ನವದೆಹಲಿ: ಪೇಪರ್‌ನಲ್ಲಿರುವ ಸುದ್ದಿ ಓದುವುದಷ್ಟೇ ಅಲ್ಲ, ಬಿಸಿ ಬಿಸಿ ಬೋಂಡಾ, ಸಮೋಸಾ, ಪಕೋಡ ಅಥವಾ ಕಡಲೆಕಾಯಿ ಇತ್ಯಾದಿಗಳನ್ನು ಅದರಲ್ಲಿ ಸುತ್ತಿಕೊಂಡು ತಿನ್ನುವ ಅಭ್ಯಾಸವೂ ನಮ್ಮ ದಿನಚರಿಯ ಭಾಗವಾಗಿದೆ. ಆದರೆ, ಈ ಪದ್ಧತಿ ನಮ್ಮ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡಬಹುದು ಎಂಬ ಸಂಗತಿಯನ್ನು ಇದೀಗ ತಜ್ಞರು ಎಚ್ಚರಿಸಿದ್ದಾರೆ. ನ್ಯೂಸ್
ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ದೇಶದಾದ್ಯಂತ ಆಹಾರ ಮಾರಾಟಗಾರರು, ಹೋಟೆಲ್‌ಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಮಹತ್ವದ ಸೂಚನೆ ನೀಡಿದೆ. ಇನ್ನು ಮುಂದೆ ಯಾವುದೇ ಆಹಾರವನ್ನು ವೃತ್ತಪತ್ರಿಕೆಯಲ್ಲಿ ಸುತ್ತಿ ನೀಡಬಾರದು ಎಂದು ಸ್ಪಷ್ಟ ಆದೇಶ ಹೊರಡಿಸಲಾಗಿದೆ.
ಈ ಕ್ರಮವು ಕೇವಲ ಸ್ವಚ್ಛತೆಗಾಗಿ ಮಾತ್ರವಲ್ಲ, ಆಹಾರದಲ್ಲಿ ಮಿಶ್ರಣವಾಗುವ ಅಪಾಯಕಾರಿ ರಾಸಾಯನಿಕಗಳನ್ನು ತಡೆಯಲು ಕೈಗೊಳ್ಳಲಾಗಿದೆ.
ಇದನ್ನೂ ಓದಿ: ʼಕಾಕ್ರೋಚ್ ಗಳುʼ ಅತ್ಯಂತ ಜನಪ್ರಿಯ ಟ್ರೆಂಡ್ ಆಗಬಹುದು, ಆದರೆ ಅವು ನವ ಫ್ಯಾಸಿಸಂ ಅನ್ನು ಸೋಲಿಸಬಹುದೇ?
ಸಾಮಾನ್ಯವಾಗಿ ನ್ಯೂಸ್ ಪೇಪರ್ ಮುದ್ರಣಕ್ಕೆ ಬಳಸುವ ಶಾಯಿಯಲ್ಲಿ ಸೀಸ ಸೇರಿದಂತೆ ಹಲವು ಹಾನಿಕಾರಕ ಪದಾರ್ಥಗಳು ಇರುತ್ತವೆ. ಬಿಸಿ ಅಥವಾ ಎಣ್ಣೆಯ ಆಹಾರವನ್ನು ಪೇಪರ್‌ನಲ್ಲಿ ಸುತ್ತಿದಾಗ, ಈ ರಾಸಾಯನಿಕಗಳು ಆಹಾರಕ್ಕೆ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು.
ಇಂತಹ ಆಹಾರವನ್ನು ದೀರ್ಘಕಾಲ ಸೇವಿಸುವುದರಿಂದ ಕ್ಯಾನ್ಸರ್, ನರಮಂಡಲದ ಸಮಸ್ಯೆಗಳು, ಜೀರ್ಣಕ್ರಿಯೆಯ ತೊಂದರೆಗಳು ಹಾಗೂ ರೋಗನಿರೋಧಕ ಶಕ್ತಿ ಕುಂದುವ ಅಪಾಯವಿದೆ ಎಂದು ವರದಿಗಳು ಸೂಚಿಸುತ್ತವೆ.
ಹೀಗಾಗಿ, ಪೇಪರ್ ಬಳಕೆಯನ್ನು ನಿಲ್ಲಿಸಿ, ಸುರಕ್ಷಿತವಾದ ಫುಡ್-ಗ್ರೇಡ್ ಪ್ಯಾಕೇಜಿಂಗ್, ಬಾಳೆ ಎಲೆಗಳು ಅಥವಾ ಸ್ವಚ್ಛವಾದ ಪಾತ್ರೆಗಳ ಬಳಕೆಯನ್ನು ಅಳವಡಿಸಿಕೊಳ್ಳುವಂತೆ ಎಫ್‌ಎಸ್‌ಎಸ್‌ಎಐ ಸಲಹೆ ನೀಡಿದೆ.
ವ್ಯಾಪಾರಿಗಳ ಜೊತೆಗೆ ಗ್ರಾಹಕರೂ ಈ ವಿಷಯದಲ್ಲಿ ಜಾಗೃತರಾಗಬೇಕು. ಪೇಪರ್‌ನಲ್ಲಿ ಸುತ್ತಿದ ಆಹಾರವನ್ನು ಸ್ವೀಕರಿಸದೇ, ಆರೋಗ್ಯಕರ ಆಯ್ಕೆಗಳತ್ತ ತಿರುಗುವುದು ನಮ್ಮ ಜವಾಬ್ದಾರಿಯಾಗಿದೆ. ಈ ಸಣ್ಣ ಬದಲಾವಣೆ ಭವಿಷ್ಯದ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮಹತ್ವದ ಹೆಜ್ಜೆಯಾಗಬಹುದು.
ಇದನ್ನೂ ನೋಡಿ: SIR ತೀರ್ಪಿನ ಒಳನೋಟ: ಸಂವಿಧಾನ, ನಾಗರಿಕತ್ವ ಮತ್ತು ಮತದಾನದ ಹಕ್ಕು |ಜಸ್ಟೀಸ್ ಗೋಪಾಲಗೌಡ
