ನವ-ಉದಾರವಾದಿ ನೀತಿಯ ಕರ್ಮಫಲ ಕಾಡಲಾರಂಭಿಸಿದೆ

ಪ್ರೊ. ಪ್ರಭಾತ್‌ ಪಟ್ನಾಯಕ್‌

1992-93ರಲ್ಲಿ ರೂಪಾಯಿಯನ್ನು ʼಪರಿವರ್ತನೀಯʼಗೊಳಿಸಿದಾಗ ಒಂದು ಡಾಲರ್‌ಗೆ 22.74 ಮಟ್ಟದಲ್ಲಿದ್ದ ರೂಪಾಯಿಯು, ಇರಾನ್ ಮೇಲೆ ಯುಎಸ್-ಇಸ್ರೇಲಿ ದಾಳಿ ಮಾಡಿದ ಮುನ್ನಾದಿನದಂದು 91.08 ರೂಪಾಯಿಗಳ ಮಟ್ಟಕ್ಕೆ ಕುಸಿದಿತ್ತು. ಅದೀಗ ನೂರರತ್ತ ಕುಸಿಯುತ್ತಿದೆ. ರೂಪಾಯಿಯ ಪ್ರಸ್ತುತ ಕುಸಿತದ ಹೊಣೆಯನ್ನು ಸಾಮಾನ್ಯವಾಗಿ ಮೋದಿ ಸರ್ಕಾರದ ಮೇಲೆ ಹೊರಿಸಲಾಗುತ್ತದೆ. ನಿಜ, ಆರ್ಥಿಕ ಪರಿಸ್ಥಿತಿಯ ಬಗ್ಗೆ ಅತಿ ಕಡಿಮೆ ತಿಳುವಳಿಕೆ ಹೊಂದಿರುವ ಅದು ಯುಎಸ್-ಇಸ್ರೇಲಿ ಕೂಟದೊಂದಿಗೆ ಹೊಂದಿರುವ ಸಂಪೂರ್ಣ ಅನೈತಿಕ ಮತ್ತು ಅಸಮರ್ಥನೀಯ ಸಾಮೀಪ್ಯದಿಂದಾಗಿ ಬಿಕ್ಕಟ್ಟಿನ ಸನ್ನಿವೇಶದಿಂದ ಪಾರಾಗಲು  ಯಾವುದೇ ಉಪಾಯ ಹೂಡಲಾರದ ಅಸಹಾಯಕ ಪರಿಸ್ಥಿತಿಯಲ್ಲಿದೆ. ಆದರೂ, ಈ ಬಿಕ್ಕಟ್ಟು ತನ್ನ ಬೇರುಗಳನ್ನು ಬಹಳ ಹಿಂದೆಯೇ ಊರಿತ್ತು. ಮೂರನೇ ಜಗತ್ತಿನ ದೇಶಗಳ ಕರೆನ್ಸಿಯನ್ನು ವಿದೇಶಿ ಕರೆನ್ಸಿಗಳೊಂದಿಗೆ ಮುಕ್ತವಾಗಿ ಬದಲಾಯಿಸುವ ಮತ್ತು ಅದರ ವಿನಿಮಯ ದರವನ್ನು ಮಾರುಕಟ್ಟೆಯು ನಿರ್ಧರಿಸುವ ಏರ್ಪಾಟನ್ನು ಹೊಂದಬಹುದು ಎನ್ನುವ ನವಉದಾರವಾದದ ಎಣಿಕೆಯಲ್ಲಿ ಈ ಬಿಕ್ಕಟ್ಟಿನ ಬೇರುಗಳಿವೆ. ಇದು ಲಕ್ಷಾಂತರ ಮಂದಿ ದುಡಿಯುವ ಜನರ ಜೀವನವನ್ನು ಒಂದಷ್ಟು ಕರೆನ್ಸಿ ಸಟ್ಟಾಕೋರರ ಮರ್ಜಿಗೆ ಬಿಡಬೇಕು ಎನ್ನುವಂತಹ ಎಣಿಕೆ. ಜನರ ಜೀವನ ಮಟ್ಟಗಳನ್ನು ಸಟ್ಟಾಕೋರರಿಂದ ರಕ್ಷಿಸಬೇಕು ಎಂದಾದರೆ, ಅದಕ್ಕಿರುವ ಏಕೈಕ ಪರ್ಯಾಯವೆಂದರೆ, ಹಣಕಾಸು ಹೊರಹರಿವನ್ನೂ ಒಳಗೊಂಡಂತೆ ಬಂಡವಾಳದ ಮೇಲೆ ನಿಯಂತ್ರಣಗಳನ್ನು ಹಾಕುವುದು.
ಅನು:ಕೆ.ಎಂ.ನಾಗರಾಜ್

