ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಮೊದಲ ಹಂತದ 152 ಕ್ಷೇತ್ರಗಳಿಗೆ ಏಪ್ರಿಲ್ 23ರಂದು ಮತದಾನ ನಡೆದಿದೆ. ಮೊದಲ ಹಂತದಲ್ಲಿ ಶೇ. 92.03 ರಷ್ಟು ಮತದಾನವಾಗಿದೆ. 294 ಸದಸ್ಯ ಬಲದ ರಾಜ್ಯ ವಿಧಾನಸಭೆಯ ಇನ್ನುಳಿದ 142 ಸ್ಥಾನಗಳಿಗೆ ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಪಲಿತಾಂಶ ಮೇ 4ರಂದು ಹೊರಬರಲಿದೆ. ಈ ಚುನಾವಣೆಗಳು ಕೇವಲ ಆಡಳಿತ ಬದಲಾವಣೆಗೆ ಇರುವ ಚುನಾವಣೆಯಲ್ಲ, ಬದಲಾಗಿ ರಾಜ್ಯದಲ್ಲಿ ಎಡ ಶಕ್ತಿಗಳ ಪುನರುಜ್ಜೀವನಕ್ಕೆ ವೇದಿಕೆಯಾಗಿದೆ ಎಂದು ಪಶ್ಚಿಮ ಬಂಗಾಳದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಅವರು ಹೇಳುತ್ತಾರೆ. ಪಶ್ಚಿಮ ಬಂಗಾಳ
ಏಪ್ರಿಲ್ 21 ರಂದು, ಕೋಲ್ಕತ್ತಾ ಪ್ರೆಸ್ ಕ್ಲಬ್ ನಲ್ಲಿ ನಡೆದ ‘ಮೀಟ್ ದಿ ಪ್ರೆಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೊಹಮ್ಮದ್ ಸಲೀಂ ಅವರು ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ ವಿವರವಾಗಿ ಮಾತನಾಡಿದರು. ಬಲಪಂಥೀಯ ರಾಜಕೀಯ ಹಾಗೂ ತೃಣಮೂಲ ಕಾಂಗ್ರೆಸ್ ಯಾವುದೇ ಸಿದ್ಧಾಂತವಿಲ್ಲದ ಪಕ್ಷ., ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ “ಸೈಡ್ ಕಿಕ್” ನಂತೆ ವರ್ತಿಸುತ್ತ ಬಂದಿದೆ ಎಂದು ಹೇಳಿದರು. ” ಅದು ಎಡರಂಗವನ್ನು ಅಧಿಕಾರದಿಂದ ತೆಗೆದುಹಾಕಲು ರಚಿಸಲಾದ ಎಸ್‌ಪಿವಿ, ಅಂದರೆ ‘ವಿಶೇಷ ಉದ್ದೇಶದ ವಾಹನ’ ಮಾತ್ರ. ಬಿಜೆಪಿ ತನ್ನ ನೈಸರ್ಗಿಕ ಮಿತ್ರ ಎಂದು ಮಮತಾ ಬ್ಯಾನರ್ಜಿ ಸ್ವತಃ ಒಮ್ಮೆ ಹೇಳಿದ್ದರು” ಎಂದು ಅವರು ನೆನಪಿಸಿದರು.
