ಆಳುವ ಪಕ್ಷಕ್ಕೆ ಭಾರೀ ಕಾರ್ಪೊರೇಟ್‌ ದೇಣಿಗೆ ಮತ್ತು ಎಸ್‌ಐಆರ್‌ ನಲ್ಲಿ ಅಪಾರದರ್ಶಕತೆ, ಕೇಂದ್ರೀಕರಣ ಹಾಗೂ ಜವಾಬುದಾರಿಕೆಯ ಪ್ರಶ್ನೆಗಳು

ಟಿಸಿಎಸ್‌ ದೇಣಿಗೆ ಕಾನೂನುಬದ್ಧವಾಗಿದೆ, ತಂತ್ರಾಂಶದ ಕೆಲಸವೂ ಕಾನೂನುಬದ್ಧವಾಗಿದೆ, ಎಸ್‌ಐಆರ್‌ ಕೂಡ ಕಾನೂನುಬದ್ದ ಎನ್ನಲಾಗಿದೆ. ಆದರೆ ಇವೆಲ್ಲ ಒಟ್ಟಾದಾಗ ಪಾರದರ್ಶಕತೆ, ಕೇಂದ್ರೀಕರಣ ಮತ್ತು ಜವಾಬುದಾರಿಕೆಯ ಗಂಭೀರ ಪ್ರಶ್ನೆಗಳು ಏಕೆ ಎದ್ದಿವೆ?. ಕೆಲಸದ ಕಾಂಟ್ರಾಕ್ಟಿನ ಮಾಹಿತಿಯನ್ನು ತಿಳಿಸದಿರುವುದು, ತಂತ್ರಾಂಶದಲ್ಲಿನ ಬದಲಾವಣೆಗಳಿಗೆ ಸ್ವತಃ ಚುನಾವಣಾ ಆಯುಕ್ತರುಗಳ ಆಕ್ಷೇಪಣೆ , ಸ್ಥಳೀಯ ಚುನಾವಣಾ ಅಧಿಕಾರಿಗಳು ಎದುರಿಸಬೇಕಾದ ಸಮಸ್ಯೆಗಳು, ಇವೆಲ್ಲ ಏಕೆ ಎಂಬ ಪ್ರಶ್ನೆಗಳಿಗೂ ಉತ್ತರಗಳು ಬೇಕಾಗಿವೆ.
ಸಂಗ್ರಹ:ಕೆ.ವಿ.

ಚುನಾವಣಾ ಬಾಂಡ್‌ ಸ್ಕೀಮನ್ನು ದೇಶದ ಸರ್ವೋಚ್ಚ ನ್ಯಾಯಾಲಯ ರದ್ದುಮಾಡಿದ ನಂತರವೂ ಬಿಜೆಪಿಗೆ ಬಂಡವಾಳಿಗರಿಂದ ದೇಣಿಗೆ ಕಡಿಮೆಯಾಗಿಲ್ಲ ಎಂಬುದು ಈ ಮೊದಲೇ ವರದಿಯಾಗಿತ್ತು. ೨೦೨೪-೨೫ರಲ್ಲಿ ಅದು ಒಟ್ಟು ೬೦೦೦ ಕೋಟಿ ರೂ. ರಾಜಕೀಯ  ದೇಣಿಗೆಗಳನ್ನು  ಪಡೆದಿದ್ದು, ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಕಾರ್ಪೊರೇಟ್‌ ದೇಣಿಗೆಗಳು, ಬಂಡವಳಿಗರು  ಮತ್ತು ಅವರ ಕಂಪನಿಗಳು ರಚಿಸಿದ  ೯ ಚುನಾವಣಾ ಟ್ರಸ್ಟ್‌ಗಳಿಂದ ಪಡೆದ ದೇಣಿಗೆಗಳ ಮೊತ್ತ ೩೧೫೭ ಕೋಟಿ ರೂ.ಗಳು.  ಇನ್ನೂ ಗಮನಾರ್ಹ ಸಂಗತಿಯೆಂದರೆ, ಒಟ್ಟು  ಕಾರ್ಪೊರೇಟ್‌ ದೇಣಿಗೆಗಳ ಮೊತ್ತ ೩೮೧೧ ಕೋಟಿ ರೂ. ಅಂದರೆ ೮೨ ಶೇ,ದಷ್ಟು ಬಿಜೆಪಿ ಗೇ ದಕ್ಕಿವೆ. ಇವುಗಳಲ್ಲಿ ಹಲವು ಕಾರ್ಪೊರೇಟ್‌ ದೇಣಿಗೆದಾರರು ಸರಕಾರದ ಸಬ್ಸಿಡಿಗಳು, ಕ್ಲಿಯರೆನ್ಸ್‌ಗಳು ಅಂದರೆ ಪ್ರಾಜೆಕ್ಟ್‌ಗಳಿಗೆ ಅನುಮೋದನೆಗಳು ಮತ್ತು ಕಾಂಟ್ರಾಕ್ಟ್‌ಗಳ ಫಲಾನುಭವಿಗಳು ಎಂದು ಮಾಧ್ಯಮಗಳಲ್ಲಿ ಕೆಲವು ತಿಂಗಳ ಹಿಂದೆ ಪ್ರಕಟವಾಗಿತ್ತು.(ಉದಾ: ನೋಡಿ From Tata and MEIL to Vedanta, corporates dominate BJP’s Rs 6,000 crore donations, ದಿ ನ್ಯೂಸ್‌ಮಿನಿಟ್‌, ೨೩ ಡಿಸೆಂಬರ್‌ ೨೦೨೫).