ರೂಪಾಯಿಯ ವಿನಿಮಯ ದರ ಒಂದು ಡಾಲರ್‌ಗೆ ತೊಂಬತ್ತಾರನ್ನು ಈಗಾಗಲೇ ದಾಟಿದೆ. ಅದರ ಮೌಲ್ಯದ ಕುಸಿತ ನಿಲ್ಲುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಮುಂಬರುವ ದಿನಗಳಲ್ಲಿ ಡಾಲರ್‌ ನೂರು ರೂಪಾಯಿಗಳನ್ನು ದಾಟುವ ಮಾತುಗಳು ಕೇಳಿಬರುತ್ತಿವೆ. ಈ ಕ್ಷಣದಲ್ಲಿ, ಏಷ್ಯಾದ ಕರೆನ್ಸಿಗಳ ಪೈಕಿ ಅತಿ ಕಳಪೆ ಸಾಧನೆಯ ದಾಖಲೆ ಹೊಂದಿರುವ ಕರೆನ್ಸಿ ಎಂದರೆ ಅದು ರೂಪಾಯಿಯೇ. ವಿಶ್ವ ಮಟ್ಟದಲ್ಲೂ ಅದರ ಪ್ರದರ್ಶನ ಕಳಪೆಯೇ. ರೂಪಾಯಿಯ ಮೌಲ್ಯ ಕುಸಿಯಲು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಕಾರಣವಾಗಿದೆ ಎಂದು ಮೋದಿ ಸರ್ಕಾರ ಹೇಳುತ್ತದೆ. ವಿನಿಮಯ ದರ ಏರಿಕೆಯ ನಿರೀಕ್ಷೆಯ ಮೇಲೆ ಮತ್ತು ಆ ನಿರೀಕ್ಷೆಯ ಕಾರಣದಿಂದ ವಿನಿಮಯದ ವಾಸ್ತವಿಕ ದರಗಳ ಮೇಲೆ ಯುದ್ಧವು ಒಂದು ಗಂಭೀರ ಪ್ರತಿಕೂಲ ಪರಿಣಾಮವನ್ನು ಬೀರಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಈ ಯುದ್ಧ ಆರಂಭವಾಗುವ ಬಹಳ ಹಿಂದೆಯೇ ರೂಪಾಯಿಯ ಮೌಲ್ಯ ಕುಸಿತ ಆರಂಭವಾಗಿತ್ತು. 2024ರ ಅಂತ್ಯದಲ್ಲಿ 85.47 ರೂಪಾಯಿಗಳ ಮಟ್ಟದಲ್ಲಿದ್ದ ಡಾಲರ್‌ ವಿನಿಮಯ ದರವು, ಇರಾನ್ ಮೇಲೆ ದಾಳಿಯಾದ ಮುನ್ನಾದಿನ (27.02.2026) 91.08  ರೂಪಾಯಿಗಳ ಮಟ್ಟಕ್ಕೆ ಅದಾಗಲೇ ಇಳಿದಾಗಿತ್ತು.

ರೂಪಾಯಿಯ ಈ ಪರಿಯ ಕುಸಿತವು, ಅದು ಯುದ್ಧದ ಮೊದಲಿನ ಕುಸಿತವೇ ಇರಲಿ ಅಥವಾ ನಂತರದ ಕುಸಿತವೇ ಇರಲಿ, ಭಾರತದಿಂದ ಹಣಕಾಸು (ಸ್ವದೇಶಿ ಮತ್ತು ವಿದೇಶಿ ಬಂಡವಾಳ) ಹೊರಹರಿದ ಕಾರಣದಿಂದಲೇ ಎಂಬುದಂತೂ ಸ್ಪಷ್ಟವಾಗಿದೆ. ಈ ಯುದ್ಧದಿಂದಾಗಿ ಭಾರತದ ಆರ್ಥಿಕ ಸಂಕಷ್ಟಗಳು ಹೆಚ್ಚುತ್ತವೆ ಎಂಬ ನಿರೀಕ್ಷೆಯ ಮೇಲೆ ಯುದ್ಧದ ನಂತರ ಗಮನಾರ್ಹ ಪ್ರಮಾಣದ ಹಣಕಾಸು ಹೊರಹರಿದಿದೆ ಎಂಬುದು ನಿಜ. ಆದರೆ, ಈ ಹೊರಹರಿವು, ಈ ಯುದ್ಧ ಆರಂಭವಾಗುವ ಬಹಳ ಹಿಂದೆಯೇ ಆರಂಭವಾಗಿತ್ತು. ಈ ಸನ್ನಿವೇಶದಲ್ಲಿ, 28.02.2026 (ಯುದ್ಧದ ಆರಂಭ) ಮತ್ತು 14.05.2026ರ ನಡುವೆ ವಿದೇಶಿ ವಿನಿಮಯ ಮೀಸಲುಗಳು ಶೇ. 5.2ರಷ್ಟು ಭಾರಿ ಇಳಿಕೆಯಾಗಿದ್ದರೂ ಸಹ, ರೂಪಾಯಿಯ ತೀವ್ರ ಕುಸಿತವನ್ನು ನಿಲ್ಲಿಸುವುದು ಸಾಧ್ಯವಾಗಿಲ್ಲ.

ಹಣಕಾಸು ಒಳಹರಿಯುವ ಮತ್ತು ಅದು ಹೊರಹರಿಯುವ ಎರಡೂ ಸಂದರ್ಭಗಳಲ್ಲಿ ಆರ್‌ಬಿಐ ಮಾಡುತ್ತಿರುವ ಹಸ್ತಕ್ಷೇಪದ ಪ್ರಮಾಣದಲ್ಲಿ ಒಂದು ಅಸಮತೆ ಇದೆ ಎಂಬ ಅಂಶವನ್ನು ಈ ಸಂದರ್ಭದಲ್ಲಿ ಗಮನಿಸಬೇಕಾಗುತ್ತದೆ. ಹಣಕಾಸು ಹೇರಳ ಪ್ರಮಾಣದಲ್ಲಿ ಒಳಹರಿಯುವಾಗ ದೇಶವು ತನ್ನ ವಿನಿಮಯ ದರ ಏರಿಕೆಯಾಗಲು (ಅಂದರೆ, ತನ್ನ ಕರೆನ್ಸಿಯ ಮೌಲ್ಯ ವರ್ಧಿಸಲು) ಬಿಡುವುದು ಸಾಧ್ಯವಿಲ್ಲ, ಏಕೆಂದರೆ, ಅದು “ಸಾಲ-ಪ್ರೇರಿತ ಅಪಕೈಗಾರಿಕೀಕರಣ”ಕ್ಕೆ ಕಾರಣವಾಗುತ್ತದೆ. ಅಂತಹ ಒಂದು ಸನ್ನಿವೇಶದಲ್ಲಿ ಆಮದುಗಳು ಅಗ್ಗವಾಗುತ್ತವೆ; ವಿದೇಶಿ ಉತ್ಪಾದಕರೊಂದಿಗೆ ಪೈಪೋಟಿ ನಡೆಸುವುದು ದೇಶೀಯ ಉತ್ಪಾದಕರಿಗೆ ಸಾಧ್ಯವಾಗುವುದಿಲ್ಲ; ಪರಿಣಾಮವಾಗಿ ನಿರುದ್ಯೋಗ ಹೆಚ್ಚುತ್ತದೆ ಮತ್ತು ದೇಶವು ಮತ್ತಷ್ಟು ಸಾಲ ಮಾಡಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಂತಹ ಒಂದು ಪರಿಸ್ಥಿತಿಯಲ್ಲಿ ದೇಶವು ತನ್ನ ವಿನಾಶಕ್ಕಾಗಿ ವಿದೇಶದಿಂದ ಸಾಲ ಪಡೆದಂತಾಗುತ್ತದೆ. ಅಂತಹ ಒಂದು ವಿನಾಶವನ್ನು ತಡೆಯುವ ಸಲುವಾಗಿ, ಕರೆನ್ಸಿಯ ಮೌಲ್ಯವರ್ಧನೆಯನ್ನು ಆರ್‌ಬಿಐ ತನ್ನ ಹಸ್ತಕ್ಷೇಪದ ಮೂಲಕ ತಡೆಯುತ್ತದೆ. ಅಂದರೆ, ಒಳಹರಿದ ವಿದೇಶಿ ವಿನಿಮಯವನ್ನು ಮೀಸಲುಗಳ ರೂಪದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಹೀಗೆ  ಸಂಗ್ರಹಿದ ಮೀಸಲುಗಳನ್ನು, ಹಣಕಾಸು ಹೊರ ಹರಿಯುವಾಗ ದೇಶೀಯ ಕರೆನ್ಸಿಯ ಅಪಮೌಲ್ಯವನ್ನು ತಡೆಯಲು ಬಳಸಬಹುದಲ್ಲವೇ ಎಂಬ ಭಾವನೆ ಮೂಡಬಹುದು. ಆದರೆ, ಆರ್‌ಬಿಐ ಹಸ್ತಕ್ಷೇಪದ ಪ್ರಮಾಣದಲ್ಲಿ ಅಸಮತೆ ಕಾಣಿಸಿಕೊಳ್ಳುವುದು ಇಲ್ಲಿಯೇ.

