ಮೇ ದಿನ: ಇತಿಹಾಸದ ಸ್ಮರಣೆ ಮಾತ್ರವಲ್ಲ, ಇಂದಿನ ಹೋರಾಟದ ಕರೆಯೂ ಹೌದು

 

ಗುರುರಾಜ ದೇಸಾಯಿ

 

ಮೇ 1 ಅನ್ನು ನಾವು ಸಾಮಾನ್ಯವಾಗಿ ಕಾರ್ಮಿಕರ ದಿನ, ದುಡಿಯುವ ಜನರ ಹಬ್ಬ, ಅಥವಾ ಒಂದು ಸಾರ್ವಜನಿಕ ರಜಾದಿನವೆಂದು ನೆನಪಿಸಿಕೊಳ್ಳುತ್ತೇವೆ. ಆದರೆ ಮೇ ದಿನದ ನಿಜವಾದ ಅರ್ಥ ಅಷ್ಟಕ್ಕೇ ಸೀಮಿತವಾಗುವುದಿಲ್ಲ. ಅದು ಒಂದು ಹಬ್ಬವಲ್ಲ, ಒಂದು ರಾಜಕೀಯ ಘೋಷಣೆ; ಒಂದು ಆಚರಣೆಯಲ್ಲ, ಒಂದು ಐತಿಹಾಸಿಕ ಹೋರಾಟದ ಸ್ಮರಣೆ. ಕಾರ್ಮಿಕ ವರ್ಗವು ತನ್ನ ಬದುಕಿನ ಘನತೆಗಾಗಿ, ಮಾನವೀಯ ಕೆಲಸದ ಪರಿಸ್ಥಿತಿಗಾಗಿ, ಶೋಷಣೆಯ ವಿರುದ್ಧ ನಡೆಸಿದ ನಿರಂತರ ಹೋರಾಟದ ಫಲವೇ ಮೇ ದಿನ. ಇಂದು ನಾವು ಸಹಜವೆಂದುಕೊಳ್ಳುವ ಎಂಟು ಗಂಟೆಗಳ ಕೆಲಸದ ದಿನ, ವಾರದ ರಜೆ, ಕನಿಷ್ಠ ವೇತನ, ಸಂಘಟನೆ ಮಾಡುವ ಹಕ್ಕು. ಇವೆಲ್ಲವೂ ಯಾರಾದರೂ ಉದಾರತೆಯಿಂದ ಕೊಟ್ಟ ದಾನವಲ್ಲ; ಬೀದಿಯಲ್ಲಿ, ಕಾರ್ಖಾನೆಯಲ್ಲಿ, ಜೈಲಿನಲ್ಲಿ, ಗಲ್ಲುಗಂಬದ ಮುಂದೆ ಕಾರ್ಮಿಕರು ಹೋರಾಡಿ ಗೆದ್ದ ಹಕ್ಕುಗಳು. ಆದ್ದರಿಂದ ಮೇ ದಿನವನ್ನು ನೆನಪಿಸುವುದು ಎಂದರೆ ಕೇವಲ ಇತಿಹಾಸವನ್ನು ಓದುವುದು ಅಲ್ಲ, ಆ ಹೋರಾಟದ ಅಗತ್ಯ ಇಂದಿಗೂ ಮುಗಿದಿಲ್ಲ ಎಂಬುದನ್ನು ಅರಿತುಕೊಳ್ಳುವುದು.