“ಈಗ ಐ-ಪಿಎಸಿ (ಭಾರತೀಯ ರಾಜಕೀಯ ಕ್ರಿಯಾ ಸಮಿತಿ -Indian Political Action Committee I-PAC ತನ್ನ ಚಟುವಟಿಕೆಗಳನ್ನು ನಿಲ್ಲಿಸಿರುವುದರಿಂದ, ತೃಣಮೂಲ ಕಾಂಗ್ರೆಸ್ ಕ್ರಮೇಣ ದುರ್ಬಲಗೊಳ್ಳುತ್ತಿದೆ” ಎಂದು ಅವರು ಹೇಳಿದರು. ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ತಳಮಟ್ಟದ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದೆ. ಬಿಜೆಪಿ ಮತ್ತು ತೃಣಮೂಲ ಪಕ್ಷಗಳು ಮತೀಯ ಭಾವನೆಗಳನ್ನು ಕೆರಳಿಸುವ ಮೂಲಕ ರಾಜಕೀಯ ಮಾಡುತ್ತಿವೆ ಮತ್ತು ಮಂದಿರ-ಮಸೀದಿ ವಿಷಯಗಳ ಬಗ್ಗೆ ಮಾತನಾಡುವ ಮೂಲಕ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ : ಪಶ್ಚಿಮ ಬಂಗಾಳದಲ್ಲಿ ಎಡರಂಗವು ಗಮನಾರ್ಹ ಸ್ಥಾನಗಳನ್ನು ಗೆಲ್ಲುತ್ತದೆ
ಮತೀಯ ಧ್ರುವೀಕರಣಕ್ಕೆ ಎಡಶಕ್ತಿಗಳಿಂದ ತಡೆ
ಆದರೆ, ಇಂದು ಎಡಪಕ್ಷಗಳ ನಿರಂತರ ಹೋರಾಟಗಳಿಂದಾಗಿ, ಅವುಗಳ ರಣತಂತ್ರಕ್ಕೆ ತಡೆ ಬಿದ್ದಿದೆ, ಎರಡೂ ಪಕ್ಷಗಳ ಮಂತ್ರಿಗಳು, ಮುಖಂಡರು ಉದ್ಯೋಗ ಮತ್ತು ಜೀವನೋಪಾಯದ ಬಗ್ಗೆ ಮಾತನಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಎಡ ರಾಜಕಾರಣಕ್ಕೆ ಇದು ಈಗಾಗಲೆ ಸಿಕ್ಕಿರುವ ವಿಜಯ ಎಂದು ಅವರು ಹೇಳಿದರು.
ಒಂದು ಐತಿಹಾಸಿಕ ಬದಲಾವಣೆಯೆಂದರೆ, ಸಿಪಿಐ(ಎಂ) ನೇತೃತ್ವದ ಎಡರಂಗವು 2026 ರ ವಿಧಾನಸಭಾ ಚುನಾವಣೆಗಳಿಗಾಗಿ ಭಾರತೀಯ ಜಾತ್ಯತೀತ ರಂಗ (ಐಎಸ್‌ಎಫ್) ಮತ್ತು ಸಿಪಿಐ(ಎಂಎಲ್) ಲಿಬರೇಶನ್ ಫ್ರಂಟ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ಜೊತೆಗಿನ ದಶಕದ ಚುನಾವಣಾ ಮೈತ್ರಿಯನ್ನು ಪಕ್ಷ ಕೊನೆಗೊಳಿಸಿದೆ. ಸಿಪಿಐ(ಎಂಎಲ್) ಲಿಬರೇಶನ್ ಜೊತೆಗಿನ ಮೈತ್ರಿಯನ್ನು “ಐತಿಹಾಸಿಕ ಮೊದಲು” ಎಂದು ಮಹಮ್ಮದ್ ಸಲೀಂ ಬಣ್ಣಿಸಿದರು. “ನಾವು ದೇಶವನ್ನು ಉಳಿಸಲು ಬಯಸಿದರೆ, ಮೊದಲು ಬಂಗಾಳವನ್ನು ಉಳಿಸಬೇಕು. ನಾವು ಸಕಾರಾತ್ಮಕ ಪ್ರಣಾಳಿಕೆಯೊಂದಿಗೆ ಜನರನ್ನು ಎದುರಿಸುತ್ತಿದ್ದೇವೆ. ಈ ಚುನಾವಣೆಯು ರಾಜಕೀಯ ಎಡಪಂಥೀಯರ ಪುನರುಜ್ಜೀವನ ಮಾತ್ರವಲ್ಲ; ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಎಡಪಂಥೀಯ ವಿಚಾರಗಳ ಪುನರುಜ್ಜೀವನವೂ ಆಗಿರುತ್ತದೆ” ಎಂದು ಸಲೀಂ ಹೇಳಿದರು. ಪಶ್ಚಿಮ ಬಂಗಾಳ
ಯುವಜನರ ಕೈಯಲ್ಲಿ ನಾಯಕತ್ವ
