20 ವರ್ಷಗಳಿಂದ ಸಂಕಷ್ಟ: ದಲಿತ ಕುಟುಂಬಗಳಿಗೆ ಹಕ್ಕುಪತ್ರ ಬೇಡಿಕೆ
ಬೆಂಗಳೂರು: ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಪೆಗೌಡ ಲೇವೇಟ್ ದೊಡ್ಡನಾಗಮಂಗಲದ ಮುತ್ತಪ್ಪ ಕಾವಲು ಸರ್ಕಾರಿ ಜಾಗದಲ್ಲಿ ಕಳೆದ ಸುಮಾರು ಎರಡು ದಶಕಗಳಿಂದ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬಡ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಕರ್ನಾಟಕ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಡಾ. ಭೀಮಪುತ್ರಿ ನಾಗಮ್ಮ ಒತ್ತಾಯಿಸಿದ್ದಾರೆ. ಸರ್ಕಾರಿ
ಕರ್ನಾಟಕ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.) ವತಿಯಿಂದ ಈ ಕುರಿತು ಮನವಿ ಸಲ್ಲಿಸಲಾಗಿದ್ದು, 2006ರಿಂದ ಇಲ್ಲಿ ವಾಸಿಸುತ್ತಿರುವ ನೂರಾರು ಕುಟುಂಬಗಳು ಇನ್ನೂ ಮೂಲಭೂತ ಸೌಲಭ್ಯಗಳಿಲ್ಲದೆ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ ಎಂದರು. ಸರ್ಕಾರಿ
ಈ ಪ್ರದೇಶದಲ್ಲಿ ಅಸಂಘಟಿತ ಕೂಲಿ ಕಾರ್ಮಿಕರು, ವಿಧವೆಯರು, ವೃದ್ಧರು, ದಿವ್ಯಾಂಗರು ಸೇರಿದಂತೆ ಅತ್ಯಂತ ಹಿಂದುಳಿದ ವರ್ಗದ ಜನರು ಆಶ್ರಯಕ್ಕಾಗಿ ನೆಲೆಸಿದ್ದಾರೆ. ಭೂಗಳ್ಳರ ಮೋಸದ ಮಾತುಗಳನ್ನು ನಂಬಿ ತಮ್ಮ ಉಳಿತಾಯದ ಹಣ ನೀಡಿ ಜಾಗ ಖರೀದಿಸಿದ್ದೇವೆ ಎಂದು ಭಾವಿಸಿದ್ದರೂ, ಬಳಿಕ ಇದು ಸರ್ಕಾರಿ ಜಾಗ ಎಂದು ತಿಳಿದು ಅನೇಕರು ಮೋಸಕ್ಕೊಳಗಾಗಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಕಸ: ಬಾಂಬೆ ಹೈಕೋರ್ಟ್ ಕಿಡಿ
ಕಂದಾಯ ಇಲಾಖೆಯ ಅಧಿಕಾರಿಗಳು ಪದೇ ಪದೇ ತೆರವು ನೋಟಿಸ್ ನೀಡುತ್ತಿರುವುದು ಹಾಗೂ ವಿವಿಧ ರೀತಿಯ ಕಿರುಕುಳ ನೀಡುತ್ತಿರುವುದರಿಂದ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆಯಾದಾಗಲೆಲ್ಲ ಸಮಸ್ಯೆಗಳು ಮರುಕಳಿಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
2018–19ರಲ್ಲಿ ಯಾವುದೇ ಶಾಶ್ವತ ಪುನರ್ವಸತಿ ವ್ಯವಸ್ಥೆ ಇಲ್ಲದೆ ಅನೇಕ ಮನೆಗಳನ್ನು ತೆರವುಗೊಳಿಸಲಾಗಿತ್ತು. ಈ ವೇಳೆ ದಲಿತ ಸಂಘಟನೆಗಳು ಮತ್ತು ಸಾಮಾಜಿಕ ಹೋರಾಟಗಾರರು ನಡೆಸಿದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸರ್ಕಾರವು ವಿಷಯವನ್ನು ಪರಿಗಣಿಸಿತ್ತು ಎಂದು ಹೇಳಿದರು.
ಅದಾದ ಬಳಿಕ ಕರ್ನಾಟಕ ಭೂ ಕಂದಾಯ ಕಾಯ್ದೆಯ 94ಸಿ ಯೋಜನೆಯಡಿ ಸುಮಾರು 150 ಕುಟುಂಬಗಳ ಅರ್ಜಿಗಳನ್ನು ದಾಖಲಿಸಲಾಗಿದ್ದು, ಸುಮಾರು 20 ಪ್ರಕರಣಗಳ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಆದಾಗ್ಯೂ, ಉಳಿದ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿರುವುದರಿಂದ ಸಮಸ್ಯೆ ಇನ್ನೂ ಬಗೆಹರಿಯಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ಈ ಪ್ರದೇಶದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಮುಂದುವರಿದಿದೆ.
ಸಂಘಟನೆ ಮನವಿಯಲ್ಲಿ ಎಲ್ಲಾ ಕುಟುಂಬಗಳ ಸಮಗ್ರ ಸಮೀಕ್ಷೆ ನಡೆಸುವುದು, ಅರ್ಹರಿಗೆ 94ಸಿ ಯೋಜನೆಯಡಿ ಹಕ್ಕುಪತ್ರ ನೀಡುವುದು, ಉಳಿದವರಿಗೆ ಪುನರ್ವಸತಿ ಕಲ್ಪಿಸುವುದು ಹಾಗೂ ಯಾವುದೇ ಕುಟುಂಬವನ್ನು ಪರ್ಯಾಯ ವ್ಯವಸ್ಥೆ ಇಲ್ಲದೆ ತೆರವುಗೊಳಿಸಬಾರದು ಎಂದು ಒತ್ತಾಯಿಸಲಾಗಿದೆ. ಜೊತೆಗೆ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸುವಂತೆ ಆಗ್ರಹಿಸಿದರು.
ಮನವಿಗೆ ಸ್ಪಂದಿಸದಿದ್ದಲ್ಲಿ ಕಾನೂನುಬದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದದರು.
ಇದನ್ನೂ ನೋಡಿ: ಕಥೆ ಮೊಗಳ್ಳಿ ಗಣೇಶ್ ಅವರನ್ನು ಬೆಳೆಸಿತು; ಮೊಗಳ್ಳಿ ಗಣೇಶ್ ಕೂಡ ಕಥೆಯನ್ನು ಬೆಳೆಸಿದರು – ಪ್ರೊ.ನಟರಾಜ್ ಹುಳಿಯಾರ್
