ಆರೋಗ್ಯ ವ್ಯವಸ್ಥೆಯಲ್ಲಿ ಕ್ಯೂಬಾ ವಿಶ್ವಗುರು ಆದದ್ದು ಹೇಗೆ?: ಡಾ. ಅನಿಲ್ ಕುಮಾರ್ ಅವರ ಸಂದರ್ಶನ

(ಸಂಪಾದಿತ ಪಠ್ಯ ಆವೃತ್ತಿ : ವಸಂತರಾಜ ಎನ್.ಕೆ)

ಕ್ಯೂಬಾದ ಆರೋಗ್ಯ ವ್ಯವಸ್ಥೆಯನ್ನು ವಿಶ್ವಗುರು ಎಂದು ಹೇಳಿದರೂ ತಪ್ಪಾಗಲಾರದು. ಅಲ್ಲಿಯ ಸರಾಸರಿ ಆಯುಷ್ಯ ಹೆಚ್ಚಿದೆ, ಶಿಶು ಮರಣ ಪ್ರಮಾಣ ಅತ್ಯಂತ ಕಡಿಮೆ, ಮತ್ತು ವೈದ್ಯರು-ಜನಸಂಖ್ಯೆ ಅನುಪಾತ ಅತ್ಯುತ್ತಮವಾಗಿದೆ. 66 ವರ್ಷಗಳಿಂದ ಯು.ಎಸ್ ನಿರಂತರವಾಗಿ ದಿಗ್ಬಂಧನ ಹೇರುತ್ತಿದ್ದರೂ, ಅದನ್ನು ಮೀರಿ ಆರೋಗ್ಯ ವ್ಯವಸ್ಥೆಯಲ್ಲಿ ಕ್ಯೂಬಾ ಮಾಡಿರುವ ಸಾಧನೆಗಳ ಕುರಿತು ಕ್ಯೂಬಾಗೆ ಭೇಟಿ ನೀಡಿ ಅಲ್ಲಿಯ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಬಂದಿರುವ ಜನಪರ ವೈದ್ಯ ಡಾಕ್ಟರ್ ಅನಿಲ್ ಕುಮಾರ್ ಅವರು ಗುರುರಾಜ ದೇಸಾಯಿ  ಅವರಿಗೆ  ನೀಡಿದ ಸಂದರ್ಶನದ ಸಂಪಾದಿತ ಪಠ್ಯ ಆವೃತ್ತಿ.

ಗುರುರಾಜ್ : ಡಾಕ್ಟರ್ ಅನಿಲ್ ಅವರೇ, ನೀವು ಕ್ಯೂಬಾಗೆ ಭೇಟಿ ಕೊಟ್ಟು ಆರೋಗ್ಯದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಬಂದಿದ್ದೀರಿ. 66 ವರ್ಷಗಳಿಂದ ಅಮೆರಿಕದ ಸಾಮ್ರಾಜ್ಯಶಾಹಿ ಕ್ಯೂಬಾಗೆ ದಿಗ್ಬಂಧನ ಹೇರುತ್ತಿದೆ. ಇಷ್ಟೆಲ್ಲ ದಿಗ್ಬಂಧನಗಳನ್ನು ಮೀರಿ ಕ್ಯೂಬಾ ಆರೋಗ್ಯದಲ್ಲಿ ದೊಡ್ಡ ಸಾಧನೆ ಮಾಡಿದೆ. ಸಾಧನೆ ಹೇಗೆ ಸಾಧ್ಯವಾಯಿತು, ಅದರ ಹಿನ್ನೆಲೆ ಏನು?

ಡಾ. ಅನಿಲ್: ಕ್ಯೂಬಾದ ಚರಿತ್ರೆ 1959ರ ಕ್ರಾಂತಿಯ ನಂತರದ್ದು ಮಾತ್ರವಲ್ಲ. 19ನೇ ಶತಮಾನದಿಂದಲೂ ಸೆಸ್ಪೆಡಸ್, ಹೊಸೆ ಮಾರ್ಟಿ ಮುಂತಾದವರ ನೇತೃತ್ವದಲ್ಲಿ ಅನೇಕ ಕ್ರಾಂತಿಗಳು ನಡೆದಿವೆ. 1959ರ ಕ್ರಾಂತಿಯ ನಂತರ ಫಿಡೆಲ್ ಕ್ಯಾಸ್ಟ್ರೋ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು.

