ಕಡತಿನಿ ಭೂ ಸಂತ್ರಸ್ತರ ಆಕ್ರೋಶ: ಬಳ್ಳಾರಿ ಬಂದ್‌ಗೆ ಭಾರೀ ಬೆಂಬಲ

ಬಳ್ಳಾರಿ: ಕುಡುತಿನಿ ಸುತ್ತಮುತ್ತ ಕೈಗಾರಿಕೆಗಳಿಗಾಗಿ ಭೂಸ್ವಾಧೀನಗೊಂಡು ಜಮೀನು ಕಳೆದುಕೊಂಡ ರೈತರು ನ್ಯಾಯಯುತ ಪರಿಹಾರ ಮತ್ತು ಸಮರ್ಪಕ ಭೂ ಬೆಲೆ ನೀಡುವಂತೆ ಆಗ್ರಹಿಸಿ, ಜೂನ್‌ 18ರಂದು ಬಳ್ಳಾರಿ ಜಿಲ್ಲೆಯಲ್ಲಿ ಸ್ವಯಂಪ್ರೇರಿತ ಬಂದ್ ನಡೆಸಿದರು. ಸಂತ್ರಸ್ತ

ಭೂ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ರೈತ, ಕಾರ್ಮಿಕ, ಮಹಿಳಾ, ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದವು.

ಬೆಳಿಗ್ಗೆ ಗಡಗಿ ಚೆನ್ನಪ್ಪ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕಳೆದ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಆರೋಪಿಸಿ, ಸರ್ಕಾರದ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಮಾಜವಾದಿ ಪಕ್ಷದಲ್ಲಿ ಭೇದ ಸಾಧ್ಯತೆ: ರಾಜ್ಭರ್ ಹೇಳಿಕೆ, ಅಖಿಲೇಶ್ ತಿರುಗೇಟು

ನಂತರ ನಗರದಲ್ಲಿನ ಬೆಂಗಳೂರು ರಸ್ತೆ, ತೇರು ಬೀದಿ, ಕಾಳಮ್ಮ ರಸ್ತೆ, ಬ್ರಾಹ್ಮಣ ಬೀದಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಂದ್ ಹಿನ್ನೆಲೆಯಲ್ಲಿ ಹಲವೆಡೆ ಅಂಗಡಿ-ಮಳಿಗೆಗಳು ಮುಚ್ಚಿದ್ದರೆ, ಕೆಲವೆಡೆ ಭಾಗಶಃ ವ್ಯಾಪಾರ ನಡೆಯಿತು.

ಬೆಳಿಗ್ಗೆ 11 ಗಂಟೆಯ ಸುಮಾರಿಗೆ ನೂರಾರು ರೈತರು ಮತ್ತು ಮುಖಂಡರು ಮತ್ತೆ ಗಡಗಿ ಚೆನ್ನಪ್ಪ ವೃತ್ತದಲ್ಲಿ ಸೇರಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದು, ಸಂಚಾರ ವ್ಯವಸ್ಥೆ ಬಹುತೇಕ ಸಾಮಾನ್ಯವಾಗಿತ್ತು. ಸಿನಿಮಾ ಥಿಯೇಟರ್‌ಗಳು ಬಂದ್ ಆಗಿದ್ದರೆ, ಎಪಿಎಂಸಿ ಮಾರುಕಟ್ಟೆಯಲ್ಲಿ ವಹಿವಾಟು ಎಂದಿನಂತೆ ನಡೆಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರುಗಳಾದ ಯು. ಬಸವರಾಜ್, ಎಸ್.ವೈ. ಗುರುಶಾಂತ, ಎಸ್ ವರಲಕ್ಷ್ಮಿ, ಜೆ. ಸತ್ಯಬಾಬು, ಮಾಧವರೆಡ್ಡಿ ಅವರು, “ಸಂತ್ರಸ್ತರಿಗೆ ನ್ಯಾಯಯುತ ಭೂ ಬೆಲೆ ನೀಡುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಕೆಐಎಡಿಬಿ ಕಾರ್ಯವೈಖರಿ ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಿತ್ತಲ್, ಬ್ರಾಹ್ಮಣಿ ಹಾಗೂ ಎನ್ಎಂಡಿಸಿ ಕೈಗಾರಿಕೆಗಳಿಗಾಗಿ ಕುಡುತಿನಿ ಸೇರಿದಂತೆ ಹರಗಿನದೋಣಿ, ವೇಣಿವೀರಾಪುರ, ಕೊಳಗಲ್ಲು, ಜಾನೆಕುಂಟೆ, ಯರಂಗಳಿ, ಸಿದ್ದಮ್ಮನಹಳ್ಳಿ ಗ್ರಾಮಗಳಲ್ಲಿ ಸುಮಾರು 12,500 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಒಂದುವರೆ ದಶಕ ಕಳೆದರೂ ಕೈಗಾರಿಕೆಗಳ ಸ್ಥಾಪನೆ ಆಗಿಲ್ಲ, ಉದ್ಯೋಗ ಸೃಷ್ಟಿಯೂ ಆಗಿಲ್ಲ ಎಂದು ಅವರು ದೂರಿದರು.

ಇದಲ್ಲದೆ, ಕೆಐಎಡಿಬಿ ಭೂಮಿಯನ್ನು ಹೆಚ್ಚಿನ ಬೆಲೆಗೆ ಖಾಸಗಿ ಕಂಪನಿಗೆ ಹಸ್ತಾಂತರಿಸಲು ಮುಂದಾಗಿರುವುದು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಸಂತ್ರಸ್ತ ರೈತರಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಹಾಗೂ ನ್ಯಾಯಾಲಯದ ತೀರ್ಪಿನಂತೆ ವೈಜ್ಞಾನಿಕ ಮಾನದಂಡ ಆಧರಿಸಿ ಭೂ ಮೌಲ್ಯ ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಬಂದ್ ಪರಿಣಾಮವಾಗಿ ನಗರದಲ್ಲಿ ಜನಸಂಚಾರ ಕಡಿಮೆಯಾಗಿದ್ದು, ಹಣ್ಣು ಮಾರಾಟಗಾರರು ಗ್ರಾಹಕರಿಲ್ಲದೆ ಸಂಕಷ್ಟ ಅನುಭವಿಸಿದ ದೃಶ್ಯ ಕಂಡುಬಂತು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷೆ ಚಂದ್ರಕುಮಾರಿ , ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಮಲ್ಲಮ್ಮ ಸೇರಿದಂತೆ ವಿವಿಧ ಸಂಘಟನೆಗಳ ಸಾವಿರಾರು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳ್ಳಾರಿ ಜಿಲ್ಲೆಯ ಬಹುತೇಕ ತಾಲ್ಲೂಕುಗಳು ಭಾಗಶಃ ಬಂದ್ ಆಗಿದ್ದವು. ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಬಂದ್ ಮಾಡಿದ್ದರು.

ಇದನ್ನೂ ನೋಡಿ: ಅನ್ನಭಾಗ್ಯ | ಬಡವರ ಅನ್ನಕ್ಕೆ ಕನ್ನ? ಲೋಕಾಯುಕ್ತ ದಾಳಿಯಲ್ಲಿ ಬಯಲು Janashakthi Media

Donate Janashakthi Media

Leave a Reply

Your email address will not be published. Required fields are marked *