ಯಾರೀ ಜ್ಞಾನೇಶ್ ಕುಮಾರ್: ವೃತ್ತಿ ಜೀವನದ ಆರಂಭದಿಂದಲೇ ಕರಿನೆರಳು ಆವರಿಸಿಕೊಂಡಿದ್ದ ಅಧಿಕಾರಿ?

ಈಗ ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್‌ ಕುಮಾರ್‌ ೧೯೮೮ರ ಬ್ಯಾಚಿನ  ‘ಕೇರಳ ಕೇಡರ್‌ನ ಐಎಎಎಸ್‌ ಅಧಿಕಾರಿಯಾಗಿದ್ದು ,ತನ್ನ  ಆಢಳಿತಾತ್ಮಕ ಜೀವನದ ಆರಂಭದಿಂದಲೇ ಕರಿನೆರಳು ಆವರಿಸಿಕೊಂಡಿದ್ದ ಅಧಿಕಾರಿ ಎಂದು ಕೇರಳದ ಮಾಜಿ ಹಣಕಾಸು ಮಂತ್ರಿ ಮತ್ತು ಅರ್ಥಶಾಸ್ತ್ರಜ್ಞ ಡಾ. ಥಾಮಸ್‌ ಐಸಾಕ್‌ ಹೇಳಿದ್ದಾರೆ.

2006ರಲ್ಲಿ ವಿ.ಎಸ್. ಅಚ್ಯುತಾನಂದನ್ ನೇತೃತ್ವದ ಎಲ್‌ಡಿಎಫ್‌ ಸರ್ಕಾರ ಅಧಿಕಾರಕ್ಕೆ ಬಂದಾಗ ಇವರು ಪಿಡಬ್ಲ್ಯೂಡಿ ಕಾರ್ಯದರ್ಶಿಯಾಗಿದ್ದರು. 2006 ಮುಗಿಯುವ ಮುನ್ನವೇ ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನು ಇಲಾಖೆಯಿಂದ ತೆಗೆದುಹಾಕಲಾಯಿತು ಹಾಗೂ ವಿಜಿಲೆನ್ಸ್ ತನಿಖೆಯನ್ನು ಘೋಷಿಸಲಾಯಿತುಎಂದು ಡಾ.ಐಸಾಕ್‌ ಹೇಳುತ್ತಾರೆ.

ಈ ಕ್ರಮಕ್ಕೆ ಕಾರಣವೇನು? ಕೇರಳದಲ್ಲಿ ವಿಶ್ವಬ್ಯಾಂಕ್‌ನ ಕೆ.ಎಸ್.ಟಿ.ಪಿ ಯೋಜನೆಯಲ್ಲಿ ರಸ್ತೆ ಯೋಜನೆಯ ಭಾಗವನ್ನು ವಹಿಸಿಕೊಂಡಿದ್ದ ಮಲೇಷಿಯಾದ ‘ಪತಿಬೆಲ್’ ಕಂಪನಿಯ ಕೇರಳ ಉಸ್ತುವಾರಿಯಾಗಿದ್ದ ಎಂಜಿನಿಯರ್ ಲೀ ಬಿನ್ ಸಿನ್, ನವೆಂಬರ್‌ನಲ್ಲಿ ಕೌಲಾಲಂಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅವರ ಆತ್ಮಹತ್ಯೆ ಪತ್ರದಲ್ಲಿ ಕೇರಳದ ಪಿಡಬ್ಲ್ಯೂಡಿ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ದುರಾಡಳಿತದ ಬಗ್ಗೆ ವಿವರವಾಗಿ ಬರೆಯಲಾಗಿತ್ತು. ಜ್ಞಾನೇಶ್ ಕುಮಾರ್ ಹೆಸರನ್ನು ಪ್ರಮುಖವಾಗಿ ಹೆಸರು ಪ್ರಸ್ತಾಪಿಸಲಾಗಿತ್ತು. ಲಂಚ ಕೇಳಿದ್ದರೆಂದೂ ಆ ಟಿಪ್ಪಣಿಯಲ್ಲಿತ್ತು. ಇದರ ಬೆನ್ನಲ್ಲೇ ವಿಜಿಲೆನ್ಸ್ ತನಿಖೆ ಮತ್ತು ವರ್ಗಾವಣೆ ನಡೆಯಿತು.