ಎಡರಂಗವು ಈ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೀನಾಕ್ಷಿ ಮುಖರ್ಜಿ, ಆಫ್ರಿನ್ ಬೇಗಂ, ದೀಪ್ಸಿತಾ ದಾರ್, ಕಲಾದನ್ ದಾಸ್ ಗುಪ್ತಾ ಮತ್ತು ಸಯನ್ ದೀಪ್ ಮಿತ್ರಾ ಅವರಂತಹ ಯುವ ನಾಯಕರನ್ನು ಮುಂದೆ ತರಲಾಗಿದೆ. 2021 ರಿಂದ 2026 ರವರೆಗೆ ವಿಧಾನಸಭೆಯಲ್ಲಿ ಎಡಪಕ್ಷಗಳು ಪ್ರಾತಿನಿಧ್ಯ ಕಳೆದುಕೊಳ್ಳುವ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸುವ ಮೂಲಕ 2026 ರಲ್ಲಿ ಎಡಪಕ್ಷಗಳು ದೊಡ್ಡ ಪ್ರಮಾಣದಲ್ಲಿ ವಿಧಾನಸಭೆಗೆ ಮತ್ತೆ ಪ್ರವೇಶಿಸಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮತದಾರರ ಪಟ್ಟಿ ಅಕ್ರಮಗಳ ಬಗ್ಗೆ ದೂರುಗಳು, ಚುನಾವಣಾ ಆಯೋಗದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಮಯದಲ್ಲಿ, ಸುಮಾರು 90 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಮೊಹಮ್ಮದ್ ಸಲೀಂ ಆರೋಪಿಸಿದರು. ಮತದಾರರ ಸಂಖ್ಯೆಯನ್ನು 7.66 ಕೋಟಿಯಿಂದ 6.75 ಕೋಟಿಗೆ ಇಳಿಸಲಾಗಿದೆ.
ಮತಧರ್ಮ ಮತ್ತು ಪ್ರದೇಶದ ಆಧಾರದ ಮೇಲೆ ಮತದಾರರ ಪಟ್ಟಿಯಿಂದ ಲಕ್ಷಾಂತರ ಮಂದಿಯನ್ನು ಹೊರಗಿಡಲು ಯೋಜಿಸಲಾಗಿದೆ ಎಂದು ಅವರು ಆರೋಪಿಸಿದರು. ಶೇ. 12 ರಷ್ಟು ಮತದಾರರನ್ನು ಹೊರಗಿಟ್ಟು ನಡೆದ ಚುನಾವಣೆಯು ಜನರ ನಿಜವಾದ ತೀರ್ಪನ್ನು ಪ್ರತಿಬಿಂಬಿಸುತ್ತದೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.
ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ನಡೆಯಬೇಕಾದರೆ, ರಾಜ್ಯದಲ್ಲಿರುವ ಅಕ್ರಮ ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಆಳುವ ಪಕ್ಷದ ಪರವಾಗಿ ವರ್ತಿಸುವ ಅಧಿಕಾರಿಗಳನ್ನು ಬದಲಾಯಿಸಬೇಕು ಎಂದು ಅವರು ಒತ್ತಿ ಹೇಳಿದರು.
ಉತ್ತರ ದಿನಾಜ್ ಪುರ ಜಿಲ್ಲೆಯ ಇಸ್ಲಾಂಪುರದಲ್ಲಿ ಸಿಪಿಐ(ಎಂ) ಕಾರ್ಯಕರ್ತ ನೂರ್ ಅಜಮ್ ಆಲಂ ಅವರ ಹತ್ಯೆಯನ್ನು ಉದಾಹರಿಸಿದ ಅವರು, ಇದು ವಿರೋಧ ಪಕ್ಷಗಳಿಗೆ ನೇರ ಬೆದರಿಕೆಯಾಗಿದ್ದು, ಜನರು ಅಂತಹ ಹಿಂಸಾಚಾರವನ್ನು ಜಯಿಸಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುತ್ತಾರೆ ಎಂದು ಹೇಳಿದರು.
ಇದನ್ನೂ ನೋಡಿ : “ಮಹಿಳಾ ಮೀಸಲಾತಿ ಮಸೂದೆ- ಮೂರು ದಶಕಗಳು:ಅವಲೋಕನ”
