ನವದೆಹಲಿ: ಎರಡು ರಾಜ್ಯಗಳಲಿ ವಿಧಾನಸಭಾ ಚುನಾವಣೆಗಳಿಗೆ ಪ್ರಚಾರ ಕಾರ್ಯ ನಡೆಯುತ್ತಿರುವ ನಡುವೆಯೇ ಕರೆದ ವಿಶೇಷ ಸಂಸತ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಸೋಲಿನ ನಂತರ ಪ್ರಧಾನ ಮಂತ್ರಿಗಳು ಅದರ ಬಗ್ಗೆಯೇ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿರುವುದನ್ನು ಎಡಪಕ್ಷಗಳ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ, ಇದು ಸಂಸತ್ತಿನಲ್ಲಾದ ಪ್ರಮುಖ ಹಿನ್ನಡೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಮತ್ತು ಚುನಾವಣಾ ಅವಧಿಯಲ್ಲಿ ಚುನಾವಣಾ ವಿಧಿ-ವಿಧಾನಗಳ ಉಲ್ಲಂಘನೆ ಎಂದು ಅವರು ಕರೆದಿದ್ದಾರೆ. ಲೋಕಸಭೆ
ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ಕಾರಣದಿಂದಾಗಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವ ಸಮಯದಲ್ಲಿ ಪ್ರಧಾನಿ ಸಾರ್ವಜನಿಕ ಪ್ರಸಾರ ಸಂಸ್ಥೆ ದೂರದರ್ಶನವನ್ನು ರಾಜಕೀಯ ಭಾಷಣ ಮಾಡಲು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಿಪಿಐ(ಎಂ) ಔಪಚಾರಿಕವಾಗಿ ಭಾರತದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಪ್ರಧಾನಿಗಳ ಏಪ್ರಿಲ್ 18 ರ ದೂರದರ್ಶನ ಭಾಷಣದ ವಿಷಯ, ಧ್ವನಿ ಮತ್ತು ಸಂದೇಶ ನೀಡಿಕೆಯನ್ನು ಯಾವುದೇ ರೀತಿಯಲ್ಲಿ ಕಲ್ಪಿಸಿಕೊಂಡರೂ, ಸರ್ಕಾರಿ ಸಂವಹನ ಎಂದು ಕರೆಯಲಾಗುವುದಿಲ್ಲ. ಇದು ವಿಪಕ್ಷಗಳನ್ನು ಗುರಿಯಾಗಿಸಿಕೊಂಡ – ಅವುಗಳಲ್ಲಿ ಹಲವನ್ನು ಹೆಸರಿಸಿರುವ – ಮತ್ತು ಆಳುವ ಪಕ್ಷದ ಪರವಾಗಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮತದಾರರು ಸೇರಿದಂತೆ ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸಲು ಪ್ರಯತ್ನಿಸಿರುವ ಎದ್ದು ಕಾಣುವ ರಾಜಕೀಯ ಎಂದು ಪಕ್ಷವು ತನ್ನ ದೂರಿನಲ್ಲಿ ತಿಳಿಸಿದೆ. ಲೋಕಸಭೆ
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ ಈ ಕುರಿತು ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದ ಪತ್ರದಲ್ಲಿ ಎಂಸಿಸಿ ಯ ಈ “ಎದ್ದು ಕಾಣುವ ಉಲ್ಲಂಘನೆ”ಯನ್ನು ಪರಿಗಣನೆಗೆ ತಗೊಳ್ಳಬೇಕು, ಏಕೆಂದರೆ “ಒಂದು ಸಾರ್ವಜನಿಕ ಪ್ರಸಾರ ವ್ಯವಸ್ಥೆಯನ್ನು ಚುನಾವಣೆಯ ಸಮಯದಲ್ಲಿ ರಾಜಕೀಯ ಸಂದೇಶ ಕಳುಹಿಸುವ ವೇದಿಕೆಯಾಗಿ ಬಳಸುವುದು… ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳ ತತ್ವವನ್ನು ದುರ್ಬಲಗೊಳಿಸುತ್ತದೆ” ಎಂದು ಹೇಳಿದ್ದಾರೆ.
