ಎಸ್‌ಐಆರ್‌ ಪ್ರತಿಭಟನಾಕಾರರ ಮೇಲೆ ಪೊಲೀಸ್‌ ದೌರ್ಜನ್ಯ ಖಂಡನೀಯ ; ಜನವಾದಿ ಮಹಿಳಾ ಸಂಘಟನೆ

ಬೆಂಗಳೂರು: ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ, ಮಹಿಳಾ ನಾಯಕಿಯರ ಮೇಲಿನ ಹಲ್ಲೆ ಮತ್ತು ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕುವ ಕ್ರಮಗಳನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (AIDWA) ತೀವ್ರವಾಗಿ ಖಂಡಿಸಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಸಂಘಟನೆಯ ಅಧ್ಯಕ್ಷೆ ಚಂದ್ರಕುಮಾರಿ ದೇವಿ ಮತ್ತು ಪ್ರಧಾನ ಕಾರ್ಯದರ್ಶಿ ಆಗ್ರಹಿಸಿದ್ದಾರೆ. ಎಸ್ಐಆರ್

ರಾಜಕೀಯ ನಾಯಕರು, ಹೋರಾಟಗಾರರು, ವಿದ್ಯಾರ್ಥಿಗಳು, ಯುವಜನರು ಮತ್ತು ನಾಗರಿಕ ಸಮಾಜದ ಸದಸ್ಯರನ್ನು ಸಾಮೂಹಿಕವಾಗಿ ಬಂಧಿಸಿರುವುದು ಪ್ರಜಾಸತ್ತಾತ್ಮಕ ಹಕ್ಕುಗಳು ಹಾಗೂ ಸಂವಿಧಾನಬದ್ಧ ಸ್ವಾತಂತ್ರ್ಯಗಳ ಮೇಲಿನ ಗಂಭೀರ ದಾಳಿ ಎಂದು ಸಂಘಟನೆ ಹೇಳಿದೆ. ಸರ್ಕಾರದ ಕ್ರಮಗಳನ್ನು ಪ್ರಶ್ನಿಸುವವರನ್ನು ಬೆದರಿಸುವ ಉದ್ದೇಶದಿಂದ ಬೃಹತ್‌ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸುವುದು, ರಸ್ತೆಗಳಿಗೆ ತಡೆ ಹಾಕುವುದು ಹಾಗೂ ಜನರ ಸಂಚಾರ ಮತ್ತು ಸಂವಹನದ ಮೇಲೆ ನಿರ್ಬಂಧ ಹೇರುವುದು ಪ್ರಜಾಸತ್ತಾತ್ಮಕ ಸಮಾಜಕ್ಕೆ ವಿರುದ್ಧವಾಗಿದೆ ಎಂದು ಟೀಕಿಸಿದೆ.

ಮಹಿಳಾ ನಾಯಕಿಯರಿಗೆ ಮೂಲಭೂತ ಸೌಲಭ್ಯ ನಿರಾಕರಣೆ ಆರೋಪ

ದೆಹಲಿಯಲ್ಲಿ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಖಿಲ ಭಾರತ ಅಧ್ಯಕ್ಷೆ ಪಿ.ಕೆ. ಶ್ರೀಮತಿ, ಪ್ರಧಾನ ಕಾರ್ಯದರ್ಶಿ ಕಣಿನಿಕಾ ಘೋಷ್‌ ಸೇರಿದಂತೆ ಕೇಂದ್ರ ನಾಯಕತ್ವದ ಹಲವು ಸದಸ್ಯರಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ಹಿರಿಯ ನಾಯಕಿಯರಾದ ಬೃಂದಾ ಕಾರಟ್‌, ಸುಭಾಷಿಣಿ ಅಲಿ, ಮರಿಯಂ ಧವಳೆ, ಯು. ವಾಸುಕಿ, ಎಸ್. ಪುಣ್ಯವತಿ, ಕೆ.ಕೆ. ಶೈಲಜಾ, ಸಿ.ಎಸ್. ಸುಜಾತಾ, ಸತೀದೇವಿ, ಆಶಾ ಶರ್ಮಾ, ದೆಬೊಲಿನಾ ಹೆಂಬ್ರಾಮ್‌, ಮೀನಾಕ್ಷಿ ಮುಖರ್ಜಿ, ಬಾಲಮಣಿಹರಿ, ರಾಮದೇವಿ, ಟಿ. ಜ್ಯೋತಿ ಮತ್ತು ಆಶಾ ಯಾದವ್‌ ಸೇರಿದಂತೆ ಅನೇಕ ಮಹಿಳಾ ಮುಖಂಡರನ್ನು ಬಂಧಿಸಲಾಗಿದೆ ಎಂದು ಹೇಳಿದೆ.

