ವಿಮಾನಯಾನ ಕ್ಷೇತ್ರವನ್ನೂ ಅದಾನಿಗೆ ಒಪ್ಪಿಸಲು ಮೋದಿ ಸರ್ಕಾರದ ಹೊಸ ಯೋಜನೆ?

ನವದೆಹಲಿ: ದೇಶದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಮಹತ್ವದ ನೀತಿ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದರಿಂದ ವಿಮಾನ ನಿಲ್ದಾಣಗಳ ಮಾಲೀಕತ್ವ ಹೊಂದಿರುವ ಅದಾನಿ ಸಮೂಹಕ್ಕೆ ಸ್ವಂತ ವಿಮಾನಯಾನ ಸಂಸ್ಥೆ ಆರಂಭಿಸಲು ಅಥವಾ ಅಸ್ತಿತ್ವದಲ್ಲಿರುವ ವಿಮಾನಯಾನ ಸಂಸ್ಥೆಯಲ್ಲಿ ಪಾಲು ಪಡೆಯಲು ದಾರಿ ಸುಗಮವಾಗಬಹುದು ಎಂಬ ಚರ್ಚೆ ಆರಂಭವಾಗಿದೆ. ಗಣಶಕ್ತಿ ವರದಿ, ಈ ನೀತಿ ಬದಲಾವಣೆಯ ಹಿಂದೆ ಅದಾನಿ ಸಮೂಹದ ಹಿತಾಸಕ್ತಿ ಪ್ರಮುಖವಾಗಿರಬಹುದು ಎಂದು ಆರೋಪಿಸಿದೆ. ಅದಾನಿ

ಪ್ರಸ್ತುತ ನಿಯಮಗಳ ಪ್ರಕಾರ ಕೆಲವು ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳು ನಿಗದಿತ ವಿಮಾನಯಾನ ಸಂಸ್ಥೆಗಳನ್ನು ಹೊಂದಲು ಅಥವಾ ನಿಯಂತ್ರಿಸಲು ನಿರ್ಬಂಧಗಳಿವೆ. ಈ ನಿಯಮಗಳಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ವರದಿಗಳ ಪ್ರಕಾರ, ಅದಾನಿ ಸಮೂಹವೇ ಸರ್ಕಾರದ ಮುಂದೆ ಇಂತಹ ನಿರ್ಬಂಧಗಳನ್ನು ಸಡಿಲಿಸುವಂತೆ ಪ್ರಸ್ತಾವನೆ ಇಟ್ಟಿದೆ. ಅದಾನಿ ವಿಮಾನಯಾನ ಕ್ಷೇತ್ರಕ್ಕೆ ಪ್ರವೇಶಿಸಿದರೆ, ವಿಮಾನ ನಿಲ್ದಾಣ ಮತ್ತು ವಿಮಾನಯಾನ ಸಂಸ್ಥೆ ಎರಡರ ಮೇಲೂ ಒಂದೇ ಸಮೂಹದ ನಿಯಂತ್ರಣ ಸೃಷ್ಟಿಯಾಗುವ ಸಾಧ್ಯತೆ ಇದೆ.

ಅದಾನಿ ಸಮೂಹ ಈಗಾಗಲೇ ದೇಶದ ಪ್ರಮುಖ ವಿಮಾನ ನಿಲ್ದಾಣಗಳ ದೊಡ್ಡ ಪಾಲನ್ನು ನಿರ್ವಹಿಸುತ್ತಿದೆ. ಮುಂಬೈ, ಅಹಮದಾಬಾದ್, ಜೈಪುರ, ಲಖನೌ, ಗುವಾಹಟಿ, ತಿರುವನಂತಪುರಂ, ಮಂಗಳೂರು ಮತ್ತು ನವಿ ಮುಂಬೈ ಸೇರಿದಂತೆ ಎಂಟು ವಿಮಾನ ನಿಲ್ದಾಣಗಳು ಅದರ ನಿಯಂತ್ರಣದಲ್ಲಿವೆ ಎಂದು ವರದಿಯಾಗಿದೆ. ಇದೇ ಸಂದರ್ಭದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಡಿಯಲ್ಲಿ 129 ಸಣ್ಣ ಮತ್ತು ಮಧ್ಯಮ ವಿಮಾನ ನಿಲ್ದಾಣಗಳಿವೆ. ಇವುಗಳಲ್ಲಿ ಉತ್ತಮ ಆದಾಯ ನೀಡುವ ಇನ್ನೂ 11 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಗಣಶಕ್ತಿ ವರದಿ ಹೇಳಿದೆ.