ಮೇ ದಿನದ ಇತಿಹಾಸ ಎಂದರೆ ದುಡಿಮೆಯ ದಿನದ ಅವಧಿಯನ್ನು ಇಳಿಸುವ ಹೋರಾಟದ ಇತಿಹಾಸ. ಬಂಡವಾಳಶಾಹಿಯ ಆರಂಭಿಕ ಹಂತದಲ್ಲಿ, ವಿಶೇಷವಾಗಿ 19ನೇ ಶತಮಾನದ ಅಮೆರಿಕದಲ್ಲಿ, ಕಾರ್ಮಿಕರನ್ನು “ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ” ದುಡಿಸಲಾಗುತ್ತಿತ್ತು. ದಿನಕ್ಕೆ ಹದಿನಾಲ್ಕು, ಹದಿನಾರು, ಕೆಲವೊಮ್ಮೆ ಹದಿನೆಂಟು ಗಂಟೆಗಳವರೆಗೆ ಕೆಲಸ ಮಾಡುವುದು ಸಾಮಾನ್ಯವಾಗಿತ್ತು. ಬದುಕು ಎಂದರೆ ಕಾರ್ಖಾನೆಯ ಸೈರನ್‌ ಮೊಳಗಿದ ಕ್ಷಣದಿಂದ ಮತ್ತೆ ಅದೇ ಸೈರನ್‌ ಕೇಳುವವರೆಗೆ ನಡೆಯುವ ಶ್ರಮ ಮಾತ್ರವಾಗಿತ್ತು. ಕುಟುಂಬ, ವಿಶ್ರಾಂತಿ, ಓದು, ಮನರಂಜನೆ, ಯೋಚನೆ ಇವೆಲ್ಲವೂ ಕಾರ್ಮಿಕನ ಬದುಕಿನಿಂದ ಕಿತ್ತುಕೊಳ್ಳಲ್ಪಟ್ಟಿದ್ದವು. ಆರಂಭದಲ್ಲಿ ವೇತನ ಹೆಚ್ಚಳದ ಬೇಡಿಕೆಗಳೂ ಇದ್ದರೂ, ಕಾರ್ಮಿಕರು ಬೇಗನೆ ಅರಿತುಕೊಂಡರು: ಬದುಕಿಗೆ ಸಂಬಳ ಮಾತ್ರ ಸಾಕಾಗುವುದಿಲ್ಲ; ಬದುಕಲು ಸಮಯವೂ ಬೇಕು. ಅಲ್ಲಿಂದಲೇ “ಎಂಟು ತಾಸು ದುಡಿಮೆ, ಎಂಟು ತಾಸು ವಿಶ್ರಾಂತಿ, ಎಂಟು ತಾಸು ನಾವು ಬಯಸಿದಂತೆ” ಎಂಬ ಘೋಷಣೆ ಹುಟ್ಟಿತು. ಇದು ಕೇವಲ ಕೆಲಸದ ಅವಧಿಯ ಪ್ರಶ್ನೆಯಲ್ಲ; ಮನುಷ್ಯನ ಜೀವನದ ಹಕ್ಕಿನ ಪ್ರಶ್ನೆಯಾಗಿತ್ತು.