ಇಳಿಕೆಯಿಂದ ಮತ್ತಷ್ಟು ಇಳಿಕೆ

ಹಣಕಾಸು ಹೊರ ಹರಿಯುವಾಗ, ದೇಶೀಯ ಕರೆನ್ಸಿಯ ಅಪಮೌಲ್ಯವನ್ನು ತಡೆಯುವ ಸಲುವಾಗಿ ಡಾಲರ್‌ಗಳನ್ನು ಆರ್‌ಬಿಐ ಮಾರಾಟ ಮಾಡುತ್ತದೆ. ಆಗ ವಿದೇಶಿ ವಿನಿಮಯ ಸಂಗ್ರಹದ ಪ್ರಮಾಣ ಇಳಿಕೆಯಾಗುತ್ತದೆ. ಮೀಸಲುಗಳ ಈ ಇಳಿಕೆಯು ದೇಶೀಯ ಕರೆನ್ಸಿಯ ಮೌಲ್ಯದಲ್ಲಿ ಮತ್ತಷ್ಟು ಕುಸಿತವಾಗುತ್ತದೆ ಎನ್ನುವ ನಿರೀಕ್ಷೆಗಳನ್ನು ಹುಟ್ಟುಹಾಕುತ್ತದೆ, ಏಕೆಂದರೆ, ಆರ್‌ಬಿಐ ಈಗ ಹೊಂದಿರುವ ಮೀಸಲುಗಳ ಪ್ರಮಾಣ ಎಷ್ಟರಮಟ್ಟಿಗೆ  ಇಳಿಕೆಯಾಗಿದೆ ಎಂಬುದನ್ನು ಸಟ್ಟಾಕೋರರು ತಿಳಿದಿರುತ್ತಾರೆ. ಹಾಗಾಗಿ, ಇಂತಹ ಒಂದು ಪರಿಸ್ಥಿತಿಯಲ್ಲಿ ರೂಪಾಯಿಯ ಮೌಲ್ಯದ ಇಳಿಕೆ ನಿಲ್ಲುವುದಿಲ್ಲ ಮತ್ತು ಈ ಇಳಿಕೆಯೇ ಮತ್ತಷ್ಟು ಇಳಿಕೆಗೆ ಕಾರಣವಾಗುತ್ತದೆ. ಆದ್ದರಿಂದ, ರಿಸರ್ವ್‌ ಬ್ಯಾಂಕಿನಲ್ಲಿರುವ ವಿದೇಶೀ ವಿನಿಮಯ ಮೀಸಲು ಸಂಗ್ರಹದ ಪ್ರಮಾಣವು ಎಷ್ಟೇ ದೊಡ್ಡದಿದ್ದರೂ, ಮೀಸಲುಗಳನ್ನು ಇಳಿಕೆ ಮಾಡುವ ಮೂಲಕ ಕರೆನ್ಸಿಯ ಮೌಲ್ಯದ ಇಳಿಕೆಯನ್ನು ನಿಲ್ಲಿಸುವುದು ಕಷ್ಟವೇ ಸರಿ. ಈ ರೀತಿಯಲ್ಲಿ, ದೇಶೀಯ ಕರೆನ್ಸಿ ಮೌಲ್ಯವರ್ಧನೆಯನ್ನು ಸುಲಭವಾಗಿ ತಡೆಯಬಹುದಾದರೂ, ಕರೆನ್ಸಿಯ ಅಪಮೌಲ್ಯವನ್ನು ತಡೆಯುವುದು ಹೆಚ್ಚು ಕಷ್ಟಕರವಾಗುತ್ತದೆ. ತಮ್ಮ ವ್ಯಾಪಾರ ಖಾತೆಯಲ್ಲಿ ಮತ್ತು ತಮ್ಮ ಚಾಲ್ತಿ ಖಾತೆಯಲ್ಲಿ ಕೊರತೆಯನ್ನು ಸತತವಾಗಿ ಹೊಂದಿರುವ ದೇಶಗಳ ವಿಷಯದಲ್ಲಂತೂ ಈ ಮಾತು ಇನ್ನಷ್ಟು ನಿಜವೇ, ಏಕೆಂದರೆ, ಇದ್ದಕ್ಕಿಂದತೆಯೇ ಕರೆನ್ಸಿಯ ಅಪಮೌಲ್ಯ ಸಂಭವಿಸಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಂತಹ ದೇಶಗಳಲ್ಲಿ ಕರೆನ್ಸಿಯ ಮೌಲ್ಯದ ಚಲನೆ ಒಂದೇ ದಿಕ್ಕಿನಲ್ಲಿ ಮಾತ್ರ ಇರುತ್ತದೆ ಮತ್ತು ಅದು ಕೆಳಮುಖವಾಗಿಯೇ ಇರುತ್ತದೆ.

