ಪಶ್ಚಿಮ ಬಂಗಾಳ: ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಡಪಂಥೀಯ ಮೈತ್ರಿ (ಲೆಫ್ಟ್ ಫ್ರಂಟ್) ಮಾರ್ಚ್ 18ರಂದು ತನ್ನ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಈ ಪಟ್ಟಿಯಲ್ಲಿ ಒಟ್ಟು 32 ಅಭ್ಯರ್ಥಿಗಳಿದ್ದು, ಅದರಲ್ಲಿ 28 ಮಂದಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) [ಸಿಪಿಐ(ಎಂ)], ಒಬ್ಬರು ರೆವಲ್ಯೂಷನರಿ ಸೋಷಲಿಸ್ಟ್ ಪಾರ್ಟಿ (ಆರ್ಎಸ್ಪಿ) ಹಾಗೂ ಮೂವರು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಪಕ್ಷದವರಾಗಿದ್ದಾರೆ. ಈ ಘೋಷಣೆಯನ್ನು ರೆವಲ್ಯೂಷನರಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಆರ್ಸಿಪಿಐ) ನಾಯಕ ಮಿಹಿರ್ ಬೈನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಯಿತು.
ಪಟ್ಟಿಯಲ್ಲಿ ಐದು ಪರಿಶಿಷ್ಟ ಜಾತಿ (ಎಸ್ಸಿ), ಒಬ್ಬ ಪರಿಶಿಷ್ಟ ಪಂಗಡ (ಎಸ್ಟಿ) ಹಾಗೂ ಮೂವರು ಮಹಿಳಾ ಅಭ್ಯರ್ಥಿಗಳಿಗೆ ಸ್ಥಾನ ನೀಡಲಾಗಿದೆ. ಚುನಾವಣೆ
ಇದನ್ನೂ ಓದಿ: ಅನಿಲ ಬಿಕ್ಕಟ್ಟು: ಶಾಸಕರಿಗೂ ಊಟ ಸಿಗದ ಸ್ಥಿತಿ, ಪರಿಷತ್ನಲ್ಲಿ ಅಸಮಾಧಾನ
ಇದಕ್ಕೂ ಮೊದಲು ಮಾರ್ಚ್ 16ರಂದು ಲೆಫ್ಟ್ ಫ್ರಂಟ್ 294 ಸ್ಥಾನಗಳ ಪೈಕಿ 192 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಏಪ್ರಿಲ್ 23ರಂದು (152 ಕ್ಷೇತ್ರಗಳು) ಮತ್ತು ಏಪ್ರಿಲ್ 29ರಂದು (142 ಕ್ಷೇತ್ರಗಳು) ಎರಡು ಹಂತಗಳಲ್ಲಿ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.

ಈ ಸಂದರ್ಭದಲ್ಲಿ ಭಾರತೀಯ ಚುನಾವಣಾ ಆಯೋಗ (ಇಸಿಐ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ಡಿ. ಸಲೀಂ, ಆಯೋಗವು “ಆರ್ಎಸ್ಎಸ್ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದೆ” ಎಂದು ಆರೋಪಿಸಿದರು. “ಲಾಜಿಕಲ್ ಡಿಸ್ಕ್ರೆಪನ್ಸಿ” ವಿಧಾನದಡಿ ಪರಿಶೀಲನೆಗೆ ಒಳಪಡಿಸಿದವರಿಗೆ ಮತದಾನದ ಹಕ್ಕು ನಿರಾಕರಿಸಿದರೆ, ಅಭ್ಯರ್ಥಿಗಳ ಪಟ್ಟಿಯ ಘೋಷಣೆಯೇ ಅರ್ಥಹೀನವಾಗುತ್ತದೆ ಎಂದು ಅವರು ಹೇಳಿದರು.
ಸಿಪಿಐ(ಎಂ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೊಲ್ಕತ್ತಾ ಹೈಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಕೈಗೊಳ್ಳಲು ಕಾರಣಗಳ ಕುರಿತು ಒಂದು ವಾರದೊಳಗೆ ಲಿಖಿತ ಸ್ಪಷ್ಟೀಕರಣ ನೀಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ ಎಂದು ಸಲೀಂ ತಿಳಿಸಿದರು.
