75 ವರ್ಷ ವಯಸ್ಸಿನ ಬಿಹಾರದ ಸಿಎಂ ನಿತೀಶ್ ಕುಮಾರ್, ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆಗೆ ಎಂಟ್ರಿ ಕೊಡ್ತಾ ಇದ್ದಾರೆ. ಸಿಎಂ ಆದ ನಾಲ್ಕೇ ತಿಂಗಳಲ್ಲಿ ಪದತ್ಯಾಗದ ನಿರ್ಧಾರದ ಹಿಂದೆ ಏನೆಲ್ಲ ರಾಜಕೀಯ ನಡೆದಿದೆ? ರಾಜ್ಯದಿಂದ ರಾಷ್ಟ್ರ ರಾಜಕಾರಣಕ್ಕೆ ನಿತೀಶ್ ನಿಜಕ್ಕೂ ಶಿಫ್ಟ್ ಆಗ್ತಾರಾ? ಬಿಜೆಪಿಯೇ ಇವರ ಕತ್ತನ್ನು ಹಿಡಿದು ದಬ್ಬುತ್ತಿದೆಯೇ? ಎಂಬೆಲ್ಲ ಚರ್ಚೆಗಳು ಕೇಳಿ ಬರುತ್ತಿವೆ.
– ಗುರುರಾಜ ದೇಸಾಯಿ
ಬಿಹಾರದ ರಾಜಕೀಯ ಇದೀಗ ಮಹತ್ವದ ತಿರುವಿನಲ್ಲಿದೆ. ಸುಮಾರು ಎರಡು ದಶಕಗಳ ಕಾಲ ಅಧಿಕಾರದ ಕೇಂದ್ರಬಿಂದುವಾಗಿದ್ದ ನೀತೀಶ್ ಕುಮಾರ್ ಮಾರ್ಚ್ 30ರಂದು ಬಿಹಾರ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಪಾಟ್ನಾದಿಂದ ದೆಹಲಿಯತ್ತ ರಾಜಕೀಯವಾಗಿ ಅವರು ಶಿಫ್ಟ್ ಆಗ್ತಿದ್ದಾರೆ. ಅಂದರೆ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ತೆಗೆದುಕೊಂಡ ತಕ್ಷಣದಿಂದ ಅವರ ರಾಜಕೀಯ ಚಟುವಟಿಕೆಗಳು ದೆಹಲಿಯಿಂದ ಆರಂಭವಾಗುತ್ತವೆ. ತಾಂತ್ರಿಕವಾಗಿ ಇದು ಸಾಮಾನ್ಯ ಪ್ರಕ್ರಿಯೆಯಾದರೂ, ರಾಜಕೀಯವಾಗಿ ಇದು ಬಿಹಾರದಲ್ಲಿ ಒಂದು ಯುಗದ ಅಂತ್ಯದ ಸಂಕೇತವಾಗಬಹುದು ಎಂಬ ಚರ್ಚೆ ಸೃಷ್ಟಿಯಾಗಿದೆ.
ಸಂವಿಧಾನದ ಪ್ರಕಾರ ಸಂಸತ್ತಿಗೆ ಆಯ್ಕೆಯಾದ ನಾಯಕರು 14 ದಿನಗಳೊಳಗೆ ರಾಜ್ಯ ವಿಧಾನಮಂಡಲ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು; ಅದನ್ನು ಅವರು ಮಾಡಿದ್ದಾರೆ. ಆದರೆ ಅವರು ಇನ್ನೂ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಂವಿಧಾನಿಕ ಅವಕಾಶವಿದೆ.
ಇದನ್ನೂ ಓದಿ: ಕೇರಳ ಚುನಾವಣೆ | ಎಲ್‌ಡಿಎಫ್ ವಿರೋಧಿ ಅಲೇ ಇದೆಯೇ? ಯುಡಿಎಫ್ ಸೋತರೆ ಏನಾಗಬಹುದು? ಬಿಜೆಪಿ ಲೆಕ್ಕಾಚಾರ ಏನಿದೆ?