ಇನ್ನೂ ಎರಡು ಅಂಶಗಳು ಕರೆನ್ಸಿ-ಅಪಮೌಲ್ಯಗೊಳ್ಳುವ ಪ್ರಕ್ರಿಯೆಯನ್ನು ಬಲಪಡಿಸುತ್ತವೆ: ಮೊದಲನೆಯದು, ಕರೆನ್ಸಿ ಅಪಮೌಲ್ಯದ ಸ್ವಯಂ-ಚಾಲನಾ ಸ್ವರೂಪ; ತೈಲದಂತಹ ಪ್ರಮುಖ ಆಮದು-ಲಾಗುವಾಡುಗಳ ವೆಚ್ಚಗಳ ಹೆಚ್ಚಳದ ಮೂಲಕ ಉಂಟಾಗುವ ಕರೆನ್ಸಿ-ಅಪಮೌಲ್ಯವು ಹಣದುಬ್ಬರವನ್ನು ಪ್ರಚೋದಿಸುತ್ತದೆ ಮತ್ತು ಇದು ಕರೆನ್ಸಿಯ ಮೌಲ್ಯ ಮತ್ತಷ್ಟು ಕುಸಿಯುತ್ತದೆ ಎನ್ನುವ ನಿರೀಕ್ಷೆಗಳನ್ನು ಹುಟ್ಟುಹಾಕುತ್ತದೆ. ಎರಡನೆಯದು, ಕರೆನ್ಸಿ-ಅಪಮೌಲ್ಯಗೊಳ್ಳುವ ಕಾರಣದಿಂದಾಗಿ ಮತ್ತು ತೆರಿಗೆ ಕಾನೂನುಗಳ ಹಾಗೂ ತಮ್ಮ ಸುಖ-ಸುರಕ್ಷತೆಗೆ ಸಂಬಂಧಿಸಿದ ಇತರ ಕಾರಣಗಳಿಂದಾಗಿ, ಜಾಗತಿಕ ದಕ್ಷಿಣದ ಶ್ರೀಮಂತರು ತಾವು ಹೊಂದಿರುವ ಸಂಪತ್ತನ್ನು ತಮ್ಮದೇ ದೇಶಗಳಿಂದ ಹೊರಗೊಯ್ದು ಅದನ್ನು “ಸುರಕ್ಷಿತ ತಾಣ”ಗಳಲ್ಲಿ ಇರಿಸುವ ಪ್ರವೃತ್ತಿಯ ಅಂಶವೇ. ಆದ್ದರಿಂದ, ಇಂತಹ ನಡವಳಿಕೆಗಳಿಂದಾಗಿ ಕರೆನ್ಸಿ-ಅಪಮೌಲ್ಯಗೊಳ್ಳುವ ಒಂದು ಸ್ವಾಯತ್ತ ಪ್ರವೃತ್ತಿಯಿರುತ್ತದೆ.

ಆದ್ದರಿಂದ, ವಿನಿಮಯ ದರದ “ಸಮತೋಲ” ಎಂಬ ಒಂದು ಕೊಳ್ಳಿ ದೆವ್ವವನ್ನು ಅಟ್ಟಿಸಿಕೊಂಡು ಹೋಗುವಲ್ಲಿ ದುಡಿಯುವ ಜನರ ಜೀವನವನ್ನು ಹಿಂಡುವ, ಈ ಒಂದು ಅಂತ್ಯವಿಲ್ಲದ ಕರೆನ್ಸಿಯ ಅಪಮೌಲ್ಯ ಮತ್ತು ಹಣದುಬ್ಬರದ ಆವರ್ತನಕ್ಕೆ ವಿರುದ್ಧವಾಗಿ ಡಾಲರ್‌ ಎದುರಾಗಿ ಜಾಗತಿಕ ದಕ್ಷಿಣದ ಕರೆನ್ಸಿಗಳನ್ನು, ವಿನಿಮಯ ದರ ನಿಗದಿಯ ಮೂಲಕ ಅನೇಕಾನೇಕ ವರ್ಷಗಳ ಕಾಲ ಸ್ಥಿರಪಡಿಸಲಾಗಿತ್ತು ಮತ್ತು ಆ ನಿಗದಿತ  ದರಗಳಲ್ಲಿ ಈ ವಿದೇಶಿ ವಿನಿಮಯವನ್ನು ಪಡಿತರಕ್ಕೊಳಪಡಿಸಲಾಗಿತ್ತು. ಸಂಪತ್ತು ಹೊಂದಿರುವ ದೇಶೀಯರ (ದೇಶದಿಂದ ಕಳ್ಳತನದಲ್ಲಿ ಪಲಾಯನ ಮಾಡುವ) ಮತ್ತು ಅಂತರರಾಷ್ಟ್ರೀಯ ಸಟ್ಟಾಕೋರರ (ಕಾಲಕಾಲಕ್ಕೆ ಕರೆನ್ಸಿಯ ಅಪಮೌಲ್ಯವನ್ನು ನಿರೀಕ್ಷಿಸುವ) ವರ್ತನೆಯಿಂದಾಗಿ ವಾಸ್ತವಿಕವಾಗಿ ಅಂತಹ “ಸಮತೋಲನ” ಎಂಬುದೇನೂ ಇಲ್ಲ. ಉದಾಹರಣೆಗೆ, ಭಾರತದಲ್ಲಿ 1949ರಲ್ಲಿ ರೂಪಾಯಿಯು ಅಪಮೌಲ್ಯಗೊಂಡಿತ್ತು (ಅದೇ ಸಮಯದಲ್ಲಿ ಪೌಂಡ್ ಸ್ಟರ್ಲಿಂಗ್‌ ಕೂಡ ಅಪಮೌಲ್ಯಗೊಂಡಿತ್ತು) ಮತ್ತು 1966ರಲ್ಲಿ ಮತ್ತೊಮ್ಮೆ ರೂಪಾಯಿಯನ್ನು ಅಪಮೌಲ್ಯಗೊಳಿಸಿದಾಗ ಅದನ್ನು ಡಾಲರ್‌ ಎದುರಿಗೆ ಸರಿಸುಮಾರು ಐದು ರೂಪಾಯಿಗಳ ಮಟ್ಟದಲ್ಲಿ ಸ್ಥಿರಗೊಳಿಸಲಾಗಿತ್ತು. ಇದು ಕನಿಷ್ಠ ಪಕ್ಷ ಈ ಮೂಲದಿಂದ ಉಂಟಾಗುವ ಹಣದುಬ್ಬರದ ಒತ್ತಡಗಳನ್ನು ತಡೆದಿತ್ತು.