ವಿಮಾನ ನಿಲ್ದಾಣದ ಮಾಲೀಕತ್ವ ಹೊಂದಿರುವ ಸಂಸ್ಥೆಯೇ ವಿಮಾನಯಾನ ಸಂಸ್ಥೆಯನ್ನೂ ನಡೆಸಲು ಅವಕಾಶ ಪಡೆದರೆ, ಸ್ಲಾಟ್‌ ಹಂಚಿಕೆ, ವಿಮಾನ ನಿಲ್ದಾಣದ ಸೌಲಭ್ಯಗಳು ಹಾಗೂ ವಾಣಿಜ್ಯ ಮಾಹಿತಿಯ ಬಳಕೆಯಲ್ಲಿ ಸ್ಪರ್ಧಿಗಳಿಗೆ ಅನನುಕೂಲ ಉಂಟಾಗಬಹುದು ಎಂಬ ಆತಂಕವನ್ನು ವಿಮಾನಯಾನ ಉದ್ಯಮದ ಕೆಲವರು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮುಂಬೈನಂತಹ ಪ್ರಮುಖ ವಿಮಾನ ನಿಲ್ದಾಣವನ್ನು ನಿರ್ವಹಿಸುವ ಸಂಸ್ಥೆಯೇ ವಿಮಾನಯಾನ ಮಾರುಕಟ್ಟೆಯಲ್ಲೂ ಸ್ಪರ್ಧಿಯಾಗಿ ಪ್ರವೇಶಿಸಿದರೆ, ಸಮಾನ ಸ್ಪರ್ಧೆಯ ಪ್ರಶ್ನೆ ಎದುರಾಗಲಿದೆ ಎಂದು ಉದ್ಯಮದ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ : ಎಎಂಯು ಭೂಮಿ ವಶಕ್ಕೆ ಪಡೆಯಲು ನಗರಪಾಲಿಕೆ ಯತ್ನ: ಅಧ್ಯಾಪಕರ ಪ್ರತಿಭಟನೆ

