ಎಸ್‌ಐಆರ್‌ ಬಳಿಕ ಕರ್ನಾಟಕದಲ್ಲಿ ವಿಶೇಷ ಮತದಾರರ ನೋಂದಣಿ ಅಭಿಯಾನ

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರನ್ನು ಗುರುತಿಸಿ ಮರುಸೇರ್ಪಡೆಗೊಳಿಸಲು ಚುನಾವಣಾ ಆಯೋಗ ವಿಶೇಷ ನೋಂದಣಿ ಅಭಿಯಾನ ನಡೆಸಲು ಸೂಚಿಸಿದೆ.

ಈ ಅಭಿಯಾನ ಕರ್ನಾಟಕದಲ್ಲಿ ಅಕ್ಟೋಬರ್‌ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕ ಆರಂಭವಾಗಲಿದೆ. ಎಸ್‌ಐಆರ್‌ಗೂ ಮುನ್ನದ ಮತದಾರರ ಪಟ್ಟಿಯನ್ನು ಪ್ರಸ್ತುತ ಪಟ್ಟಿಯೊಂದಿಗೆ ಹೋಲಿಸಿ, ಹಿಂದಿನ ಪಟ್ಟಿಯಲ್ಲಿ ಹೆಸರು ಇದ್ದು ಪ್ರಸ್ತುತ ಪಟ್ಟಿಯಲ್ಲಿ ಕಾಣಿಸದ ಮತದಾರರನ್ನು ಗುರುತಿಸುವಂತೆ ಚುನಾವಣಾ ಆಯೋಗವು ಮುಖ್ಯ ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮತದಾರರ ನೋಂದಣಿ ಅಧಿಕಾರಿಗಳಿಗೆ ಸೂಚಿಸಿದೆ.

ಈ ಪ್ರಕ್ರಿಯೆಯಲ್ಲಿ ಬೂತ್‌ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ತೆರಳಿ ಅಂತಹ ಮತದಾರರ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ಅರ್ಹರಾಗಿರುವ ಮತದಾರರ ಹೆಸರುಗಳನ್ನು ಫಾರ್ಮ್‌–6 ಮೂಲಕ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು BLOಗಳು ನೆರವಾಗಲಿದ್ದಾರೆ. ಪ್ರತಿ BLO ವಾರಕ್ಕೆ ಕನಿಷ್ಠ 20ರಿಂದ 25 ಮತದಾರರನ್ನು** ಸಂಪರ್ಕಿಸಿ, ಸುಮಾರು ಒಂದು ತಿಂಗಳೊಳಗೆ ಈ ಪರಿಶೀಲನಾ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

ವಿಶೇಷ ಅಭಿಯಾನದಲ್ಲಿ ಎಸ್‌ಐಆರ್‌ ಸಂದರ್ಭದಲ್ಲಿ ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರ ಜೊತೆಗೆ ಮೊದಲ ಬಾರಿಗೆ ಮತದಾರರಾಗುವ ಯುವಕರು ಹಾಗೂ ಇನ್ನೂ ನೋಂದಣಿಯಾಗದ ಅರ್ಹ ಮತದಾರರನ್ನೂ ಗುರುತಿಸಿ ನೋಂದಾಯಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಬೂತ್‌ ಮಟ್ಟದಲ್ಲಿ ಸಿದ್ಧಪಡಿಸುವ ಮತದಾರರ ಪಟ್ಟಿಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಬೂತ್‌ ಮಟ್ಟದ ಏಜೆಂಟ್‌ಗಳಿಗೂ (BLA) ನೀಡಲಾಗುತ್ತದೆ. ಫಾರ್ಮ್‌–6 ಸಲ್ಲಿಸಿರುವವರ ವಿವರಗಳನ್ನು ಮತದಾರರ ನೋಂದಣಿ ಅಧಿಕಾರಿಗಳಿಗೆ ನೀಡಿ ಕ್ಷೇತ್ರ ಪರಿಶೀಲನೆ ನಡೆಸಿ ಹೆಸರು ಸೇರ್ಪಡೆಗೊಳಿಸುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ನಂತರ ಪ್ರತಿ ಬೂತ್‌ನ ಅಂತಿಮ ಪಟ್ಟಿಯನ್ನು ಮತ್ತೊಮ್ಮೆ BLAಗಳೊಂದಿಗೆ ಹಂಚಿಕೊಂಡು ಯಾವುದೇ ಅರ್ಹ ಮತದಾರರು ಹೊರಗುಳಿದಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.

