ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾರ್ಚ್ 18ರಂದು ವಿಧಾನಸಭೆಯಲ್ಲಿ ಮರ್ಯಾದೆಗೇಡು ಹತ್ಯೆ ಹಾಗೂ ಜಾತಿ ಕಾರಣಕ್ಕೆ ಮದುವೆಗೆ ಅಡ್ಡಿಪಡಿಸುವವರಿಗೆ ಕಠಿಣ ಶಿಕ್ಷೆ ವಿಧಿಸಿ, ಅಂತರ್ಜಾತಿ ವಿವಾಹಗಳಿಗೆ ರಕ್ಷಣೆ ಒದಗಿಸುವ ಉದ್ದೇಶದೊಂದಿಗೆ ರೂಪಿಸಲಾಗಿರುವ ‘ಇವ ನಮ್ಮವ ಇವ ನಮ್ಮವ ಮಸೂದೆ-2026’ ಅನ್ನು ಮಂಡಿಸಿದರು.
ಅಂತರ್ಜಾತಿ ವಿವಾಹವಾದವರನ್ನು ಗೌರವದ ಹೆಸರಿನಲ್ಲಿ ಹತ್ಯೆ ಮಾಡುವುದು, ಹಲ್ಲೆ ಅಥವಾ ಕಿರುಕುಳ ನೀಡುವುದು, ಆರ್ಥಿಕ ಅಥವಾ ಸಾಮಾಜಿಕವಾಗಿ ಬಹಿಷ್ಕರಿಸುವುದು ಶಿಕ್ಷಾರ್ಹ ಅಪರಾಧ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಅಲ್ಲದೇ, ಮರ್ಯಾದೆ ಹೆಸರಿನಲ್ಲಿ ನಡೆಯುವ ಹತ್ಯೆ ಅಥವಾ ಸಾವಿಗೆ ಕಾರಣರಾದವರಿಗೆ ಕನಿಷ್ಠ ಐದು ವರ್ಷ ಜೈಲು ಶಿಕ್ಷೆ ವಿಧಿಸುವುದು. ದಂಪತಿ ಅಥವಾ ಅವರಲ್ಲಿ ಯಾರೊಬ್ಬರಿಗೆ ತೀವ್ರ ಗಾಯಗಳಾಗುವಂತೆ ಮಾಡುವವರಿಗೆ ಮೂರು ವರ್ಷಕ್ಕೆ ಕಡಿಮೆಯಿಲ್ಲದ ಜೈಲು ಶಿಕ್ಷೆ ಮತ್ತು ₹1 ಲಕ್ಷದವರೆಗೆ ದಂಡ ವಿಧಿಸುವುದಕ್ಕೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ; ಜ್ಯೋತಿಷಿ ಅಶೋಕ್ ಖಾರಟ್ ಬಂಧನ
ಮದುವೆಯ ಭರವಸೆ ನೀಡಿ ಯುವತಿ ಜತೆ ಲೈಂಗಿಕ ಸಂಪರ್ಕ ನಡೆಸಿ ಬಳಿಕ ಜಾತಿ ಕಾರಣಕ್ಕೆ ಮದುವೆ ನಿರಾಕರಿಸಿದರೆ ಅಂತಹ ಪ್ರಕರಣವನ್ನು ಅತ್ಯಾಚಾರ ಎಂದು ಪರಿಗಣಿಸಲು ವಿಧೇಯಕದಲ್ಲಿ ತಿಳಿಸಲಾಗಿದೆ. ಮನೆಯವರ ಒತ್ತಡ ಅಥವಾ ಇತರೆ ಜಾತಿ ಆಧಾರಿತ ಕಾರಣ ಸೇರಿ ಜಾತಿ ಆಧಾರಿತ ಯಾವುದೇ ನೆಪ ನೀಡಿ ಮದುವೆ ನಿರಾಕರಿಸಿದರೂ 5 ವರ್ಷಕ್ಕಿಂತ ಕಡಿಮೆ ಇಲ್ಲದ ಹಾಗೂ ಜೀವಾವಧಿವರೆಗೆ ವಿಸ್ತರಿಸಬಹುದಾದ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಜಾತಿ ಆಧಾರಿತ ಅಪರಾಧಗಳನ್ನು ನಿರ್ಬಂಧಿಸುವುದು; ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ನೀಡುವುದು; ಮಾನವ ಹಕ್ಕುಗಳ ಉಲ್ಲಂಘನೆ ತಡೆ; ಅಂತರ್ಜಾತಿ ವಿವಾಹಕ್ಕೆ ಗೌರವ ನೀಡಲು; ಬಲವಂತದ ಜಾತಿ ಆಧಾರಿತ ತಾರತಮ್ಯ ನಿರ್ಬಂಧಿಸಲು; ಅಂತರ್ಜಾತಿ ವಿವಾಹ ವಿಧಿವತ್ತಾಗಿ ನೆರವೇರಿಸಲು ‘ಇವ ನಮ್ಮವ ಇವ ನಮ್ಮವ’ ವೇದಿಕೆ ರಚಿಸಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
ಇದನ್ನೂ ನೋಡಿ: ₹1ಕ್ಕೆ 1 ಲೀಟರ್ ಹಾಲು – ಫ್ಲಿಪ್‌ಕಾರ್ಟ್ ವಿರುದ್ಧ ಸಿಡಿದೆದ್ದ ರೈತರು Janashakthi Media
