ಅಲಿಗಢ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಭೂಮಿಯನ್ನು ವಶಕ್ಕೆ ಪಡೆಯಲು ಅಲಿಗಢ ನಗರಪಾಲಿಕೆ ಮುಂದಾಗಿದೆ ಎಂದು ಆರೋಪಿಸಿ ವಿಶ್ವವಿದ್ಯಾಲಯದ ಅಧ್ಯಾಪಕರು ಪ್ರತಿಭಟನೆ ನಡೆಸಿದ್ದಾರೆ. ವಿವಾದಿತ ಜಾಗದಲ್ಲಿ ನಗರಪಾಲಿಕೆ ಬೇಲಿ ಹಾಕಿ ಸ್ವಾಧೀನದ ಸೂಚನಾ ಫಲಕ ಅಳವಡಿಸಿದ ಬೆನ್ನಲ್ಲೇ ಅಧ್ಯಾಪಕರು ಪ್ರತಿಭಟನೆಗೆ ಇಳಿದಿದ್ದಾರೆ. ಎಎಂಯು
ಸುಮಾರು 3.8 ಎಕರೆ ವಿಸ್ತೀರ್ಣದ ಈ ಭೂಮಿಯ ಮೌಲ್ಯ ಸುಮಾರು ₹500 ಕೋಟಿ ಎಂದು ವರದಿಯಾಗಿದೆ. ಇದು ಎಎಂಯುವಿನ ರೈಡಿಂಗ್ ಫೀಲ್ಡ್ಗೆ ಸೇರಿದ ಜಾಗವಾಗಿದ್ದು, ಆಗಸ್ಟ್ 20ರಂದು ನಗರಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬೇಲಿ ಹಾಕಿದ್ದಾರೆ. ಈ ಬೆಳವಣಿಗೆಯ ಬಳಿಕ ಎಎಂಯು ಉಪಕುಲಪತಿ ಪ್ರೊ. ನೈಮಾ ಖಾತೂನ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ನಗರಪಾಲಿಕೆಯ ಕ್ರಮವನ್ನು ವಿರೋಧಿಸಿದೆ.
ವಿವಾದಿತ ಜಾಗದ ಮೇಲೆ ವಿಶ್ವವಿದ್ಯಾಲಯಕ್ಕೆ ಕಾನೂನುಬದ್ಧ ಹಕ್ಕಿದೆ ಎಂದು ಎಎಂಯು ಹೇಳಿದೆ. 1925ರಲ್ಲಿ ಭೂಸ್ವಾಧೀನ ಕಾಯ್ದೆ-1894ರ ಅಡಿಯಲ್ಲಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು ಮತ್ತು 1940ರಲ್ಲಿ ಅದನ್ನು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕಾಗಿ ಕಾಯ್ದಿರಿಸಲಾಗಿತ್ತು ಎಂದು ವಿಶ್ವವಿದ್ಯಾಲಯದ ಆಡಳಿತ ತಿಳಿಸಿದೆ. ಹಳೆಯ ದಾಖಲೆಗಳು, ಕಂದಾಯ ದಾಖಲೆಗಳು ಹಾಗೂ ಇತರ ಕಾನೂನು ದಾಖಲೆಗಳು ತಮ್ಮ ಮಾಲೀಕತ್ವವನ್ನು ಸಾಬೀತುಪಡಿಸುತ್ತವೆ ಎಂದು ಎಎಂಯು ಹೇಳಿದೆ.