ಇದೇ ರೀತಿಯ ಕಳವಳಗಳನ್ನು ಸಿಪಿಐ ರಾಜ್ಯಸಭಾ ನಾಯಕ ಪಿ. ಸಂದೋಷ್ ಕುಮಾರ್ ಕೂಡ ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿಯವರ ಭಾಷಣವು ವಸ್ತುನಿಷ್ಠವಾಗಿ ಯಾವುದೇ ರೀತಿಯಲ್ಲಿ ನೋಡಿದರೂ, ರಾಜಕೀಯ ಸ್ವರೂಪದ್ದಾಗಿದೆ ಎಂದು ಅವರು ಹೇಳಿದ್ದಾರೆ. ” ರಾಜಕೀಯ ಭಾಷಣವನ್ನು ಪ್ರಸಾರ ಮಾಡಲು ಪ್ರಭುತ್ವದ ಸಂಪನ್ಮೂಲಗಳು ಮತ್ತು ಸಾರ್ವಜನಿಕ ಹಣ ಪಡೆವ ವೇದಿಕೆಗಳನ್ನು ಬಳಸುವುದು ಚುನಾವಣಾ ವಿಧಿ-ವಿಧಾನಗಳ ಗಂಭೀರ ಉಲ್ಲಂಘನೆಯಾಗಿದೆ” ಎಂದು ಅವರು ಎಚ್ಚರಿಸಿದ್ದಾರೆ. ಚುನಾವಣಾ ಆಯೋಗವು ಸಮಾನ ಅವಕಾಶಗಳನ್ನು ಒದಗಿಸಲು ಸಾಂವಿಧಾನಿಕವಾಗಿ ಬದ್ಧವಾಗಿದೆ, ಇಂತಹ ಕ್ರಿಯೆಗಳು ಅದನ್ನು ಬುಡಮೇಲು ಮಾಡುತ್ತವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಕಲ್ಲಿದ್ದಲು ಲೆವಿ ಹಗರಣ: ಐಎಎಸ್ ಅಧಿಕಾರಿಯ 4 ಕೋಟಿ ಮೌಲ್ಯದ ಆಸ್ತಿ ಜಪ್ತಿ
ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಪ್ರಸ್ತಾವನೆಯನ್ನು ಮುಂದಿಟ್ಟು, ಅದರ ಅನುಷ್ಠಾನವನ್ನು ಕ್ಷೇತ್ರ ಮರುವಿಂಗಡಣೆ ಮತ್ತು ಒಂದು ಭವಿಷ್ಯದ ಜನಗಣತಿಯೊಂದಿಗೆ ತಳುಕು ಹಾಕುವ ವಿವಾದಾತ್ಮಕ ಮಸೂದೆಯನ್ನು ಸುಮಾರು 22 ಗಂಟೆಗಳ ಚರ್ಚೆಯ ನಂತರ ತಿರಸ್ಕರಿಸಲಾಯಿತು. ಮಸೂದೆಯ ಮೇಲಿನ ಮತದಾನದಲ್ಲಿ ಭಾಗವಹಿಸಿದ 528 ಸದಸ್ಯರಲ್ಲಿ 298 ಮಂದಿ ಪರವಾಗಿ ಮತ್ತು 230 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು, ಆದರೆ ಒಂದು ತಿದ್ದುಪಡಿ ಮಸೂದೆಗೆ ಬೇಕಾದ ೨/೩ ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಗಮನಾರ್ಹ ಹೊಡೆತ ಬಿದ್ದಿದೆ. ಲೋಕಸಭೆ
ಸೋಲಿನ ನಂತರ ದೂರದರ್ಶನದಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ, ವಿರೋಧ ಪಕ್ಷಗಳು “ಸುಳ್ಳಿನ ಕಂತೆಗಳು” ಮತ್ತು ರಾಜಕೀಯ ಪಿತೂರಿಯ ಮೂಲಕ ಮಹಿಳಾ ಮೀಸಲಾತಿಗೆ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿದರು. ವಿಪಕ್ಷದ ನಾಯಕರು ಈ ಆರೋಪವನ್ನು ತಿರಸ್ಕರಿಸಿದ್ದಾರೆ. ಸರ್ಕಾರವು ಉದ್ದೇಶಪೂರ್ವಕವಾಗಿ ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಗೆ ಕಟ್ಟಿಹಾಕಿದೆ, ಇದು ಸಂಸದೀಯ ಪ್ರಾತಿನಿಧ್ಯದ ಸಮತೋಲನವನ್ನು ಬದಲಾಯಿಸಬಹುದು, ವಿಶೇಷವಾಗಿ ದಕ್ಷಿಣ ರಾಜ್ಯಗಳಿಗೆ ಹಾನಿಯಾಗುತ್ತದೆ ಎಂದು ವಾದಿಸಿದರು. ಲೋಕಸಭೆ