“ಲಾಜಿಕಲ್ ಡಿಸ್ಕ್ರೆಪನ್ಸಿ” ನಿಯಮದಡಿ ಪರಿಶೀಲನೆಗೆ ಒಳಪಡಿಸಿದ ಮತದಾರರ ಹಕ್ಕುಗಳನ್ನು ರಕ್ಷಿಸುವುದು ಪಕ್ಷದ ತುರ್ತು ಆದ್ಯತೆಯಾಗಿದೆ ಎಂದು ಅವರು ಒತ್ತಿಹೇಳಿದರು. ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಗಳು ಫಾರ್ಮ್-7 ದುರುಪಯೋಗದ ಮೂಲಕ ನಿಜವಾದ ಮತದಾರರನ್ನು ಮತದಾನದಿಂದ ವಂಚಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದರು.
“ಬಂಗಾಳವನ್ನು ಉಳಿಸುವುದು ಜನರ ಮುಂದೆ ಇರುವ ದೊಡ್ಡ ಜವಾಬ್ದಾರಿ. ರಾಜ್ಯದ ಶಿಕ್ಷಣ, ಸಂಸ್ಕೃತಿ, ರಾಜಕೀಯ ಹಾಗೂ ಜೀವನಮಟ್ಟ ಕುಸಿಯುತ್ತಿದ್ದು, ಅದನ್ನು ರಕ್ಷಿಸಬೇಕಾಗಿದೆ” ಎಂದು ಅವರು ಹೇಳಿದರು.
ಇಸಿಐ ಎಸ್ಐಆರ್ ಜಾರಿಗೆ ತರುತ್ತಿರುವುದು ರಾಜ್ಯದಲ್ಲಿ ಬಿಜೆಪಿ–ಟಿಎಂಸಿ ದ್ವಿಪಕ್ಷೀಯ ರಾಜಕೀಯವನ್ನು ಬಲಪಡಿಸಲು ಮಾಡುವ ಪ್ರಯತ್ನ ಎಂದು ಸಲೀಂ ಅಭಿಪ್ರಾಯಪಟ್ಟರು.
ಆರ್ಜಿ ಕಾರ್ ಮೆಡಿಕಲ್ ಕಾಲೇಜಿನ ಇಂಟರ್ನ್ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ “ಅಭಯಾ” ತಾಯಿಯವರು ಬಿಜೆಪಿಗೆ ಸೇರ್ಪಡೆಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ತೋರಿರುವ ಕುರಿತು ಪ್ರತಿಕ್ರಿಯಿಸಿದ ಸಲೀಂ, ಆ ಕುಟುಂಬ ಸಂಕಷ್ಟದಲ್ಲಿದ್ದಾಗ ಡಿವೈಎಫ್ಐ (ಡೇಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ) ಕಾರ್ಯಕರ್ತರು, ವಿಶೇಷವಾಗಿ ಮೀನಾಕ್ಷಿ ಮುಖರ್ಜಿ ನೇತೃತ್ವದಲ್ಲಿ, ಪೊಲೀಸರು ಸೂಕ್ತ ಮರಣೋತ್ತರ ಪರೀಕ್ಷೆ ನಡೆಸುವವರೆಗೆ ಅಂತ್ಯಕ್ರಿಯೆ ಮುಂದುವರೆಯದಂತೆ ತಡೆದು ನ್ಯಾಯಸಮ್ಮತ ಪ್ರಕ್ರಿಯೆ ಖಾತ್ರಿಪಡಿಸಿದ್ದರು ಎಂದು ಹೇಳಿದರು.
“ಅವರ ತಾಯಿ ಯಾವ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂಬುದನ್ನು ನಾವು ನಿರ್ಧರಿಸಲು ಬಯಸುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ನೋಡಿ: ಪಿಚ್ಚರ್ ಪಯಣ – 170 | ಚಿತ್ರ : ಮ್ಯಾಗೆಲ್ಲನ್, ವಿಶ್ಲೇಷಣೆ : ಮ ಶ್ರಿ ಮುರಳಿ ಕೃಷ್ಣ Janashakthi Media