ಇವುಗಳಲ್ಲಿ ಒಂದು ನಿರ್ದಿಷ್ಟ ಚುನಾವಣಾ ಟ್ರಸ್ಟಿನ ದೇಣಿಗೆಗಳು ಈಗ  ಇಡೀ ದೇಶವನ್ನು ಬಡಿದೆಬ್ಬಿಸಿದ ಸಪ್ಟಂಬರ್‌ ೨೩ರಂದು  ʼಇಂಡಿಯನ್‌ ಎಕ್ಸ್‌ಪ್ರೆಸ್‌ʼ ನಲ್ಲಿ ಪ್ರಕಟವಾಗಿರುವ ಚುನಾವಣಾ ಆಯೋಗದ ಕುರಿತ ತನಿಖಾ ವರದಿಯ ನಂತರ ವಿಶೇಷವಾಗಿ ಗಮನ ಸೆಳೆದಿವೆ.

ಪ್ರೊಗ್ರೆಸಿವ್‌ ಇಲೆಕ್ಟೋರಲ್‌ ಟ್ರಸ್ಟ್‌ (ಪಿಇಟಿ ) ೧೫ ಟಾಟಾ ಕಂಪನಿಗಳು ರಚಿಸಿಕೊಂಡಿರುವ ಒಂದು ಚುನಾವಣಾ ಟ್ರಸ್ಟ್‌. ಚುನಾವಣಾ ಆಯೋಗದ ವೆಬ್‌ಸೈಟಿನಲ್ಲಿರುವ ಅಂಕಿ-ಅಂಶಗಳ ಪ್ರಕಾರ, ೨೦೨೪-೨೫ರಲ್ಲಿ ಇದು ಒಟ್ಟು ೯೧೫ ಕೋಟಿ ರೂ.ಗಳನ್ನು ವಿವಿಧ ರಾಜಕೀಯ ಪಕ್ಷಗಳಿಗೆ ಚುನಾವಣಾ ದೇಣಿಗೆಯಾಗಿ ಕೊಟ್ಟಿತ್ತು . ಇದರಲ್ಲಿ ೭೫೭.೬ ಕೋಟಿ ರೂ. ಗಳು ಅಂದರೆ ೮೩ಶೇ.ದಷ್ಟು ಒಂದೆ ಪಕ್ಷಕ್ಕೆ ಸಿಕ್ಕಿದೆ. ಅದು ಬಿಜೆಪಿ ಎಂದು ಬೇರೆ ಹೇಳಬೇಕಾಗಿಲ್ಲ.  ಕಾಂಗ್ರೆಸಿಗೆ ರೂ. ೭೭.೩ ಕೋಟಿ(೮.೪ಶೇ.) ಮತ್ತು ಟಿಎಂಸಿ, ವೈಎಸ್‌ಆರ್‌ಪಿ, ಶಿವಸೇನೆ, ಬಿಜೆಡಿ, ಬಿಆರ್‌ಎಸ್‌, ಎಲ್‌ಜೆಪಿ, ಜೆಡಿ(ಯು) ಮತ್ತು ಡಿಎಂಕೆಗೆ ತಲಾ ೧೦ ಕೋಟಿ ರೂ.(ಎನ್‌ಡಿಟಿವಿ ವರದಿ, ಡಿ.೩. ೨೦೨೫)