1959ರ ಹೊತ್ತಿಗೆ, ಕ್ಯೂಬಾದ ಆರೋಗ್ಯ ವ್ಯವಸ್ಥೆಯು ಕೇವಲ ಹವಾನ ಮತ್ತು ನಗರ ಪ್ರದೇಶಗಳಿಗೆ ಸೀಮಿತವಾಗಿತ್ತು; ಗ್ರಾಮೀಣ ಭಾಗದಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ. ಕ್ರಾಂತಿಯ ಸಮಯದಲ್ಲಿ ಸುಮಾರು 6,500ಕ್ಕೂ ಹೆಚ್ಚು ವೈದ್ಯರು ಕೆಲಸ ಮಾಡುತ್ತಿದ್ದರು. ಅಂದಿನ ವೈದ್ಯರು-ಜನಸಂಖ್ಯೆ ಅನುಪಾತವು ಪ್ರತಿ 164 ಜನರಿಗೆ ಒಬ್ಬ ವೈದ್ಯರಾಗಿತ್ತು. ಆದರೆ ಮೂರು ವರ್ಷಗಳಲ್ಲಿ ಸುಮಾರು 1,402 ವೈದ್ಯರು ದೇಶವನ್ನು ತೊರೆದು ಹೋದರು.

1960ರಲ್ಲಿ, ಕ್ರಾಂತಿಯಾದ ಮೊದಲನೇ ವರ್ಷದಲ್ಲೇ, ಎಲ್ಲಾ ಆರೋಗ್ಯ ಸೇವೆಗಳನ್ನು ರಾಷ್ಟ್ರೀಕರಣ ಮಾಡಲಾಯಿತು. ಆರೋಗ್ಯವನ್ನು ಎಲ್ಲಾ ಜನರ ಹಕ್ಕಾಗಿ, ಪ್ರಭುತ್ವದಿಂದ ಖಾತ್ರಿಪಡಿಸಲ್ಪಟ್ಟ ಹಕ್ಕಾಗಿ (State Guaranteed Right) ಪರಿವರ್ತಿಸಲಾಯಿತು.  ಖಾಸಗಿ ಪ್ರಾಕ್ಟೀಸ್ ಮತ್ತು ಆಸ್ಪತ್ರೆಗಳನ್ನು ನಿಷೇಧಿಸಲಾಯಿತು.

1961ರಲ್ಲಿ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯನ್ನು (National Health System) ಪ್ರಾರಂಭಿಸಲಾಯಿತು.  ಇದು ಏಳು ಪ್ರಮುಖ ಅಂಶಗಳನ್ನು ಆಧರಿಸಿತ್ತು: ೧. ಆರೋಗ್ಯವು ಜನರ ಹಕ್ಕು. ೨. ಆರೋಗ್ಯ ಸೇವೆಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ.
೩. ಎಲ್ಲರಿಗೂ ಸಮಾನವಾಗಿ ಮತ್ತು ಸುಲಭವಾಗಿ ಪ್ರವೇಶಿಸಬಹುದಾದಂತಹುದು. ೪. ಹೆಚ್ಚು ವೈಜ್ಞಾನಿಕ ತಳಹದಿಯ ಮೇಲೆ ವ್ಯವಸ್ಥೆಯನ್ನು ನಿರ್ಮಿಸಬೇಕು. ೫. ರೋಗ ತಡೆಗಟ್ಟುವಿಕೆ (Prevention) ಕಡೆ ಹೆಚ್ಚು ಗಮನ. ೬. ಸಾಮಾಜಿಕ ಭಾಗವಹಿಸುವಿಕೆ  (Social Participation) – ಆರೋಗ್ಯ ಸೇವೆಗಳ ಬಳಕೆ ಮತ್ತು ಅಭಿವೃದ್ಧಿಯಲ್ಲಿ ಜನಸಾಮಾನ್ಯರ  ಪಾಲ್ಗೊಳ್ಳುವಿಕೆ. ೭. ಅಂತರಾಷ್ಟ್ರೀಯ ಸೌಹಾರ್ದತೆ (International Solidarity).

ಈ ತಳಹದಿಯ ಮೇಲೆ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯನ್ನು ರಚಿಸಲಾಯಿತು. ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ವ್ಯತ್ಯಾಸವನ್ನು ಕಡಿಮೆಗೊಳಿಸಿ, ರೋಗ ತಡೆಗಟ್ಟುವಿಕೆಗೆ ಹೆಚ್ಚು ಒತ್ತು ನೀಡುವ ಮೂಲಕ ಈ ಸಾಧನೆ ಸಾಧ್ಯವಾಯಿತು.

ಗುರುರಾಜ್ : ನೀವು ಕ್ಯೂಬಾದ ಸಾಮಾಜಿಕ-ಆರ್ಥಿಕ ವ್ಯವಸ್ಥೆಯನ್ನು ಪ್ರಸ್ತಾಪಿಸಿದಿರಿ. ಕ್ಯೂಬಾದ ಸಾಮಾಜಿಕ-ಆರ್ಥಿಕ ವ್ಯವಸ್ಥೆಗೂ, ಅದು ಆರೋಗ್ಯ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಗಳಿಗೂ ಏನಾದರೂ ಸಂಬಂಧವಿದೆಯೇ?