ಇದು ರೂ. 216 ಕೋಟಿ ಮೊತ್ತದ ಟೆಂಡರ್ ಆಗಿತ್ತು. ಆದರೆ, ಭೂಸ್ವಾಧೀನದಲ್ಲಿ ವಿಪರೀತ ವಿಳಂಬವಾಯಿತು. ಹೀಗಾಗಿ ಯೋಜನೆ ತೆವಳುತ್ತಾ ಸಾಗಿತು. ಒಟ್ಟು ರೂ. 70 ಕೋಟಿ ಬಿಲ್ ಮಾತ್ರ ಮಂಜೂರಾಗಿತ್ತು, ರೂ. 13 ಕೋಟಿ ಬಿಲ್ ಬಾಕಿಯಿತ್ತು. ವಿಳಂಬಕ್ಕೆ ‘ಪತಿಬೆಲ್’ ಕಾರಣ ಎಂದು ಪಿಡಬ್ಲ್ಯೂಡಿ ಹೇಳಿದರೆ, ಸ್ಥಳ ಹಸ್ತಾಂತರಿಸದಿರುವುದೇ ಕಾರಣ ಎಂದು ಪತಿಬೆಲ್ ಪ್ರತಿಪಾದಿಸಿತು. ಹಸ್ತಾಂತರಿಸಿದ ಭಾಗಗಳಲ್ಲೂ ಕೆಲಸ ಮಾಡಿಲ್ಲ ಎಂದು ಪಿಡಬ್ಲ್ಯೂಡಿ ಆರೋಪಿಸಿತಾದರೂ, ಒಪ್ಪಂದದ ಪ್ರಕಾರ ಯಾವುದೇ ನಷ್ಟ ಪರಿಹಾರದ ನೋಟಿಸ್ ನೀಡಿರಲಿಲ್ಲ.

ಇದನ್ನೂ ಓದಿ : SIR ನಿರ್ಧಾರಗಳೇ ಕಾನೂನುಬಾಹಿರ? ಜ್ಞಾನೇಶ್‌ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ!

ಅದೇ ಸಮಯದಲ್ಲಿ, ಪ್ರತಿಯೊಂದು ಲೋಪಕ್ಕೂ ಪಿಡಬ್ಲ್ಯೂಡಿಗೆ ಪತಿಬೆಲ್ ಸರಿಯಾಗಿ ನೋಟಿಸ್ ನೀಡಿತ್ತು. ಆದ್ದರಿಂದ ಮಧ್ಯಸ್ಥಿಕೆ (Arbitration) ಬಂದಾಗ ಸರ್ಕಾರ ಸೋಲುವುದು ಖಚಿತವಾಗಿತ್ತು. ಇದೊಂದು ನಿಯಮಿತ ಪರಿಪಾಠವಾಗಿತ್ತು. ಇದರ ಜೊತೆಗೆ ಹಣ ಪಾವತಿಯಲ್ಲಿ ವಿಳಂಬ ಮತ್ತು ಗೊಂದಲಗಳನ್ನು ಸೃಷ್ಟಿಸಲಾಯಿತು. ಇದರಿಂದ ಮನನೊಂದು ಲೀ ಬಿನ್ ಸಿನ್ ಆತ್ಮಹತ್ಯೆ ಮಾಡಿಕೊಂಡರು.

2007 ರಲ್ಲಿ ಅಂತಿಮವಾಗಿ ಸರ್ಕಾರ ರೂ. 35 ಕೋಟಿ ನಷ್ಟ ಪರಿಹಾರ ನೀಡಬೇಕಾಯಿತು. ಬಾಕಿ ಬಿಲ್ ಹಾಗೂ ಉಳಿದ ಕೆಲಸ ಮುಗಿಸಲು ರೂ. 215 ಕೋಟಿಯ ಪರಿಷ್ಕೃತ ಅಂದಾಜನ್ನು ಅಂಗೀಕರಿಸಲಾಯಿತು. ಹೀಗೆ ರೂ. 216 ಕೋಟಿಯ ಯೋಜನೆ ಪೂರ್ಣಗೊಳ್ಳಲು ಕನಿಷ್ಠ ರೂ. 330 ಕೋಟಿ ಬೇಕಾಯಿತು; ಜೊತೆಗೆ ಒಬ್ಬ ಎಂಜಿನಿಯರ್ ಆತ್ಮಹತ್ಯೆಯೂ ನಡೆಯಿತು.