ಈ ಪಿಇಟಿ ಬಿಜೆಪಿಗೆ ಕೊಟ್ಟ ೭೫೭.೬ ಕೋಟಿಯಲ್ಲಿ ಬಹುಪಾಲು ಅದರ ದೊಡ್ಡ ಕಂಪನಿಗಳಾದ ಟಾಟಾ ಸನ್ಸ್‌ (೩೦೮ ಕೋಟಿ ) , ಟಿಸಿಎಸ್(‌೨೧೭ ಕೋಟಿ) ಮತ್ತು ಟಾಟಾ ಸ್ಟೀಲ್‌ ( ೧೭೩ ಕೋಟಿ) ನಿಂದ ಬಂದಿದ್ದವು. ಈ ಹಣವನ್ನು ಕೊಟ್ಟದ್ದು ಎಪ್ರಿಲ್‌ ೨, ೨೦೨೪ರಂದು. ಅದರ ಕೆಲವೇ ವಾರಗಳ ಮೊದಲು ಒಕ್ಕೂಟ ಸಂಪುಟ ಟಾಟಾ ಗುಂಪಿನ ಅಸ್ಸಾಂ ಮತ್ತು ಗುಜರಾತಿನಲ್ಲಿರುವ ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳಿಗೆ ೪೪,೦೦೦ ಕೋಟಿ ರೂ.ಗಳ ಸಬ್ಸಿಡಿಗಳನ್ನು ಮಂಜೂರು ಮಾಡಿತ್ತು ಎಂದೂ ವರದಿಯಾಗಿತ್ತು( ದಿ ವೈರ್‌ಇನ್‌ , ಡಿಸೆಂಬರ್‌ ೩, ೨೦೨೫).

ಈಗ ʼಇಂಡಿಯನ್‌ ಎಕ್ಸ್‌ಪ್ರೆಸ್‌ʼ ತನಿಖಾ ವರದಿಯ ಹಿನ್ನೆಲೆಯಲ್ಲಿ ಗಮನ ಸೆಳೆದಿರುವ ಕಂಪನಿ  ೨೦೨೪-೨೫ರಲ್ಲಿ , ಆಳುವ ಪಕ್ಷಕ್ಕೆ ೨೦೨೪ ರ ಸಾರ್ವತ್ರಿಕ ಚುನಾವಣಾ ಸಮಯದಲ್ಲಿ ೨೧೭.೬ ಕೋಟಿ ರೂ.ಗಳ ದೇಣಿಗೆ ನೀಡಿದ ಟಿಸಿಎಸ್.‌

ಭಾರತದ ಮತದಾರರ ಪಟ್ಟಿಯನ್ನು ನಿರ್ವಹಿಸುವ  ತಂತ್ರಾಂಶ ಸಂರಚನೆ ERONet 2.0 (ಇಆರ್‌ಒನೆಟ್‌ ) ತಾನೇ ಅಭಿವೃದ್ಧಿ ಪಡಿಸಿದ್ದು ಎಂದು ಟಿಸಿಎಸ್‌ ಹೇಳಿಕೊಂಡಿದೆ.  ಇದು ಈಗ ECINet ನ ಭಾಗವಾಗಿದೆ. ಇದು ಇಡೀ ದೇಶದ ಮತದಾರ ಪಟ್ಟಿಗಳನ್ನು ಒಂದೇ ಸ್ಥಳದಿಂದ ನಿರ್ವಹಿಸುತ್ತದೆ. ಈ ಕಾಂಟ್ರಾಕ್ಟಿನ ವಿವರಗಳು, ಟೆಂಡರ್‌ ಅಥವ ಆಡಿಟ್‌ (ಪರೀಕ್ಷಣಾ) ವರದಿ ಸಾರ್ವಜನಿಕವಾಗಿ ಲಭ್ಯವಿಲ್ಲ. ಚುನಾವಣಾ ಆಯೋಗ ಅದನ್ನು ಸಾರ್ವಜನಿಕರಿಗೆ ತಿಳಿಸಿಲ್ಲ. ಇಆರ್‌ಒನೆಟ್‌  ಸಂಬಂಧಪಟ್ಟಂತೆ ಚುನಾವಣಾ ಅಯುಕ್ತರುಗಳು  ಗಂಭೀರ ಟಿಪ್ಪಣಿಗಳನ್ನು ಮಾಡಿದ್ದಾರೆ ಎಂಬುದು ಇಂಡಿಯನ್‌ ಎಕ್ಸ್‌ಪ್ರೆಸ್‌ ತನಿಖಾ ವರದಿಯಿಂದ ಬೆಳಕಿಗೆ ಬಂದಿದೆ.