ಡಾ. ಅನಿಲ್ : ಖಂಡಿತವಾಗಿಯೂ ಇದೆ. ಕ್ಯೂಬಾದ ವಿಶಿಷ್ಟತೆಯೆಂದರೆ, ಅವರ ಸಂವಿಧಾನವೇ (1976) ಬಹಳ ಸ್ಪಷ್ಟವಾಗಿದೆ. ಅವರು ಹೊಸೆ ಮಾರ್ಟಿಯ ಸಿದ್ಧಾಂತ, ಮತ್ತು ಮಾರ್ಕ್ಸ್, ಎಂಗೆಲ್ಸ್, ಲೆನಿನ್ ಅವರ ಸಾಮಾಜಿಕ-ರಾಜಕೀಯ ವಿಚಾರಗಳನ್ನು ಸ್ಪಷ್ಟವಾಗಿ ತಮ್ಮ ಸಂವಿಧಾನದ ಆಧಾರವೆಂದು ಹೇಳಿದ್ದಾರೆ. ಕಾರ್ಮಿಕ ವರ್ಗದ ಅಂತರಾಷ್ಟ್ರೀಯತೆಯನ್ನು (Proletariat Internationalism) ಪಾಲಿಸಬೇಕೆಂದು ಹೇಳಿದ್ದಾರೆ.

ಅವರು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೀಗೆ ಘೋಷಿಸಿದ್ದಾರೆ: “ನಮ್ಮ ಗಣರಾಜ್ಯದ ಮೂಲಭೂತ ಕಾನೂನು ಮಾನವನ ಘನತೆಯನ್ನು ಸಂಪೂರ್ಣವಾಗಿ ಗೌರವಿಸಬೇಕು” (Full Dignity of Man). ಮಾನವನ ಸಂಪೂರ್ಣ ಘನತೆಯನ್ನು ಸಮಾಜವಾದ ಮತ್ತು ಸಾಮ್ಯವಾದದ ಅಡಿಯಲ್ಲಿ ಮಾತ್ರ ಸಾಧಿಸಬಹುದು ಎಂದು ಅವರು ನಂಬುತ್ತಾರೆ. ಅತಿ ಮುಖ್ಯವಾಗಿ, ಅವರ ಸಂವಿಧಾನದ 3ನೇ ವಿಧಿಯಲ್ಲಿ “ಕ್ಯೂಬಾ ಎಂದಿಗೂ ಬಂಡವಾಳಶಾಹಿಗೆ ಮರಳುವುದಿಲ್ಲ” (Cuba shall never return to Capitalism) ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಇದು ಸಂವಿಧಾನಾತ್ಮಕ ತೀರ್ಮಾನ.

ಈ ಸ್ಪಷ್ಟ ಸೈದ್ಧಾಂತಿಕ ನಿಲುವು ಮತ್ತು ಆರ್ಥಿಕ ವ್ಯವಸ್ಥೆಯೇ ಅವರ ಆರೋಗ್ಯ ಸೇವೆಗಳ ಯಶಸ್ಸಿಗೆ ಆಧಾರ. ಉದಾಹರಣೆಗೆ, 1984ರಲ್ಲಿ ಅವರು ಕುಟುಂಬ ವೈದ್ಯ ಮತ್ತು ದಾದಿಯ (Family Doctor & Nurse) ಪರಿಕಲ್ಪನೆಯನ್ನು ಜಾರಿಗೆ ತಂದರು. 436 ಸಮುದಾಯ ಆರೋಗ್ಯ ಕೇಂದ್ರಗಳು (ಪಾಲಿಕ್ಲಿನಿಕ್ಗಳು) ಇವೆ. ಪ್ರತಿ ಕೇಂದ್ರದಲ್ಲಿ 20ಕ್ಕೂ ಹೆಚ್ಚು ಸೇವೆಗಳು ಲಭ್ಯ: ಸ್ತ್ರೀ-ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಸಾಮಾನ್ಯ ವೈದ್ಯರು, ಆಕಸ್ಮಿಕ ಚಿಕಿತ್ಸೆ, ಮಾನಸಿಕ ತಜ್ಞರು, ಚರ್ಮರೋಗ ತಜ್ಞರು, ಮಧುಮೇಹ, ಪ್ರತಿರಕ್ಷಣೆ, ಅಲ್ಟ್ರಾಸೌಂಡ್, ಎಕ್ಸ್-ರೇ, ಎಂಡೋಸ್ಕೋಪಿ ಇತ್ಯಾದಿ. ಈ ಸಮುದಾಯ ಆರೋಗ್ಯ ಕೇಂದ್ರವು ಸುಮಾರು 30,000–50,000 ಜನಸಂಖ್ಯೆಗೆ ಒಂದರಂತೆ ಇದೆ. ಪ್ರತಿ ಕೇಂದ್ರಕ್ಕೆ 20–30 ಸಣ್ಣ ಸಮಾಲೋಚನಾ ಕ್ಲಿನಿಕ್ ಗಳು (Consultation Clinics) ಸೇರಿರುತ್ತವೆ. ಇಲ್ಲಿ ಪ್ರತಿ 1,000 ಜನಸಂಖ್ಯೆಗೆ 9 ವೈದ್ಯರಿದ್ದಾರೆ, ಅಂದರೆ ಪ್ರತಿ ವೈದ್ಯರಿಗೆ ಸುಮಾರು 110 ರೋಗಿಗಳು ಮಾತ್ರ. ಪ್ರತಿ ಕುಟುಂಬ ವೈದ್ಯರು ಸುಮಾರು 700 ರೋಗಿಗಳನ್ನು ನೋಡಿಕೊಳ್ಳುತ್ತಾರೆ. ಹೀಗಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ.

