‘ಕನಿಷ್ಠ ವೇತನ ಜಾರಿ ಆಗದಿದ್ದರೆ ರಾಜ್ಯಾದ್ಯಂತ ಹೋರಾಟ’: ಸಿಐಟಿಯು
ಮಂಗಳೂರು: ಸಮಾಜದ ಅಭಿವೃದ್ಧಿಯಲ್ಲಿ ಕಾರ್ಮಿಕರ ಶ್ರಮ ಪ್ರಮುಖವಾದರೂ, ಆಳುವ ವರ್ಗಗಳು ಅದಕ್ಕೆ ತಕ್ಕ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಕಾರ್ಮಿಕ ಚಳುವಳಿಯ ಹಿರಿಯ ನಾಯಕ ಜೆ. ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.
ಗುರುಪುರ ಕೈಕಂಬದ ಮಾತಾಕೃಪಾ ಹಾಲ್‌ನಲ್ಲಿ ಸಿಐಟಿಯು ನೇತೃತ್ವದಲ್ಲಿ ನಡೆದ ಗುರುಪುರ ವಲಯ ಮಟ್ಟದ ಕಾರ್ಮಿಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನಿಷ್ಠ ವೇತನಕ್ಕಾಗಿ ಹಲವು ದಶಕಗಳಿಂದ ಹೋರಾಟ ನಡೆದಿದ್ದರೂ, ರಾಜ್ಯ ಸರ್ಕಾರ ಮೇ 22ರಂದು ಘೋಷಿಸಿದ ಕನಿಷ್ಠ ಕೂಲಿಯನ್ನು ಇನ್ನೂ ಜಾರಿಗೊಳಿಸದಿರುವುದು ವಿಷಾದನೀಯ ಎಂದು ಹೇಳಿದರು.
“ಕನಿಷ್ಠ ವೇತನವನ್ನು ಶೀಘ್ರ ಜಾರಿಗೆ ತರದಿದ್ದರೆ ರಾಜ್ಯಾದ್ಯಂತ ಭಾರೀ ಹೋರಾಟವನ್ನು ಎದುರಿಸಬೇಕಾಗುತ್ತದೆ” ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಸಿಲ್ಕ್ ಬೋರ್ಡ್ ಜಂಕ್ಷನ್‌ಲ್ಲಿ ಸ್ವಚ್ಛತಾ ಅಭಿಯಾನ: ಸ್ವಯಂಸೇವಕರಿಂದ ಸ್ವಚ್ಛತೆ, ಬಣ್ಣಹಚ್ಚುವಿಕೆ
ಸಮಾವೇಶದಲ್ಲಿ ಮಾತನಾಡಿದ ರೈತ–ಕಾರ್ಮಿಕ ಮುಖಂಡ ಸದಾಶಿವದಾಸ್, ಕಾರ್ಮಿಕ ಚಳುವಳಿಯ ಇತಿಹಾಸವನ್ನು ವಿವರಿಸಿ, ಕೇಂದ್ರ ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳಾಗಿ ರೂಪಿಸುವ ಮೂಲಕ ಕಾರ್ಮಿಕ ಹಕ್ಕುಗಳನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಸಮಾರೋಪ ಭಾಷಣದಲ್ಲಿ ಸಿಟು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕಾರ್ಮಿಕರ ಹಕ್ಕುಗಳಿಗಾಗಿ ಸಿಟು ಸದಾ ಹೋರಾಟ ನಡೆಸುತ್ತಿರುವ ಸಂಘಟನೆ ಆಗಿದ್ದು, ಎಲ್ಲಾ ವರ್ಗದ ಕಾರ್ಮಿಕರು ಒಂದಾಗಿ ಚಳುವಳಿಯನ್ನು ಬಲಪಡಿಸಬೇಕಾಗಿದೆ ಎಂದು ಕರೆ ನೀಡಿದರು.
ಸಮಾವೇಶದಲ್ಲಿ ಗುರುಪುರ ವಲಯ ಕಾರ್ಯದರ್ಶಿ ನೋಣಯ್ಯ ಗೌಡ ಅವರು ಕಳೆದ ನಾಲ್ಕು ವರ್ಷಗಳ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಬಳಿಕ ನಡೆದ ಚರ್ಚೆಯಲ್ಲಿ ಹಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಮುಂದಿನ ಅವಧಿಗೆ 25 ಸದಸ್ಯರ ಸಮನ್ವಯ ಸಮಿತಿಯನ್ನು ರಚಿಸಲಾಯಿತು.
ವೇದಿಕೆಯಲ್ಲಿ ಸಿಟು ಜಿಲ್ಲಾ ನಾಯಕರು ವಸಂತಿ ಕುಪ್ಪೆಪದವು, ಭವ್ಯಾ ಮುಚ್ಚೂರು ಉಪಸ್ಥಿತರಿದ್ದರು. ಸಭೆಗೆ ವಲಯಾಧ್ಯಕ್ಷ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ನೋಡಿ: SIR ಕರ್ನಾಟಕ: ಈಗಲೇ 80 ಲಕ್ಷ ಹೊರಗೆ?! ಮುಂದೆಷ್ಟು? | ವಿಶ್ಲೇಷಣೆ – ಕೆ.ಎಸ್. ವಿಮಲಾ Janashakthi Media
