ಕೇಳಿದ ಖಾತೆ ನೀಡದ್ದಕ್ಕೆ ಬೇಸರ; ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ರಾಮಲಿಂಗಾ ರೆಡ್ಡಿ

ಬೆಂಗಳೂರು :ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದಿದ್ದಕ್ಕೆ ಬೇಸರಗೊಂಡಿರುವ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮಾರನೇ ದಿನವೇ ಖಾತೆ ಹಂಚಿಕೆ ವಿಚಾರದಲ್ಲಿ ಹಲವು ಸಚಿವರು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಪ್ರಭಾವಿ ಹಾಗೂ ಹಿರಿಯ ನಾಯಕರಾಗಿರುವ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದರು. ಆದರೆ, ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡದೆ ಜಲಸಂಪನ್ಮೂಲ ಖಾತೆ ಹಂಚಿಕೆ ಮಾಡಿದ್ದು, ಇದು ರಾಮಲಿಂಗಾರೆಡ್ಡಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಇಂದು ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಕೊಟ್ಟರೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡಿ, ಇಲ್ಲದಿದ್ದರೇ ಸಚಿವ ಸ್ಥಾನವೇ ಬೇಡ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಅಲ್ಲದೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಹ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ರಚನೆ ಸಂದರ್ಭದಲ್ಲಿ ಹೈಕಮಾಂಡ್ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲು ನಿರ್ಧರಿಸಿತ್ತು. ಆದರೆ ಆಗಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಮಲಿಂಗಾರೆಡ್ಡಿ ಅವರ ಮನವೊಲಿಸಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಾನು ಪಡೆಯುತ್ತೇನೆ. ನಾನು ಮುಖ್ಯಮಂತ್ರಿಯಾದ ನಂತರ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಿಮಗೆ ಕೊಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಅವರಿಗೆ ಮಾತು ಕೊಟ್ಟಿದ್ದರು ಎನ್ನಲಾಗಿದೆ.

ಆದರೆ ಈಗ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡದೆ ಜಲಸಂಪನ್ಮೂಲ ಖಾತೆ ನೀಡಿರುವುದು ಹಿರಿಯ ಸಚಿವರಾದ ರಾಮಲಿಂಗಾರೆಡ್ಡಿ ಅವರಲ್ಲಿ ಬೇಸರ ಮೂಡಿಸಿದೆ. ನನಗೆ ಸಚಿವ ಸ್ಥಾನವೇ ಬೇಡ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಹೇಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ನಾಳೆ ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮಿಸುತ್ತಿದ್ದು ಅವರ ಸಮ್ಮುಖದಲ್ಲಿ ಖಾತೆಗಳ ಹಂಚಿಕೆ ಆಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Donate Janashakthi Media

Leave a Reply

Your email address will not be published. Required fields are marked *