ಇದನ್ನು ಓದಿ : ಬೆಂಗಳೂರಿನಲ್ಲಿ ಕಸ ಸಂಗ್ರಹ ವಾಹನಗಳಿಗೆ ಜಿಪಿಎಸ್‌ ಟ್ರ್ಯಾಕಿಂಗ್: 138 ಆಟೋ ಟಿಪ್ಪರ್‌ಗಳ ಪ್ರಾಯೋಗಿಕ ಯೋಜನೆ

ಚಿತ್ರ 1 ಕುಟುಂಬ ಡಾಕ್ಟರ್-ದಾದಿ ಮನೆಗೆ ಭೇಟಿ

ಕ್ಯೂಬಾದಲ್ಲಿ ಶಿಶು ಮರಣ ಪ್ರಮಾಣ (Infant Mortality Rate) ಅತ್ಯಂತ ಕಡಿಮೆಯಿದೆ. 2025ರ ವರೆಗೆ ಪ್ರತಿ 1,000 ಜೀವಂತ ಶಿಶು ಜನನಗಳಿಗೆ 4 ಮರಣಗಳು ಮಾತ್ರ. ಇದು ಯು.ಎಸ್ ಗಿಂತ ಕಡಿಮೆ. ಆದರೆ ಇತ್ತೀಚಿನ ದಿಗ್ಬಂಧನದಿಂದಾಗಿ ಇದು 9ಕ್ಕೆ ಏರಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅವರ ಸಾಮಾಜಿಕ ನೀತಿಗಳು. ಕ್ಯೂಬಾದಲ್ಲಿ ಪ್ರಸೂತಿ ರಜೆ (Maternity Leave) 34ನೇ ವಾರದಿಂದ ಪ್ರಾರಂಭವಾಗಿ, ಹೆರಿಗೆಯ ನಂತರ ಒಂದು ವರ್ಷದವರೆಗೆ ಸಂಬಳದೊಂದಿಗೆ ಇರುತ್ತದೆ. ತಾಯಿ ತನ್ನ ಉದ್ಯೋಗವನ್ನು ಕಳೆದುಕೊಳ್ಳುವುದಿಲ್ಲ, ಸಂಬಳವೂ ಸಿಗುತ್ತದೆ. ಇದರಿಂದ ತಾಯಂದಿರು ಮಕ್ಕಳ ಆರೈಕೆ, ಸ್ತನ್ಯಪಾನ, ಪ್ರತಿರಕ್ಷಣೆಗಳತ್ತ ಗಮನ ಹರಿಸಬಹುದು. ಇದಕ್ಕೆ ವಿರುದ್ಧವಾಗಿ, ಯುಎಸ್ ನಲ್ಲಿ ಫೆಡರಲ್ ಕಾನೂನಿನಡಿ ಸಹ ಪ್ರಸೂತಿ ರಜೆ ಇಲ್ಲ; ಅಲ್ಲಿ ಕೇವಲ 12 ವಾರಗಳ ವೇತನರಹಿತ ರಜೆ ಮಾತ್ರ. ಭಾರತದಲ್ಲಿ 6 ತಿಂಗಳು ಇದೆ. ಕ್ಯೂಬಾದಲ್ಲಿ ಪ್ರತಿ 1,000 ಜನಸಂಖ್ಯೆಗೆ 5.2 ಹಾಸಿಗೆಗಳು (ಸರ್ಕಾರಿ) ಇವೆ, ಅದೇ ಭಾರತದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 0.6 ಮತ್ತು ಖಾಸಗಿ ಸೇರಿದರೆ 1.3 ಮಾತ್ರ. ಯುಎಸ್ ನಲ್ಲಿ 2.28.

ಗುರುರಾಜ್ : ಕ್ಯೂಬಾದ ಆರೋಗ್ಯ ವ್ಯವಸ್ಥೆಯು ತನ್ನ ದೇಶದ ಜನರಿಗೆ ಮಾತ್ರವಲ್ಲದೆ, ಬೇರೆ ದೇಶಗಳ ಜನರಿಗೂ ಸೇವೆ ನೀಡುತ್ತದೆ. ವಿಪತ್ತುಗಳ ಸಮಯದಲ್ಲಿ ಕ್ಯೂಬಾದ ವೈದ್ಯರು ಬೇರೆಡೆ ಹೋಗಿ ಸೇವೆ ಸಲ್ಲಿಸಿದ್ದಾರೆ. ಯುಎಸ್ ದಿಗ್ಬಂಧನವನ್ನು ಮೀರಿ ಕ್ಯೂಬಾ ಹೇಗೆ ಮುನ್ನಡೆಯುತ್ತಿದೆ? ಮುಂದೆ ಯಾವ ಸವಾಲುಗಳು ಬರಬಹುದು?

