ಬೆಂಗಳೂರು ಮಳೆ ಅನಾಹುತ: 10 ಸಾವು; ಸರ್ಕಾರದ ನಿರ್ಲಕ್ಷಕ್ಕೆ ಸಿಪಿಐ(ಎಂ) ಖಂಡನೆ

ಬೆಂಗಳೂರು: ನಗರದಲ್ಲಿ ಏಪ್ರಿಲ್ 29ರಂದು ಸುರಿದ ಅಕಾಲಿಕ ಆಲಿಕಲ್ಲು ಮಳೆಯ ಪರಿಣಾಮ ಉಂಟಾದ ಅವಘಡಗಳಲ್ಲಿ ಒಟ್ಟು 10 ಮಂದಿ ಮೃತಪಟ್ಟಿರುವ ಘಟನೆಗೆ ಸಿಪಿಐ(ಎಂ) ತೀವ್ರ ಖಂಡನೆ ವ್ಯಕ್ತಪಡಿಸಿದೆ. ಬೌರಿಂಗ್ ಆಸ್ಪತ್ರೆಗೆ ಸೇರಿದ ಕಾಂಪೌಂಡ್ ಗೋಡೆ ಕುಸಿದು 8 ಮಂದಿ ಸಾವನ್ನಪ್ಪಿದ್ದು, ಇನ್ನೆರಡು ಮಂದಿ ವಿದ್ಯುತ್ ಅವಘಡಗಳಿಂದ ಪ್ರಾಣ ಕಳೆದುಕೊಂಡಿರುವುದು ವರದಿಯಾಗಿದೆ. ಬೆಂಗಳೂರು

ಸಿಪಿಐ(ಎಂ) ನಿಯೋಗ ಬೌರಿಂಗ್‌ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿಗಳ ಪ್ರಕಾರ, ಮಳೆಪೂರ್ವ ಮುಂಜಾಗ್ರತಾ ಕ್ರಮಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರ ತೋರಿದ ನಿರ್ಲಕ್ಷ್ಯವೇ ಈ ದುರ್ಘಟನೆಗಳಿಗೆ ಕಾರಣವಾಗಿದೆ. ಅಕಾಲಿಕ ಮಳೆಯಿಂದ ನಗರದೆಲ್ಲೆಡೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಮರಗಳು ಉರುಳಿ ವಾಹನಗಳು ಹಾನಿಗೊಳಗಾಗಿವೆ. ತಗ್ಗು ಪ್ರದೇಶಗಳಲ್ಲಿ ಮನೆಗಳು ಮತ್ತು ಕಚೇರಿಗಳಿಗೆ ನೀರು ನುಗ್ಗಿ ಭಾರೀ ಆಸ್ತಿ ನಷ್ಟ ಸಂಭವಿಸಿದೆ.

ಬೌರಿಂಗ್ ಆಸ್ಪತ್ರೆ ಗೋಡೆಯ ಪಕ್ಕದಲ್ಲಿ ಆಶ್ರಯ ಪಡೆದಿದ್ದ ಬೀದಿ ವ್ಯಾಪಾರಿಗಳು ಅವಘಡದಲ್ಲಿ ಬಲಿಯಾಗಿದ್ದು, ಹಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ಯಾರಬ್ ನಗರ ಮತ್ತು ಬನ್ನೇರುಘಟ್ಟ ರಸ್ತೆ ಪ್ರದೇಶಗಳಲ್ಲಿ ವಿದ್ಯುತ್ ಅವಘಡಗಳಿಂದ ಇಬ್ಬರು ಮೃತಪಟ್ಟಿದ್ದಾರೆ. ಸರ್ಕಾರ ಘೋಷಿಸಿರುವ ಪರಿಹಾರ ಅಲ್ಪವಾಗಿದ್ದು, ಇದು ಸಾಕಾಗುವುದಿಲ್ಲ ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ :ಮೇ ದಿನ: ಇತಿಹಾಸದ ಸ್ಮರಣೆ ಮಾತ್ರವಲ್ಲ, ಇಂದಿನ ಹೋರಾಟದ ಕರೆಯೂ ಹೌದು

ಪ್ರತಿ ವರ್ಷ ಮಳೆಯ ಸಂದರ್ಭಗಳಲ್ಲಿ ಇಂತಹ ಅನಾಹುತಗಳು ಮರುಕಳಿಸುತ್ತಿದ್ದರೂ ಶಾಶ್ವತ ಪರಿಹಾರ ಕ್ರಮಗಳತ್ತ ಸರ್ಕಾರ ಗಂಭೀರತೆ ತೋರಿಸುತ್ತಿಲ್ಲ ಎಂದು ಸಂಘಟನೆ ಆರೋಪಿಸಿದೆ. ಜನಸಾಮಾನ್ಯರ ಜೀವ-ಜೀವನದ ಸುರಕ್ಷತೆ ಕುರಿತು ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂಬ ಟೀಕೆಯೂ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಸಿಪಿಐ(ಎಂ) ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟಿದೆ:

  • ಮಳೆಪೀಡಿತರ ಸಂಪೂರ್ಣ ನಷ್ಟವನ್ನು ಸರ್ಕಾರ ಮತ್ತು ಜಿಬಿಎ ಭರಿಸಬೇಕು; ಮೃತರ ಕುಟುಂಬಗಳಿಗೆ ₹50 ಲಕ್ಷ ಪರಿಹಾರ, ಅವಲಂಬಿತರಿಗೆ ಉದ್ಯೋಗ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು.
  • ಸರ್ಕಾರಿ ಕಟ್ಟಡಗಳ ವಾರ್ಷಿಕ ಪರಿಶೀಲನೆ ನಡೆಸಿ ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕು.
  • ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
  • ಹಳೆಯ ಮತ್ತು ಅಪಾಯಕಾರಿಯಾದ ಮರಗಳ ತೆರವಿಗೆ ಕ್ರಮ ಕೈಗೊಳ್ಳಬೇಕು.
  • ಮಳೆ ನೀರಿನ ನಿರ್ವಹಣೆಗೆ ತಜ್ಞರ ಸಮಿತಿ ರಚಿಸಿ ಶಾಶ್ವತ ಪರಿಹಾರ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಸಿಪಿಐ(ಎಂ) ನಿಯೋಗ ಆಗ್ರಹಿಸಿದೆ.

 

ನಿಯೋಗದಲ್ಲಿ ಉತ್ತರ ಜಿಲ್ಲಾ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ ಮತ್ತು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ.ಎನ್. ಮಂಜುನಾಥ್ .ಮುಖಂಡರಾದ ಗೋಪಾಲಕೃಷ್ಣ ಅರಳಹಳ್ಳಿ,  ಗೌರಮ್ಮ ಇದ್ದರು.

ಇದನ್ನೂ ನೋಡಿ :ಮಳೆ | ಬೌರಿಂಗ್‌ ಆಸ್ಪತ್ರೆ ದುರಂತ – ಎಚ್ಚೆತ್ತುಕೊಳ್ಳಬೇಕಿದೆ ಸರಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *