ನವದೆಹಲಿ: 2029ರ ಲೋಕಸಭಾ ಚುನಾವಣೆಯೊಂದಿಗೇ ದೇಶಾದ್ಯಂತ ರಾಜ್ಯ ವಿಧಾನಸಭೆಗಳ ಚುನಾವಣೆಯನ್ನೂ ನಡೆಸುವ ‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾವನೆ ಜಾರಿಗೆ ಬರಬಹುದೆಂದು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಪಿ.ಪಿ. ಚೌಧರಿ ಹೇಳಿದ್ದಾರೆ. ಇದಕ್ಕಾಗಿ ಅಗತ್ಯ ಸಂವಿಧಾನ ತಿದ್ದುಪಡಿಗಳನ್ನು 2028ರೊಳಗೆ ಪೂರ್ಣಗೊಳಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಸಂವಿಧಾನದ ಹಲವು ವಿಧಿಗಳಲ್ಲಿ ತಿದ್ದುಪಡಿ ಅಗತ್ಯವಿದೆ. ಸಂಸತ್ತಿನ ಅನುಮೋದನೆಯ ಜತೆಗೆ ರಾಜ್ಯಗಳ ಸಹಕಾರವೂ ಬೇಕಾಗುತ್ತದೆ. ರಾಜ್ಯ ವಿಧಾನಸಭೆಗಳ ಅವಧಿಯನ್ನು ಲೋಕಸಭೆಯ ಅವಧಿಯೊಂದಿಗೆ ಹೊಂದಾಣಿಕೆ ಮಾಡುವ ಮೂಲಕ 2029ರಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಯಿದೆ ಎಂದು ಜೆಪಿಸಿ ಅಧ್ಯಕ್ಷರು ಹೇಳಿದ್ದಾರೆ.
ಇದನ್ನೂ ಓದಿ : ಕೆರೆ ಸ್ವಚ್ಛವಾದರೂ ಒಳಚರಂಡಿ ಸಮಸ್ಯೆ ಬಗೆಹರಿದಿಲ್ಲ: ಬೆಂಗಳೂರಿನ ಕೆರೆಗಳ ಅಧ್ಯಯನ
ಆದರೆ ‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾವನೆಗೆ ವಿರೋಧ ಪಕ್ಷಗಳು ಹಲವು ಗಂಭೀರ ಆಕ್ಷೇಪಗಳನ್ನು ವ್ಯಕ್ತಪಡಿಸಿವೆ. ಇದು ರಾಜ್ಯಗಳ ಸ್ವಾಯತ್ತತೆ, ಒಕ್ಕೂಟ ವ್ಯವಸ್ಥೆ ಮತ್ತು ಪ್ರಾದೇಶಿಕ ರಾಜಕೀಯದ ಮೇಲೆ ಪರಿಣಾಮ ಬೀರುವ ಅಪಾಯವಿದೆ ಎಂಬುದು ವಿಪಕ್ಷಗಳ ಪ್ರಮುಖ ಆತಂಕವಾಗಿದೆ. ಸರ್ಕಾರದ ಪ್ರಸ್ತಾವನೆಯನ್ನು ಕೇವಲ ಚುನಾವಣಾ ವೆಚ್ಚ ಕಡಿತದ ದೃಷ್ಟಿಯಿಂದ ನೋಡದೆ, ಅದರ ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಪರಿಣಾಮಗಳ ಕುರಿತು ವ್ಯಾಪಕ ಚರ್ಚೆ ನಡೆಸಬೇಕು ಎಂದು ಅವು ಒತ್ತಾಯಿಸುತ್ತಿವೆ.
ವಿಪಕ್ಷಗಳು ವ್ಯಕ್ತಪಡಿಸುತ್ತಿರುವ ಈ ಆತಂಕಗಳು ಮತ್ತು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸದೆ, ವ್ಯಾಪಕ ಒಮ್ಮತ ರೂಪಿಸಿಕೊಳ್ಳುವ ಬದಲು ಬಿಜೆಪಿ ಸರ್ಕಾರ ಪ್ರಸ್ತಾವನೆಯನ್ನು ಮುಂದಕ್ಕೆ ತಳ್ಳುತ್ತಿರುವುದು ಮೊಂಡುತನ ಮತ್ತು ತರಾತುರಿಯ ಅವಘಡಕ್ಕೆ ಸಾಕ್ಷಿಯಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ದೇಶದ ಚುನಾವಣಾ ವ್ಯವಸ್ಥೆಯನ್ನೇ ಬದಲಾಯಿಸುವಷ್ಟು ಮಹತ್ವದ ನಿರ್ಧಾರವನ್ನು ವಿಪಕ್ಷಗಳ ಸಲಹೆ ಹಾಗೂ ರಾಜ್ಯಗಳ ಸಮಾಲೋಚನೆಯಿಲ್ಲದೆ ಕೈಗೊಳ್ಳುವುದು ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನೇ ದುರ್ಬಲಗೊಳಿಸುವ ಅಪಾಯವಿದೆ.
ಇದನ್ನೂ ನೋಡಿ : RSS ಕಚೇರಿಯಲ್ಲಿ ‘ನಮಸ್ತೆ ಸದಾ ವತ್ಸಲೆ’ ಬದಲು ‘ವಂದೇ ಮಾತರಂ’ ಹಾಡಿ! ಪ್ರಿಯಾಂಕ್ ಖರ್ಗೆ ಸವಾಲು Janashakthi Media