ಡಾ. ಅನಿಲ್ : ಕ್ಯೂಬಾದ ಅಂತರರಾಷ್ಟ್ರೀಯ ಸೌಹಾರ್ದತೆಯ ಭಾಗವಾಗಿ, ಅವರು ವೈದ್ಯಕೀಯ ಬ್ರಿಗೇಡ್ ಗಳನ್ನು ರಚಿಸಿ, ಸೇವೆಗಳು ಲಭ್ಯವಿಲ್ಲದ ಅಥವಾ ತೊಂದರೆಯಲ್ಲಿರುವ ದೇಶಗಳಿಗೆ ಕಳುಹಿಸುತ್ತಾರೆ.

ಇದು 1960ರಲ್ಲಿ ಪ್ರಾರಂಭವಾಯಿತು. ಅವರು ರಾಷ್ಟ್ರೀಯ ಆರೋಗ್ಯ ಮಿಷನ್ ಪ್ರಾರಂಭಿಸುವ ಮುನ್ನವೇ, 1960ರಲ್ಲಿ ಚಿಲಿಯಲ್ಲಿ ಭೂಕಂಪ ಸಂಭವಿಸಿದಾಗ ವೈದ್ಯರನ್ನು ಕಳುಹಿಸಿದರು (ಆಗಲೇ ದಿಗ್ಬಂಧನ ಹೇರಲಾಗಿತ್ತು). 1963ರಲ್ಲಿ, ಅವರ ಮೊದಲ ಅಧಿಕೃತ ವೈದ್ಯಕೀಯ ಬ್ರಿಗೇಡ್ (55 ಪ್ರೊಫೆಷನಲ್ಸ್) ಆಲ್ಜೀರಿಯಾಕ್ಕೆ ಹೋಗಿ ಅಲ್ಲಿಯ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡಿತು.

ಅವರ ಸೌಹಾರ್ದತೆಯಲ್ಲಿ ಮುಖ್ಯ ಅಂಶಗಳೆಂದರೆ 1. ಕಡಿಮೆ ಆದಾಯದ ದೇಶಗಳಿಗೆ ಉಚಿತ ಸೇವೆ. 2. ಮಧ್ಯಮ ಆದಾಯದ ದೇಶಗಳಿಗೆ ವಿನಿಮಯ (Exchange) ಆಧಾರದಲ್ಲಿ: ಉದಾಹರಣೆಗೆ, ತೈಲ ನೀಡುವುದಕ್ಕೆ ಬದಲಾಗಿ ಸೇವೆ, ಅಥವಾ ಪ್ರತಿ ವೈದ್ಯರಿಗೆ ನಿಗದಿತ ವೇತನ ನೀಡುವುದು. ಬ್ರೆಜಿಲ್ ನಲ್ಲಿ ಪ್ರತಿ ವೈದ್ಯರಿಗೆ ತಿಂಗಳಿಗೆ 3,000 ಡಾಲರ್ ನೀಡಲಾಗುತ್ತಿತ್ತು; ಅದರಲ್ಲಿ 900 ಡಾಲರ್ ವೈದ್ಯರಿಗೆ, 2,100 ಡಾಲರ್ ಕ್ಯೂಬಾ ಸರ್ಕಾರಕ್ಕೆ ಸಿಗುತ್ತಿತ್ತು.

ಇದನ್ನೂ ಓದಿ : ಪ್ರಜ್ವಲ್‌ ರೇವಣ್ಣ ಪ್ರಕರಣ: ಸಾಕ್ಷಿಗೆ ಬೆದರಿಕೆ ಕರೆ ಆರೋಪ; ತನಿಖೆಗೆ ಎಸ್‌ಐಟಿಗೆ ವಿಶೇಷ ನ್ಯಾಯಾಲಯದ ಸೂಚನೆ

 

ಚಿತ್ರ-2 ಗಯಾನಾದಲ್ಲಿ 50 ವರ್ಷಗಳ ಸೇವೆಯ ನಂತರ ಮೆಡಿಕಲ್ ಬ್ರಿಗೇಡ್ ಗೆಬೀಳ್ಕೊಡುಗೆ

ಈ ಅಂತರರಾಷ್ಟ್ರೀಯ ಸೇವೆಯನ್ನು ಯುಎಸ್ “ಹ್ಯೂಮನ್ ಟ್ರಾಫಿಕಿಂಗ್” (ಮಾನವ ಕಳ್ಳಸಾಗಣೆ) ಎಂದು ಆರೋಪಿಸಿದೆ. ಆದರೆ ವಾಸ್ತವವಾಗಿ, ಯುಎಸ್ ನ ಲಾಭದ ಗುರಿಯ ಆರೋಗ್ಯ ವ್ಯವಸ್ಥೆಗೂ, ಕ್ಯೂಬಾದ ಸೇವಾ ಮನೋಭಾವದ ಆರೋಗ್ಯ ವ್ಯವಸ್ಥೆಗೂ ಇರುವ ವ್ಯತ್ಯಾಸವೇ ಅಲ್ಲಿನ ಮೂಲ ಅಂತರ. ಕ್ಯೂಬಾದ ವೈದ್ಯರು ಹಣಕ್ಕಾಗಿ ಅಲ್ಲ, ಸೇವೆಗಾಗಿ ಹೋಗುತ್ತಾರೆ.