1884ರಲ್ಲಿ ಅಮೆರಿಕನ್ ಕಾರ್ಮಿಕ ಸಂಘಟನೆ ಮೇ 1, 1886ರಿಂದ ಎಂಟು ಗಂಟೆಗಳ ಕೆಲಸದ ದಿನ ಜಾರಿಯಾಗಬೇಕು ಎಂದು ಘೋಷಿಸಿತು. ಈ ನಿರ್ಧಾರ ದೇಶದಾದ್ಯಂತ ದೊಡ್ಡ ಚಳುವಳಿಗೆ ಕಾರಣವಾಯಿತು. 1886ರ ಮೇ 1ರಂದು ಲಕ್ಷಾಂತರ ಕಾರ್ಮಿಕರು ಕೆಲಸ ನಿಲ್ಲಿಸಿ ಬೀದಿಗಿಳಿದರು. ಚಿಕಾಗೋ ಈ ಹೋರಾಟದ ಕೇಂದ್ರವಾಗಿತ್ತು. ಕಾರ್ಮಿಕರು ತಮ್ಮ ಉಪಕರಣಗಳನ್ನು ಕೆಳಗಿಟ್ಟು ಕಾರ್ಖಾನೆಗಳಿಂದ ಹೊರಬಂದ ಕ್ಷಣವು ಕೇವಲ ಮುಷ್ಕರವಲ್ಲ; ಅದು ವರ್ಗಶಕ್ತಿಯ ಬಹಿರಂಗ ಘೋಷಣೆ. ಆದರೆ ಬಂಡವಾಳಿಗರು ಮತ್ತು ಅವರ ಸರ್ಕಾರ ಇದನ್ನು ಸಹಿಸಲಿಲ್ಲ. ಮೇ 3ರಂದು ಮೆಕ್‌ಕಾರ್ಮಿಕ್ ಕಾರ್ಖಾನೆಯ ಮುಷ್ಕರದ ಮೇಲೆ ಪೊಲೀಸರ ಗುಂಡಿನ ದಾಳಿ ನಡೆದು ಆರು ಕಾರ್ಮಿಕರು ಸಾವನ್ನಪ್ಪಿದರು. ಅದರ ವಿರುದ್ಧ ಮೇ 4ರಂದು ಹೇಮಾರ್ಕೆಟ್ ಚೌಕದಲ್ಲಿ ಪ್ರತಿಭಟನೆ ನಡೆಯಿತು. ಅಲ್ಲಿ ನಡೆದ ಬಾಂಬ್ ಸ್ಫೋಟವನ್ನು ನೆಪ ಮಾಡಿಕೊಂಡು ಸಂಪೂರ್ಣ ಕಾರ್ಮಿಕ ಚಳುವಳಿಯ ಮೇಲೆಯೇ ದಮನ ಹೇರಲಾಯಿತು. ಎಂಟು ಪ್ರಮುಖ ಕಾರ್ಮಿಕ ನಾಯಕರ ಮೇಲೆ ಸುಳ್ಳು ಆರೋಪ ಹೊರಿಸಿ ನಾಲ್ವರನ್ನು ಗಲ್ಲಿಗೇರಿಸಲಾಯಿತು. ನಂತರ ಆ ತೀರ್ಪು ದೋಷಪೂರಿತವಾಗಿತ್ತು ಎಂಬುದು ಸಾಬೀತಾದರೂ, ಅದು ವರ್ಗನ್ಯಾಯದ ನಿಜಸ್ವರೂಪವನ್ನು ಜಗತ್ತಿಗೆ ತೋರಿಸಿತು. ಆ ತ್ಯಾಗದ ನೆನಪಿಗಾಗಿಯೇ ಮೇ ದಿನ ವಿಶ್ವ ಕಾರ್ಮಿಕರ ಹೋರಾಟದ ದಿನವಾಯಿತು.

ಇಂದು ನಾವು 21ನೇ ಶತಮಾನದಲ್ಲಿ ಇದ್ದೇವೆ. ತಂತ್ರಜ್ಞಾನ ಮುಂದುವರೆದಿದೆ, ಕಾರ್ಖಾನೆಗಳ ರೂಪ ಬದಲಾಗಿದೆ, ಕೆಲಸದ ಮಾದರಿಗಳು ಆಧುನಿಕವಾಗಿವೆ ಎಂದು ಹೇಳಲಾಗುತ್ತದೆ. ಆದರೆ ಶೋಷಣೆಯ ಸ್ವರೂಪ ಮೂಲತಃ ಬದಲಾಗಿಲ್ಲ; ತಂತ್ರಜ್ಞಾನದ ಮುನ್ನಡೆಯಿಂದಾಗಿ ಕಾರ್ಮಿಕರ ಉತ್ಪಾದಕತೆ ಹೆಚ್ಚಿದೆ, ಅದರಿಂದಾಗಿ ಮಾಲಕರ ಲಾಭಗಳು ಹೆಚ್ಚಿವೆ, ಆದರೆ ಕೆಲಸದ ಅವಧಿ ಅದಕ್ಕೆ ಅನುಗುಣವಾಗಿ ಕಡಿಮೆಯಾಗುವ ಬದಲು, ದೇಶದ ಜಿಡಿಪಿ ಹೆಚ್ಚಿಸುವ ಹೆಸರಲ್ಲಿ ಕೆಲಸದ ಅವಧಿಯನ್ನು ಹೆಚ್ಚಿಸುವ, ಕಾರ್ಮಿಕರು ಗೆದ್ದುಕೊಂಡ ಹಲವು ಸೌಲಭ್ಯಗಳನ್ನು ಕಡಿತ ಮಾಡುವ ಪ್ರಯತ್ನಗಳು ಮಾಲಕರು ಮಾತ್ರವಲ್ಲ,  ಸರಕಾರಗಳಿಂದಲೇ ನಡೆಯುತ್ತಿವೆ.

ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಂತಹ ಕೈಗಾರಿಕಾ ಮತ್ತು ಸೇವಾ ಕ್ಷೇತ್ರಗಳು ವೇಗವಾಗಿ ವಿಸ್ತರಿಸುತ್ತಿರುವ ರಾಜ್ಯಗಳಲ್ಲಿ, ಕಾರ್ಮಿಕರ ಶೋಷಣೆ ಹೊಸ ರೂಪಗಳಲ್ಲಿ ನಡೆಯುತ್ತಿದೆ. ಕಾರ್ಮಿಕ ಸಂಹಿತೆಗಳ ಹೆಸರಿನಲ್ಲಿ ಹೋರಾಟಗಳಿಂದ ಗಳಿಸಿದ ಹಕ್ಕುಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಎಂಟು ಗಂಟೆಗಳ ಕೆಲಸದ ದಿನ ಎನ್ನುವುದು ಕಾನೂನಿನಲ್ಲಿದ್ದರೂ, ವಾಸ್ತವದಲ್ಲಿ ಅನೇಕ ಕಾರ್ಮಿಕರು ಹತ್ತು, ಹನ್ನೆರಡು ಗಂಟೆಗಳವರೆಗೆ ದುಡಿಯುತ್ತಿದ್ದಾರೆ. ವಿಶೇಷವಾಗಿ ಗಾರ್ಮೆಂಟ್ ಕಾರ್ಖಾನೆಗಳು, ಖಾಸಗಿ ಕೈಗಾರಿಕೆಗಳು, ಗುತ್ತಿಗೆ ಆಧಾರಿತ ಕಾರ್ಖಾನೆಗಳು, ನಿರ್ಮಾಣ ಕ್ಷೇತ್ರ, ಹೋಟೆಲ್ ಉದ್ಯಮ, ಡೆಲಿವರಿ ಮತ್ತು ಆಪ್ ಆಧಾರಿತ ಕೆಲಸಗಳಲ್ಲಿ ದುಡಿಯುವವರ ಸ್ಥಿತಿ ಅತ್ಯಂತ ಕಠಿಣವಾಗಿದೆ. ಅವರಿಗೆ ಸ್ಥಿರ ಉದ್ಯೋಗವಿಲ್ಲ, ಸಾಮಾಜಿಕ ಭದ್ರತೆ ಇಲ್ಲ, ಆರೋಗ್ಯ ವಿಮೆ ಇಲ್ಲ, ನಿವೃತ್ತಿ ಭದ್ರತೆ ಇಲ್ಲ; ಆದರೆ ಕೆಲಸದ ಒತ್ತಡ ಮಾತ್ರ ಅಮಾನವೀಯವಾಗಿದೆ.