ಬಂಧಿತ ಪ್ರತಿಭಟನಾಕಾರರ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸಂಘಟನೆ ಆರೋಪಿಸಿದೆ. ಮಹಿಳಾ ನಾಯಕಿಯರನ್ನು ಗಂಟೆಗಟ್ಟಲೆ ಪೊಲೀಸ್‌ ವಾಹನಗಳಲ್ಲಿ ಇರಿಸಿ, ಆಹಾರ ಮತ್ತು ನೀರು ನೀಡದೆ ಸತಾಯಿಸಲಾಗಿದೆ. ಮೌರ್ಯ ಎನ್‌ಕ್ಲೇವ್‌ ಪೊಲೀಸ್‌ ಠಾಣೆಯಲ್ಲಿ ಬಂಧನದಲ್ಲಿದ್ದ ಮಹಿಳೆಯರಿಗೆ ಶೌಚಾಲಯದಂತಹ ಮೂಲಭೂತ ಸೌಲಭ್ಯಗಳನ್ನು ನಿರಾಕರಿಸಲಾಗಿದೆ. ಅವರ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅಗತ್ಯ ಔಷಧಿಗಳನ್ನು ಪಡೆಯಲೂ ಅವಕಾಶ ನೀಡಿಲ್ಲ ಎಂದು ಸಂಘಟನೆ ಆರೋಪಿಸಿದೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಸಂವಿಧಾನಬದ್ಧ ಹಕ್ಕಾಗಿದ್ದು, ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರನ್ನು ಹತ್ತಿಕ್ಕಲು ಪೊಲೀಸರಿಗೆ ಅವಕಾಶ ನೀಡಬಾರದು ಎಂದು ಅದು ಒತ್ತಾಯಿಸಿದೆ. ಎಸ್ಐಆರ್

ಇದನ್ನೂ ಓದಿ : ಬೆಂಗಳೂರಿನಲ್ಲಿ ಎಸ್‌ಐಆರ್‌ ವಿರೋಧಿ ಪ್ರತಿಭಟನಾಕಾರರ ಮೇಲೆ ಪೊಲೀಸ್‌ ದೌರ್ಜನ್ಯ; ಪತ್ರಕರ್ತರ ಮೇಲೂ ಹಲ್ಲೆ

ಎಸ್‌ಐಆರ್‌ ಹೆಸರಿನಲ್ಲಿ ಮತದಾನದ ಹಕ್ಕು ಕಸಿಯುವ ಆತಂಕ

ದೆಹಲಿಯಲ್ಲಿ ನಡೆಯುತ್ತಿರುವ ಪೊಲೀಸ್‌ ದಮನವನ್ನು ಎಸ್‌ಐಆರ್‌ ಪ್ರಕ್ರಿಯೆಗೆ ಸಂಬಂಧಿಸಿದ ಗಂಭೀರ ಕಳವಳಗಳಿಂದ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆ ಹೇಳಿದೆ. ಮತದಾರರ ಪಟ್ಟಿಯ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಮತದಾರರ ಹೆಸರುಗಳನ್ನು ಅಳಿಸುವ ಪ್ರಕ್ರಿಯೆಯ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಬಲಪ್ರಯೋಗದ ಮೂಲಕ ಪ್ರತಿಕ್ರಿಯಿಸಲಾಗುತ್ತಿದೆ ಎಂದು ಟೀಕಿಸಿದೆ.

ಅರ್ಹ ನಾಗರಿಕರನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದು ಸಾರ್ವತ್ರಿಕ ವಯಸ್ಕ ಮತದಾನದ ಮೂಲತತ್ವಕ್ಕೆ ಧಕ್ಕೆ ಉಂಟುಮಾಡುತ್ತದೆ. ಇದರಿಂದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಜನರ ಭಾಗವಹಿಸುವಿಕೆ ದುರ್ಬಲಗೊಳ್ಳುತ್ತದೆ. ವಿಶೇಷವಾಗಿ ಆಡಳಿತಾತ್ಮಕ ಪ್ರಕ್ರಿಯೆಗಳಿಂದ ಈಗಾಗಲೇ ಹೊರಗುಳಿಯುವ ಅಪಾಯ ಎದುರಿಸುತ್ತಿರುವ ಜನರಿಗೆ ಹೆಚ್ಚಿನ ಅನ್ಯಾಯವಾಗುತ್ತದೆ ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ.

ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಯಾವುದೇ ಅನಗತ್ಯ ಅಡೆತಡೆಗಳಿಲ್ಲದೆ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶವಿರಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಪಾರದರ್ಶಕವಾಗಿ, ಹೊಣೆಗಾರಿಕೆಯಿಂದ ನಡೆಯಬೇಕು ಮತ್ತು ಸೂಕ್ತ ಪರಿಶೀಲನೆಗೆ ಒಳಪಡಬೇಕು. ಯಾವುದೇ ಅರ್ಹ ಮತದಾರನನ್ನು ಅನ್ಯಾಯಯುತವಾಗಿ ಮತದಾನದ ಹಕ್ಕಿನಿಂದ ವಂಚಿಸಬಾರದು ಎಂದು ಆಗ್ರಹಿಸಿದೆ.

ಪೊಲೀಸ್‌ ದಮನದ ವಿರುದ್ಧ ಜನರು ಸಂಘಟಿತರಾಗಲು ಕರೆ

ಪೊಲೀಸ್‌ ದಮನವನ್ನು ವಿರೋಧಿಸಿ ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದ ಯುವಜನರು ಮತ್ತು ವಿದ್ಯಾರ್ಥಿಗಳನ್ನು ಸಂಘಟನೆ ಅಭಿನಂದಿಸಿದೆ. ಪೊಲೀಸ್‌ ದೌರ್ಜನ್ಯದ ವಿರುದ್ಧ ಜನರು ಸಂಘಟಿತರಾಗಿ ಪ್ರತಿಭಟನೆ ನಡೆಸಬೇಕು ಎಂದು ಕರೆ ನೀಡಿದೆ.

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ಹೊಣೆಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವವರೆಗೆ ಎಸ್‌ಐಆರ್‌ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಚಂದ್ರಕುಮಾರಿ ದೇವಿ ಮತ್ತು ಪ್ರಧಾನ ಕಾರ್ಯದರ್ಶಿ ಆಗ್ರಹಿಸಿದ್ದಾರೆ.

ಇದಲ್ಲದೆ, ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ಅಳಿಸಲಾದ ಎಲ್ಲ ಅರ್ಹ ಮತದಾರರ ಹೆಸರುಗಳನ್ನು ಮರುಸೇರ್ಪಡೆಗೊಳಿಸಬೇಕು. ಬೆದರಿಕೆ, ಅನಿಯಂತ್ರಿತ ಬಂಧನ ಮತ್ತು ಶಾಂತಿಯುತ ಪ್ರಜಾಸತ್ತಾತ್ಮಕ ಪ್ರತಿಭಟನೆಗಳ ಮೇಲಿನ ದಮನವನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎಲ್ಲ ಪ್ರಜಾಸತ್ತಾತ್ಮಕ ಸಂಘಟನೆಗಳು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿಗಳು, ಯುವಜನರು ಮತ್ತು ನಾಗರಿಕ ಸಮಾಜದ ಗುಂಪುಗಳು ಒಗ್ಗೂಡಿ ಪ್ರಜಾಸತ್ತಾತ್ಮಕ ಹಕ್ಕುಗಳು ಹಾಗೂ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕನ್ನು ರಕ್ಷಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಚಂದ್ರಕುಮಾರಿ ದೇವಿ ಮತ್ತು ಪ್ರಧಾನ ಕಾರ್ಯದರ್ಶಿ ಕರೆ ನೀಡಿದ್ದಾರೆ. ಎಸ್ಐಆರ್

ಇದನ್ನೂ ನೋಡಿ : ಬೆಂಗಳೂರು | ಎಸ್‌ಐಆರ್‌ ವಿರೋಧಿ ಹೋರಾಟಕ್ಕೆ ಪೊಲೀಸ್‌ ದಬ್ಬಾಳಿಕೆ; ಪತ್ರಕರ್ತರ ಮೇಲೂ ಹಲ್ಲೆ! Janashakthi Media

Donate Janashakthi Media

Leave a Reply

Your email address will not be published. Required fields are marked *