ಈ ಡಿಜಿಟಲ್‌ ವ್ಯವಸ್ಥೆಯಲ್ಲಿ ಹೊಸ ಮತದಾರರನ್ನು ಸೇರಿಸುವ ನಮೂನೆ೬ರಲ್ಲಿ ಒಂದು ಹೊಸ ಘೋಷಣೆಯನ್ನು ಸೇರಿಸಲಾಯಿತು- ಎಸ್‌ಐಆರ್‌ ಪ್ರಕ್ರಿಯೆಯ ಭಾಗವಾಗಿ. ಮತದಾರರ ನೋಂದಣಿ ನಿಯಮಗಳ ಪ್ರಕಾರ  ಅದನ್ನು ತಿದ್ದುಪಡಿ ಮಾಡದೆ ಹೀಗೆ ಸೇರಿಸುವಂತಿಲ್ಲ. ಇದನ್ನು ತಿದ್ದುಪಡಿ ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ. ಆದ್ದರಿಂದ ಇದಕ್ಕೆ ಒಬ್ಬ ಚುನಾವಣಾ ಆಯುಕ್ತರು ಲಿಖಿತವಾಗಿ ಆಕ್ಷೇಪಿಸಿದ್ದರು, ಇದು ಅನಧಿಕೃತ, ಕಾನೂನುಬಾಹಿರ ಎಂದೂ ಹೇಳಿದ್ದರು ಎಂದು ʼಇಂಡಿಯನ್‌ ಎಕ್ಸ್‌ಪ್ರೆಸ್‌ʼ ತನಿಖಾ ವರದಿ ಹೇಳುತ್ತದೆ.  ಆದರೂ ಇದನ್ನು ಆನ್‌ಲೈನ್‌ನಲ್ಲಿ ಸೇರಿಸಲಾಯಿತು. ಈಗ ಈ ಬದಲಾವಣೆಯನ್ನು ಎಸ್‌ಐಆರ್ ಇಲ್ಲದ ರಾಜ್ಯಗಳಲ್ಲಿ ಹಿಂತೆಗೆದುಕೊಳ್ಳಲಾಗಿದೆ ಎಂಬುದೇ ಈ ಘೋಷಣೆಯನ್ನು ಸೇರಿಸಿರುವುದು ತಪ್ಪು ಕ್ರಮ ಎಂಬುದನ್ನು ಆಯೋಗವೇ ಒಪ್ಪಿಕೊಂಡಂತಾಗಿದೆ. ಟಿಸಿಎಸ್‌ಗೆ ಇದು ತಿಳಿದಿರಲಿಲ್ಲವೇ, ಅಥವ ತಿಳಿದೂ ಮಾಡಿದೆಯೇ. ಹೀಗೆ ಮಾಡಿ ಎಂದು ಅವರಿಗೆ ಹೇಳಿದವರು ಯಾರು ಎಂಬಿತ್ಯಾದಿ ಪ್ರಶ್ನೆಗಳು ಈಗ ಎದ್ದಿವೆ.

