ಜೆಪಿಎಸ್‌ಸಿ ಪರೀಕ್ಷೆ ವಿವಾದ: ಸರ್ಕಾರ – ವಿದ್ಯಾರ್ಥಿ ಮಾತುಕತೆ ಫಲಕಾರಿಯಾಗದೇ ಸ್ಥಗಿತ

ಜಾರ್ಖಂಡ್‌ನಲ್ಲಿ ಪ್ರತಿಭಟನೆ ಮುಂದುವರಿಕೆ: ಆಗಸ್ಟ್ 10ಕ್ಕೆ ವಿಧಾನಸಭೆ ಮುತ್ತಿಗೆ ಎಚ್ಚರಿಕೆ
ರಾಂಚಿ: ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ಆರೋಪ ಹಿನ್ನೆಲೆ ಜಾರ್ಖಂಡ್ ಸರ್ಕಾರ ಮತ್ತು ಪ್ರತಿಭಟನಾ ವಿದ್ಯಾರ್ಥಿಗಳ ನಡುವೆ ನಡೆದ ಮೊದಲ ಹಂತದ ಮಾತುಕತೆ ಸಕಾರಾತ್ಮಕವಾಗಿ ನಡೆದರೂ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಿಲ್ಲ. ತಮ್ಮ ಎಲ್ಲಾ ಬೇಡಿಕೆಗಳು, ವಿಶೇಷವಾಗಿ 14ನೇ ಜಾರ್ಖಂಡ್ ಪಬ್ಲಿಕ್ ಸರ್ವಿಸ್ ಕಮಿಷನ್ (JPSC) ಪರೀಕ್ಷೆ ರದ್ದುಪಡಿಸುವ ಬೇಡಿಕೆ ಈಡೇರಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.

ಜೇಪಿಎಸ್‌ಸಿ/ಜೆಎಸ್ಸೆಸ್ಸಿ ರೀಫಾರ್ಮ್ಸ್ ಮಂಚ್‌ನ 10 ಸದಸ್ಯರ ಪ್ರತಿನಿಧಿ ತಂಡವು ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಸುದಿವ್ಯ ಕುಮಾರ್ ನೇತೃತ್ವದ ಸಚಿವರ ಸಮಿತಿಯನ್ನು ಶುಕ್ರವಾರ ಭೇಟಿ ಮಾಡಿತು. ಸರ್ಕಾರ ವಿದ್ಯಾರ್ಥಿಗಳ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಗಣಿಸುವುದಾಗಿ ಭರವಸೆ ನೀಡಿದರೂ, ತಕ್ಷಣದ ಕ್ರಮದ ಕುರಿತು ಸ್ಪಷ್ಟತೆ ನೀಡಲಿಲ್ಲ.

ಈ ಹಿನ್ನೆಲೆಯಲ್ಲಿ, ಆಗಸ್ಟ್‌ 9ರೊಳಗೆ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಆಗಸ್ಟ್ 10ರಂದು ಜಾರ್ಖಂಡ್ ವಿಧಾನಸಭೆಗೆ ಮೆರವಣಿಗೆ ನಡೆಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ವಿಧಾನ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

“ಮಾತುಕತೆ ಸಕಾರಾತ್ಮಕ ವಾತಾವರಣದಲ್ಲಿ ನಡೆಯಿತು. ಆದರೆ ನಮ್ಮ ಎಲ್ಲಾ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಸುತ್ತೇವೆ,” ಎಂದು ವಿದ್ಯಾರ್ಥಿ ನಾಯಕ ರವೀಂದ್ರ ಪಸ್ವಾನ್ ತಿಳಿಸಿದ್ದಾರೆ.

ಸಚಿವ ಸುದಿವ್ಯ ಕುಮಾರ್, “ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಸರ್ಕಾರ ಸೂಕ್ಷ್ಮವಾಗಿದೆ. ಅವರ ಬೇಡಿಕೆಗಳನ್ನು ಪರಿಶೀಲಿಸಲಾಗುವುದು, ಶೀಘ್ರದಲ್ಲೇ ಫಲಿತಾಂಶ ಗೋಚರಿಸುತ್ತದೆ,” ಎಂದರು. ಸಚಿವ ದೀಪಿಕಾ ಪಾಂಡೆ ಸಿಂಗ್ ಅವರು ಈ ವಿಷಯವನ್ನು ಮುಖ್ಯಮಂತ್ರಿ ಹೇಮಂತ್ ಸೋರೆನ್ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.

