ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರನ್ನು ಪಕ್ಷಪಾತ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮಕೈಗೊಳ್ಳದ ಹಿನ್ನೆಲೆ ಪದಚ್ಯುತಗೊಳಿಸುವಂತೆ ಕೋರಿ ವಿಪಕ್ಷಗಳ ಸಂಸದರು ಏಪ್ರಿಲ್. 24ರಂದು ಮತ್ತೆ ರಾಜ್ಯಸಭೆ ಸಭಾಪತಿಗೆ ಹೊಸ ಪ್ರಸ್ತಾವನೆಯ ನೋಟಿಸ್ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಸಿಇಸಿ
ರಾಜ್ಯಸಭೆಯ ಒಟ್ಟು 73 ವಿಪಕ್ಷಗಳ ಸದಸ್ಯರು ಪ್ರಸ್ತಾವನೆಗೆ ಸಹಿ ಹಾಕಿದ್ದು, ಸಂವಿಧಾನದ 324(5) ನೇ ವಿಧಿ ಮತ್ತು 124(4) ನೇ ವಿಧಿಯ ಅಡಿಯಲ್ಲಿ ಪದಚ್ಯುತಗೊಳಿಸಲು ಕ್ರಮಕ್ಕೆ ನೋಟಿಸ್ ನೀಡಲಾಗಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಂತೆಯೇ ಮುಖ್ಯ ಚುನಾವಣಾ ಆಯುಕ್ತರನ್ನು(ಸಿಇಸಿ) ತೆಗೆದುಹಾಕಲು ಈ ವಿಧಿಗಳು ಅನುವು ಮಾಡಿಕೊಡುತ್ತದೆ.
ಕಳೆದ ಮಾರ್ಚ್ 15ರಂದು ವಿಪಕ್ಷಗಳು ಇದೇ ರೀತಿ ಜ್ಞಾನೇಶ್ ಅವರನ್ನು ಪದಚ್ಯುತಿಗೊಳಿಸುವಂತೆ ಕೋರಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಸ್ತಾವನೆ ನೋಟಿಸ್ ಸಲ್ಲಿಸಿದ್ದರು. ಆದರೆ ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭಾ ಸಭಾಪತಿ ವಿಪಕ್ಷಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು.
ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆ- ಎಡ ಮತ್ತು ಬಲಪಂಥೀಯರ ನಡುವೆ ನೇರ ಹಣಾಹಣಿ-ಮೊಹಮ್ಮದ್ ಸಲೀಂ
ಪ್ರಸ್ತುತ ನೀಡಿರುವ ನೋಟಿಸ್ಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್, ಟಿಎಂಸಿ, ಎಸ್‌ಪಿ, ಡಿಎಂಕೆ, ಎಡ ಪಕ್ಷಗಳು, ಶಿವಸೇನೆ (ಯುಬಿಟಿ), ಎನ್‌ಸಿಪಿ (ಎಸ್‌ಪಿ) ಹಾಗೂ ಆರ್‌ಜೆಡಿ ಮತ್ತು ಇತರ ಸದಸ್ಯರು ಸಹಿ ಹಾಕಿದ್ದಾರೆ. ಮಾರ್ಚ್ 12ರಂದು ನೀಡಲಾದ ಹಿಂದಿನ ನೋಟಿಸ್‌ಗಿಂತ ಭಿನ್ನವಾದ ಹೊಸ ನೋಟಿಸ್ ಆಗಿದೆ ಮತ್ತು ಮಾರ್ಚ್ 15ರ ನಂತರದ ಹೊಸ ಆರೋಪಗಳನ್ನು ಆಧರಿಸಿದೆ ಎಂದು ಸಂಸದರು ಸ್ಪಷ್ಟಪಡಿಸಿದ್ದಾರೆ.
ನೋಟಿಸ್ನಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ಅಧಿಕಾರದ ದುರುಪಯೋಗ, ಪಕ್ಷಪಾತದ ನಡವಳಿಕೆ, ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳುವಲ್ಲಿ ವಿಫಲತೆ, ನ್ಯಾಯಾಂಗ ಅಧಿಕಾರದ ಧಿಕ್ಕಾರ ಮತ್ತು ಸಾಂಸ್ಥಿಕ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಕ್ರಮಗಳು ಸಾಬೀತಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಒಂಬತ್ತು ನಿರ್ದಿಷ್ಟ ಆರೋಪಗಳನ್ನು ಪಟ್ಟಿ ಮಾಡಲಾಗಿದ್ದು, ಮೊದಲ ಮತ್ತು ಪ್ರಮುಖ ಆರೋಪವು ಮಾದರಿ ನೀತಿ ಸಂಹಿತೆಯ ಪಕ್ಷಪಾತದ ಜಾರಿಯನ್ನು ಹೊಂದಿದೆ. ಚುನಾವಣಾ ಅವಧಿಯಲ್ಲಿ ಪ್ರಧಾನಿ ಮೋದಿ ಅವರ ದೂರದರ್ಶನದ ಭಾಷಣದ ಕುರಿತಾದ ದೂರುಗಳ ಮೇಲೆ ಸಿಇಸಿ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಆದರೆ ಇದೇ ರೀತಿಯ ಪ್ರಕರಣಗಳಲ್ಲಿ ವಿರೋಧ ಪಕ್ಷದ ನಾಯಕರ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ನೋಡಿ: ಅಂಬೇಡ್ಕರ್–ಮಾರ್ಕ್ಸವಾದ: ಚಿಂತನೆ ಮತ್ತು ಹೋರಾಟ | ಕೆ.ಎನ್.ಉಮೇಶ್ Janashakthi Media
