಸುವ ಕಲ್ಪನೆಯು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದೆ.

ಇದನ್ನು ಕೇವಲ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಬಂಧಿಸಿದ ವಿಷಯವಾಗಿ ನೋಡಬಾರದು. ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಿಸುವುದರಿಂದ ಹಿಡಿದು, ಜಾತಿ ಹೆಸರಿನಲ್ಲಿ ಅವಮಾನಿಸುವುದು, ಸಾಮಾಜಿಕ ಬಹಿಷ್ಕಾರ ಮತ್ತು ದೈಹಿಕ ಹಲ್ಲೆಗಳವರೆಗೆ ಜಾತಿ ತಾರತಮ್ಯವು ಅನೇಕ ರೂಪಗಳಲ್ಲಿ ಮುಂದುವರೆದಿದೆ. ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರು ಇಂದಿಗೂ ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಡಬೇಕಾದರೆ, “ಮಾನವತೆ ಒಂದೇ” ಎಂಬ ಘೋಷಣೆಗೆ ಏನು ಅರ್ಥವಿದೆ? ವಿದೇಶದಲ್ಲಿ

ರಾಯಚೂರು ದಲಿತ ಮಹಿಳೆಯರ ಮೇಲಿನ ಅತ್ಯಾಚಾರವನ್ನು ಖಂಡಿಸದ ಆರ್ ಎಸ್ ಎಸ್, ನ ಮುಖ್ಯಸ್ಥನ “ಒಂದೇ ಮಾನವತೆ” ಎಲ್ಲಿ? ರಾಯಚೂರು ಜಿಲ್ಲೆಯಲ್ಲಿ ನಡೆದ ಭಯಾನಕ ದೌರ್ಜನ್ಯಗಳು “ಒಂದೇ ಮಾನವತೆ” ಮಾತಿನ ಟೊಳ್ಳುತನವನ್ನು ಬಯಲು ಮಾಡಿವೆ.

ಆಗಸ್ಟ್ 4 ರಂದು ರಾಯಚೂರು ಜಿಲ್ಲೆಯಲ್ಲಿ ದಲಿತ ಹೋರಾಟಗಾರ ಭೀಮಾನಂದ ಅವರನ್ನು ಕೊಲೆ ಮಾಡಲಾಯಿತು. ಆಗಸ್ಟ್ 19 ರಂದು ಸಂಜೆ 6 ಗಂಟೆ ಸುಮಾರಿಗೆ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ಅಶ್ವಿನಿ ಎಂಬ ದಲಿತ ಬಾಲಕಿಯನ್ನು 5 ಜನರು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಇದು ಅತ್ಯಂತ ಭೀಕರ ಮತ್ತು ಅಮಾನವೀಯ ಪ್ರಕರಣ. ಅದೇ ದಿನ ಲಿಂಗಸುಗೂರು ತಾಲೂಕಿನ ಕರಡಕಲ್‌ನಲ್ಲಿ ಕಟ್ಟಿಗೆ ತರಲು ಹೋಗಿದ್ದ ದಲಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.

ಒಂದೇ ಜಿಲ್ಲೆಯಲ್ಲಿ ಮೇಲ್ಜಾತಿ ಜನರಿಙದ,ದಲಿತರ ವಿರುದ್ಧ ಮೂರು ದೌರ್ಜನ್ಯಗಳು – ಕೊಲೆ, ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ, ಕಾರ್ಮಿಕ ಮಹಿಳೆಯ ಮೇಲೆ ಅತ್ಯಾಚಾರ. ಇವು ಪ್ರತ್ಯೇಕ ಅಪರಾಧಗಳಲ್ಲ; ದಲಿತರ ದೇಹ ಮತ್ತು ಜೀವಗಳು ಬೇಕಾಬಿಟ್ಟಿ ಎಂಬ ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆಯ ದುರಹಂಕಾರದ ದೌರ್ಜನ್ಯ ಪರಿಣಾಮಗಳಿವು.