1959ರಿಂದ 2020ರವರೆಗೆ, 6 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಮಿಷನ್ ಗಳು 158 ದೇಶಗಳಲ್ಲಿ ನಡೆದಿವೆ. ಸುಮಾರು 3.26 ಲಕ್ಷ ಆರೋಗ್ಯ ಸಿಬ್ಬಂದಿ ಇದರಲ್ಲಿ ಕೆಲಸ ಮಾಡಿದ್ದಾರೆ. ಅವರು ಸುಮಾರು 200 ಕೋಟಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ, 43 ಲಕ್ಷ ಹೆರಿಗೆಗಳನ್ನು ಮಾಡಿದ್ದಾರೆ, 14.5 ಮಿಲಿಯನ್ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ ಮತ್ತು 12 ಮಿಲಿಯನ್ ಮಕ್ಕಳು ಮತ್ತು ತಾಯಂದಿರಿಗೆ ಪ್ರತಿರಕ್ಷಣೆ ಒದಗಿಸಿದ್ದಾರೆ.

ವಿಶೇಷವಾಗಿ, 1998ರಲ್ಲಿ ಹರಿಕೇನ್ (ಚಂಡಮಾರುತ) ಮಿಚ್ ನಂತಹ ವಿಪತ್ತಿನ ನಂತರ, ಅವರು ಲ್ಯಾಟಿನ್ ಅಮೆರಿಕಾ, ಕೆರಿಬಿಯನ್ ಮತ್ತು ಆಫ್ರಿಕಾಗಳಲ್ಲಿ ಸಮಗ್ರ ಆರೋಗ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಇದರ ಮೂರು ಅಂಶಗಳು: 1. ಆರೋಗ್ಯ ಸಿಬ್ಬಂದಿಯನ್ನು ಉಚಿತವಾಗಿ ಕಳುಹಿಸುವುದು. 2. ಅವರು 2 ವರ್ಷಗಳ ಕಾಲ ಅಲ್ಲಿದ್ದು, ಸ್ಥಳೀಯರಿಗೆ ತರಬೇತಿ ನೀಡಿ ಬದಲಿಸುವುದು. 3. ಈ ಬ್ರಿಗೇಡ್ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸೇವೆ ಸಿಗದಿರುವಲ್ಲಿ ಮಾತ್ರ ಕೆಲಸ ಮಾಡುವುದು.

ಇದಕ್ಕಾಗಿ 1999ರಲ್ಲಿ ಹವಾನದಲ್ಲಿ ಲ್ಯಾಟಿನ್ ಅಮೆರಿಕನ್ ಸ್ಕೂಲ್ ಆಫ್ ಮೆಡಿಸಿನ್ (ELAM) ಪ್ರಾರಂಭಿಸಿದರು. ಇದುವರೆಗೆ 141 ದೇಶಗಳಿಂದ ಸುಮಾರು 37,733 ಆರೋಗ್ಯ ವೃತ್ತಿಪರರಿಗೆ ಇಲ್ಲಿ ತರಬೇತಿ ನೀಡಲಾಗಿದೆ; ಅದರಲ್ಲಿ 96% ವೈದ್ಯರೇ ಆಗಿದ್ದಾರೆ.

ಚೆರ್ನೋಬಿಲ್ ಪರಮಾಣು ದುರಂತದ (1986) ನಂತರ, ಸುಮಾರು 26,000 ಮಕ್ಕಳು ಕ್ಯೂಬಾದಲ್ಲಿ ಉಚಿತ ಚಿಕಿತ್ಸೆ ಪಡೆದರು. ಈ ಮೂಲಕ ಅವರು ಪರಮಾಣು ಮಾಲಿನ್ಯದ ಪರಿಣಾಮಗಳ ಕುರಿತು ಜಗತ್ತಿನಲ್ಲೇ ಅನನ್ಯವಾದ ಡೇಟಾಬೇಸ್ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು.

ಇದೇ ರೀತಿ, 2005ರಲ್ಲಿ ಅಮೆರಿಕಾದ ನ್ಯೂ ಆರ್ಲಿಯನ್ಸ್ನಲ್ಲಿ ಹರಿಕೇನ್ ಕ್ಯಾಟರಿನಾ ಬಂದಾಗ, ಕ್ಯೂಬಾ “ಹೆನ್ರಿ ರೀವ್ ಮೆಡಿಕಲ್ ಬ್ರಿಗೇಡ್” ಅನ್ನು ಅಲ್ಲಿಗೆ ಕಳುಹಿಸಿತು. ಈ ಬ್ರಿಗೇಡ್  ಕ್ಯೂಬಾದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಹೆನ್ರಿ ರೀವ್ ಅವರ ಹೆಸರಿನಲ್ಲಿದೆ.