ಎರಡನೆಯದಾಗಿ, ಮತದಾರರ ನೋಂದಣಿ ಕಾಯ್ದೆಯ ಪ್ರಕಾರ ಮತದಾರರನ್ನು ಸೇರಿಸುವ ಅಥವ ಕೈಬಿಡುವ ನಿರ್ಧಾರವನ್ನು ಮಾಡಬೇಕಾದವರು ಇಆರ್‌ಒ ಗಳು ಅಂದರೆ ಚುನಾವಣಾ ನೋಂದಾವಣಿ ಅಧಿಕಾರಿಗಳು. ಆದರೆ ಈ ಇಆರ್‌ಒನೆಟ್‌ ೨.೦ ಅವರಿಗೇ ಇದರಲ್ಲಿ ಅವಕಾಶ ನಿರಾಕರಿಸುತ್ತದೆ. ಮತದಾರ ಪಟ್ಟಿಗಳ ಹೆಚ್ಚೆಚ್ಚು ಕೇಂದ್ರೀಕರಣ ಇಬ್ಬರು ಚುನಾವಣಾ ಆಯುಕ್ತರುಗಳ ಆಕ್ಷೇಪಣೆಗೆ ಗುರಿಯಾಗಿರುವ ಇನ್ನೊಂದು ಮುಖ್ಯ ಸಂಗತಿ ಎಂಬುದನ್ನು ಕೂಡ ಇಂಡಿಯನ್‌ ಎಕ್ಸ್‌ಪ್ರೆಸ್‌ ತನಿಖಾ ವರದಿ ಬಹಿರಂಗಕ್ಕೆ  ತಂದಿದೆ.

ಗೋವಾದಲ್ಲಿ ೯೭ ಮತದಾರರ ಸೇರ್ಪಡೆ ಮಾಡಬೇಕೆಂದು ಸಂಬಂಧಪಟ್ಟ ಚುನಾವಣಾ ಅಧಿಕಾರಿ ನಿರ್ಧರಿಸಿದರೂ ಅದನ್ನು ಕಾರ್ಯಗತಗೊಳಿಸಲು ಟಿಸಿಎಸ್‌ ನಿರ್ವಹಿಸುವ ಈ ಇಆರ್‌ಒನೆಟ್‌ ಬಿಡಲಿಲ್ಲ. ಈ ಬಗ್ಗೆ ಗೋವಾದ ಚುನಾವಣಾ ಅಧಿಕಾರಿಗಳು ಹಲವು ಬಾರಿ ಆಯೋಗದ ಮುಖ್ಯ ಕಚೇರಿಯನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ ಎಂದು ವರದಿಯಾಗಿದೆ. ಕೊನೆಗೂ ಅವರ ಹೆಸರುಗಳು ಬಿಟ್ಟು ಹೋದವು.

ಇದಲ್ಲದೆ, ಈಗ ವ್ಯಾಪಕಗೊಳ್ಳುತ್ತಿರುವ ನಮೂನೆ ೭ರ ಬಗೆಗಿನ ಆಕ್ಷೇಪ. ಮತದಾರರ  ಪಟ್ಟಿಯಲ್ಲಿ ಅನರ್ಹರು ಎಂದು ತಾನು ಭಾವಿಸಿದ ವ್ಯಕ್ತಿಯ ಹೆಸರನ್ನು ಸೇರಿಸಿರುವ ಬಗ್ಗೆ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ನೀಡುವ ಈ ಫಾರ್ಮನ್ನು ಆಳುವ ಪಕ್ಷ ಅಲ್ಪಸಂಖ್ಯಾತರು ಮತ್ತು ಇತರ ತಮಗೆ ಅನುಕೂಲಕರರಲ್ಲದ ಮತದಾರರ ಹೆಸರನ್ನು ತೆಗೆಸುವಂತೆ ಮಾಡಲು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ದೂರು  ಈಗ ವ್ಯಾಪಕಗೊಳ್ಳುತ್ತಿದೆ. ಈ ದೂರನ್ನು ಸಂಬಂಧಪಟ್ಟ ಕ್ಷೇತ್ರದ ಬಿಎಲ್‌ಒ ಅಥವ ಬಿಎಲ್‌ಎ ಕೂಡ ಸಲ್ಲಿಸಬಹುದು, ಆದರೆ ಒಂದು ದಿನದಲ್ಲಿ ಅವರು  ಸಲ್ಲಿಸಬಹುದಾದ   ಫಾರ್ಮ್‌ ಗಳಿಗೆ   ಗರಿಷ್ಟ ಮಿತಿ ಇದೆ.  ಟಿಸಿಎಸ್‌ ರೂಪಿಸಿರುವ ತಂತ್ರಾಂಶ ಇದನ್ನು ಪರಿಗಣನೆಗೆ ತಗೊಳ್ಳುತ್ತಿಲ್ಲ ಮತ್ತು ಈ ಅಂಶವನ್ನು ಆಳುವ ಪಕ್ಷ ತನ್ನ ಕಾರ್ಯಕರ್ತರುಗಳ ಮೂಲಕ, ಹಲವು ಸಂದರ್ಭಗಳಲ್ಲಿ ಅವರ ಗಮನಕ್ಕೂ ಬರದೆ,  ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ದೂರು ಕೂಡ ಕೇಳಬರುತ್ತಿದೆ.

