ಕೃಷಿ ಇಲಾಖೆಯ 945 ಹುದ್ದೆಗಳಿಗೆ 3 ತಿಂಗಳೊಳಗೆ ನೇಮಕಾತಿ: ಎನ್‌. ಚಲುವರಾಯಸ್ವಾಮಿ

ಬೆಂಗಳೂರು: ಕೃಷಿ ಇಲಾಖೆಯ ಗ್ರೂಪ್‌ ‘ಬಿ’ ಮತ್ತು ‘ಸಿ’ ವೃಂದದ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ವೃಂದದ 945 ಹುದ್ದೆಗಳಿಗೆ ಮೂರು ತಿಂಗಳೊಳಗೆ ನೇಮಕಾತಿ ನಡೆಸುವುದಾಗಿ ಮಾರ್ಚ್‌ 18ರಂದು ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕಿರಣ್‌ ಕುಮಾರ್‌ ಕೊಡ್ಗಿ ಅವರ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದ್ದಾರೆ.

ಕೃಷಿ ಇಲಾಖೆಯಲ್ಲಿ ಕೊನೆಯದಾಗಿ 2018ರಲ್ಲಿ 370 ಹುದ್ದೆಗಳಿಗೆ ನೇಮಕಾತಿ ನಡೆದಿದೆ. ನಂತರ ಇಲಾಖೆಯಲ್ಲಿ ಯಾವುದೇ ನೇಮಕಾತಿ ಆಗಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೆಪಿಎಸ್ಸಿಯಿಂದ ನೇರ ನೇಮಕಾತಿ ಮುಖಾಂತರ 945 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು.

ಈ ನಡುವೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಅಧಿಸೂಚನೆ ರದ್ದುಪಡಿಸಲಾಗಿದೆ. ಇದೀಗ ಸರ್ಕಾರದ ನಿರ್ದೇಶನದ ಮೇರೆಗೆ ಹೊಸದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲು ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಎಸ್. ಐ.ಆರ್: ‘ಭಾರತ’ ಎಂಬ ಭಾವಕ್ಕೆ ಅತ್ಯಂತ ಗಂಭೀರವಾದ ಬೆದರಿಕೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ನೇಮಕಾತಿ ನಡೆದಿಲ್ಲ

ಕೃಷಿ ಇಲಾಖೆಯಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಜೊತೆಗೆ ಹೊರಗುತ್ತಿಗೆ/ಗುತ್ತಿಗೆ ಆಧಾರದ ಸುಮಾರು 2 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ರೈತರಿಗೆ ತೊಂದರೆಯಾದಂತೆ ಕ್ರಮ ವಹಿಸಲಾಗಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ನೇಮಕಾತಿ ನಡೆಸಿದರೆ ಸಿಬ್ಬಂದಿ ಸಮಸ್ಯೆ ಉಂಟಾಗುವುದಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ನೇಮಕಾತಿ ನಡೆದಿಲ್ಲ. ನಮ್ಮ ಸರ್ಕಾರವು ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿದೆ ಎಂದರು.

ಸದನದಲ್ಲಿ ಗ್ರಾಪಂ ಖಾಲಿ ಹುದ್ದೆ ವಿಷಯ ಪ್ರಸ್ತಾಪಿಸಿದ ಸಿದ್ದಿ

ಯಲ್ಲಾಪುರ: ಗ್ರಾಮ ಪಂಚಾಯಿತಿಗಳಿಗೆ ನೇಮಕಾತಿ ಪ್ರಕ್ರಿಯೆ ಇಲ್ಲದೇ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗದೇ ಸಮಸ್ಯೆ ಉಂಟಾಗಿರುವ ಕುರಿತು ವಿಧಾನಪರಿಷತ್ತಿನಲ್ಲಿ ಸದಸ್ಯ ಶಾಂತಾರಾಮ ಸಿದ್ದಿ ಗಮನ ಸೆಳೆದರು.

ಸದನದ ಚುಕ್ಕೆ ಗುರುತಿಲ್ಲದ ಪ್ರಶ್ನೆಯ ವೇಳೆ ಈ ವಿಚಾರ ಪ್ರಸ್ತಾಪಿಸಿದ ಅವರು, ಕಳೆದ ಐದಾರು ವರ್ಷಗಳಿಂದ ಗ್ರಾಮ ಪಂಚಾಯಿತಿಗಳಿಗೆ ನೇಮಕಾತಿ ಆಗಿಲ್ಲ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಅಲೆದಾಡುವುದು ಹೆಚ್ಚಾಗಿದೆ. ಈ ಸಮಸ್ಯೆ ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದರೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಯಾವ ಕ್ರಮ ಕೈಗೊಳ್ಳಲಾಗಿದೆ, ಈ ಕಾರ್ಯಕ್ಕೆ ಎಷ್ಟು ಸಮಯ ಬೇಕು ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಗ್ರಾಪಂಗಳಲ್ಲಿ ಬಿಲ್ ಕಲೆಕ್ಟರ್ ಹಾಗೂ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ವೃಂದದಲ್ಲಿ ಮಂಜೂರಾದ ಹುದ್ದೆ ಖಾಲಿ ಇದ್ದಲ್ಲಿ, ವಾಟರ್ ಆಪರೇಟರ್, ಅಟೆಂಡೆಂಟ್, ಕ್ಲೀನರ್ ವೃಂದದಿಂದ ಸಂಯುಕ್ತ ಜ್ಯೇಷ್ಠತಾ ಪಟ್ಟಿಯ ಆಧಾರದ ಮೇಲೆ ಮುಂಬಡ್ತಿ ಮೂಲಕ ನೇಮಕ ಮಾಡಿಕೊಳ್ಳಬಹುದು. ಸರ್ಕಾರದ 2020 ಹಾಗೂ 2023ರ ಅಧಿಸೂಚನೆಯಂತೆ ಗ್ರಾಪಂ ಈ ನೇಮಕ ಮಾಡಿಕೊಳ್ಳುವ ಅವಕಾಶವಿದೆ. ಅಂತೆಯೇ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಕೋಟಾದ ಮೂಲಕ ತುಂಬಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಇದನ್ನೂ ನೋಡಿ: ಓದು ಕಾರ್ಯಾಗಾರ | ವಿದ್ಯಾರ್ಥಿಗಳ ಕಣ್ಣಲ್ಲಿ ಕುವೆಂಪು Janashakthi Media

Donate Janashakthi Media

Leave a Reply

Your email address will not be published. Required fields are marked *