ಪಾಕಿಸ್ತಾನದಲ್ಲಿ ಭೂಕಂಪ ಬಂದಾಗ, ಕ್ಯೂಬಾ 35 ಫೀಲ್ಡ್ ಆಸ್ಪತ್ರೆಗಳನ್ನು ತೆರೆದು 8 ತಿಂಗಳು ಸೇವೆ ಸಲ್ಲಿಸಿತು, ಸುಮಾರು 18 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಿತು ಮತ್ತು 2,000ಕ್ಕೂ ಹೆಚ್ಚು ಜೀವಗಳನ್ನು ಉಳಿಸಿತು. ಅದೇ ಅವಧಿಯಲ್ಲಿ ಅಮೆರಿಕಾ ಕೇವಲ 2 ಫೀಲ್ಡ್ ಆಸ್ಪತ್ರೆಗಳನ್ನು ಮತ್ತು 8 ವಾರಗಳ ಕಾಲ ಮಾತ್ರ ಸೇವೆ ಸಲ್ಲಿಸಿತು. ಇದೇ ಕ್ಯೂಬಾ ಮತ್ತು ಅಮೆರಿಕಾದ ಆರೋಗ್ಯ ವ್ಯವಸ್ಥೆಗಳ ನಡುವಿನ ಮೂಲಭೂತ ವ್ಯತ್ಯಾಸ: ಲಾಭಕ್ಕಾಗಿ ಆರೋಗ್ಯ ಸೇವೆ vs. ಸೇವೆಗಾಗಿ ಆರೋಗ್ಯ ಸೇವೆ.

ಗುರುರಾಜ್: ಭಾರತ ಮತ್ತು ಕ್ಯೂಬಾದ ಆರೋಗ್ಯ ವ್ಯವಸ್ಥೆಗಳನ್ನು ಹೋಲಿಸಿದಾಗ ಒಂದು ಭಯ ಶುರುವಾಗಿದೆ. ಏಕೆಂದರೆ ನಮ್ಮ ದೇಶದಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳೇ ಇವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿ ಇನ್ನೂ ಶೋಚನೀಯವಾಗಿದೆ. ಹಾಗಾಗಿ, ಕ್ಯೂಬಾದ ಆರೋಗ್ಯ ವ್ಯವಸ್ಥೆಯನ್ನು ನೋಡಿ ಭಾರತ ಏನು ಕಲಿಯಬೇಕು, ಏನು ಅಳವಡಿಸಿಕೊಳ್ಳಬೇಕು?

ಡಾ.ಅನಿಲ್ : ಅತ್ಯುತ್ತಮ ಆರೋಗ್ಯ ವ್ಯವಸ್ಥೆ ಕ್ಯೂಬಾದಲ್ಲಿ ಸಾಧ್ಯವಾಗಿರುವುದಕ್ಕೆ ಮುಖ್ಯ ಕಾರಣವೆಂದರೆ, ಅಲ್ಲಿ ಖಾಸಗೀಕರಣವೇ ಇಲ್ಲ. ಆರೋಗ್ಯ, ಶಿಕ್ಷಣ, ಆಹಾರ ಎಲ್ಲವೂ ಸರ್ಕಾರದ ಜವಾಬ್ದಾರಿ. ಅವರು ಇದನ್ನು ಸೇವೆ ಎಂದು ನೋಡುತ್ತಾರೆ, ಲಾಭದ ವ್ಯವಹಾರ (Mafia) ಎಂದಲ್ಲ. ಭಾರತದಲ್ಲೂ ಇಂತಹ ಸಂದರ್ಭವು ಒಮ್ಮೆ ಸಾಧ್ಯವಿತ್ತೋ ಎಂದು ಅನಿಸುತ್ತದೆ. ಭಾರತದ ಸಂವಿಧಾನ ರಚನಾ ಸಭೆಯಲ್ಲಿ, ಆಬ್ಜೆಕ್ಟಿವ್ಸ್ ರೆಸಲ್ಯೂಷನ್ನಲ್ಲಿ ನೆಹರು ಅವರ ಅಧ್ಯಕ್ಷತೆಯಲ್ಲಿ, ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಬಾಂಧವ್ಯ ಎಂಬ ಆಶಯಗಳನ್ನು ಮುಂದಿಡಲಾಯಿತು. ಆಗ ಡಾ. ಬಿ.ಆರ್. ಅಂಬೇಡ್ಕರ್ ಅವರು “ಸ್ಟೇಟ್ ಸೋಷಿಯಲಿಸಂ” (ರಾಜ್ಯ ಸಮಾಜವಾದ) ಅನ್ನು ಪ್ರಸ್ತಾಪಿಸಿದರು – ಅದರಲ್ಲಿ ಭೂಮಿಯ ರಾಷ್ಟ್ರೀಕರಣ, ಕೈಗಾರಿಕೆಗಳ ರಾಷ್ಟ್ರೀಕರಣ, ವಿಮೆಯ ರಾಷ್ಟ್ರೀಕರಣ ಇದ್ದವು. ಆದರೆ ಸಂವಿಧಾನ ಸಭೆಯ ಬಹುತೇಕ ಸದಸ್ಯರು ಭೂಮಾಲೀಕರು ಮತ್ತು ಬಂಡವಾಳಶಾಹಿ ವರ್ಗದವರಾಗಿದ್ದುದರಿಂದ ಅದು ಒಪ್ಪಿಗೆಯಾಗಲಿಲ್ಲ. ಅದೃಷ್ಟವಶಾತ್, ಕ್ಯೂಬಾದಲ್ಲಿ ಅದು ಸಾಧ್ಯವಾಯಿತು. ಅವರು ಸಂವಿಧಾನದಲ್ಲೇ “ನಾವು ಬಂಡವಾಳಶಾಹಿಗೆ ಮರಳುವುದಿಲ್ಲ” ಮತ್ತು “ಮಾನವನ ಪೂರ್ಣ ಘನತೆಯು ಸಮಾಜವಾದ ಮತ್ತು ಸಾಮ್ಯವಾದದಲ್ಲಿ ಮಾತ್ರ ಸಾಧ್ಯ” ಎಂದು ಬರೆದುಕೊಂಡರು.