ಎಲ್ಲವನ್ನೂ ಬದಲಿಸಿದ ನವ-ಉದಾರವಾದೀ ಧೋರಣೆ

ನವ-ಉದಾರವಾದಿ ನೀತಿಗಳ ಅನುಸರಣೆಯು ಇದೆಲ್ಲವನ್ನೂ ಬದಲಾಯಿಸಿತು. ರೂಪಾಯಿಯನ್ನು ಸಂಪೂರ್ಣವಾಗಿ ಪರಿವರ್ತನೀಯ (ಅಂದರೆ, ರೂಪಾಯಿಯನ್ನು ವಿದೇಶಿ ಕರೆನ್ಸಿಗಳೊಂದಿಗೆ ಮುಕ್ತವಾಗಿ ಬದಲಾಯಿಸುವುದು) ಗೊಳಿಸದಿದ್ದರೂ, ಅದರ ವಿನಿಮಯ ದರವನ್ನು ಮಾರುಕಟ್ಟೆಯ ನಿರ್ಧಾರಕ್ಕೆ ಬಿಡಲಾಯಿತು. ಮತ್ತು, ವಿಶೇಷವಾಗಿ, ಜಾಗತಿಕ “ಹೂಡಿಕೆದಾರರು” ಬಯಸಿದಾಗ ಅವರು ಡಾಲರ್‌ಗಳನ್ನು ಭಾರತದೊಳಕ್ಕೆ ತರಲು ಮತ್ತು ಭಾರತದಿಂದ ಹೊರಗೊಯ್ಯಲು ಅನುಮತಿಸಲಾಯಿತು. ಆರಂಭದಲ್ಲಿ ಇದು ಒಂದು ಮುಖ್ಯವಾದ ವಿಷಯವೆಂದು ಅನ್ನಿಸಿರಲಿಲ್ಲ. ಭಾರತದ ಹಣಕಾಸು ಮಾರುಕಟ್ಟೆಯನ್ನು ಜಾಗತಿಕ ಹಣಕಾಸು “ಹೂಡಿಕೆದಾರರಿಗೆ” ಸುದೀರ್ಘವಾಗಿ ಮುಚ್ಚಲಾಗಿತ್ತು. ಅದನ್ನು ವಿದೇಶಿ ಹೂಡಿಕೆದಾರರಿಗೆ ತೆರೆದಿಟ್ಟಾಗ ಒಂದು ಗಮನಾರ್ಹ ಪ್ರಮಾಣದ ಹಣಕಾಸು ಒಳಹರಿಯಿತು. ಈ ಒಳಹರಿವಿನ ಪ್ರಮಾಣವು ದೇಶದ ಪಾವತಿ ಶೇಷದ ಅಗತ್ಯಗಳಿಗೆ ಬೇಕಾದುದಕ್ಕಿಂತಲೂ ಬಹು ದೊಡ್ಡದಾಗಿತ್ತು. ಮತ್ತು, ಫೆಬ್ರವರಿ 27, 2026ರಂದು ಕೊನೆಗೊಂಡ ವಾರದಲ್ಲಿ 728.5 ಶತಕೋಟಿ ಡಾಲರ್‌ಗಳ ಅತ್ಯುಚ್ಛ ಮಟ್ಟವನ್ನು ತಲುಪಿದ ವಿದೇಶಿ ವಿನಿಮಯ ಮೀಸಲುಗಳ ಬೃಹತ್‌ ಸಂಗ್ರಹವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಮಿಸಿತ್ತು. ಆದರೆ ಈ ಅವಧಿಯಲ್ಲಿಯೂ ಸಹ, ನಾವು ಮೇಲೆ ಉಲ್ಲೇಖಿಸಿದ ಕೇಂದ್ರ ಬ್ಯಾಂಕಿನ ಅಸಮ ಪ್ರಮಾಣದ ಮಧ್ಯಪ್ರವೇಶದಿಂದಾಗಿ, ಕಾಲಾನಂತರದಲ್ಲಿ ಮೀಸಲುಗಳ ಪ್ರಮಾಣವು ಹೆಚ್ಚಾಗುತ್ತಿದ್ದರೂ, 1992-93ರಲ್ಲಿ ರೂಪಾಯಿಯ ಪರಿವರ್ತನೆಯನ್ನು ಅನುಮತಿಸಿದಾಗ ಒಂದು ಡಾಲರ್‌ಗೆ 22.74 ಮಟ್ಟದಲ್ಲಿದ್ದ ರೂಪಾಯಿಯು, ಇರಾನ್ ಮೇಲೆ ಯುಎಸ್-ಇಸ್ರೇಲಿ ದಾಳಿ ಮಾಡಿದ ಮುನ್ನಾದಿನದಂದು 91.08 ರೂಪಾಯಿಗಳ ಮಟ್ಟಕ್ಕೆ ಕುಸಿದಿತ್ತು. ಒಟ್ಟಾರೆಯಾಗಿ ದೇಶಕ್ಕೆ ಹಣಕಾಸು ಹರಿದು ಬರುತ್ತಿದ್ದ ಅವಧಿಯಲ್ಲಿಯೂ ರೂಪಾಯಿಯು ಅಪಮೌಲ್ಯಗೊಳ್ಳುತ್ತಲೇ ಹೋಗಿತ್ತು.