ಕಂದಾಯ ದಾಖಲೆಗಳಲ್ಲಿ 1992ರಲ್ಲಿ ಅನುಮತಿಯಿಲ್ಲದೆ ಬದಲಾವಣೆ ಮಾಡಲಾಗಿದೆ ಎಂಬ ಆರೋಪವನ್ನೂ ಎಎಂಯು ಮಾಡಿದೆ. ಈ ದಾಖಲೆಗಳನ್ನು ಸರಿಪಡಿಸುವಂತೆ 2025ರ ಮಾರ್ಚ್ನಲ್ಲಿ ಸಂಬಂಧಿತ ಅಧಿಕಾರಿಗಳ ಮುಂದೆ ವಿಶ್ವವಿದ್ಯಾಲಯ ಮನವಿ ಸಲ್ಲಿಸಿದ್ದು, ಪ್ರಕರಣವು ಇನ್ನೂ ಉಪವಿಭಾಗಾಧಿಕಾರಿ ಮುಂದೆ ಬಾಕಿಯಿದೆ ಎಂದು ತಿಳಿಸಿದೆ. 2022ರ ಜಂಟಿ ಭೂಮಾಪನ ವರದಿಯಲ್ಲಿಯೂ ವಿವಾದಿತ ಜಾಗವನ್ನು ಎಎಂಯು ರೈಡಿಂಗ್ ಫೀಲ್ಡ್ಗೆ ಸೇರಿದೆ ಎಂದು ದಾಖಲಿಸಲಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ. ಎಎಂಯು
ಇದನ್ನೂ ಓದಿ : ಜಾರ್ಖಂಡ್ ಪರೀಕ್ಷಾ ಅಕ್ರಮ: 100ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಪ್ರಶ್ನಿಸಿದ ಸಿಐಡಿ–ಎಸ್ಐಟಿ
ಆದರೆ ಅಲಿಗಢ ನಗರಪಾಲಿಕೆ ಇದಕ್ಕೆ ತದ್ವಿರುದ್ಧವಾದ ವಾದ ಮಂಡಿಸಿದೆ. ಕಳೆದ 40 ವರ್ಷಗಳಿಂದಲೂ ಜಾಗವು ನಗರಪಾಲಿಕೆಗೆ ಸೇರಿದೆ ಎಂಬ ದಾಖಲೆಗಳು ತಮ್ಮಲ್ಲಿವೆ ಎಂದು ನಗರಪಾಲಿಕೆ ಆಯುಕ್ತ ಪ್ರೇಮ್ ಪ್ರಕಾಶ್ ಮೀನಾ ಹೇಳಿದ್ದಾರೆ. ನಗರಾಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಯೋಜನೆಗಳ ಕಾಮಗಾರಿಯನ್ನು ಈ ಜಾಗದಲ್ಲಿ ಶೀಘ್ರದಲ್ಲೇ ಆರಂಭಿಸುವ ಉದ್ದೇಶವಿದೆ ಎಂದೂ ಅವರು ತಿಳಿಸಿದ್ದಾರೆ.
ಭೂಮಿಯ ಮಾಲೀಕತ್ವದ ವಿವಾದವು ಈಗಾಗಲೇ ಅಧಿಕಾರಿಗಳ ಮುಂದೆ ಬಾಕಿ ಇರುವಾಗ ಯಾವುದೇ ನೋಟಿಸ್ ನೀಡದೆ ನಗರಪಾಲಿಕೆ ಏಕಪಕ್ಷೀಯವಾಗಿ ಜಾಗ ವಶಕ್ಕೆ ಪಡೆಯಲು ಮುಂದಾಗಿರುವುದು ಸರಿಯಲ್ಲ ಎಂದು ಎಎಂಯು ಆಕ್ಷೇಪಿಸಿದೆ. ವಿವಾದ ಇತ್ಯರ್ಥವಾಗುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ವಿಶ್ವವಿದ್ಯಾಲಯ ಆಗ್ರಹಿಸಿದೆ. ಅಗತ್ಯವಿದ್ದರೆ ನಗರಪಾಲಿಕೆಯ ಕ್ರಮವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿಯೂ ಉಪಕುಲಪತಿ ತಿಳಿಸಿದ್ದಾರೆ.
ಭೂಮಿ ವಿವಾದದ ಹಿನ್ನೆಲೆಯಲ್ಲಿ ಎಎಂಯು ಅಧ್ಯಾಪಕರು ನಗರಪಾಲಿಕೆಯ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದು, ವಿಶ್ವವಿದ್ಯಾಲಯದ ಆಸ್ತಿಯ ಮೇಲಿನ ಹಕ್ಕು ಮತ್ತು ಅದರ ಸಂರಕ್ಷಣೆಯ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದ್ದಾರೆ. ವಿವಾದಿತ ಭೂಮಿಯ ಮಾಲೀಕತ್ವವನ್ನು ಕಾನೂನುಬದ್ಧವಾಗಿ ನಿರ್ಧರಿಸುವ ಮುನ್ನ ನಗರಪಾಲಿಕೆ ಏಕಪಕ್ಷೀಯವಾಗಿ ಸ್ವಾಧೀನಕ್ಕೆ ಮುಂದಾಗಿರುವುದು ಸರಿಯೇ ಎಂಬ ಪ್ರಶ್ನೆಯೂ ಇದೀಗ ಎದುರಾಗಿದೆ. ಎಎಂಯು
ಇದನ್ನೂ ನೋಡಿ : SIR ಕರಡು ಪಟ್ಟಿ ಪ್ರಕಟ: ಹೆಚ್ಚಲಿದೆಯೇ ಜನರ ಸಂಕಟ? Janashakthi Media