ಮೋಹನ್ ಭಾಗವಾತ್ ರವರು ನ್ಯೂಯಾರ್ಕ್‌ನಲ್ಲಿ ಒಂದೇ ಮಾನವತೆಯ ಬಗ್ಗೆ ಮಾತನಾಡುವಾಗ ಉತ್ತರಿಸಬೇಕು – ಅಶ್ವಿನಿ ಆ ಮಾನವತೆಯ ಭಾಗವಾಗಿರಲಿಲ್ಲವೇ? ಕರಡಕಲ್‌ನ ಮಹಿಳೆ ಆ ಮಾನವತೆಯ ಭಾಗವಾಗಿರಲಿಲ್ಲವೇ? ಭೀಮಾನಂದ ಆ ಮಾನವತೆಯ ಭಾಗವಾಗಿರಲಿಲ್ಲವೇ? ಒಂದು ದಲಿತ ಬಾಲಕಿ ತನ್ನದೇ ಊರಿನಲ್ಲಿ ಸಂಜೆ 6 ಗಂಟೆಗೆ ಸುರಕ್ಷಿತವಾಗಿ ನಡೆಯಲು ಸಾಧ್ಯವಾಗದಿದ್ದರೆ, ನಮ್ಮ ಏಕತೆಯ ಮಾತಿಗೆ ಏನು ಬೆಲೆ?

ರಾಯಚೂರಿನ ಈ ಘಟನೆಗಳನ್ನು ಡಿಎಚ್ ಎಸ್ ತೀವ್ರವಾಗಿ ಖಂಡಿಸುತ್ತದೆ ಮತ್ತು ಕೂಡಲೇ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತದೆ. ಎಲ್ಲಾ ಆರೋಪಿಗಳನ್ನು SC/ST (ದೌರ್ಜನ್ಯ ತಡೆ) ಕಾಯ್ದೆಯಡಿ ಬಂಧಿಸಬೇಕು, ತ್ವರಿತ ತನಿಖೆ ಮತ್ತು ವಿಚಾರಣೆ ಖಾತ್ರಿಪಡಿಸಬೇಕು, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮತ್ತು ರಕ್ಷಣೆ ನೀಡಬೇಕು. ದಲಿತರ ಜೀವಗಳಿಗೆ ಬೆಲೆ ಇದೆ ಎಂಬುದನ್ನು ಸರ್ಕಾರ ತೋರಿಸಬೇಕು. ವಿದೇಶದಲ್ಲಿ

ಇದನ್ನೂ ಓದಿ : ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳಿಗೆ ಈಶ್ವರ ಖಂಡ್ರೆ ಸಕಾರಾತ್ಮಕ ಸ್ಪಂದನೆ

ಉತ್ತರ ಪ್ರದೇಶದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ದಲಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಇತ್ತೀಚಿನ ಘಟನೆಯೂ ಗಂಭೀರ ಕಳವಳಕಾರಿಯಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ಸಾವು ಸಂಭವಿಸಿದಾಗಲೆಲ್ಲ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಯಾರೇ ಹೊಣೆಯಾಗಿದ್ದರೂ ಕಾನೂನಿನ ಮುಂದೆ ತರಬೇಕು. ಸಂತ್ರಸ್ತರು ಅಂಚಿನಲ್ಲಿರುವ ಸಮುದಾಯಕ್ಕೆ ಸೇರಿದವರಾಗಿದ್ದಾಗ ಪೊಲೀಸ್ ವ್ಯವಸ್ಥೆಯೊಳಗಿನ ಹೊಣೆಗಾರಿಕೆ ಇನ್ನೂ ಕಟ್ಟುನಿಟ್ಟಾಗಿರಬೇಕು.

ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆಯನ್ನು ಖಾತರಿಪಡಿಸುತ್ತದೆ. ಜಾತಿ, ಧರ್ಮ, ಲಿಂಗ ಅಥವಾ ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ಅದು ಸ್ಪಷ್ಟಪಡಿಸುತ್ತದೆ. ಆದರೆ ಸಾಂವಿಧಾನಿಕ ಹಕ್ಕುಗಳು ಕೇವಲ ಕಾಗದದ ಮೇಲೆ ಉಳಿದು, ಸಾಮಾಜಿಕ ಜೀವನದಲ್ಲಿ ಜಾತಿ ದಬ್ಬಾಳಿಕೆ ಮುಂದುವರಿದರೆ, ಪ್ರಜಾಪ್ರಭುತ್ವವು ತನ್ನ ಪೂರ್ಣ ಅರ್ಥವನ್ನು ಪಡೆಯಲು ಸಾಧ್ಯವಿಲ್ಲ.

ಡಾ. ಬಿ.ಆರ್. ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯನ್ನು ಕೇವಲ ಸಾಮಾಜಿಕ ಸಮಸ್ಯೆಯಾಗಿ ನೋಡದೆ, ಪ್ರಜಾಪ್ರಭುತ್ವಕ್ಕೇ ಇರುವ ಅಪಾಯವಾಗಿ ನೋಡಿದ್ದರು. ಜಾತಿ ವಿಭಜನೆಗಳು ಇರುವವರೆಗೆ ನಿಜವಾದ ಭ್ರಾತೃತ್ವವನ್ನು ಸಾಧಿಸುವುದು ಕಷ್ಟ. ಆದ್ದರಿಂದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಸಾಂವಿಧಾನಿಕ ಮೌಲ್ಯಗಳನ್ನು ಸಮಾಜದಲ್ಲಿ ದೃಢವಾಗಿ ನೆಲೆಗೊಳಿಸುವ ತುರ್ತು ಅಗತ್ಯವಿದೆ. ವಿದೇಶದಲ್ಲಿ

RSS ಸಿದ್ಧಾಂತದ ಟೀಕೆಯನ್ನು ಸಹ ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ಅಸ್ತಿತ್ವದಲ್ಲಿರುವ ಜಾತಿ ಅಸಮಾನತೆಗಳನ್ನು ಹಾಗೆಯೇ ಉಳಿಸಿಕೊಂಡು, ಕೇವಲ ಧಾರ್ಮಿಕ ಏಕತೆಯನ್ನು ಉತ್ತೇಜಿಸುವುದರಿಂದ ಸಾಮಾಜಿಕ ಸಮಾನತೆಯನ್ನು ಸಾಧಿಸಲು ಸಾಧ್ಯವಿಲ್ಲ. ನಿಜವಾದ ಏಕತೆ ಎಂದರೆ ಮೇಲ್ಜಾತಿ ಮತ್ತು ದಲಿತರ ನಡುವೆ, ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ನಡುವೆ, ನಗರ ಮತ್ತು ಗ್ರಾಮೀಣ ಸಮುದಾಯಗಳ ನಡುವೆ ಯಾವುದೇ ತಾರತಮ್ಯವಿಲ್ಲದ, ಪ್ರತಿಯೊಬ್ಬ ವ್ಯಕ್ತಿಗೆ ಸಮಾನ ಘನತೆ ಸಿಗುವ ಸಮಾಜ. ವಿದೇಶದಲ್ಲಿ

ವಿದೇಶದಲ್ಲಿ ಭಾರತದ ಶ್ರೇಷ್ಠತೆಯ ಬಗ್ಗೆ ಮಾತನಾಡುವ ಬದಲು, ಮನೆಯಲ್ಲಿ ಪ್ರತಿಯೊಬ್ಬ ದಲಿತ ವ್ಯಕ್ತಿಯನ್ನು ಮನುಷ್ಯನಾಗಿ ಗೌರವಿಸುವ ಸಂಸ್ಕೃತಿಯನ್ನು ಕಟ್ಟುವುದು ಅತಿ ಮುಖ್ಯ.