ವಿಜಲೆನ್ಸ್‌ ತನಿಖೆಯ ನಂತರ ಜ್ಞಾನೇಶ್‌ ಕುಮಾರ್‌ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದಲ್ಲಿ ಕೇರಳದ ಕಾಂಗ್ರೆಸ್‌ ಮುಖಂಡರು ಎ.ಕೆ.ಆಂಟನಿ ಅವರು ಮಂತ್ರಿಯಾಗಿದ್ದ ಕೇಂದ್ರದ ರಕ್ಷಣಾ ಇಲಾಖೆಗೆ ತೆರಳಿದರು. ಕೇರಳದಲ್ಲಿ  ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದಾಗ 2012 ರಲ್ಲಿ  ಅವರು ಕೇರಳ ಹೌಸ್‌ನ ರೆಸಿಡೆಂಟ್ ಕಮಿಷನರ್ ಆದರು ಎಂಬುದೂ ಗಮನಾರ್ಹ. 2016 ರಲ್ಲಿ ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್‌ ಸರ್ಕಾರ ಅಧಿಕಾರಕ್ಕೆ ಬಂದಾಗ ಜ್ಞಾನೇಶ್ ಕುಮಾರ್‌ ʼಕೇರಳ ಹೌಸ್‌ʼನಿಂದ ಕೇಂದ್ರ ಸರ್ಕಾರದ ಕಾಶ್ಮೀರ ಇಲಾಖೆಗೆ ವರ್ಗಾವಣೆ ಪಡೆದರು. ಅಲ್ಲಿ ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಮಟ್ಟಕ್ಕೆ ಇಳಿಸಿ, ವಿಭಜಿಸಿ ಬಿಜೆಪಿ ಆಡಳಿತವನ್ನು ತರುವಲ್ಲಿ ಅವರ ಪಾತ್ರವಿತ್ತು ಎನ್ನಲಾಗಿದೆ.

ಇದರೊಂದಿಗೆ ಅವರು ಅಮಿತ್ ಶಾ ಅವರ ಕೃಪಾಕಟಾಕ್ಷಕ್ಕೆ ಪಾತ್ರರಾದರು ಎಂದು ಭಾವಿಸಬಹುದಾಗಿದೆ. ರಾಮಜನ್ಮಭೂಮಿ ಕ್ಷೇತ್ರ ಟ್ರಸ್ಟ್‌ನ ಸೂತ್ರಧಾರಿಯೂ ಜ್ಞಾನೇಶ್ ಕುಮಾರ್ ಆಗಿದ್ದರು ಎನ್ನಲಾಗಿದೆ. ಸಾರ್ವಜನಿಕ ನಿಧಿ ಮತ್ತು ಸಾರ್ವಜನಿಕ ದೇಣಿಗೆಯ ಆಧಾರದ ಮೇಲಿದ್ದ ದೇವಾಲಯವನ್ನು ಖಾಸಗಿ ಟ್ರಸ್ಟ್ ಆಗಿ ಪರಿವರ್ತಿಸುವ ತಂತ್ರ ಹೆಣೆದದ್ದು ಇವರೇ ಎಂಬ ವದಂತಿಯಿದೆ. ಮುಂದೆ ಅಮಿತ್‌ ಷಾ ಅಡಿಯಲ್ಲಿರುವ ಸಹಕಾರ ಇಲಾಖೆಯಲ್ಲೂ ಜ್ಞಾನೇಶ್‌ ಕುಮಾರ್‌ ಅವರಿಗೆ ನೆರವಾಗಿದ್ದರು ಎನ್ನಲಾಗಿದೆ.

ಬಿಜೆಪಿಯ ಪರವಾಗಿ ಮಾಡಿದ ಇಂತಹ ಹಸ್ತಕ್ಷೇಪಗಳಿಂದಾಗಿ ಅವರು ಆಳುವ ಪಕ್ಷದ ಅಚ್ಚುಮೆಚ್ಚಿನವರಾದರು.