ಆದರೆ ಕೇಂದ್ರ ಸರ್ಕಾರದ ಅಧಿಕಾರಿಗಳ ವಾದ ಬೇರೆಯಾಗಿದೆ. ನಿಯಮ ಬದಲಾವಣೆ ಮಾಡಿದರೂ ವಿಮಾನ ನಿಲ್ದಾಣ ಮತ್ತು ವಿಮಾನಯಾನ ಸಂಸ್ಥೆಗಳ ನಡುವೆ ‘ಆರ್ಮ್ಸ್‌ ಲೆಂಗ್ತ್‌’ ಅಂತರ ಕಾಪಾಡುವ ನಿಯಮಗಳನ್ನು ರೂಪಿಸಲಾಗುತ್ತದೆ. ಸ್ಲಾಟ್‌ ಹಂಚಿಕೆ ಕುರಿತ ವಾಣಿಜ್ಯ ಮಾಹಿತಿಯ ದುರ್ಬಳಕೆಯನ್ನು ತಡೆಯುವುದು ಮತ್ತು ಎರಡೂ ಸಂಸ್ಥೆಗಳಲ್ಲಿ ಒಂದೇ ಪ್ರಮುಖ ನಿರ್ವಹಣಾ ಅಧಿಕಾರಿಗಳು ಇರುವುದನ್ನು ನಿರ್ಬಂಧಿಸುವ ಕ್ರಮಗಳನ್ನು ಜಾರಿಗೆ ತರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಇಂಡಿಗೋ ಮತ್ತು ಏರ್‌ ಇಂಡಿಯಾ ಪ್ರಬಲ ಸ್ಥಾನದಲ್ಲಿವೆ. ಈ ಎರಡು ಸಂಸ್ಥೆಗಳು ಒಟ್ಟಾಗಿ ದೇಶೀಯ ಮಾರುಕಟ್ಟೆಯ ಸುಮಾರು ಶೇ.90ರಷ್ಟು ಪಾಲನ್ನು ಹೊಂದಿವೆ ಎಂಬ ಹಿನ್ನೆಲೆಯಲ್ಲಿ, ಹೊಸ ವಿಮಾನಯಾನ ಸಂಸ್ಥೆಗಳ ಪ್ರವೇಶದಿಂದ ಸ್ಪರ್ಧೆ ಹೆಚ್ಚಾಗಲಿದೆ ಎಂಬುದು ಸರ್ಕಾರದ ಪರವಾದ ವಾದವಾಗಿದೆ. ಆದರೆ ವಿಮಾನ ನಿಲ್ದಾಣಗಳ ಮೇಲೆಯೇ ದೊಡ್ಡ ಹಿಡಿತ ಹೊಂದಿರುವ ಅದಾನಿ ಸಮೂಹಕ್ಕೆ ವಿಮಾನಯಾನ ಕ್ಷೇತ್ರದ ಬಾಗಿಲನ್ನೂ ತೆರೆದರೆ, ಏಕಸ್ವಾಮ್ಯ ಕಡಿಮೆಯಾಗುವ ಬದಲು ಮತ್ತಷ್ಟು ಕೇಂದ್ರೀಕರಣಕ್ಕೆ ಕಾರಣವಾಗಬಹುದೇ ಎಂಬ ಪ್ರಶ್ನೆ ಎದುರಾಗಿದೆ.

ಈ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವುದರಿಂದ ಆರಂಭಿಸಿ ಈಗ ವಿಮಾನಯಾನ ಕ್ಷೇತ್ರಕ್ಕೂ ಅದೇ ಕಾರ್ಪೊರೇಟ್ ಸಮೂಹಗಳಿಗೆ ಪ್ರವೇಶ ಕಲ್ಪಿಸುವ ನೀತಿ ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಕೆಲವೇ ದೊಡ್ಡ ಉದ್ಯಮ ಗುಂಪುಗಳ ಕೈಗೆ ಒಪ್ಪಿಸುವ ದಿಕ್ಕಿನಲ್ಲಿ ಸಾಗುತ್ತಿದೆಯೇ ಎಂಬ ಚರ್ಚೆ ತೀವ್ರಗೊಂಡಿದೆ. ವಿಮಾನ ನಿಲ್ದಾಣವೂ ಖಾಸಗಿ, ವಿಮಾನಯಾನ ಸಂಸ್ಥೆಯೂ ಅದೇ ಖಾಸಗಿ ಸಮೂಹದದ್ದಾದರೆ, ಸ್ಪರ್ಧೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ಭವಿಷ್ಯವೇನು ಎಂಬ ಪ್ರಶ್ನೆ ಈಗ ಕೇಂದ್ರ ಸರ್ಕಾರದ ಮುಂದಿದೆ.

ಇದನ್ನೂ ನೋಡಿ : SIR ಕರಡು ಪಟ್ಟಿ ಪ್ರಕಟ: ಹೆಚ್ಚಲಿದೆಯೇ ಜನರ ಸಂಕಟ? Janashakthi Media

Donate Janashakthi Media

Leave a Reply

Your email address will not be published. Required fields are marked *