ವಿನಿಮಯ ದರದ “ಸಮತೋಲ” ಎಂಬ ಒಂದು ಕೊಳ್ಳಿ ದೆವ್ವವನ್ನು ಅಟ್ಟಿಸಿಕೊಂಡು ಹೋಗುವಲ್ಲಿ ದುಡಿಯುವ ಜನರ ಜೀವನವನ್ನು ಹಿಂಡುವ,  ಒಂದು ಅಂತ್ಯವಿಲ್ಲದ ಕರೆನ್ಸಿಯ ಅಪಮೌಲ್ಯ ಮತ್ತು ಹಣದುಬ್ಬರದ ಆವರ್ತನಕ್ಕೆ ವಿರುದ್ಧವಾಗಿ ಡಾಲರ್‌ ಎದುರಾಗಿ ಜಾಗತಿಕ ದಕ್ಷಿಣದ ಕರೆನ್ಸಿಗಳನ್ನು, ವಿನಿಮಯ ದರ ನಿಗದಿಯ ಮೂಲಕ ಅನೇಕಾನೇಕ ವರ್ಷಗಳ ಕಾಲ ಸ್ಥಿರಪಡಿಸಲಾಗಿತ್ತು ಮತ್ತು ಆ ನಿಗದಿತ  ದರಗಳಲ್ಲಿ ಈ ವಿದೇಶಿ ವಿನಿಮಯವನ್ನು ಪಡಿತರಕ್ಕೊಳಪಡಿಸಲಾಗಿತ್ತು. ಆದರೆ ಈಗ ಸಂಪತ್ತು ಹೊಂದಿರುವ ದೇಶೀಯರ (ದೇಶದಿಂದ ಕಳ್ಳತನದಲ್ಲಿ ಪಲಾಯನ ಮಾಡುವ) ಮತ್ತು ಅಂತರರಾಷ್ಟ್ರೀಯ ಸಟ್ಟಾಕೋರರ (ಕಾಲಕಾಲಕ್ಕೆ ಕರೆನ್ಸಿಯ ಅಪಮೌಲ್ಯವನ್ನು ನಿರೀಕ್ಷಿಸುವ) ವರ್ತನೆಯಿಂದಾಗಿ ವಾಸ್ತವಿಕವಾಗಿ ಅಂತಹ “ಸಮತೋಲನ” ಎಂಬುದೇನೂ ಇಲ್ಲ.

ಆದರೆ, ಹಿಂದಿನ ಪ್ರಕರಣಗಳಿಗೆ ಹೋಲಿಸಿದರೆ ರೂಪಾಯಿ ಪ್ರಸ್ತುತ ಕುಸಿತವು ಸಂಪೂರ್ಣವಾಗಿ ಭಿನ್ನವಾಗಿದೆ. ಮೊದಲನೆಯದಾಗಿ, ಹೋಲಿಸಬಹುದಾದ ಅವಧಿಯಲ್ಲಿ ರೂಪಾಯಿಯು ಮೊದಲಿಗಿಂತಲೂ ತೀವ್ರವಾಗಿ ಕುಸಿಯುತ್ತಿದೆ. ಮತ್ತು, ಎರಡನೆಯದಾಗಿ, ಮತ್ತೊಂದು ಸುತ್ತಿನ ಸಟ್ಟಾಕೋರ ದಾಳಿಗಳು ಅದನ್ನು ಮತ್ತಷ್ಟು ಕೆಳಕ್ಕೆ ಕೊಂಡೊಯ್ಯುವ ಮೊದಲು ಅದು ಪೂರ್ವಾಲೋಚನೆಯಿಲ್ಲದೆ ಬಂದು ಕುಳಿತಿರುವ ತತ್ಕಾಲಿಕ ಜಾಗದಲ್ಲಿ  ರೂಪಾಯಿಯು ಒಂದಿಷ್ಟು ಸಮಯ ಸ್ಥಿರವಾಗಿ ಉಳಿಯುವ ಸಾಧ್ಯತೆ ಅಸಂಭವ ಎಂದು ತೋರುತ್ತದೆ. ಇದು ಎರಡು ಕಾರಣಗಳಿಂದಾಗಿ ಹೀಗಾಗುತ್ತದೆ: ಮೊದಲನೆಯದು, ಇರಾನಿನ ಮೇಲೆ ನಡೆಯುತ್ತಿರುವ ಯುದ್ಧವು ಕೊನೆಗೊಳ್ಳುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ, ಏಕೆಂದರೆ, ಅಮೆರಿಕ ಸೋಲನ್ನು ಒಪ್ಪಿಕೊಳ್ಳಲು ಬಯಸುವುದಿಲ್ಲ ಮತ್ತು ಮತ್ತೊಂದೆಡೆ ಯುದ್ಧವನ್ನು ತೀವ್ರಗೊಳಿಸಲೂ ಅಮೆರಿಕ ಸಮರ್ಥವಾಗಿಲ್ಲ. ಮತ್ತು, ಯುದ್ಧವು ನಡೆಯತ್ತಿರುವ ವರೆಗೂ, ರೂಪಾಯಿಯ ಕುಸಿತವೂ ಮುಂದುವರಿಯುತ್ತದೆ ಮತ್ತು ಅದರ ಪರಿಣಾಮವಾಗಿ ಭಾರತದ ಪಾವತಿ ಶೇಷದ ಮೇಲಿನ ಒತ್ತಡವೂ ಮುಂದುವರಿಯುತ್ತದೆ. ಮತ್ತು, ಎರಡನೆಯದಾಗಿ, ನವ-ಉದಾರವಾದಿ ವ್ಯವಸ್ಥೆಯ ಪರಿಣಾಮವಾಗಿ ವಿಶ್ವ ಬಂಡವಾಳಶಾಹಿಯ ಸ್ಥಗಿತತೆಯು, ಬಂಡವಾಳಶಾಹಿ ಬಿಕ್ಕಟ್ಟನ್ನು ದಕ್ಷಿಣದ ಜನರಿಗೆ “ರಫ್ತು” ಮಾಡುವ ಮೂಲಕ ಸ್ವದೇಶದ ಬಿಕ್ಕಟ್ಟನ್ನು ನಿವಾರಿಸುವ ಒಂದು ಮಾರ್ಗವಾಗಿ,  ವಿಶೇಷವಾಗಿ ಭಾರತವೂ ಸೇರಿದಂತೆ ಜಾಗತಿಕ ದಕ್ಷಿಣದ ದೇಶಗಳ ಮೇಲೆ ಅಸಮಾನ ವ್ಯಾಪಾರ ಒಪ್ಪಂದಗಳನ್ನು ಹೇರುವಂತೆ ಅಮೆರಿಕವನ್ನು ಪ್ರೇರೇಪಿಸಿದೆ. ಅಂತಹ ಅಸಮಾನ ವ್ಯಾಪಾರ ಒಪ್ಪಂದಗಳನ್ನು ಭಾರತದ ಮೇಲೆ ಹೇರಲಾಗಿರುವುದರಿಂದ, ತನ್ನ ಪಾವತಿ ಶೇಷದ ಇತ್ಯರ್ಥ ಮತ್ತು ಅದರಿಂದಾಗಿ ರೂಪಾಯಿಯು ನಿರಂತರ ಒತ್ತಡವನ್ನು ಭಾರತ ಎದುರಿಸಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನವ-ಉದಾರವಾದಿ ನೀತಿಯನ್ನು ಅನುಸರಿಸಿದುದರ ಕರ್ಮಫಲವು ಕಾಡಲಾರಂಭಿಸುತ್ತದೆ.

ಮೂಲ ಬೇರುಗಳು ಎಲ್ಲಿವೆ?

ರೂಪಾಯಿಯ ಪ್ರಸ್ತುತ ಕುಸಿತದ ಹೊಣೆಯನ್ನು ಮೋದಿ ಸರ್ಕಾರದ ಮೇಲೆ ಹೊರಿಸುವುದು ಸಾಮಾನ್ಯವಾಗಿದೆ. ನಿಜ, ಆರ್ಥಿಕ ಪರಿಸ್ಥಿತಿಯ ಬಗ್ಗೆ ಅತಿ ಕಡಿಮೆ ತಿಳುವಳಿಕೆ ಹೊಂದಿರುವ ಮೋದಿ ಸರ್ಕಾರವು ಯುಎಸ್-ಇಸ್ರೇಲಿ ಕೂಟದೊಂದಿಗೆ ಹೊಂದಿರುವ ಸಂಪೂರ್ಣ ಅನೈತಿಕ ಮತ್ತು ಅಸಮರ್ಥನೀಯ ಸಾಮೀಪ್ಯದಿಂದಾಗಿ ಬಿಕ್ಕಟ್ಟಿನ ಸನ್ನಿವೇಶದಿಂದ ಪಾರಾಗಲು  ಯಾವುದೇ ಉಪಾಯ ಹೂಡಲಾರದ ಅಸಹಾಯಕ ಪರಿಸ್ಥಿತಿಯಲ್ಲಿದೆ(ಪಾಕಿಸ್ತಾನ ಕೂಡ ಇಷ್ಟು ಅಸಹಾಯಕ ಪರಿಸ್ತಿತಿಯಲ್ಲಿಲ್ಲ). ಆದರೂ, ಈ ಬಿಕ್ಕಟ್ಟು ತನ್ನ ಬೇರುಗಳನ್ನು ಬಹಳ ಹಿಂದೆಯೇ ಊರಿತ್ತು. ಹಾಗೆ ನೋಡಿದರೆ, ಈ ಬೇರುಗಳು ನವ-ಉದಾರವಾದದಲ್ಲಿ ಊರಿವೆ. ಅಂದರೆ, ಮೂರನೇ ಜಗತ್ತಿನ ದೇಶಗಳ ಕರೆನ್ಸಿಯನ್ನು, ಮತ್ತು ಅದೂ ಕೂಡ ಬಹಳ ವರ್ಷಗಳಿಂದಲೂ ವ್ಯಾಪಾರ ಕೊರತೆಯ ಸಮಸ್ಯೆಯಿಂದ ಬಳಲುತ್ತಿರುವ ದೇಶದ ಕರೆನ್ಸಿಯನ್ನು, ವಿದೇಶಿ ಕರೆನ್ಸಿಗಳೊಂದಿಗೆ ಮುಕ್ತವಾಗಿ ಬದಲಾಯಿಸುವ ಮತ್ತು ಅದರ ವಿನಿಮಯ ದರವನ್ನು ಮಾರುಕಟ್ಟೆಯು ನಿರ್ಧರಿಸುವ ಏರ್ಪಾಟನ್ನು ಹೊಂದಬಹುದು ಎನ್ನುವ ನವ-ಉದಾರವಾದದ ಎಣಿಕೆಯಲ್ಲಿ ಈ ಬಿಕ್ಕಟ್ಟಿನ ಬೇರುಗಳಿವೆ. ಈ ಪರಿಯ ಎಣಿಕೆಯು ಲಕ್ಷಾಂತರ ಮಂದಿ ದುಡಿಯುವ ಜನರ ಜೀವನವನ್ನು ಒಂದಷ್ಟು ಕರೆನ್ಸಿ ಸಟ್ಟಾಕೋರರ ಮರ್ಜಿಗೆ ಬಿಡಬೇಕು ಎನ್ನುವುದಕ್ಕೆ ಸಮನಾಗಿರುತ್ತದೆ.

