ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಎಡಪಕ್ಷಗಳು ತಮ್ಮ ಜೊತೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ಬಿಜೆಪಿ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನಾತ್ಮಕ ವ್ಯವಸ್ಥೆಗಳಿಗೆ ಅಪಾಯ ಉಂಟುಮಾಡುತ್ತಿದೆ ಎಂದು ಆರೋಪಿಸಿದ ಅವರು, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಬೇಕಾಗಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಮೊದಲ ಬಾರಿಗೆ ಸರ್ಕಾರ ರಚಿಸಿರುವ ಹಿನ್ನೆಲೆ ಈ ರಾಜಕೀಯ ಬೆಳವಣಿಗೆ ನಡೆದಿದೆ. ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿರುವ ಮಮತಾ ಬ್ಯಾನರ್ಜಿ, “ಬಿಜೆಪಿಯ ವಿರುದ್ಧ ವ್ಯಾಪಕ ಜನಾಂದೋಲನ ಅಗತ್ಯವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಮುರಶಿದಾಬಾದ್ನಲ್ಲಿ ಧ್ವಂಸಗೊಂಡ ಲೆನಿನ್ ಪ್ರತಿಮೆ ಮರುಸ್ಥಾಪನೆ
ಎಡಪಕ್ಷಗಳು ಮತ್ತು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪ್ರತ್ಯೇಕವಾಗಿ ಹೋರಾಡಿದರೆ ಬಿಜೆಪಿಗೆ ಲಾಭವಾಗುತ್ತದೆ. ಆದ್ದರಿಂದ ಪ್ರಜಾಪ್ರಭುತ್ವ ಮತ್ತು ಧರ್ಮನಿರಪೇಕ್ಷತೆಯನ್ನು ಉಳಿಸಬೇಕಾದರೆ ಒಗ್ಗಟ್ಟು ಅಗತ್ಯ ಎಂದು ಮಮತಾ ಹೇಳಿದ್ದಾರೆ ಎಂದು ವರದಿಯಾಗಿದೆ.
ಆದರೆ ಸಿಪಿಐ(ಎಂ) ನಾಯಕತ್ವ ಮಮತಾ ಬ್ಯಾನರ್ಜಿ ಅವರ ಮನವಿಗೆ ತಕ್ಷಣ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ. ತೃಣಮೂಲ ಕಾಂಗ್ರೆಸ್ ಆಡಳಿತದ ವಿರುದ್ಧ ಜನರಲ್ಲಿ ಉಂಟಾದ ಅಸಮಾಧಾನವೇ ಬಿಜೆಪಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಎಡಪಕ್ಷ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಗೆಲುವಿನ ಬಳಿಕ ಪ್ರತಿಪಕ್ಷಗಳ ಮುಂದಿನ ರಾಜಕೀಯ ನಡೆ ಹೇಗಿರಲಿದೆ ಎಂಬುದು ದೇಶದ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ವಿಡಿಯೋ ನೋಡಿ : ಚುನಾವಣಾ ಫಲಿತಾಂಶ : ಹೆಚ್ಚಾದ ಹಿಂಸಾಚಾರ Janashakthi Media