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂಎ ಬೇಬಿ ಪ್ರಧಾನಿಯವರ ಭಾಷಣವು ಅಬ್ಬರದ ಮಾತುಗಳಿಂದ ಮುಖ ಉಳಿಸಿಕೊಳ್ಳುವ ಪ್ರಯತ್ನ ಎಂದು ಹೇಳಿದ್ದಾರೆ. ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆ ಅಥವಾ ಜನಗಣತಿ ಪ್ರಕ್ರಿಯೆಗಳಿಗೆ ತಳುಕು ಹಾಕದೆಯೇ ತಕ್ಷಣವೇ ಜಾರಿಗೆ ತರಬಹುದು ಎಂದು ಹೇಳಿದ್ದಾರೆ ಮತ್ತು ಸರ್ಕಾರವು ಈ ವಿಷಯವನ್ನು ಒಂದು “ವಂಚಕ ರಾಜಕೀಯ ತಂತ್ರ”ದ ಭಾಗವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
ಸಿಪಿಐ ಕೇರಳ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಕೂಡ ಪ್ರಧಾನಿಯನ್ನು ಟೀಕಿಸುತ್ತ, ಮಸೂದೆಯ ಸೋಲಿಗೆ ಅಲ್ಲ, ಬದಲಾಗಿ 2023 ರಲ್ಲಿ ಅಂಗೀಕರಿಸಲಾದ ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೆ ತರಲು ವಿಫಲವಾಗಿದ್ದಕ್ಕಾಗಿ ಅವರು ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಮಹಿಳೆಯರನ್ನು ಸಮಾನ ನಾಗರಿಕರ ಬದಲು ರಾಜಕೀಯ ಸಾಧನಗಳಾಗಿ ಪರಿಗಣಿಸುತ್ತಿದೆ , ಸತತವಾಗಿ ಹೊರಗಿಡುವ ಮತ್ತು ತಾರತಮ್ಯದ ವಿಧಾನ ಕಂಡು ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಸಿಪಿಐ(ಎಂ) ರಾಜ್ಯಸಭಾ ಪಕ್ಷದ ನಾಯಕ ಜಾನ್ ಬ್ರಿಟ್ಟಾಸ್ ಪ್ರಧಾನಿಯವರದ್ದು “ಘನತೆಯಿಲ್ಲದ” ಅಭೂತಪೂರ್ವ ಭಾಷಣ ಎಂದು ಕರೆಯುತ್ತ, ವಿಪಕ್ಷಗಳ ವಿರುದ್ಧ ರಾಜಕೀಯ ಆರೋಪಗಳನ್ನು ಮಾಡಲು ಒಂದು ರಾಷ್ಟ್ರೀಯ ಭಾಷಣವನ್ನು ಬಳಸಿರುವುದು ಇದೇ ಮೊದಲು ಎಂದು ಟೀಕಿಸಿದರು. ಸಂಸತ್ತಿನೊಳಗೆ ಪ್ರತಿಕ್ರಿಯಿಸಲು ಮೋದಿ ಅವರಿಗೆ ಅವಕಾಶವಿತ್ತು, ಅದರ ಬದಲಾಗಿ ರಾಷ್ಟ್ರೀಯ ವೇದಿಕೆಯನ್ನು ಬಳಸುವ ಸೂಕ್ತವಲ್ಲದ ದಾರಿಯನ್ನು ಆಯ್ಕೆ ಮಾಡಿಕೊಂಡರು ಎಂದು ಅವರು ಬಣ್ಣಿಸಿದ್ದಾರೆ.