ಭಾರತದ ಚುನಾವಣಾ ಆಯುಕ್ತರನ್ನು ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯು ಆಯ್ಕೆ ಮಾಡಬೇಕು ಎಂಬ ಸುಪ್ರೀಂ ಕೋರ್ಟ್‌ನ ಆದೇಶವನ್ನೇ ಬಿಜೆಪಿ ತಿದ್ದುಪಡಿ ಮಾಡಿತು. ತಿದ್ದುಪಡಿಗೊಂಡ ಕಾನೂನಿನ ಪ್ರಕಾರ, ಮುಖ್ಯ ನ್ಯಾಯಮೂರ್ತಿಯ ಬದಲಿಗೆ ಪ್ರಧಾನ ಮಂತ್ರಿಯವರು ಶಿಫಾರಸು ಮಾಡಿದ ಮತ್ತೊಬ್ಬ ಸಚಿವರು (ಸಮಿತಿಯಲ್ಲಿ) ಸೇರ್ಪಡೆಗೊಂಡರು. ಈ ವಿಷಯಕ್ಕೆ ಸಂಬಂಧಿಸಿದ ಪ್ರಕರಣವು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇದೆ; ಜ್ಞಾನೇಶ್ ಕುಮಾರ್ ೨೦೨೫ರಲ್ಲಿ ಭಾರತದ ಚುನಾವಣಾ ಆಯುಕ್ತರಾದರು. ಅಂದಿನಿಂದಲೂ ಅವರು ಭಾರತದ ಚುನಾವಣಾ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಏಕೈಕ ಕಾರ್ಯಸೂಚಿಯನ್ನು ಅನುಸರಿಸುತ್ತಿದ್ದಾರೆ; ‘ಮೂರನೇ ಜಗತ್ತಿನ’ ಪ್ರಜಾಪ್ರಭುತ್ವಗಳಲ್ಲಿ ಹೆಮ್ಮೆಯ ವಿಷಯವಾಗಿದ್ದ, ಈ ಚುನಾವಣಾ ವ್ಯವಸ್ಥೆಯನ್ನು  ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿರುವ ವಿಷಯವನ್ನು  ಈಗ ಇಂಡಿಯನ್‌ ಎಕ್ಸ್‌ಪ್ರೆಸ್‌ನ ಇಬ್ಬರು ಪತ್ರಕರ್ತೆ ರಿತಿಕಾ ಚೋಪ್ರಾ ಬೆಳಕಿಗೆ ತಂದಿದ್ದಾರೆ ಮತ್ತು ಈ ಮಾಹಿತಿ ಈಗ ಸಾರ್ವಜನಿಕ ವಲಯದಲ್ಲಿದೆ ಎಂದಿರುವ ಡಾ.ಐಸಾಕ್‌, ಕಾನೂನನ್ನು ಹೇಗೆ ಉಲ್ಲಂಘಿಸಲಾಗಿದೆ? ನಿರ್ಧಾರಗಳನ್ನು ಹೇಗೆ ಏಕಪಕ್ಷೀಯವಾಗಿ ತೆಗೆದುಕೊಳ್ಳಲಾಗಿದೆ ಎಂಬ ವಿಷಯವು ಬಹಿರಂಗಗೊಂಡಿದೆ, ಈಗ ಒಂದೇ ಒಂದು ಆಯ್ಕೆ ಉಳಿದಿದೆ – ಅವರನ್ನು ಹುದ್ದೆಯಿಂದ ಕೆಳಗಿಳಿಸುವುದು, ಅವರನ್ನು ವಜಾ ಮಾಡಲೇಬೇಕು ಎಂದು ಅವರು ಹೇಳುತ್ತಾರೆ.

ಅಲ್ಲದೆ ಕೇರಳದ ಮಾಜಿ ಮುಖ್ಯ ಕಾರ್ಯದರ್ಶಿಯಾಗಿದ್ದು ೨೦೧೬ರಲ್ಲಿ ನಿವೃತ್ತರಾಗಿದ್ದ  ಜಿಜಿ ಥಾಮ್ಸನ್‌ರನ್ನು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕೇರಳದ ಪಟ್ಟಣಮಿತ್ತದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ  ಜ್ಞಾನೇಶ್‌ ಕುಮಾರ್‌ ಒತ್ತಾಯಿಸಿದ್ದರು ಎಂದೂ ವರದಿಯಾಗಿದೆ(ʼದಿ ವೈರ್‌ʼ, ಸಪ್ಟಂಬರ್‌ ೨೬). ಅವರು ಅದಾಗಲೇ ಸ್ಪರ್ಧಿಸಲು ನಿರಾಕರಿಸಿದ್ದರೂ ಅವರನ್ನು ಮತ್ತೆ  ಆಳುವ ಪಕ್ಷದ ಪರವಾಗಿ ಒತ್ತಾಯಿಸಲು ಪ್ರಯತ್ನಿಸಿದವರು ಮುಂದೆ ನಿಷ್ಪಕ್ಷಪಾತದಿಂದ ವರ್ತಿಸಬೇಕಾದ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಈ ಅಧಿಕಾರಿ!