1.07 ಕೋಟಿ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದರು

ಕರ್ನಾಟಕದಲ್ಲಿ ಜೂನ್‌ 16, 2026ರಂದು 5,54,32,314 ಮತದಾರರು. ಇದ್ದರು. ಆಗಸ್ಟ್‌ 24ರಂದು ಎಸ್‌ಐಆರ್‌ ಕರಡು ಮತದಾರರ ಪಟ್ಟಿ ಪ್ರಕಟವಾದಾಗ ಒಟ್ಟು 4,46,80,151 ಮತದಾರರು ಉಳಿದಿದ್ದರು. ಅಂದರೆ 1,07,96,339 ಮತದಾರರನ್ನು Absent, Shifted, Dead, Duplicate ಮತ್ತು Others ವಿಭಾಗಗಳಲ್ಲಿ ಗುರುತಿಸಲಾಗಿತ್ತು.

ಇವರಲ್ಲಿ 65,45,679 ಮಂದಿಯನ್ನು ಮೃತಪಟ್ಟವರು, 15,17,042 ಮಂದಿಯನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರು, 7,09,870 ಮಂದಿಯನ್ನು ನಕಲಿ/ಪುನರಾವರ್ತಿತ ಹೆಸರುಗಳು ಎಂದು ಗುರುತಿಸಲಾಗಿತ್ತು. 1,07,96,339 ಮಂದಿಯನ್ನು ಒಟ್ಟಾರೆ ASDDO ವರ್ಗದಲ್ಲಿ ಗುರುತಿಸಲಾಗಿತ್ತು.

ಎಸ್‌ಐಆರ್‌ ಸಂದರ್ಭದಲ್ಲಿ ಹೆಸರುಗಳು ಕೈಬಿಟ್ಟಿರುವ ಕುರಿತು ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಿಂದ ಆಕ್ಷೇಪಗಳು ವ್ಯಕ್ತವಾಗುತ್ತಿರುವ ನಡುವೆಯೇ ಚುನಾವಣಾ ಆಯೋಗದ ಈ ಹೊಸ ಸೂಚನೆ ಹೊರಬಿದ್ದಿದೆ. ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದರೆ ಅವರನ್ನು ಗುರುತಿಸಿ ಮತ್ತೆ ಸೇರ್ಪಡೆಗೊಳಿಸುವುದು ಈ ವಿಶೇಷ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

ಇದೇ ವೇಳೆ, ಫಾರ್ಮ್‌–6, 7 ಮತ್ತು 8ಕ್ಕೆ ಸಂಬಂಧಿಸಿದಂತೆ ಸುಳ್ಳು ಘೋಷಣೆ ಸಲ್ಲಿಸುವವರು ಹಾಗೂ ಸಾಮೂಹಿಕವಾಗಿ ಹೆಸರುಗಳನ್ನು ಅಳಿಸಲು ಅರ್ಜಿ ಸಲ್ಲಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾತ್ರಿ ಆಶ್ರಯ ಕೇಂದ್ರಗಳು, ಕಾರ್ಮಿಕರ ಕಾಲೊನಿಗಳು, ನಿರಾಶ್ರಿತರು ಮತ್ತು ಇತರ ಅಂಚಿನ ಸಮುದಾಯಗಳಿಗಾಗಿ ವಿಶೇಷ ಬೂತ್‌ ಮಟ್ಟದ ಶಿಬಿರಗಳನ್ನು ನಡೆಸಲು ಸಹ ಸೂಚಿಸಲಾಗಿದೆ.

 

Donate Janashakthi Media

Leave a Reply

Your email address will not be published. Required fields are marked *