ಪ್ರಧಾನ ಮಂತ್ರಿಯವರ ಹೇಳಿಕೆಗಳು ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಂತಹ ರಾಜ್ಯಗಳನ್ನು ನಿರ್ದಿಷ್ಟವಾಗಿ ಗುರಿಯಾಗಿರಿಸಿಕೊಂಡಿರುವುದು ಈ ಮಸೂದೆಯ ಬಗ್ಗೆ ಸರ್ಕಾರದ ವಿಧಾನವು ಮಹಿಳಾ ಸಬಲೀಕರಣಕ್ಕೆ ನಿಜವಾದ ಬದ್ಧತೆಯ ಬದಲಾಗಿ ಚುನಾವಣಾ ಪರಿಗಣನೆಗಳಿಂದ ಚಾಲಿತವಾಗಿದೆ ಎಂದು ಸೂಚಿಸುತ್ತದೆ ಎಂದು ಬ್ರಿಟ್ಟಾಸ್ ಹೇಳಿದ್ದಾರೆ.
ಈ ಮಸೂದೆಯನ್ನು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕ್ಷೇತ್ರಮರುವಿಂಗಡಣೆ ಮತ್ತು ಕೇಂದ್ರಾಡಳಿತ ಪ್ರದೇಶ ಕಾನೂನು ತಿದ್ದುಪಡಿ ಮಸೂದೆಯೊಂದಿಗೆ ಮಂಡಿಸಿ, 2011 ರ ಜನಗಣತಿಯ ಆಧಾರದ ಮೇಲೆ ಲೋಕಸಭಾ ಸ್ಥಾನಗಳ ಸಂಭಾವ್ಯ ಹೆಚ್ಚಳಕ್ಕೆ ಮೀಸಲಾತಿಯನ್ನು ತಳುಕು ಹಾಕಿದ್ದಕ್ಕಾಗಿ ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ.
ಲೋಕಸಭೆಯಲ್ಲಿ ಸರ್ಕಾರದ ಸೋಲು ಇತ್ತೀಚಿನ ವರ್ಷಗಳಲ್ಲಿ ಎನ್‌ಡಿಎ ಗೆ ಆಗಿರುವ ಅತ್ಯಂತ ಮಹತ್ವದ ಶಾಸಕಾಂಗ ಹಿನ್ನಡೆಗಳಲ್ಲಿ ಒಂದಾಗಿದೆ, ಈ ಫಲಿತಾಂಶವು ಸುಧಾರಣೆಗಳ ವೇಷ ತೊಡಿಸಿ ವಿವಾದಾತ್ಮಕ ಕ್ರಮಗಳನ್ನು ಮುಂದಕ್ಕೆ ತಳ್ಳುವ ಪ್ರಯತ್ನಗಳಿಗೆ ಇನ್ನಷ್ಟು ವ್ಯಾಪಕ ಪ್ರತಿರೋಧಗಳು ಬರಲಿವೆ ಎಂಬುದನ್ನು ಬಿಂಬಿಸುತ್ತದೆ ಎಂದು ವಿಪಕ್ಷಗಳು ಪ್ರತಿಪಾದಿಸಿವೆ.
ಇದನ್ನೂ ನೋಡಿ : ಬಗೆದಷ್ಟೂ..ಮುಗಿಯದ SIR ಬಗ್ಗಡ : ದೇಶದ ಜನರನ್ನೇ ಪರದೇಶಿಗಳನ್ನಾಗಿಸುತ್ತಿದೆ Janashakthi Media