ಸಂವಿಧಾನದ 164(4)ನೇ ವಿಧಿಯು ಒಬ್ಬ ವ್ಯಕ್ತಿಗೆ ರಾಜ್ಯ ಶಾಸಕಾಂಗದ ಸದಸ್ಯರಾಗದೆ ಆರು ತಿಂಗಳ ಅವಧಿಗೆ ಮುಖ್ಯಮಂತ್ರಿ ಅಥವಾ ಸಚಿವರಾಗಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ. ಇದರರ್ಥ ನಿತೀಶ್ ಕುಮಾರ್ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವವರೆಗೂ ಮುಖ್ಯಮಂತ್ರಿಯಾಗಿ ಮುಂದುವರಿಯಬಹುದು. ಹಾಗಾಗಿಯೇ ಏಪ್ರಿಲ್ ಎರಡನೇ ಅಥವಾ ಕೊನೆಯ ವಾರದಲ್ಲಿ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಬಹುದು.
ಇನ್ನೊಂದು ಚರ್ಚೆಯೂ ಕೇಳಿ ಬರುತ್ತಿದೆ. ಪಂಚಾಂಗ ಪ್ರಕಾರ ಏಪ್ರಿಲ್ 14ರವರೆಗೆ ‘ಕಮಾಸ್’ ಎಂಬ ಅಶುಭ ಕಾಲವಿದೆ. ಅದು ಮುಗಿದ ನಂತರವೇ ಮುಖ್ಯಮಂತ್ರಿ ಆಯ್ಕೆ ಕುರಿತು ಅಂತಿಮ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ. ಇದೇ ವಿಷಯ ರಾಜಕೀಯ ಕುತೂಹಲವನ್ನು ಹೆಚ್ಚಿಸಿದೆ. ಬಿಜೆಪಿ ಅಧಿಕಾರಕ್ಕೆ ಬರುವುದು ಕೆಟ್ಟ ದಿನ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ರಾಜಕೀಯ ಲಾಭಕ್ಕಾಗಿ ಸಣ್ಣ ಪಕ್ಷಗಳನ್ನು ತುಳಿದು ಅಧಿಕಾರಕ್ಕೆ ಬರುವುದು ತಪ್ಪಲ್ಲವೇ ಎಂಬ ಪ್ರಶ್ನೆಗಳೂ ಚರ್ಚೆಯಲ್ಲಿವೆ.
ಸುಮಾರು 20 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿರುವ ನಿತೀಶ್ ಕುಮಾರ್, ಆ ಪದವಿಯನ್ನು ಪಡೆಯುವುದಕ್ಕಾಗಿ ಎಲ್ಲಾ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಪಲ್ಲಟಗೊಂಡ ನಾಯಕ. ಇಂತಹ ನಾಯಕ ರಾಜ್ಯ ರಾಜಕಾರಣವನ್ನು ಬಿಟ್ಟು ದೆಹಲಿಗೆ ಯಾಕೆ ಶಿಫ್ಟ್ ಆಗುತ್ತಿದ್ದಾರೆ ಎಂಬ ಪ್ರಶ್ನೆಗಳು ಎದ್ದಿವೆ.
ಜೆಡಿಯು ಒಳಗೆ ನಿತೀಶ್ ಕುಮಾರ್ ಅವರು ಇನ್ನೂ ಕೆಲವು ಕಾಲ ಮುಂದುವರಿಯಬಹುದು ಎಂದು ಹೇಳಲಾಗುತ್ತಿದೆ. ಎನ್‌ಡಿಎ ವಲಯದಲ್ಲಿ ಶೀಘ್ರದಲ್ಲೇ ನಾಯಕತ್ವ ಬದಲಾವಣೆ ಸಾಧ್ಯವೆಂಬ ಮಾತು ಕೇಳಿಬರುತ್ತಿದೆ. ವಿಶೇಷವಾಗಿ ಏಪ್ರಿಲ್ ಮಧ್ಯಭಾಗದ ನಂತರ ದೊಡ್ಡ ನಿರ್ಧಾರ ಬರಬಹುದು ಎಂಬ ಸೂಚನೆಗಳಿವೆ. ಈ ನಡುವೆ ಬಿಜೆಪಿ ಈ ಪರಿಸ್ಥಿತಿಯನ್ನು ಒಂದು ಅವಕಾಶವಾಗಿ ನೋಡುತ್ತಿದೆ. ಹಲವು ವರ್ಷಗಳಿಂದ ಮೈತ್ರಿ ಸರ್ಕಾರದ ಭಾಗವಾಗಿದ್ದರೂ ಮುಖ್ಯಮಂತ್ರಿ ಸ್ಥಾನವನ್ನು ಪಡೆಯದ ಬಿಜೆಪಿ, ಈಗ ತನ್ನ ನಾಯಕನನ್ನು ಆ ಸ್ಥಾನಕ್ಕೆ ಮುಂದಿರಿಸಲು