ನೈಸ್‌ ಯೋಜನೆ ಸರ್ಕಾರ ವಶಪಡಿಸಿಕೊಳ್ಳಲಿ: ಮುಖ್ಯ ಕಾರ್ಯದರ್ಶಿಗೆ ಜೆಡಿಎಸ್‌ ನಿಯೋಗ ಮನವಿ

ಬೆಂಗಳೂರು: ನೈಸ್‌ ಯೋಜನೆಯನ್ನು ರಾಜ್ಯ ಸರ್ಕಾರ ಕೂಡಲೇ ವಶಕ್ಕೆ ಪಡೆದು, ನೈಸ್‌ ರಸ್ತೆಯಲ್ಲಿ ನಡೆಯುತ್ತಿರುವ ಟೋಲ್‌ ಸಂಗ್ರಹವನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್‌ ಶಾಸಕಾಂಗ ನಾಯಕ ಸುರೇಶ್‌ ಬಾಬು ನೇತೃತ್ವದ ಶಾಸಕರ ನಿಯೋಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಮನವಿ ಸಲ್ಲಿಸಿದೆ. ನೈಸ್‌

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸುರೇಶ್‌ ಬಾಬು, ನೈಸ್‌ ಯೋಜನೆಯಲ್ಲಿ ‘ಹಗಲು ದರೋಡೆ’ ನಡೆಯುತ್ತಿದೆ ಎಂದು ಆರೋಪಿಸಿದರು. ನೈಸ್‌ ರಸ್ತೆಯಲ್ಲಿ ಟೋಲ್‌ ಸಂಗ್ರಹ ಮಾಡಬಾರದು ಎಂದು ಹೈಕೋರ್ಟ್‌ ಹೇಳಿದ್ದರೂ, ಟೋಲ್‌ ಸಂಗ್ರಹ ಮುಂದುವರಿದಿದೆ. ನ್ಯಾಯಾಲಯದ ಆದೇಶವನ್ನು ಸರ್ಕಾರವೇ ಉಲ್ಲಂಘಿಸುತ್ತಿರುವಂತಾಗಿದೆ ಎಂದು ಅವರು ದೂರಿದರು. ಈ ಹಿನ್ನೆಲೆಯಲ್ಲಿ ನೈಸ್‌ ಯೋಜನೆಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡು ಟೋಲ್‌ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ನೈಸ್‌ ಯೋಜನೆಗೆ ಸಂಬಂಧಿಸಿದಂತೆ ಜೆಡಿಎಸ್‌ ಮತ್ತು ರಾಜ್ಯ ಸರ್ಕಾರದ ನಡುವೆ ಹಲವು ದಿನಗಳಿಂದ ರಾಜಕೀಯ ಸಂಘರ್ಷ ನಡೆಯುತ್ತಿದೆ. ಇತ್ತೀಚೆಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕೂಡ ನೈಸ್‌ ಯೋಜನೆಯನ್ನು ಸರ್ಕಾರ ವಶಕ್ಕೆ ಪಡೆದು ಟೋಲ್‌ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಒತ್ತಾಯಿಸಿದ್ದರು. ಯೋಜನೆಯಲ್ಲಿನ ಅಕ್ರಮಗಳು ಮತ್ತು ಒಪ್ಪಂದ ಉಲ್ಲಂಘನೆಗಳ ಕುರಿತು ಅವರು ಆರೋಪಗಳನ್ನು ಮಾಡಿದ್ದರು. ನೈಸ್‌

ಇದನ್ನೂ ಓದಿ : ಉದ್ಯಾನ ಭೂಮಿಗೂ ಕತ್ತರಿ: ಶೇ.5ರಷ್ಟು ಅನ್ಯ ಬಳಕೆಗೆ ಅವಕಾಶ ನೀಡುವ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ

ನೈಸ್‌ ಯೋಜನೆಯ ಟೋಲ್‌ ಸಂಗ್ರಹದ ವಿರುದ್ಧ ಜೆಡಿಎಸ್‌ ಈಗಾಗಲೇ ಪ್ರತಿಭಟನೆ ನಡೆಸಿದೆ. ಆಗಸ್ಟ್‌ 18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೈಸ್‌ ಯೋಜನೆ ಹಾಗೂ ಬಿಡದಿ ಟೌನ್‌ಶಿಪ್‌ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಗಿತ್ತು. ನೈಸ್‌ ಯೋಜನೆಯಲ್ಲಿ ರೈತರಿಗೆ ಪರಿಹಾರ ನೀಡದೆ ಅವರ ಭೂಮಿಯನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪವನ್ನೂ ಜೆಡಿಎಸ್‌ ನಾಯಕರು ಮಾಡಿದ್ದರು.

ಇದೇ ವೇಳೆ, ನೈಸ್‌ ರಸ್ತೆಯಲ್ಲಿ ಟೋಲ್‌ ಪಾವತಿಸಬಾರದು ಎಂಬ ಕುಮಾರಸ್ವಾಮಿ ಅವರ ಕರೆಗೂ ಪ್ರತಿಕ್ರಿಯಿಸಿರುವ ರಾಜ್ಯ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಕೇಂದ್ರ ಸಚಿವರಾಗಿ ಜನರಿಗೆ ಟೋಲ್‌ ಕಟ್ಟಬೇಡಿ ಎಂದು ಪ್ರಚೋದಿಸುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ. ವಿವಾದಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧ ಮಾರ್ಗದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ನೈಸ್‌ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ, ರೈತರಿಗೆ ಪರಿಹಾರ, ಯೋಜನೆಯ ಒಪ್ಪಂದದ ಷರತ್ತುಗಳು ಹಾಗೂ ಟೋಲ್‌ ಸಂಗ್ರಹದ ವಿಚಾರಗಳು ಹಲವು ವರ್ಷಗಳಿಂದ ವಿವಾದದಲ್ಲಿವೆ. ಇದೀಗ ಜೆಡಿಎಸ್‌ ನಿಯೋಗ ನೇರವಾಗಿ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿರುವುದರಿಂದ ನೈಸ್‌ ಯೋಜನೆಯ ಭವಿಷ್ಯದ ಕುರಿತು ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ ಬಳಿಕ, ಈ ವಿಚಾರವನ್ನು ರಾಜ್ಯಪಾಲರ ಗಮನಕ್ಕೂ ತರಲಾಗುವುದು ಎಂದು ಜೆಡಿಎಸ್‌ ನಿಯೋಗ ತಿಳಿಸಿದೆ.

ಇದನ್ನೂ ನೋಡಿ : SIR ಕರಡು ಪಟ್ಟಿ ಪ್ರಕಟ: ಹೆಚ್ಚಲಿದೆಯೇ ಜನರ ಸಂಕಟ? Janashakthi Media ನೈಸ್‌

Donate Janashakthi Media

Leave a Reply

Your email address will not be published. Required fields are marked *