ಜಾತಿ ತಾರತಮ್ಯ ಮುಂದುವರೆದಿರುವವರೆಗೆ ಮಾನವತೆಯ ಬಗ್ಗೆ ಮಾತನಾಡಿದರೆ ಮಾತ್ರ ಸಾಕಾಗುವುದಿಲ್ಲ. ಜಾತಿ ಹೆಸರಿನಲ್ಲಿ ಅವಮಾನವನ್ನು ನಾವು ದೃಢವಾಗಿ ವಿರೋಧಿಸಬೇಕು. ಧರ್ಮದ ಹೆಸರಿನಲ್ಲಿ ಹರಡುವ ದ್ವೇಷವನ್ನು ತಿರಸ್ಕರಿಸಬೇಕು. ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕು. ಪೊಲೀಸ್ ಕಸ್ಟಡಿ ಸಾವುಗಳು ಮತ್ತು ರಾಯಚೂರಿನಂತಹ ಜಾತಿ ದೌರ್ಜನ್ಯಗಳಿಗೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಮತ್ತು ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ಸಮಾಜದಲ್ಲಿ ನಿಜವಾದ ಏಕತೆ ಮೂಡಲು, ನಾವು ಮೊದಲು ಜಾತಿ ದಬ್ಬಾಳಿಕೆ, ಅಸ್ಪೃಶ್ಯತೆ, ಧಾರ್ಮಿಕ ದ್ವೇಷ ಮತ್ತು ಸಾಮಾಜಿಕ ತಾರತಮ್ಯವನ್ನು ನಿರ್ಮೂಲನೆ ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿಯನ್ನು ಹುಟ್ಟಿನ ಆಧಾರದ ಮೇಲೆ ನಿರ್ಣಯಿಸದೆ, ಮನುಷ್ಯನಾಗಿ ಪರಿಗಣಿಸಬೇಕು.

“ಮಾನವತೆ ಒಂದೇ” ಎಂಬ ಮಾತುಗಳು ವಾಸ್ತವವಾಗಬೇಕಾದರೆ, ಅವು ನ್ಯೂಯಾರ್ಕ್‌ನ ವೇದಿಕೆಗೆ ಸೀಮಿತವಾಗಬಾರದು. ಅವು ಭಾರತದ ಪ್ರತಿ ಹಳ್ಳಿ, ಪ್ರತಿ ಬೀದಿ, ಪ್ರತಿ ಮನೆಯಲ್ಲಿ ಜೀವಂತ ವಾಸ್ತವವಾಗಬೇಕು – ಹಲ್ದ್ವಾನಿಯಿಂದ ಹೊಕ್ರಾಣಿಯವರೆಗೆ, ಕರಡಕಲ್‌ನಿಂದ ಪ್ರತಿ ದಲಿತ ಕೇರಿವರೆಗೆ.

ಅದುವೇ ಸಂವಿಧಾನ ಕಂಡ ಕನಸಿನ ಸಮಾಜ. ಅದುವೇ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಜಗಜ್ಯೋತಿ ಬಸವಣ್ಣ, ಪೆರಿಯಾರ್ ರಾಮಸ್ವಾಮಿ ಮತ್ತು ನಾರಾಯಣ ಗುರು ಅವರು ತೋರಿದ ದಾರಿ. ಅದುವೇ ನಿಜವಾದ ಸಾಮಾಜಿಕ ನ್ಯಾಯ. ವಿದೇಶದಲ್ಲಿ

ಇದನ್ನೂ ನೋಡಿ : “20 ವರ್ಷದಿಂದ ಓಟ್‌ ಹಾಕೀನಿ… ಈಗ ನೋಟೀಸ್‌ ಯಾಕೆ?” | SIR ಸಂತ್ರಸ್ತರ ಸಂಕಟಗಳು Janashakthi Media

Donate Janashakthi Media

Leave a Reply

Your email address will not be published. Required fields are marked *