ಹಾಸನ: ಕಾರ್ಮಿಕರಿಗೆ ಮಾಸಿಕ ಸರಾಸರಿ ₹36,000 ಕನಿಷ್ಠ ವೇತನ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶನಿವಾರ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಕಾರ್ಮಿಕರಿಗೆ
ಸಿಐಟಿಯು ರಾಜ್ಯ ಸಮಿತಿಯ ಕರೆಯ ಮೇರೆಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಮಿಕರು, ಕನಿಷ್ಠ ವೇತನ ಪರಿಷ್ಕರಣೆ, ಕಾರ್ಮಿಕ ಸಂಹಿತೆಗಳಿಗೆ ಕರ್ನಾಟಕ ತಿದ್ದುಪಡಿ, ಗುತ್ತಿಗೆ ಕಾರ್ಮಿಕರ ಖಾಯಮಾತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು. ಬಳಿಕ ಮುಖ್ಯಮಂತ್ರಿಗಳು ಹಾಗೂ ಕಾರ್ಮಿಕ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಸುಪ್ರೀಂ ಕೋರ್ಟ್ನ ರೆಪ್ಟಕೋಸ್ ಪ್ರಕರಣದ ತೀರ್ಪಿನಲ್ಲಿ ನಿಗದಿಪಡಿಸಿರುವ ಮಾನದಂಡಗಳು ಹಾಗೂ ಪ್ರಸ್ತುತ ಬೆಲೆ ಏರಿಕೆ, ಜೀವನ ನಿರ್ವಹಣಾ ವೆಚ್ಚಗಳನ್ನು ಪರಿಗಣಿಸಿ ಕಾರ್ಮಿಕರಿಗೆ ಮಾಸಿಕ ಸರಾಸರಿ ₹36 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಕನಿಷ್ಠ ವೇತನ ಅಧಿಸೂಚನೆಯಲ್ಲಿನ ನ್ಯೂನತೆ ಸರಿಪಡಿಸಲು ಒತ್ತಾಯ
ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಸ್ವಾಗತಿಸಿದ ಅವರು, ಅದರಲ್ಲಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು. ಮೇ 22, 2026ರಂದು ಹೊರಡಿಸಿರುವ ಅಧಿಸೂಚನೆಯನ್ನು ಕರಡು ಅಧಿಸೂಚನೆ ಪ್ರಕಟವಾದ ಏಪ್ರಿಲ್ 11, 2025ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು. ಇದರಿಂದ ಕಾರ್ಮಿಕರಿಗೆ ದೊರೆಯಬೇಕಿರುವ ಹಿಂಬಾಕಿ ವೇತನ ಪಾವತಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾರ್ಮಿಕ
ಇದನ್ನೂ ಓದಿ : ಮೇ ದಿನ: ಇತಿಹಾಸದ ಸ್ಮರಣೆ ಮಾತ್ರವಲ್ಲ, ಇಂದಿನ ಹೋರಾಟದ ಕರೆಯೂ ಹೌದು
19 ಉದ್ದಿಮೆಗಳನ್ನು ಕೈಬಿಟ್ಟಿರುವುದಕ್ಕೆ ಆಕ್ಷೇಪ
ಕನಿಷ್ಠ ವೇತನದ ಅಧಿಸೂಚನೆಯಿಂದ ಗಾರ್ಮೆಂಟ್ಸ್, ತೋಟಗಾರಿಕೆ, ಅಂಗನವಾಡಿ ಸೇರಿದಂತೆ ವಿವಿಧ ಯೋಜನಾ ನೌಕರರು, ಬೀಡಿ, ಅಗರಬತ್ತಿ ಹಾಗೂ ಕೈಮಗ್ಗ ಸೇರಿದಂತೆ 19 ವಿಭಾಗಗಳ ಉದ್ದಿಮೆಗಳನ್ನು ಕೈಬಿಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ನಿರ್ಧಾರದಿಂದ ಹೆಚ್ಚಿನ ಸಂಖ್ಯೆಯ ಮಹಿಳಾ ಕಾರ್ಮಿಕರು ವೇತನ ಹೆಚ್ಚಳದ ಲಾಭದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಈ ಕ್ಷೇತ್ರಗಳಿಗೂ ಕನಿಷ್ಠ ವೇತನವನ್ನು ವಿಸ್ತರಿಸಿ ಹೊಸ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಸಂಹಿತೆಗಳಿಗೆ ಕರ್ನಾಟಕ ತಿದ್ದುಪಡಿ ಬೇಕು
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ ಅಪಾಯವಿದೆ ಎಂದು ಸಿಐಟಿಯು ಆರೋಪಿಸಿತು. ಈ ಸಂಹಿತೆಗಳನ್ನು ಯಥಾವತ್ತಾಗಿ ಜಾರಿಗೊಳಿಸದೆ, ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು ಬಳಸಿ ಕಾರ್ಮಿಕರ ಪರವಾದ “ಕರ್ನಾಟಕ ತಿದ್ದುಪಡಿ ನಿಯಮಗಳನ್ನು” ರೂಪಿಸಿ ನಂತರವೇ ಜಾರಿಗೆ ತರಬೇಕು ಎಂದು ಒತ್ತಾಯಿಸಲಾಯಿತು.
ಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹ
ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ, ಹಂಗಾಮಿ ಹಾಗೂ ಟ್ರೈನಿ ಕಾರ್ಮಿಕರು ಕಡಿಮೆ ವೇತನ ಮತ್ತು ಉದ್ಯೋಗ ಭದ್ರತೆ ಇಲ್ಲದ ಪರಿಸ್ಥಿತಿಯಲ್ಲಿ ದುಡಿಯುತ್ತಿದ್ದಾರೆ. ಗುತ್ತಿಗೆ ಪದ್ಧತಿಯನ್ನು ಹಂತಹಂತವಾಗಿ ರದ್ದುಪಡಿಸಿ, ಖಾಯಂಯೇತರ ಕಾರ್ಮಿಕರನ್ನು ಖಾಯಂಗೊಳಿಸಲು ಪ್ರತ್ಯೇಕ ಕಾನೂನು ರೂಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಖಜಾಂಚಿ ಅರವಿಂದ್, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುಳ, ಗ್ರಾಮ ಪಂಚಾಯಿತಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ. ಹೊನ್ನೇಗೌಡ, ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಕಾರ್ಯದರ್ಶಿ ಸೌಮ್ಯ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ನೂರಾರು ಕಾರ್ಮಿಕರು ಭಾಗವಹಿಸಿದ್ದರು.
ಇದನ್ನೂ ನೋಡಿ : ಕಾರ್ಮಿಕರ ಕನಿಷ್ಠ ವೇತನದಲ್ಲಿ ಶೇ.60 ಹೆಚ್ಚಳ: ಸಿಐಟಿಯು ಪ್ರತಿಕ್ರಿಯೆ ಏನು? Janashakthi Media