ಭಾರತ ತುರ್ತಾಗಿ ಆರೋಗ್ಯ ವ್ಯವಸ್ಥೆಯನ್ನು ರಾಷ್ಟ್ರೀಕರಣ ಮಾಡಬೇಕು. ಎಲ್ಲಾ ವೈದ್ಯರಿಗೂ ಸರ್ಕಾರ ಉದ್ಯೋಗ ನೀಡಬೇಕು. ಎಂಬಿಬಿಎಸ್ ಸೀಟುಗಳನ್ನು ವಿಸ್ತರಿಸಿದ್ದಾರೆ, ಆದರೆ PG ಸೀಟುಗಳು 50% ಮಾತ್ರ. ಅದರಲ್ಲೂ NEET ಕೋಚಿಂಗ್ಗೆ ವರ್ಷಕ್ಕೆ 2.5–3 ಲಕ್ಷ ರೂ. ಕಟ್ಟುವವರಿಗೆ ಮಾತ್ರ ಪ್ರವೇಶ ಸಿಗುವಂತಾಗಿದೆ. ಇದು ಅತ್ಯಂತ ವರ್ಗೀಯ ಮತ್ತು ಅನ್ಯಾಯದ ವ್ಯವಸ್ಥೆ.

ಶಿಕ್ಷಣ ಕ್ಷೇತ್ರದಲ್ಲೂ, ಕ್ಯೂಬಾದಂತೆ ಶಿಕ್ಷಣವನ್ನು ಮೂಲಭೂತ ಹಕ್ಕು ಮತ್ತು ಉಚಿತವಾಗಿಸಬೇಕು. ಕ್ಯೂಬಾದಲ್ಲಿ ಪ್ರತಿ ಪ್ರೌಢಶಾಲೆಯಲ್ಲೂ ಒಂದು ಸ್ಟೇಡಿಯಂ ಇದೆ, ಕ್ರೀಡಾ ತರಬೇತಿ ಕಡ್ಡಾಯ. ಆ ಕಾರಣದಿಂದಾಗಿ ಕ್ಯೂಬಾ ಒಲಿಂಪಿಕ್ಸ್ ನಲ್ಲಿ ಅತಿ ಹೆಚ್ಚು ಪದಕಗಳನ್ನು ತಂದಿದೆ (241 ಪದಕಗಳು, 84 ಚಿನ್ನದ ಪದಕಗಳು). ಇದು ಕ್ರೀಡೆಯ ಪ್ರಜಾಪ್ರಭುತ್ವೀಕರಣದ ಫಲ. ಇಂತಹ ನೀತಿಗಳನ್ನು ಭಾರತದಲ್ಲೂ ಜಾರಿಗೆ ತರಬೇಕು.

*****************

ಇದನ್ನೂ ನೋಡಿ : ಕ್ಯಾಸ್ಟ್ರೋ 100 | ಕ್ಯೂಬಾ ಆರೋಗ್ಯ–ಶಿಕ್ಷಣದಲ್ಲಿ ಜಗತ್ತಿಗೆ ಮಾದರಿಯಾಗಿದ್ದು ಹೇಗೆ? | ಭಾರತ ಏನು ಕಲಿಯಬೇಕು?

 

Donate Janashakthi Media

Leave a Reply

Your email address will not be published. Required fields are marked *