ಎಸ್‌ಐಆರ್‌ ರದ್ದಾಗಲಿ – ಜ್ಞಾನೇಶ್‌ ಕುಮಾರ್‌ ವಜಾಕ್ಕೆ ಆಗ್ರಹಿಸಿ ಎಡಪಕ್ಷಗಳ ಪ್ರತಿಭಟನೆ

ಫ್ರೀಡಂ ಪಾರ್ಕ್‌ನಲ್ಲಿ ಎಡಪಕ್ಷಗಳು, ಎಸ್‌ಐಆರ್‌ ವಿರೋಧಿ ಸಂಘಟನೆಗಳ ಪ್ರತಿಭಟನೆ
ಬೆಂಗಳೂರು: ದೇಶದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಅಪ್ರಜಾಸತ್ತಾತ್ಮಕವಾಗಿದ್ದು, ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಮೂಲಕ ಅವರ ಪ್ರಜಾತಾಂತ್ರಿಕ ಹಕ್ಕುಗಳಿಗೆ ಧಕ್ಕೆ ಉಂಟುಮಾಡಲಾಗುತ್ತಿದೆ ಎಂದು ಎಡಪಕ್ಷಗಳು ಆರೋಪಿಸಿವೆ.  ಎಸ್‌ಐಆರ್‌ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿವೆ. ಎಸ್‌ಐಆರ್‌

ಎಸ್‌ಐಆರ್‌ ರದ್ದತಿ ಹಾಗೂ ಸಿಇಸಿ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಒತ್ತಾಯಿಸಿ ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಪಿಐ(ಎಂ), ಸಿಪಿಐ, ಎಸ್‌ಯುಸಿಐ ಸೇರಿದಂತೆ ಎಡಪಕ್ಷಗಳು ಹಾಗೂ ಎಸ್‌ಐಆರ್‌ ವಿರೋಧಿ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್‌, ಎಸ್‌ಐಆರ್‌ ಪ್ರಕ್ರಿಯೆ ಚುನಾವಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಾಗೂ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ರೀತಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.

ಮತದಾರರ ಪಟ್ಟಿಗೆ ಅರ್ಹರನ್ನು ಸೇರ್ಪಡೆಗೊಳಿಸುವುದು ಚುನಾವಣಾ ಆಯೋಗದ ಮೂಲಭೂತ ಕರ್ತವ್ಯವಾಗಬೇಕಿತ್ತು. ಆದರೆ, ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅರ್ಹ ಮತದಾರರನ್ನೇ ಅನುಮಾನಾಸ್ಪದ ವರ್ಗಕ್ಕೆ ಸೇರಿಸಿ ಮತದಾರರ ಪಟ್ಟಿಯಿಂದ ಹೊರಗಿಡುವಂತಹ ಕ್ರಮಗಳು ನಡೆಯುತ್ತಿವೆ ಎಂದು ಅವರು ದೂರಿದರು.

ಇದನ್ನೂ ಓದಿ :ಕಸ್ತೂರಿರಂಗನ್ ವರದಿ ಕೇಂದ್ರಕ್ಕೆ ಅನುಕೂಲ, ರೈತರಿಗೆ ಅಪಾಯಕಾರಿ: ಕುಂ. ವೀರಭದ್ರಪ್ಪ

 

ಕರ್ನಾಟಕದ ಕರಡು ಮತದಾರರ ಪಟ್ಟಿಯಲ್ಲಿ 1.08 ಕೋಟಿಗೂ ಹೆಚ್ಚು ಮತದಾರರನ್ನು ‘Absent, Shifted, Dead, Duplicate and Others’ (ASDDO) ವರ್ಗದಲ್ಲಿ ಗುರುತಿಸಿರುವುದನ್ನು ಉಲ್ಲೇಖಿಸಿದ ಅವರು, ಇಂತಹ ಬೃಹತ್ ಪ್ರಮಾಣದ ವರ್ಗೀಕರಣವು ಸಹಜವಾಗಿಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದರು.

ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶದಿಂದ ಎಸ್‌ಐಆರ್‌ ನಡೆಸಲಾಗುತ್ತಿದೆ ಎಂದು ಹೇಳುತ್ತಿದೆ. ASDDO ಪಟ್ಟಿಯಲ್ಲಿರುವ ಎಲ್ಲ ಹೆಸರುಗಳನ್ನೂ ಅಂತಿಮವಾಗಿ ಅಳಿಸಲಾಗುವುದಿಲ್ಲ ಮತ್ತು ಅರ್ಹ ಮತದಾರರಿಗೆ ಹಕ್ಕು ಹಾಗೂ ಆಕ್ಷೇಪ ಸಲ್ಲಿಸಲು ಅವಕಾಶವಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹಕ್ಕುಗಳಿಗೆ ಧಕ್ಕೆಯಾಗದಂತೆ ಖಾತರಿಪಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು. ಎಸ್‌ಐಆರ್‌

ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಪ್ರಭಾವಕ್ಕೆ ಒಳಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಿಪಿಐ(ಎಂ) ಆರೋಪಿಸಿತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನಿರ್ದೇಶನದ ಮೇರೆಗೆ ಚುನಾವಣಾ ವ್ಯವಸ್ಥೆಯನ್ನು ಏಕಪಕ್ಷೀಯವಾಗಿ ನಡೆಸಲಾಗುತ್ತಿದೆ ಎಂಬ ಆರೋಪವನ್ನು ಮುಂದಿಟ್ಟ ಪಕ್ಷ, ಇದಕ್ಕೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರು ಹೊಣೆಗಾರರಾಗಿದ್ದಾರೆ ಎಂದು ಹೇಳಿತು. ಅವರು ರಾಜೀನಾಮೆ ನೀಡಬೇಕು ಅಥವಾ ಕೇಂದ್ರ ಸರ್ಕಾರ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿತು.

ಚುನಾವಣಾ ಆಯೋಗದ ಸ್ವಾಯತ್ತತೆ ಹಾಗೂ ಸಂವಿಧಾನದ ಆಶಯಗಳನ್ನು ರಕ್ಷಿಸುವುದು ಅತ್ಯಗತ್ಯ. ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿಯೂ ಸಂವಿಧಾನಾತ್ಮಕ ಸಂಸ್ಥೆಗಳ ಸ್ವಾಯತ್ತತೆಯನ್ನು ಖಾತರಿಪಡಿಸಬೇಕು ಎಂದು ಆಗ್ರಹಿಸಲಾಯಿತು.

ಎಸ್‌ಐಆರ್‌ ಪ್ರಕ್ರಿಯೆಯಿಂದ ಅರ್ಹ ಮತದಾರರ ಹೆಸರುಗಳು ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು. ತಪ್ಪಾಗಿ ‘Absent’ ಅಥವಾ ‘Shifted’ ಎಂದು ಗುರುತಿಸಲ್ಪಟ್ಟಿರುವ ಮತದಾರರ ಹೆಸರುಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಯಲ್ಲಿ ಮರುಸೇರ್ಪಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಡಪಕ್ಷಗಳ ನಾಯಕರಾದ ಸಾತಿ ಸುಂದರೇಶ್‌, ಎ. ಜ್ಯೋತಿ, ಉಮಾದೇವಿ, ಶ್ರೀರಾಮ್‌, ಗೌರಮ್ಮ, ಬಿ.ಎನ್. ಮಂಜುನಾಥ್‌ ಸೇರಿದಂತೆ ಸಿಪಿಐ(ಎಂ), ಸಿಪಿಐ, ಎಸ್‌ಯುಸಿಐ ಹಾಗೂ ವಿವಿಧ ಎಸ್‌ಐಆರ್‌ ವಿರೋಧಿ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಇದನ್ನೂ ನೋಡಿ : ಮತದಾರರ ಹಕ್ಕಿಗಾಗಿ ಹೋರಾಟ: SIR ವಿರುದ್ಧ ಪ್ರತಿರೋಧ ಪ್ರವಾಸ! Janashakthi Media

Donate Janashakthi Media

Leave a Reply

Your email address will not be published. Required fields are marked *