ದೇವಸ್ಥಾನದಲ್ಲಿ ಪೊಲೀಸ್‌ ಅಧಿಕಾರಿಗೆ ಬಿಜೆಪಿ ಶಾಸಕರ ಪುತ್ರಿಯಿಂದ ಕಪಾಳಮೋಕ್ಷ: ಸಿಸಿಟಿವಿಯಲ್ಲಿ ದೃಶ್ಯ ಬಹಿರಂಗ

ಮಂಡ್ಯ: ದೇವಸ್ಥಾನ ಪ್ರವೇಶದ ವಿಚಾರಕ್ಕೆ ಸಂಬಂಧಿಸಿದ ವಾಗ್ವಾದದ ವೇಳೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ಅವರು ಮಹಿಳಾ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಬಹಿರಂಗವಾಗಿದೆ. ಶ್ರೀರಂಗಪಟ್ಟಣದ ಆರತಿ ಉಕ್ಕಡ ದೇವಸ್ಥಾನದಲ್ಲಿ ಆಗಸ್ಟ್‌ 12ರಂದು ಭೀಮನ ಅಮಾವಾಸ್ಯೆ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.

ದೇವಸ್ಥಾನದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಮಂಡ್ಯ ಮಹಿಳಾ ಪೊಲೀಸ್‌ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಸವಿತಾ ಪಾಟೀಲ್‌ ಅವರು ನೀಡಿದ ದೂರಿನ ಪ್ರಕಾರ, ಐಶ್ವರ್ಯ ಅವರು ಸರದಿಯಲ್ಲಿ ನಿಲ್ಲದೆ ಗರ್ಭಗುಡಿ ಪ್ರವೇಶಿಸಲು ಮುಂದಾಗಿದ್ದರು. ಇತರ ಭಕ್ತರಿಗೆ ತೊಂದರೆಯಾಗದಂತೆ ಸರದಿಯಲ್ಲಿ ತೆರಳುವಂತೆ ಪೊಲೀಸ್‌ ಅಧಿಕಾರಿ ಸೂಚಿಸಿದ ಬಳಿಕ ವಾಗ್ವಾದ ನಡೆದಿದೆ. ಈ ವೇಳೆ ಐಶ್ವರ್ಯ ಅವರು ಪೊಲೀಸ್‌ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ : ಕರ್ನಾಟಕದ ಇತಿಹಾಸದಲ್ಲಿ  ಅಳಿದು ಹೋಗದ ಧ್ವನಿ ಸೂರಿ ಅವರದ್ದು : ಸಿದ್ಧರಾಮಯ್ಯ

ಸಿಸಿಟಿವಿ ದೃಶ್ಯದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ಬಳಿಕ ಪರಸ್ಪರ ಕಪಾಳಮೋಕ್ಷ ನಡೆದಿರುವುದು ಕಂಡುಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ಸವಿತಾ ಪಾಟೀಲ್‌ ಅವರು ಕ್ಯಾತನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಶ್ವರ್ಯ ಪರವಾಗಿಯೂ ಪೊಲೀಸ್‌ ಅಧಿಕಾರಿಯ ವಿರುದ್ಧ ಆರೋಪಗಳನ್ನು ಮಾಡಲಾಗಿದೆ ಎಂದು ವರದಿಯಾಗಿದೆ.

ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿಯ ವಿರುದ್ಧ ಸರ್ಕಾರಿ ಕರ್ತವ್ಯದಲ್ಲಿದ್ದ ಪೊಲೀಸ್‌ ಅಧಿಕಾರಿಯ ಮೇಲೆ ಹಲ್ಲೆ ಆರೋಪ ಕೇಳಿಬಂದಿರುವುದು ಇದೀಗ ರಾಜಕೀಯವಾಗಿಯೂ ಚರ್ಚೆಗೆ ಕಾರಣವಾಗಿದೆ. ಸಿಸಿಟಿವಿ ದೃಶ್ಯ ಬಹಿರಂಗಗೊಂಡ ಬಳಿಕ ಪ್ರಕರಣದ ಕುರಿತು ಮತ್ತಷ್ಟು ಗಮನ ಸೆಳೆದಿದ್ದು, ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

ಇದನ್ನೂ ನೋಡಿ : SIR ಕರಡು ಪಟ್ಟಿ ಪ್ರಕಟ: ಹೆಚ್ಚಲಿದೆಯೇ ಜನರ ಸಂಕಟ? Janashakthi Media

Donate Janashakthi Media

Leave a Reply

Your email address will not be published. Required fields are marked *