 ಇದನ್ನೂ ಓದಿ : ಮೇ ದಿನದ ಆದರ್ಶ ಇಂದು ಹೆಚ್ಚು ಪ್ರಸ್ತುತತೆಯನ್ನು ಪಡೆದುಕೊಂಡಿದೆ

ಬೆಂಗಳೂರು, ತುಮಕೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ ಮೊದಲಾದ ಕೈಗಾರಿಕಾ ಪ್ರದೇಶಗಳಲ್ಲಿ ಸಾವಿರಾರು ಗುತ್ತಿಗೆ ಕಾರ್ಮಿಕರು ಕನಿಷ್ಠ ವೇತನಕ್ಕೂ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಐಟಿ ಮತ್ತು ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುವ ಯುವಜನರ ಸ್ಥಿತಿಯೂ ವಿಭಿನ್ನವಲ್ಲ. “ಫ್ಲೆಕ್ಸಿಬಿಲಿಟಿ” ಎಂಬ ಹೆಸರಿನಲ್ಲಿ ಕೆಲಸದ ಸಮಯವನ್ನು ಅಸ್ಪಷ್ಟಗೊಳಿಸಲಾಗಿದೆ. ಮನೆಯಲ್ಲಿದ್ದರೂ ಕೆಲಸ, ರಾತ್ರಿ ಸಂದೇಶಗಳಿಗೆ ಉತ್ತರಿಸುವ ಒತ್ತಡ, ವಾರಾಂತ್ಯದಲ್ಲೂ ಕೆಲಸ ಇವೆಲ್ಲವೂ ಹೊಸ ರೀತಿಯ ಶೋಷಣೆ. ಡೆಲಿವರಿ ಹುಡುಗರು, ಕ್ಯಾಬ್ ಚಾಲಕರು, ಗಿಗ್ ವರ್ಕರ್‌ಗಳು “ಸ್ವತಂತ್ರ ಉದ್ಯೋಗ” ಎಂಬ ಸುಳ್ಳು ಹೆಸರಿನಡಿ ಸಂಪೂರ್ಣ ಅಸುರಕ್ಷಿತ ಬದುಕು ನಡೆಸುತ್ತಿದ್ದಾರೆ. ಅಪಘಾತವಾದರೆ ಪರಿಹಾರವಿಲ್ಲ, ಅನಾರೋಗ್ಯ ಬಂದರೆ ವೇತನವಿಲ್ಲ, ವಿರೋಧಿಸಿದರೆ ಕೆಲಸವೇ ಇಲ್ಲ. ಕಾರ್ಮಿಕರನ್ನು “ಪಾರ್ಟ್ನರ್” ಎಂದು ಕರೆಯಲಾಗುತ್ತದೆ; ಆದರೆ ಲಾಭದ ಪಾಲುದಾರರನ್ನಾಗಿಸಲಾಗುವುದಿಲ್ಲ.

ಕರ್ನಾಟಕದಲ್ಲಿಯೂ ಕಾರ್ಮಿಕ ಸಂಘಟನೆಗಳ ಮೇಲೆ ದಮನ ಹೆಚ್ಚುತ್ತಿದೆ. ಸಂಘಟಿತವಾಗಿ ಹೋರಾಟ ನಡೆಸಲು ಅವಕಾಶ ಕಡಿಮೆಯಾಗುತ್ತಿದೆ. ಕಾರ್ಮಿಕರು ಪ್ರಶ್ನೆ ಕೇಳಿದರೆ, ಮುಷ್ಕರ ಮಾಡಿದರೆ, ವೇತನ ಹೆಚ್ಚಳ ಕೇಳಿದರೆ ಪೊಲೀಸ್ ಪ್ರಕರಣ, ಉದ್ಯೋಗ ಕಳೆದುಕೊಳ್ಳುವ ಭೀತಿ, ಆಡಳಿತದ ಒತ್ತಡ ಎದುರಾಗುತ್ತಿದೆ. ರೈತರ ಹೋರಾಟ, ಸಾರಿಗೆ ನೌಕರರ ಮುಷ್ಕರ, ಗುತ್ತಿಗೆ ಕಾರ್ಮಿಕರ ಪ್ರತಿಭಟನೆ ಇವೆಲ್ಲಕ್ಕೂ ಸರ್ಕಾರದ ಪ್ರತಿಕ್ರಿಯೆ ಪರಿಹಾರವಲ್ಲ; ದಮನ. ಇದು ಕೇವಲ ಆಡಳಿತ ವೈಫಲ್ಯವಲ್ಲ, ಬಂಡವಾಳ ಮತ್ತು ಅಧಿಕಾರದ ಮೈತ್ರಿಯ ಸ್ಪಷ್ಟ ಉದಾಹರಣೆ. ಸರ್ಕಾರಗಳು ಕಾರ್ಮಿಕರ ಸರ್ಕಾರಗಳಂತೆ ವರ್ತಿಸುವುದಿಲ್ಲ; ಕಾರ್ಪೊರೇಟ್ ಲಾಭದ ನಿರ್ವಾಹಕರಂತೆ ವರ್ತಿಸುತ್ತವೆ.

