ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಹೊಸ ನಾಯಕರಾಗಿ ಡಿ.ಕೆ. ಶಿವಕುಮಾರ್ ಅವರನ್ನು ಶನಿವಾರ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರ ಹೆಸರನ್ನು ಏಕಮತದಿಂದ ಅಂಗೀಕರಿಸಲಾಗಿದ್ದು, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವ ದಾರಿ ಸುಗಮವಾಗಿದೆ. ಜೂನ್ 03 ರಂದು ಸಂಜೆ 4 ಗಂಟೆ 5 ನಿಮಿಷಕ್ಕೆ ಪ್ರಮಾಣವಚನಕ್ಕೆ ಸಿದ್ಧತೆ ನಡೆದಿವೆ. ಕಾಂಗ್ರೆಸ್
ಪಕ್ಷದ ಹಿರಿಯ ನಾಯಕರು ಹಾಗೂ ಎಐಸಿಸಿ ವೀಕ್ಷಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದರೆ, ಹಲವು ಶಾಸಕರು ಅದನ್ನು ಬೆಂಬಲಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಭೆಯಲ್ಲಿ ಯಾವುದೇ ಸ್ಪರ್ಧಾತ್ಮಕ ಪರಿಸ್ಥಿತಿ ಎದುರಾಗದೆ, ನಾಯಕತ್ವದ ಆಯ್ಕೆ ಪ್ರಕ್ರಿಯೆ ಸರ್ವಾನುಮತದಿಂದ ಪೂರ್ಣಗೊಂಡಿದೆ.
ಡಿ.ಕೆ. ಶಿವಕುಮಾರ್ ಅವರು ಈವರೆಗೆ ಉಪಮುಖ್ಯಮಂತ್ರಿಯಾಗಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಂಘಟನೆ ಬಲಪಡಿಸಿದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು, ಇದೀಗ ರಾಜ್ಯದ ಅತ್ಯುನ್ನತ ಹುದ್ದೆ ಅಲಂಕರಿಸಲು ಸಜ್ಜಾಗಿದ್ದಾರೆ. ಕಾಂಗ್ರೆಸ್
ಇದನ್ನೂ ಓದಿ : ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ: ಮಹಾ ವಿಕಾಸ್ ಅಘಾಡಿಯಲ್ಲಿ ಸ್ಥಾನ ಹಂಚಿಕೆ ಅಂತಿಮ
ಹೊಸ ಮುಖ್ಯಮಂತ್ರಿಯಾಗಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜೂನ್ 3ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಕೆಲ ಸಚಿವರು ಸಹ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದ್ದು, ಸಚಿವ ಸಂಪುಟದ ಅಂತಿಮ ರೂಪುರೇಷೆಗಳ ಕುರಿತು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ಮುಂದುವರಿದಿವೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತ ಚರ್ಚೆಗಳು ಹಲವು ತಿಂಗಳುಗಳಿಂದ ನಡೆಯುತ್ತಿದ್ದು, ಸಿದ್ದರಾಮಯ್ಯ ಅವರ ರಾಜೀನಾಮೆಯ ಬಳಿಕ ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಂಡಿದೆ. ಈ ಬೆಳವಣಿಗೆಯೊಂದಿಗೆ ರಾಜ್ಯ ಕಾಂಗ್ರೆಸ್ನಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಾಮಾಜಿಕ ಸಮತೋಲನ, ಪ್ರಾದೇಶಿಕ ಪ್ರತಿನಿಧಿತ್ವ ಹಾಗೂ ವಿವಿಧ ಗುಂಪುಗಳ ಸಮನ್ವಯ ಸಾಧಿಸುವುದು ಹೊಸ ಸರ್ಕಾರದ ಮುಂದೆ ಇರುವ ಪ್ರಮುಖ ಸವಾಲುಗಳಾಗಿವೆ. ಸಚಿವ ಸಂಪುಟ ರಚನೆ, ಗ್ಯಾರಂಟಿ ಯೋಜನೆಗಳ ಮುಂದುವರಿಕೆ, ಹಣಕಾಸು ನಿರ್ವಹಣೆ ಹಾಗೂ ಪ್ರಾದೇಶಿಕ ಬೇಡಿಕೆಗಳಿಗೆ ಸ್ಪಂದಿಸುವುದು ಹೊಸ ನಾಯಕತ್ವದ ಮೊದಲ ಪರೀಕ್ಷೆಯಾಗಲಿದೆ.
ಇದನ್ನೂ ನೋಡಿ : “ಮುಗಿದ ಅಧ್ಯಾಯ… ಹೊಸ ಆರಂಭವೇ?” | ಕೆ.ಎಸ್. ವಿಮಲಾ |ನೇರ ಪ್ರಸಾರ
