ಕೆ.ಆರ್. ಮಾರ್ಕೆಟ್‌ನಲ್ಲಿ ಬೀದಿಬದಿ ವ್ಯಾಪಾರಿಗಳ ತೆರವು ವಿರೋಧ: ಸಿಐಟಿಯು ಮಧ್ಯಪ್ರವೇಶ, ಹಕ್ಕು ರಕ್ಷಣೆಗೆ ಆಗ್ರಹ

ಬೆಂಗಳೂರು: ಬೆಂಗಳೂರಿನ ಹೃದಯ ಭಾಗದಲ್ಲಿರುವ ಹಾಗೂ ಏಷ್ಯಾದ ಅತಿದೊಡ್ಡ ಹೂ ಮಾರುಕಟ್ಟೆಗಳಲ್ಲಿ ಒಂದಾದ ಕೆ.ಆರ್. ಮಾರ್ಕೆಟ್‌ನಲ್ಲಿ ಬೀದಿಬದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ರಸ್ತೆ ಅಗಲೀಕರಣದ ಹೆಸರಿನಲ್ಲಿ ಯಾವುದೇ ಪೂರ್ವ ಸೂಚನೆ ಅಥವಾ ಸಮಯಾವಕಾಶ ನೀಡದೆ ಜೆಸಿಬಿ ಮೂಲಕ ಅಂಗಡಿಗಳನ್ನು ಧ್ವಂಸಗೊಳಿಸಿರುವುದು ಅಮಾನವೀಯ ಕ್ರಮವಾಗಿದ್ದು, ಸಾವಿರಾರು ವ್ಯಾಪಾರಿಗಳ ಜೀವನೋಪಾಯಕ್ಕೆ ಹೊಡೆತ ನೀಡಿದೆ ಎಂದು ಬೆಂಗಳೂರು ಬೀದಿಬದಿ ವ್ಯಾಪಾರಿಗಳ ಸಂಘ (ಸಿಐಟಿಯು) ಆರೋಪಿಸಿದೆ.

ಕೆ.ಆರ್. ಮಾರ್ಕೆಟ್ ಪ್ರದೇಶವು ಹೂವು, ಸೊಪ್ಪು, ತರಕಾರಿ ಹಾಗೂ ಹಣ್ಣುಗಳ ವ್ಯಾಪಾರಕ್ಕೆ ಪ್ರಮುಖ ಕೇಂದ್ರವಾಗಿದ್ದು, ಇಲ್ಲಿ ಎರಡು-ಮೂರು ತಲೆಮಾರುಗಳಿಂದ ಬೀದಿಬದಿ ವ್ಯಾಪಾರಿಗಳು ಜೀವನ ಕಟ್ಟಿಕೊಂಡಿದ್ದಾರೆ. ನಗರದ ಮಧ್ಯಮ ವರ್ಗ ಮತ್ತು ಬಡ ಜನರಿಗೆ ಈ ಮಾರುಕಟ್ಟೆ ಪ್ರಮುಖ ಆಧಾರವಾಗಿದೆ.

ಇತ್ತೀಚೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಗೆ ಆದೇಶ ನೀಡಿದ್ದರು. ಇದರ ಬೆನ್ನಲ್ಲೇ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಸಂಘ ತಿಳಿಸಿದೆ.

ಇದನ್ನೂ ಓದಿ: ಸಂವಿಧಾನದ ರಕ್ಷಣೆ ಎಂದರೆ ದೇಶದ ರಕ್ಷಣೆ: ಆದಿತ್ಯ ಚಟರ್ಜಿ

ಈ ಹಿನ್ನೆಲೆಯಲ್ಲಿ ಬೆಂಗಳೂರು ಬೀದಿಬದಿ ವ್ಯಾಪಾರಿಗಳ ಸಂಘವು ವ್ಯಾಪಾರಿಗಳಿಂದ ಸಹಿ ಸಂಗ್ರಹ ನಡೆಸಿ ಜೂನ್ 12ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸೆಂಟ್ರಲ್ ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ್ ಅವರಿಗೆ ಮನವಿ ಸಲ್ಲಿಸಿತು. ಜೆಸಿಬಿ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸಿ, ವ್ಯಾಪಾರಿಗಳ ಹಕ್ಕುಗಳನ್ನು ರಕ್ಷಿಸುವಂತೆ ಆಗ್ರಹಿಸಲಾಯಿತು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಸಿಐಟಿಯು ಉಪಾಧ್ಯಕ್ಷೆ ಕೆ.ಎಸ್. ಲಕ್ಷ್ಮಿ, ಬೆಂಗಳೂರು ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯ ಕಾರ್ಯದರ್ಶಿ ಎ.ಎಂ. ರವಿಚಂದ್ರನ್, ಕೆ.ಆರ್. ಮಾರ್ಕೆಟ್ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮುರುಗನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ವೇಳೆ ಜೂನ್ 13ರಂದು ಸಿಐಟಿಯು ನಿಯೋಗವು ಕೆ.ಆರ್. ಮಾರ್ಕೆಟ್‌ಗೆ ಭೇಟಿ ನೀಡಿ ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಿತು. ಈ ಸಂದರ್ಭದಲ್ಲಿ ಜಿಬಿಎ ಆಯುಕ್ತರು ತಕ್ಷಣವೇ ಬೀದಿಬದಿ ವ್ಯಾಪಾರಿಗಳ ಸಭೆ ಕರೆಯಬೇಕು, ಪ್ರಜಾಸತ್ತಾತ್ಮಕ ಚರ್ಚೆಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಹಾಗೂ ಬೀದಿಬದಿ ವ್ಯಾಪಾರಿಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಒತ್ತಾಯಿಸಲಾಯಿತು.

ನಿಯೋಗದಲ್ಲಿ ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಬಿ.ಎನ್. ಮಂಜುನಾಥ್, ಉಪಾಧ್ಯಕ್ಷೆ ಕೆ.ಎಸ್. ಲಕ್ಷ್ಮಿ, ರಾಜ್ಯ ಕಾರ್ಯದರ್ಶಿ ಎ.ಎಂ. ರವಿಚಂದ್ರನ್, ಜಿಲ್ಲಾ ಅಧ್ಯಕ್ಷೆ ಬಸಮ್ಮ, ಜಿಲ್ಲಾ ಖಜಾಂಚಿ ಸುನೀಲ್ ಜಿ.ಪಿ., ಕಾರ್ಮಿಕ ಮುಖಂಡ ನಾಗರಾಜ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಶಶಿಕಲಾ ಹಾಗೂ ಅಸಂಘಟಿತ ಕಾರ್ಮಿಕರ ಸಂಘದ ಮುಖಂಡ ಸುನೀಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬೀದಿಬದಿ ವ್ಯಾಪಾರಿಗಳ ಜೀವನೋಪಾಯ ಮತ್ತು ಕಾನೂನುಬದ್ಧ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ತಕ್ಷಣ ಸಂವಾದಕ್ಕೆ ಮುಂದಾಗಬೇಕು ಎಂದು ಸಂಘದ ಮುಖಂಡರು ಆಗ್ರಹಿಸಿದ್ದಾರೆ.

ಇದನ್ನೂ ನೋಡಿ: ಅನ್ನಭಾಗ್ಯ | ಬಡವರ ಅನ್ನಕ್ಕೆ ಕನ್ನ? ಲೋಕಾಯುಕ್ತ ದಾಳಿಯಲ್ಲಿ ಬಯಲು Janashakthi Media

Donate Janashakthi Media

Leave a Reply

Your email address will not be published. Required fields are marked *