ಮುಖ್ಯಮಂತ್ರಿ ಹೇಮಂತ್ ಸೋರೆನ್ ಕೂಡ ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕೆ ಸರ್ಕಾರ ಸಿದ್ಧವಿದೆ ಎಂದು ಪುನರುಚ್ಚರಿಸಿದ್ದಾರೆ.

ಇದೇ ವೇಳೆ, ದೇವೇಂದ್ರ ಮಹತೋ ನೇತೃತ್ವದ ಮತ್ತೊಂದು ಪ್ರತಿಭಟನಾ ಗುಂಪು ಕಳೆದ ಆರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಅವರು ಕೂಡ ಸರ್ಕಾರದ ಮಾತುಕತೆಗೆ ಒಪ್ಪಿಕೊಂಡು ಎಂಟು ಸದಸ್ಯರ ತಂಡದ ವಿವರಗಳನ್ನು ಸಲ್ಲಿಸಿದ್ದಾರೆ.

ವಿದ್ಯಾರ್ಥಿಗಳು 14ನೇ ಜೆಪಿಎಸ್‌ಸಿ ಪರೀಕ್ಷೆಯನ್ನು ರದ್ದುಪಡಿಸುವುದರ ಜೊತೆಗೆ, ಅಕ್ರಮಗಳ ಕುರಿತು ಸಿಬಿಐ ಅಥವಾ ರಾಜ್ಯದ ಹೊರಗಿನ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ.

ಈ ಹೋರಾಟ ಶುಕ್ರವಾರಕ್ಕೆ 14ನೇ ದಿನಕ್ಕೆ ಕಾಲಿಟ್ಟಿದ್ದು, ಆರು ಮಂದಿ ಇನ್ನೂ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತಿದ್ದಾರೆ.

ಇನ್ನೊಂದೆಡೆ, ಎಐಎಸ್ಎ ಮತ್ತು ಎಐಎಸ್ಎಫ್ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿ ವಿಧಾನಸಭೆ ಕಡೆಗೆ ಮೆರವಣಿಗೆ ನಡೆಸಿದವು. ಈ ವೇಳೆ ಎಐಎಸ್ಎ ರಾಷ್ಟ್ರೀಯ ಅಧ್ಯಕ್ಷೆ ನೆಹಾ ಬೋರಾ ಮೇಲೆ ಮಸಿ ಎರಚಿದ ಘಟನೆ ನಡೆದಿದೆ. ಆರೋಪಿ ಅಮರನಾಥ್ ಪಾಂಡೆ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಘಟನೆ ಕುರಿತು ನೆಹಾ ಬೋರಾ ವಿದ್ಯಾರ್ಥಿ ಚಳುವಳಿಯನ್ನು ಬೆದರಿಸಲು ಪ್ರಯತ್ನ ಎಂದು ಆರೋಪಿಸಿದರೆ, ಬಿಜೆಪಿ ಇದನ್ನು “ನಾಟಕ” ಎಂದು ತಳ್ಳಿಹಾಕಿದೆ. ಎಬಿವಿಪಿ ಕೂಡ ಘಟನೆಯಲ್ಲಿ ತಮ್ಮ ಭಾಗವಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ವಿಚಾರ ಜಾರ್ಖಂಡ್ ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿದ್ದು, ಬಿಜೆಪಿ ಶಾಸಕರು ಸಿಬಿಐ ತನಿಖೆಗಾಗಿ ಒತ್ತಾಯಿಸಿ ಕಲಾಪ ವ್ಯತ್ಯಯಗೊಳಿಸಿದ ಪರಿಣಾಮ ಸದನವನ್ನು ದಿನಪೂರ್ತಿ ಮುಂದೂಡಲಾಯಿತು.

ಇದನ್ನೂ ನೋಡಿ: ‘ಪ್ರತಿ ಐವರಲ್ಲಿ ಒಬ್ಬ ಮತದಾರ ಪಟ್ಟಿಯಿಂದ ಹೊರಗೆ’ : SIR ವಿರುದ್ಧ ಗಂಭೀರ ಆರೋಪ Janashakthi Media

Donate Janashakthi Media

Leave a Reply

Your email address will not be published. Required fields are marked *