ಯತ್ನಿಸಬಹುದು. ಈ ಹಿನ್ನೆಲೆದಲ್ಲಿ ಈಗ ಉಪಮುಖ್ಯಮಂತ್ರಿಯಾಗಿರುವ ಸಮ್ರಾಟ್ ಚೌಧರಿ ಮುಖ್ಯಮಂತ್ರಿಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸಚಿವ ನಿತ್ಯಾನಂದ ರೈ ಅವರನ್ನು ಸಿಎಂ ಮಾಡಿ ಆ ಸ್ಥಾನವನ್ನು ನಿತೀಶ್ ಕುಮಾರ್ ಅವರಿಗೆ ಬಿಟ್ಟುಕೊಡಬೇಕೆಂಬ ಲೆಕ್ಕಾಚಾರಗಳೂ ಇವೆ. ಇದರ ನಡುವೆ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ಎಂದರೆ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಅವರನ್ನು ಸಿಎಂ ಮಾಡುವಂತೆ ಜೆಡಿಯು ಪಟ್ಟು ಹಿಡಿಯಬಹುದು ಎನ್ನಲಾಗುತ್ತಿದೆ. ಯಾಕೆಂದರೆ ಬಿಹಾರದ ಕೆಲವು ಭಾಗಗಳಲ್ಲಿ ಅವರನ್ನು ಭವಿಷ್ಯದ ಮುಖ್ಯಮಂತ್ರಿಯಾಗಿ ಪ್ರೊಜೆಕ್ಟ್ ಮಾಡುವ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಅವರಿಗೆ ಪ್ರಮುಖ ಹುದ್ದೆ, ಬಹುಶಃ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆಗಳ ಬಗ್ಗೆ ಊಹಾಪೋಹಗಳಿವೆ.
ಹಿಂದಿನ ಚರಿತ್ರೆಗಳನ್ನು ಗಮನಿಸಿದರೆ ನಿತೀಶ್ ಅಷ್ಟು ಸುಲಭವಾಗಿ ಸ್ಥಾನ ಬಿಟ್ಟುಕೊಟ್ಟವರಲ್ಲ, ಕುಟುಂಬ ರಾಜಕಾರಣ ಮಾಡಿದವರಲ್ಲ. ಇತ್ತೀಚೆಗೆ ಮಾತ್ರ ಅವರ ಮಗನ ಎಂಟ್ರಿ ಆಗಿದೆ. ಆರೋಗ್ಯದ ಸಮಸ್ಯೆ ಇದ್ದರೆ ರಾಜಕೀಯವಾಗಿ ನಿವೃತ್ತಿ ಪಡೆಯಬಹುದಿತ್ತು. ಅವರು ಈ ಬಾರಿ ಮುಖ್ಯಮಂತ್ರಿಯಾಗುವುದು ಡೌಟ್ ಎಂದು ಹೇಳಲಾಗುತ್ತಿತ್ತು. ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಫಲಿತಾಂಶ ಪಡೆದಿತ್ತು. ಆದಾಗ್ಯೂ ಅವರು ಮುಖ್ಯಮಂತ್ರಿಯಾದರು. ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ
ಅವರು ಮುಖ್ಯಮಂತ್ರಿಯಾಗಿರುವುದು ಬಿಜೆಪಿ ಪಕ್ಷಕ್ಕೆ ಇಷ್ಟವಿಲ್ಲದಂತೆ ಕಾಣುತ್ತದೆ. ಹಾಗಾಗಿ ಒತ್ತಡ ಸಹಿಸದೆ ಅವರು ರಾಷ್ಟ್ರ ರಾಜಕಾರಣಕ್ಕೆ ಮುಖಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಿತ್ರಪಕ್ಷಗಳನ್ನೇ ನಿಧಾನವಾಗಿ ದುರ್ಬಲಗೊಳಿಸುವ ರಾಜಕೀಯ ಶೈಲಿ ಬಿಜೆಪಿಗೆ ಹೊಸದಲ್ಲ. ಆದರೆ ಅದನ್ನೇ ಮರುಮರು ಅನುಭವಿಸಿದ ಬಳಿಕವೂ ಪಾಠ ಕಲಿಯದಿರುವುದು ನಿತೀಶ್ ಅವರ ದೊಡ್ಡ ತಪ್ಪು. ಈಗಾಗಲೇ ಅನೇಕ ಬಾರಿ ಪೆಟ್ಟು ತಿಂದಿದ್ದರೂ, ಮತ್ತೆ ಅದೇ ದಾರಿಗೆ ಹೋಗಿರುವುದು “ಗೊತ್ತಿದ್ದೂ ಹಳ್ಳಕ್ಕೆ ಬಿದ್ದಂತೆ” ಕಾಣುತ್ತಿದೆ.