ಇದರ ಜೊತೆಗೆ ಬೆಲೆ ಏರಿಕೆ, ಸಾರ್ವಜನಿಕ ವಲಯದ ಖಾಸಗೀಕರಣ, ಶಿಕ್ಷಣ ಮತ್ತು ಆರೋಗ್ಯದ ವ್ಯಾಪಾರೀಕರಣ ಇವೆಲ್ಲವೂ ಕಾರ್ಮಿಕ ವರ್ಗದ ಬದುಕನ್ನು ಇನ್ನಷ್ಟು ಕಠಿಣಗೊಳಿಸುತ್ತಿವೆ. ಕಾರ್ಮಿಕನ ಸಂಬಳ ಹೆಚ್ಚಾಗುವುದಿಲ್ಲ; ಆದರೆ ಮನೆ ಬಾಡಿಗೆ, ವಿದ್ಯುತ್, ಶಿಕ್ಷಣ ಶುಲ್ಕ, ಔಷಧಿ ವೆಚ್ಚ ನಿರಂತರವಾಗಿ ಏರುತ್ತಲೇ ಇವೆ. ಮಹಿಳಾ ಕಾರ್ಮಿಕರ ಸ್ಥಿತಿ ಇನ್ನಷ್ಟು ಸಂಕೀರ್ಣ. ಕಡಿಮೆ ವೇತನ, ಕೆಲಸದ ಸ್ಥಳದಲ್ಲಿ ಕಿರುಕುಳ, ಅಸುರಕ್ಷತೆ, ಮನೆ ಮತ್ತು ಉದ್ಯೋಗದ ದ್ವಂದ್ವ ಹೊರೆ ಇವುಗಳ ನಡುವೆ ಅವರು ದುಡಿಯುತ್ತಿದ್ದಾರೆ. ಅಸಂಘಟಿತ ಕ್ಷೇತ್ರದ ಮಹಿಳಾ ಕಾರ್ಮಿಕರ ಬದುಕು ರಾಜ್ಯದ ಆರ್ಥಿಕತೆಯನ್ನು ಸಾಗಿಸುತ್ತಿದ್ದರೂ, ಅವರ ಅಸ್ತಿತ್ವವೇ ಅಂಕಿಅಂಶಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಇಂತಹ ಸಂದರ್ಭದಲ್ಲಿ ಮೇ ದಿನದ ಅರ್ಥ ಇನ್ನಷ್ಟು ಗಾಢವಾಗುತ್ತದೆ. ಅದು ಕೇವಲ ಇತಿಹಾಸದ ಸ್ಮರಣೆ ಅಲ್ಲ; ಇಂದಿನ ಹೋರಾಟದ ಕರೆಯಾಗಿದೆ. ಎಂಟು ಗಂಟೆಗಳ ಕೆಲಸದ ದಿನಕ್ಕಾಗಿ ಹೋರಾಡಿದ ಕಾರ್ಮಿಕರ ಸ್ಮರಣೆ ಇಂದು ಮತ್ತೆ ಕಾರ್ಮಿಕರನ್ನು ಪ್ರಶ್ನಿಸುತ್ತದೆ. ಕಾರ್ಮಿಕರು ಗಳಿಸಿದ ಹಕ್ಕುಗಳನ್ನು ಉಳಿಸಿಕೊಳ್ಳಲು ಸಿದ್ಧವೇ? ಕಾರ್ಮಿಕ ವರ್ಗದ ಏಕತೆ ಇಲ್ಲದೆ, ಸಂಘಟಿತ ಹೋರಾಟ ಇಲ್ಲದೆ, ಶೋಷಣೆಯ ವಿರುದ್ಧ ಪ್ರತಿರೋಧ ಸಾಧ್ಯವಿಲ್ಲ. ಮೇ ದಿನವನ್ನು ಕೇವಲ ಧ್ವಜಾರೋಹಣಕ್ಕೆ ಸೀಮಿತಗೊಳಿಸುವುದು ಅದರ ಆತ್ಮವನ್ನೇ ಕೊಲ್ಲುವಂತಾಗಿದೆ. ಮೇ ದಿನ ಅಂದರೆ ವರ್ಗಸ್ಮರಣೆ, ರಾಜಕೀಯ ಜಾಗೃತಿ ಮತ್ತು ಸಾಮಾಜಿಕ ನ್ಯಾಯದ ಹೋರಾಟದ ದಿನ.

