ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಸಿಪಿಐ(ಎಂ) ಪೊಲಿಟ್ ಬ್ಯೂರೋ ತನ್ನ ಬಲವಾದ ವಿರೋಧವನ್ನು ವ್ಯಕ್ತಪಡಿಸಿದೆ.
ʼಡಿಜಿಟಲ್ ಇಂಡಿಯಾʼದ ಲಾಂಛನದ ಅಡಿಯಲ್ಲಿ, ಮೋದಿ ಸರ್ಕಾರವು ಡಿಜಿಟಲ್ ಪಾವತಿಗಳು ಮತ್ತು ಯುಪಿಐ(ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್- ಏಕೀಕೃತ ಪಾವತಿ ಅಂತರಸಂಪರ್ಕ) ಎಂಬುದನ್ನು ಒಂದು ಉಚಿತ ಸಾರ್ವಜನಿಕ ಬಳಕೆ ಸಾಧನವಾಗಿ ಬಹಳ ಜೋರಾಗಿ ಉತ್ತೇಜಿಸಿತು, ಸ್ವತಃ ಪ್ರಧಾನ ಮಂತ್ರಿಗಳು ನಾಗರಿಕರು, ಸಣ್ಣ ವ್ಯಾಪಾರಿಗಳು ಮತ್ತು ವ್ಯವಹಾರಸ್ಥರನ್ನು ನಗದು ತ್ಯಜಿಸಲು ಮತ್ತು ಡಿಜಿಟಲ್ ವಹಿವಾಟುಗಳನ್ನು ಅಂಗೀಕರಿಸುವಂತೆ ಪದೇ ಪದೇ ಆಗ್ರಹಿಸಿದರು. ಅವರೇ ಸ್ವತಃ ಯುಪಿಐ ಅನ್ನು ಉತ್ತೇಜಿಸುವ ಖಾಸಗಿ ಪಾವತಿ ಕಂಪನಿಯ ಜಾಹೀರಾತು ಸೇರಿದಂತೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು.. ವಾಸ್ತವವಾಗಿ ಈ ಪ್ರಚಾರವನ್ನು ನೋಟುರದ್ಧತಿಗೆ ಸಮರ್ಥನೆಯಾಗಿಯೂ ಕೂಡ ಕೊಡಲಾಗಿತ್ತು.
ಈಗ ಸಾಮಾನ್ಯ ನಾಗರಿಕರು ಇದನ್ನು ಪಾವತಿ/ವ್ಯವಹಾರದ ಸಾಧನವಾಗಿ ಅಳವಡಿಸಿಕೊಂಡಿರುವಾಗ, ಸರ್ಕಾರವು ವಹಿವಾಟು ಶುಲ್ಕಗಳನ್ನು ಪ್ರಸ್ತಾಪಿಸುವ ಮೂಲಕ ಆ ಸಾರ್ವಜನಿಕ ಮೂಲಸೌಕರ್ಯವನ್ನೇ ಆದಾಯದ ಮೂಲವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಇದು ಸಾರ್ವಜನಿಕ ವಿಶ್ವಾಸದ ಉಲ್ಲಂಘನೆಯಾಗಿದೆ, ಏಕೆಂದರೆ ಸರ್ಕಾರವು ಯುಪಿಐ ಮುಕ್ತವಾಗಿ ಉಳಿಯುತ್ತದೆ ಎಂದೇ
ಹೇಳಿಕೊಂಡು ಬಂದಿತ್ತು ಎಂದು ಪೊಲಿಟ್‌ಬ್ಯುರೊ ಟೀಕಿಸಿದೆ.
ಈ ನಡೆಯನ್ನು ಪ್ರತ್ಯೇಕವಾಗಿ ನೋಡಲಾಗುವುದಿಲ್ಲ. ಕಳೆದ ದಶಕದಲ್ಲಿ, ಜನರನ್ನು ಹಲವಾರು ಬ್ಯಾಂಕಿಂಗ್-ಸಂಬಂಧಿತ ಶುಲ್ಕಗಳಲ್ಲಿ ಸತತ ಹೆಚ್ಚಳಕ್ಕೆ ಒಳಪಡಿಸಲಾಗಿದೆ – ಕನಿಷ್ಠ ಬ್ಯಾಲೆನ್ಸ್‌ಗಳನ್ನು ನಿರ್ವಹಿಸದಿದ್ದಕ್ಕಾಗಿ ದಂಡಗಳು, ನಿಗದಿತ ಮಿತಿಗಳನ್ನು ಮೀರಿದ ಎಟಿಎಂ ವಹಿವಾಟುಗಳಿಗೆ ಹೆಚ್ಚಿನ ಶುಲ್ಕಗಳು, ಡೆಬಿಟ್ ಕಾರ್ಡ್ ನಿರ್ವಹಣೆ ಶುಲ್ಕಗಳು, ಎಸ್‌ಎಂಎಸ್ ಎಚ್ಚರಿಕೆ ಶುಲ್ಕಗಳು ಇತ್ಯಾದಿ. ಇವೆಲ್ಲವೂ ಅಗತ್ಯ ಬ್ಯಾಂಕಿಂಗ್ ಸೇವೆಗಳ ಲಭ್ಯತೆಯನ್ನು ದುಬಾರಿಯಾಗಿಸಿವೆ.
ಪ್ರಸ್ತಾವಿತ ಶಾಸನವನ್ನು ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯೂರೋ, ಯುಪಿಐ ಒಂದು ಉಚಿತ, ಸಾರ್ವತ್ರಿಕ ಮತ್ತು ಸಾರ್ವಜನಿಕವಾಗಿ ಉತ್ತರದಾಯಿಯಾಗಿರುವ ಎಲ್ಲರಿಗೂ ಲಭ್ಯವಾಗಿರುವ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿಯೇ ಮುಂದುವರೆಯಬೇಕು ಎಂದು ಆಗ್ರಹಿಸಿದೆ.
ಇದನ್ನೂ ನೋಡಿ : ಕುಡತಿನಿ ಭೂ ಹೋರಾಟ | “ಭೂಮಿ ಕಿತ್ತುಕೊಂಡು ಬದುಕು ಕಸಿದವರನ್ನು ಸೋಲಿಸಿ” – ಜಸ್ಟೀಸ್ ವಿ. ಗೋಪಾಲಗೌಡ