ಮೂರನೇ ಜಗತ್ತಿನ ದೇಶಗಳ ಕರೆನ್ಸಿಯನ್ನು, ಮತ್ತು ಅದೂ ಕೂಡ ಬಹಳ ವರ್ಷಗಳಿಂದಲೂ ವ್ಯಾಪಾರ ಕೊರತೆಯ ಸಮಸ್ಯೆಯಿಂದ ಬಳಲುತ್ತಿರುವ ದೇಶದ ಕರೆನ್ಸಿಯನ್ನು, ವಿದೇಶಿ ಕರೆನ್ಸಿಗಳೊಂದಿಗೆ ಮುಕ್ತವಾಗಿ ಬದಲಾಯಿಸುವ ಮತ್ತು ಅದರ ವಿನಿಮಯ ದರವನ್ನು ಮಾರುಕಟ್ಟೆಯು ನಿರ್ಧರಿಸುವ ಏರ್ಪಾಟನ್ನು ಹೊಂದಬಹುದು ಎನ್ನುವ ನವ-ಉದಾರವಾದದ ಎಣಿಕೆಯಲ್ಲಿ ಈ ಬಿಕ್ಕಟ್ಟಿನ ಬೇರುಗಳಿವೆ. ಈ ಪರಿಯ ಎಣಿಕೆಯು ಲಕ್ಷಾಂತರ ಮಂದಿ ದುಡಿಯುವ ಜನರ ಜೀವನವನ್ನು ಒಂದಷ್ಟು ಕರೆನ್ಸಿ ಸಟ್ಟಾಕೋರರ ಮರ್ಜಿಗೆ ಬಿಡಬೇಕು ಎನ್ನುವುದಕ್ಕೆ ಸಮನಾಗಿರುತ್ತದೆ. 

ರೂಪಾಯಿಯ ಮೇಲೆ 2013ರಲ್ಲಿ ಇದೇ ರೀತಿಯ ಸಟ್ಟಾಕೋರ ದಾಳಿ ನಡೆದಾಗ ಹಿಂದಿನ ಸರ್ಕಾರ ಕೈಗೊಂಡ ಕ್ರಮಗಳ ರೀತಿಯಲ್ಲಿ ಸರ್ಕಾರವು ಬಡ್ಡಿ ದರವನ್ನು (ಸರ್ಕಾರದ ಕೆಲವು ನಿರ್ದಿಷ್ಟ ಬಾಂಡ್‌ಗಳ ಮೇಲೆ) ಏರಿಸುವ ಅಥವಾ ಕೆಲವು ತೆರಿಗೆ ರಿಯಾಯಿತಿಗಳ ರೂಪದಲ್ಲಿ ಕೆಲವು ಆಕರ್ಷಣೆಗಳನ್ನು ಒದಗಿಸುವ ಮೂಲಕ ಸಟ್ಟಾಕೋರರನ್ನು ತುಷ್ಟೀಕರಿಸಬಹುದು. ಆದರೆ, ಇಂತಹ ಕ್ರಮಗಳು ತಕ್ಷಣವೇ  ದುಡಿಯುವ ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ, ಅವರನ್ನು ಹಣಕಾಸು ಸಂಪನ್ಮೂಲಗಳಿಂದ ದೂರ  ತಳ್ಳುತ್ತವೆ ಅಥವಾ ಬಡ್ಡಿ ದರ ಏರಿಕೆಯು ಉಂಟುಮಾಡುವ ಆರ್ಥಿಕ ಹಿಂಜರಿತ ದುಷ್ಪರಿಣಾಮಗಳಿಗೆ ಒಳಪಡಿಸುತ್ತವೆ. ಮಿಗಿಲಾಗಿ, ಈ ಕ್ರಮಗಳು ರೂಪಾಯಿಯ ಕುಸಿತವನ್ನು ಸ್ವಲ್ಪ ಸಮಯದವರೆಗೆ ಬಹುಶಃ ನಿಲ್ಲಿಸಿದರೂ, ಅದು ಕೇವಲ ಒಂದು ಅಲ್ಪಾವಧಿಯ ಮತ್ತು ತಾತ್ಕಾಲಿಕ ನಿಲುಗಡೆಯಾಗಿರುತ್ತದೆ. ಮತ್ತೆ ಕುಸಿತ ಪ್ರಾರಂಭವಾಗುತ್ತದೆ. ಅದು ಜನರಿಂದ ಮತ್ತಷ್ಟು ತ್ಯಾಗ-ಬಲಿದಾನಗಳನ್ನು ಒತ್ತಾಯಿಸುತ್ತದೆ. ಆದ್ದರಿಂದ, ಅರ್ಥವ್ಯವಸ್ಥೆಯು ಕಾರ್ಯಸಾಧುವಾಗಿರಬೇಕು ಎಂದಾದರೆ ಮತ್ತು ಜನರ ಜೀವನ ಮಟ್ಟಗಳನ್ನು ಸಟ್ಟಾಕೋರರಿಂದ ರಕ್ಷಿಸಬೇಕು ಎಂದಾದರೆ, ವಿನಿಮಯ ದರವನ್ನು ನಿಗದಿಪಡಿಸುವ ಮೂಲಕ ರೂಪಾಯಿಯ ಮೌಲ್ಯವನ್ನು ಸ್ಥಿರಪಡಿಸಬೇಕಾಗುತ್ತದೆ ಮತ್ತು ವಿದೇಶಿ ವಿನಿಮಯದ ಬಳಕೆಯ ಮೇಲೆ ನೇರ ನಿಯಂತ್ರಣಗಳನ್ನು (ಹಣಕಾಸು ಹೊರಹರಿವನ್ನೂ ಒಳಗೊಂಡಂತೆ ಬಂಡವಾಳದ ಮೇಲೆ ನಿಯಂತ್ರಣಗಳನ್ನು) ಹಾಕಲೇಬೇಕಾಗುತ್ತದೆ. ಇದನ್ನು ಬಿಟ್ಟರೆ ಬೇರೆ ಪರ್ಯಾಯವಿಲ್ಲ.

 

 

Donate Janashakthi Media

Leave a Reply

Your email address will not be published. Required fields are marked *