ಹೀಗಾಗಿ ಎಂಟು ಗಂಟೆಗಳ ದುಡಿಮೆ ಕಾರ್ಮಿಕರ ಹಕ್ಕು. ಮಾನವೀಯ ಬದುಕು ಅವರ ಹಕ್ಕು. ಶೋಷಣೆಯ ವಿರುದ್ಧ ಕಾರ್ಮಿಕರ ಹೋರಾಟ ಮುಂದುವರಿಯಲಿ. ದುಡಿಮೆಯ ಅವಧಿಯನ್ನು ಒಟ್ಟಾರೆ ಶ್ರಮ ಉತ್ಪಾದಕತೆ, ಸಮಾಜದ ಬೆಳವಣಿಗೆಯ ಮಟ್ಟ, ಶ್ರಮಿಕರ ಮಾನವೀಯ ಅಗತ್ಯಗಳು ಇವನ್ನೆಲ್ಲ ಗಮನದಲ್ಲಿಟ್ಟುಕೊಂಡು ನಿರ್ಧರಿಸಬೇಕು ಎಂದು ಕೇಳುವುದು ಕಾರ್ಮಿಕರ ಹಕ್ಕು . ಅದು ಖಂಡಿತವಾಗಿಯೂ  ದಿನಕ್ಕೆ 8 ಗಂಟೆಯನ್ನು ಮೀರಲಾರದು. ಮೇ 1 ಇದನ್ನು ನೆನಪಿಸುವ ದಿನ, ವಿವಿಧ ಸ್ವರೂಪಗಳಲ್ಲಿ ನಡೆಯುತ್ತಿರುವ ಶ್ರಮದ ಶೋಷಣೆಯ ವಿರುದ್ಧ ಕಾರ್ಮಿಕರ ಹೋರಾಟದ ಪ್ರತೀಕ. ಈ ಹೋರಾಟ ಮುಂದುವರೆಯಲಿ.

ಇದನ್ನೂ ನೋಡಿ :“(ಲೇಬರ್‌ ಕೋಡ್ಸ್‌) ಶ್ರಮ ಸಂಹಿತೆಗಳ ಜಾರಿ: ರಾಜ್ಯಗಳ ಮುಂದಿನ ದಾರಿ ಯಾವುದು?” Janashakthi Media

Donate Janashakthi Media

Leave a Reply

Your email address will not be published. Required fields are marked *