ಬಿಜೆಪಿ ತನ್ನ ರಾಜಕೀಯ ಲೆಕ್ಕಾಚಾರದಲ್ಲಿ ಕಷ್ಟದಲ್ಲಿ ಕೈ ಹಿಡಿದವರನ್ನು ಸುಲಭವಾಗಿ ಮರೆತುಬಿಡುತ್ತದೆ. ಬೇಕಾದಷ್ಟು ಬಳಸಿಕೊಂಡು ನಂತರ ಅಂಚಿಗೆ ತಳ್ಳುವುದು ಅದರ ಪರಿಚಿತ ತಂತ್ರ. ಜೆಡಿಯು ಅದಕ್ಕೆ ಬಲಿಯಾಗಿ ಕುಸಿಯುತ್ತಿರುವುದು ಸ್ಪಷ್ಟವಾಗುತ್ತಿದೆ. ಕರ್ನಾಟಕದ ಜೆಡಿಎಸ್‌ಗೂ ಇಂತಹದೇ ಸ್ಥಿತಿ ಬರಬಹುದು ಎಂಬ ಎಚ್ಚರಿಕೆಯನ್ನು ರಾಜಕೀಯ ವಿಶ್ಲೇಷಕರು ನೀಡುತ್ತಿದ್ದಾರೆ.
ಇವೆಲ್ಲದರ ನಡುವೆ ನಿತೀಶ್ ಕುಮಾರ್ ತಮ್ಮ ಮುಂದಿನ ಹೆಜ್ಜೆ ಬಗ್ಗೆ ಇನ್ನೂ ಮೌನವಾಗಿದ್ದಾರೆ. ಇತ್ತೀಚಿನ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಅವರು ಈ ವಿಚಾರವನ್ನು ಸ್ಪಷ್ಟಪಡಿಸಿಲ್ಲ. ಆದ್ದರಿಂದ ಬಿಹಾರ ಈಗ ರಾಜಕೀಯ ಸಂಧಿಭಾಗದಲ್ಲಿ ನಿಂತಿದೆ. ನಿತೀಶ್ ಮೌನವಾಗಿದ್ದಾರೆ ಎಂದರೆ ಅದಕ್ಕೆ ಹಲವು ಅರ್ಥಗಳಿವೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ನಿತೀಶ್ ಅವರಿಗೆ ಒಪ್ಪದ ವ್ಯಕ್ತಿ ಮುಖ್ಯಮಂತ್ರಿ ಆದರೆ, ಅದನ್ನು ಒಪ್ಪದೆ ಅವರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಎಂಎಲ್‌ಸಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಹಿರಿಯ ನಾಯಕ ರಾಷ್ಟ್ರೀಯ ರಾಜಕೀಯದತ್ತ ಹೆಜ್ಜೆ ಹಾಕುತ್ತಿರುವಾಗ ಮೈತ್ರಿ ಪಕ್ಷಗಳು ಅಧಿಕಾರದ ಲೆಕ್ಕಾಚಾರದಲ್ಲಿ ತೊಡಗಿವೆ. ಅವರು ತಾತ್ಕಾಲಿಕವಾಗಿ ಮುಂದುವರಿಯುತ್ತಾರೆಯೇ, ಬೇಗನೆ ಹುದ್ದೆ ತೊರೆಯುತ್ತಾರೆಯೇ ಅಥವಾ ನಿರೀಕ್ಷಿತ ಬದಲಾವಣೆ ಮಾಡುತ್ತಾರೆಯೇ ಎಂಬುದು ಮುಂದಿನ ಕೆಲವು ವಾರಗಳಲ್ಲಿ ನಿರ್ಧಾರವಾಗಲಿದೆ.
ಇದನ್ನೂ ನೋಡಿ: ನಾಲ್ಕೇ ತಿಂಗಳಲ್ಲಿ ನಿರ್ಗಮನ? ನಿತೀಶ್‌ಗೆ ಬಿಜೆಪಿ ಒತ್ತಡವಿತ್ತೆ? | ವಿ Janashakthi Media