ಒಟ್ಟಿನಲ್ಲಿ, ಆಳುವ ಪಕ್ಷಕ್ಕೆ ಅಪಾರ ಹಣವನ್ನು ದೇಣಿಗೆಯಾಗಿ ಕೊಟ್ಟಿರುವ ಒಂದು ಕಂಪನಿ ಇಂತಹ ತಂತ್ರಾಂಶ ವ್ಯವಸ್ಥೆಯನ್ನು ನಡೆಸುತ್ತಿದೆ. ಈ ತಂತ್ರಾಂಶ ಕಾನೂನುಬಾಹಿರ ಬದಲಾವಣೆಯನ್ನು ಮಾಡಿದೆ. ಸ್ಥಳೀಯ ಅಧಿಕಾರಿಗಳ ಅಧಿಕಾರಗಳನ್ನು ಸೀಮಿತಗೊಳಿಸಿದೆ ಮತ್ತು ಲಕ್ಷಾಂತರ ಜನರ ಮತದಾನದ ಹಕ್ಕನ್ನು ಬಾಧಿಸಿದೆ ಎಂಬುದೀಗ ಕೈಬಿಟ್ಟ ಮತದಾರರನ್ನು ಮತ್ತೆ ಸೇರಿಸುವ ಅಭಿಯಾನಕ್ಕೆ ಚುನಾವಣಾ ಆಯೋಗವೇ ಮುಂದಾಗಿರುವುದು ಸೂಚಿಸುತ್ತಿದೆ.

ನಿಜ ಟಿಸಿಎಸ್‌ ದೇಣಿಗೆ ಕಾನೂನುಬದ್ಧವಾಗಿದೆ, ತಂತ್ರಾಂಶದ ಕೆಲಸವೂ ಕಾನೂನುಬದ್ಧವಾಗಿದೆ, ಎಸ್‌ಐಆರ್‌ ಕೂಡ ಕಾನೂನುಬದ್ದ ಎನ್ನಲಾಗಿದೆ. ಆದರೆ ಇವೆಲ್ಲ ಒಟ್ಟಾದಾಗ ಪಾರದರ್ಶಕತೆ, ಕೇಂದ್ರೀಕರಣ ಮತ್ತು ಜವಾಬುದಾರಿಕೆಯ ಗಂಭೀರ ಪ್ರಶ್ನೆಗಳು ಏಕೆ ಎದ್ದಿವೆ ಎಂದು ರಾಜಕೀಯ ವೀಕ್ಷಕರು ಕೇಳುತ್ತಿದ್ದಾರೆ. ಟಿಸಿಎಸ್‌ನ  ಕೆಲಸದ ಕಾಂಟ್ರಾಕ್ಟಿನ ಮಾಹಿತಿಯನ್ನು ತಿಳಿಸದಿರುವುದು, ತಂತ್ರಾಂಶದಲ್ಲಿನ ಬದಲಾವಣೆಗಳಿಗೆ ಸ್ವತಃ ಚುನಾವಣಾ ಆಯುಕ್ತರುಗಳ ಆಕ್ಷೇಪಣೆ , ಸ್ಥಳೀಯ ಚುನಾವಣಾ ಅಧಿಕಾರಿಗಳು ಎದುರಿಸಬೇಕಾದ ಸಮಸ್ಯೆಗಳು, ಇವೆಲ್ಲ ಏಕೆ ಎಂಬ ಪ್ರಶ್ನೆಗಳಿಗೂ ಉತ್ತರಗಳು ಬೇಕಾಗಿವೆ.

Donate Janashakthi Media

Leave a Reply

Your email address will not be published. Required fields are marked *