ಇಂಡಿಯನ್‌ ಎಕ್ಸ್‌ಪ್ರೆಸ್‌ನಲ್ಲಿ ತನಿಖಾ ವರದಿ ಪ್ರಕಟವಾದ ದಿನವೇ ಇನ್ನೊಂದು ಸುದ್ದಿ ಬಹಳಷ್ಟು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಉತ್ತರಪ್ರದೇಶದ ನೋಯ್ಡ ಅಥವ ಗೌತಮ ಬುದ್ಧ ನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್‌  ಒಬ್ಬ ವಿದ್ಯಾರ್ಥಿನಿ ಆಕೃತಿ ಚೌಧರಿಯನ್ನು ಸಾಕಷ್ಟು ಪುರಾವೆಗಳಿಲ್ಲದೆ ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಲು ಆದೇಶ ಹೊರಡಿಸಿದ್ದನ್ನು ರದ್ದು ಮಾಡಿ, ಆಕೆಗೆ ದಂಡ ವಿಧಿಸಿದ್ದ ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಹೆಚ್ಚೇನೂ ವಿಳಂಬವಿಲ್ಲದೆ ಸುಪ್ರಿಂ ಕೋರ್ಟ್‌ನಿಂದ  ತಡೆಯಾಜ್ಞೆ ಸಿಕ್ಕಿದೆ ಎಂಬುದೇ ಆ ಸುದ್ದಿ.  ನೋಯ್ಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು  ಉತ್ತರ ಪ್ರದೇಶ ಸರಕಾರ  ಅಲಹಾಬಾದ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.  ಈ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಿದ ರೀತಿಯ ಬಗ್ಗೆಯೇ ವಿವಾದ ಎದ್ದಿದೆ. ಸುಪ್ರಿಂ ಕೋರ್ಟ್‌ ರೋಸ್ಟರ್‌(ಕೆಲಸದ ಸರದಿ ಪಟ್ಟಿ) ಪ್ರಕಾರ ಹೆಬಿಯಸ್‌ ಕಾರ್ಪಸ್‌ ಮತ್ತು ಪ್ರತಿಬಂಧಕ ಬಂಧನದ ಪ್ರಕರಣಗಳನ್ನು ಸೇವಾ ಹಿರಿತನದ ಆಧಾರದ ಮೊದಲ ನಾಲ್ಕು ಪೀಠಗಳಿಗೇ ಒಪ್ಪಿಸಬೇಕು, ಅಲ್ಲದೆ ಆಕೃತಿ ಚೌಧರಿಯವರ ಒಂದು ಅರ್ಜಿ ಸೇವಾ ಹಿರಿತನದಲ್ಲಿ ಮೂರನೇ ಸ್ಥಾನದಲ್ಲಿರುವ ನ್ಯಾಯ ಮೂರ್ತಿ ನಾಗರತ್ನರವರ ನೇತೃತ್ವದ  ಪೀಠದ ಮುಂದೆ ಈ ಮೊದಲೊಮ್ಮೆ ಬಂದಿತ್ತು. ಆದರೆ  ನೋಯ್ಡ ಡಿಎಂ ಮತ್ತು ಉತ್ರಪ್ರದೇಶ ಸರಕಾರದ ಈ ಅರ್ಜಿಯನ್ನು ಈ ರೋಸ್ಟರ್‌ನಲ್ಲಿ ಇಲ್ಲದಿರುವ ಒಂದು ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಿದ್ದೇಕೆ ಎಂಬುದೇ ಈಗ ಎದ್ದಿರುವ ವಿವಾದ. ಅಲಹಾಬಾದ್ ಹೈಕೋರ್ಟಿನ ತರಾಟೆಗೆ ಒಳಗಾದ ನೋಯ್ಡದ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮೇಧಾ ರೂಪಂ ರವರು ಸಿಇಸಿ ಜ್ಞಾನೇಶ್‌ ಕುಮಾರ್‌ರವರ ಮಗಳು ಎಂಬುದು ಈ ವಿವಾದಕ್ಕಿರುವ ಒಂದು ಮುಖ್ಯ ಆಯಾಮ. ಇದು ಕೇವಲ ಕಾಕತಾಳಿಯ ಆಗಿರಲಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

(ಸಂಗ್ರಹ: ಸಿಚಿ-ಕೆವಿ)

ಇದನ್ನೂ ನೋಡಿ : ಎಸ್ಐಆರ್ ರದ್ದುಪಡಿಸಿ, ಜ್ಞಾನೇಶ್ ಕುಮಾರ್ ವಜಾಗೊಳಿಸಿ: ಎಡಪಕ್ಷಗಳ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *