ಬೊಮ್ಮನಹಳ್ಳಿ | ಮೇ ದಿನ ಆಚರಣೆ;ಕಾರ್ಮಿಕ ಸಂಹಿತೆಗಳ ವಿರುದ್ಧ ಆಕ್ರೋಶ

ಬೊಮ್ಮನಹಳ್ಳಿ: ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಶುಕ್ರವಾರ ಸಿಐಟಿಯು ಕಾರ್ಯಕರ್ತರು ಬೊಮ್ಮನಹಳ್ಳಿಯಲ್ಲಿ ಭರ್ಜರಿ ಮೆರವಣಿಗೆ ನಡೆಸಿದರು. ಹೊಸೂರು ರಸ್ತೆಯ ಗಾರೆಬಾವಿ ಪಾಳ್ಯದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತ ಮೇ ದಿನವನ್ನು ಆಚರಿಸಿದರು.

ನಂತರ ನಡೆದ ಬಹಿರಂಗ ಸಭೆಯಲ್ಲಿ ಸಿಐಟಿಯು ಬೊಮ್ಮನಹಳ್ಳಿ ವಲಯ ಅಧ್ಯಕ್ಷ ಧರ್ಮೇಗೌಡ ಮಾತನಾಡಿ, “ಕೇಂದ್ರ ಸರ್ಕಾರ ಬಂಡವಾಳದಾರರ ಲಾಭಕ್ಕಾಗಿ ಕಾರ್ಮಿಕ ವರ್ಗವನ್ನು ಗುಲಾಮಗಿರಿಗೆ ತಳ್ಳುವ ಉದ್ದೇಶದಿಂದ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಇತ್ತ ರಾಜ್ಯದ ಕಾಂಗ್ರೆಸ್ ಸರ್ಕಾರವೂ ಅವುಗಳನ್ನು ಜಾರಿಗೊಳಿಸಲು ಆತುರ ತೋರಿಸುತ್ತಿದೆ. ಕಾರ್ಮಿಕ ವಿರೋಧಿ ಧೋರಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಾಗಿವೆ” ಎಂದು ಟೀಕಿಸಿದರು.

ಇದನ್ನೂ ಓದಿ : ಮೇ ದಿನ: ಇತಿಹಾಸದ ಸ್ಮರಣೆ ಮಾತ್ರವಲ್ಲ, ಇಂದಿನ ಹೋರಾಟದ ಕರೆಯೂ ಹೌದು

ಸಿಐಟಿಯು ವಲಯ ಕಾರ್ಯದರ್ಶಿ ಜಾವಿದ್ ಅಹಮದ್ ಮಾತನಾಡಿ, “ಮೇ ದಿನಾಚರಣೆ ವಿಶ್ವದ ಕಾರ್ಮಿಕ ವರ್ಗಕ್ಕೆ ಸ್ಪೂರ್ತಿಯ ಸಂಕೇತ. ಎಂಟು ಗಂಟೆ ಕೆಲಸದ ಹಕ್ಕು ಸೇರಿದಂತೆ ಕಾರ್ಮಿಕರ ಹಕ್ಕುಗಳಿಗಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸುವ ದಿನವೂ ಇದಾಗಿದೆ. ರಾಜ್ಯ ಸರ್ಕಾರ ಕನಿಷ್ಠ ವೇತನವನ್ನು ಪರಿಷ್ಕರಿಸಿ ತಕ್ಷಣ ಜಾರಿಗೊಳಿಸಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಕಲ್ಯಾಣ ಯೋಜನೆಗಳನ್ನು ವಿಸ್ತರಿಸಲು ಹೆಚ್ಚಿನ ಅನುದಾನ ಒದಗಿಸಬೇಕು” ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಮುಖಂಡ ಜಿ. ಮೂರ್ತಿ, ಆಟೋ ಚಾಲಕರ ಮುಖಂಡ ಮಾಣಿಕ್ಯರಾಜ್, ಸಿಐಟಿಯು ಹಿರಿಯ ಮುಖಂಡ ಕೃಪೇಂದ್ರ ಪಾಟೀಲ್, ಸನ್ ಸೆರಾ ಕಾರ್ಮಿಕ ಸಂಘದ ಮುಖಂಡ ರಾಮಕೃಷ್ಣ ರೆಡ್ಡಿ ಹಾಗೂ ಸಿಪಿಎಂ ಮುಖಂಡ ಸಿ. ಜಗದೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನೂ ನೋಡಿ : “(ಲೇಬರ್‌ ಕೋಡ್ಸ್‌) ಶ್ರಮ ಸಂಹಿತೆಗಳ ಜಾರಿ: ರಾಜ್ಯಗಳ ಮುಂದಿನ ದಾರಿ ಯಾವುದು?” Janashakthi Media

Donate Janashakthi Media

Leave a Reply

Your email address will not be published. Required fields are marked *