ತಿರುವನಂತಪುರಂ: ಕೇಂದ್ರದಲ್ಲಿ ಆಳುವ ಪಕ್ಷದ ಕಚೇರಿ ಮುದ್ರೆಯನ್ನು ಹೊಂದಿರುವ ಮತ್ತು ಇತರ ರಾಜಕೀಯ ಪಕ್ಷಗಳಿಗೆ ಪ್ರಸಾರ ಮಾಡಿದ ವಿವಾದಾತ್ಮಕ ಸುತ್ತೋಲೆಗೆ ಪ್ರತಿಕ್ರಿಯಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಂಡಿರುವುದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡಿಸಿದ್ದಾರೆ.
ಕೇರಳದ ಮುಖ್ಯ ಚುನಾವಣಾ ಅಧಿಕಾರಿಗೆ ಬರೆದ ಪತ್ರದಲ್ಲಿ, ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಹೊರಡಿಸಲಾದ ಪೊಲೀಸ್ ನೋಟಿಸ್‌ಗಳು ಚುನಾವಣಾ ಆಯೋಗದ ನಿರ್ದೇಶನಗಳನ್ನು ಆಧರಿಸಿರಬಹುದು ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವ ಸಮಾಜದಲ್ಲಿ, ಇಂತಹ ಘಟನೆಗಳು ಸ್ವಾಭಾವಿಕವಾಗಿ ಸಾರ್ವಜನಿಕ ಅಭಿಪ್ರಾಯ ಮತ್ತು ಟೀಕೆಗಳನ್ನು ಆಹ್ವಾನಿಸುತ್ತವೆ ಎಂದು ಅವರು ಹೇಳಿದರು. “ಟೀಕೆ ಸಭ್ಯತೆಯ ಮಿತಿಯನ್ನು ದಾಟದ ಅಥವಾ ಮಾನನಷ್ಟ ಅಥವಾ ವೈಯಕ್ತಿಕ ಸ್ವರೂಪವನ್ನು ಪಡೆಯದಿರುವ ವರೆಗೆ, ಅದನ್ನು ಅಭಿಪ್ರಾಯದ ಕಾನೂನುಬದ್ಧ ಅಭಿವ್ಯಕ್ತಿಯಾಗಿ ಪರಿಗಣಿಸಬೇಕು” ಎಂದು ಅವರು ಹೇಳಿದರು.

ಇದನ್ನೂ ಓದಿ : ಪಶ್ಚಿಮ ಬಂಗಾಳದಲ್ಲಿ ವಿವಾದ: ಮತದಾರರ ಪಟ್ಟಿಯಿಂದ 35-40% ಹೆಸರು ಅಳಿಕೆ
ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆ ಮತ್ತು ಘನತೆಯನ್ನು ಯಾವಾಗಲೂ ಎತ್ತಿಹಿಡಿಯಬೇಕು ಮತ್ತು ಅದರ ಅಧಿಕಾರಿಗಳ ಕ್ರಮಗಳು ಸಂಪೂರ್ಣ ರಾಜಕೀಯ ತಟಸ್ಥತೆಯನ್ನು ಬಿಂಬಿಸಬೇಕು ಎಂದು ಅವರು ಒತ್ತಿ ಹೇಳಿದರು. ಆಗ ಮಾತ್ರ, ಆಯೋಗವು ಸಾರ್ವಜನಿಕ ನಂಬಿಕೆ ಮತ್ತು ಗೌರವವನ್ನು ಪಡೆಯಬಹುದು ಎಂದು ಅವರು ಹೇಳಿದರು.
ರಾಜಕೀಯ ಪಕ್ಷದ ಮುದ್ರೆಯನ್ನು ಹೊಂದಿರುವ ದಾಖಲೆಯ ಪ್ರಸರಣವನ್ನು ಕೇವಲ “ಕ್ಲೆರಿಕಲ್”(ಗುಮಾಸ್ತಿಕೆಯ) ದೋಷವೆಂದು ತಳ್ಳಿಹಾಕಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಗಮನಿಸಿದರು. ಹಿರಿಯ ಅಧಿಕಾರಿಗಳ ಸರಿಯಾದ ಪರಿಶೀಲನೆಯಿಲ್ಲದೆ ಇಂತಹ ಮಹತ್ವದ ಸಂದೇಶವನ್ನು ಹೇಗೆ ಹೊರಡಿಸಬಹುದು ಎಂದು ಅವರು ಪ್ರಶ್ನಿಸಿದರು.
ಕೇರಳದ ಮುಖ್ಯ ಚುನಾವಣಾಧಿಕಾರಿ ಈಗಾಗಲೇ ಈ ವಿಷಯದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸೂಚಿಸಿದ್ದಾರೆ. ತನಿಖೆಯ ಫಲಿತಾಂಶಗಳನ್ನು ಸಾರ್ವಜನಿಕಗೊಳಿಸಬೇಕು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ರಾಜಕೀಯ ಪಕ್ಷಗಳು ಮತ್ತು ನಾಗರಿಕರೊಂದಿಗೆ ಹಂಚಿಕೊಳ್ಳಬೇಕು ಎಂದು ಪಿಣರಾಯಿ ವಿಜಯನ್ ಒತ್ತಾಯಿಸಿದ್ದಾರೆ.
ಇದನ್ನೂ ನೋಡಿ : “ವೇದಿಕೆಯ ಬೆಳಕಿನಲ್ಲಿ ಬದುಕಿನ ಕಥೆಗಳು | ವಿಶ್ವ ರಂಗಭೂಮಿ ದಿನ ವಿಶೇಷ” Janashakthi Media
