ಬಲೂನು ಮಾರುವ ಬಾಲೆಗೆ ನ್ಯಾಯ ಸಿಕ್ಕಿದೆ ಆದರೆ ಜೀವ ಮರಳಿ ಪಡೆಯಲಾಗುವುದೇ ?
ನಾ ದಿವಾಕರ
ಕಳೆದ ವರ್ಷ ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಅದ್ಧೂರಿಯಾಗಿಯೇ ನಡೆದಿತ್ತು. ಸಾಂಸ್ಕೃತಿಕ ನಗರಿಯ ಸೌಂದರ್ಯವನ್ನು ಜಗತ್ತಿಗೇ ಪ್ರದರ್ಶಿಸುವ ಈ ನಾಡ ಹಬ್ಬ ಸಮಾಪ್ತಿಯಾಗುತ್ತಿರುವಂತೆಯೇ, ಮೈಸೂರು ಅರಮನೆಯಿಂದ ಕಣ್ಣಳತೆ ದೂರದಲ್ಲಿ ವಸ್ತುಪ್ರದರ್ಶನ ಮೈದಾನದಲ್ಲಿ ನಡೆದ ಒಂದು ಪೈಶಾಚಿಕ ಕೃತ್ಯ , ಅರಮನೆ ನಗರಿಯ ಸಾಮಾಜಿಕ ಸೌಂದರ್ಯವನ್ನೇ ಅಳಿಸಿಹಾಕಿತ್ತು. ದೂರದ ಉತ್ತರಕರ್ನಾಟಕದಿಂದ ದಸರಾ ಉತ್ಸವದಲ್ಲಿ ಬಲೂನು ಮಾರಿ ಜೀವನ ನಡೆಸಲು ಬಂದು ತನ್ನ ಕುಟುಂಬದೊಂದಿಗೆ ಜೋಪಡಿಯಲ್ಲಿ ನೆಲೆಸಿದ್ದ ಬಂದಿದ್ದ 10 ವರ್ಷದ ಬಾಲೆ ಭೀಕರ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದಳು. ಈ ಘಟನೆ ಅರಮನೆ ವಾಸಿಗಳಲ್ಲಾಗಲೀ, ರಾಜಕೀಯ ವಲಯದಲ್ಲಾಗಲೀ, ಸಾರ್ವಜನಿಕ ಸಂಘಟನೆಗಳ ನಡುವೆಯಾಗಲೀ ಅಷ್ಟೇನೂ ಸಂಚಲನ ಮೂಡಿಸಲಿಲ್ಲ. ಮಹಿಳಾ ಸಂಘಟನೆಗಳು ಮಾತ್ರ ಪ್ರತಿಭಟಿಸಿದ್ದವು. ಕೊನೆಗೂ
ನಗರದಲ್ಲಿ ಸಕ್ರಿಯವಾಗಿರುವಂತೆ ಕಾಣುವ ಮೂರು ನಾಲ್ಕು ಮಾನವ ಹಕ್ಕು ಸಂಘಟನೆಗಳಿಗೂ ಈ ಘೋರ ಘಟನೆ ಮುಖ್ಯ ಎನಿಸಿರಲಿಲ್ಲ. ಆದರೆ ಸಹಜವಾಗಿ ಮಹಿಳಾ ಸಂಘಟನೆಗಳ ಜೋರು ಧ್ವನಿ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸಿತ್ತು. ಲೌಕಿಕ ಬದುಕಿಗೆ ಕಣ್ತೆರೆಯುವ ಮುನ್ನವೇ ತಾನು ಹೊಟ್ಟೆ ಪಾಡಿಗಾಗಿ ಮಾರಾಟ ಮಾಡುತ್ತಿದ್ದ ಬಲೂನಿನಂತೆಯೇ (ಸದ್ದಿಲ್ಲದೆ ) ಉಸಿರು ಕಳೆದುಕೊಂಡ ಈ ಬಾಲೆಗೆ ಮೈಸೂರಿನ ಪೋಕ್ಸೋ ಶೀಘ್ರಗತಿ ವಿಶೇಷ ನ್ಯಾಯಾಲಯ ಅಂತಿಮ ನ್ಯಾಯ ಒದಗಿಸಿದೆ. ನತದೃಷ್ಟ ಬಾಲೆಯ ಮೇಲೆ ರಾತ್ರಿ ವೇಳೆ ಅತ್ಯಾಚಾರ ಎಸಗಿ, ಆಕೆಯನ್ನು 29 ಬಾರಿ ಚಾಕುವಿನಿಂದ ಇರಿದು, ಹತ್ಯೆ ಮಾಡಿ ವಸ್ತುಪ್ರದರ್ಶನ ಮೈದಾನದ ಪಕ್ಕದಲ್ಲಿದ್ದ ಚರಂಡಿಗೆ ಎಸೆದು ಪರಾರಿಯಾಗಿದ್ದ ಆರೋಪಿಯನ್ನು 24 ಗಂಟೆಗಳ ಒಳಗೇ ಬಂಧಿಸಲಾಗಿತ್ತು. ಇದೀಗ ಈ ಅಪರಾಧಿ ಕಾರ್ತಿಕ್ ಎಂಬ ವಿಕೃತ ಕಾಮಿಗೆ ವಿಶೇಷ ನ್ಯಾಯಾಲಯ ಮರಣದಂಡನೆಯ ಶಿಕ್ಷೆ ವಿಧಿಸಿದೆ.
ಅಪರಾಧ ಮತ್ತು ಶಿಕ್ಷೆಯ ನಡುವೆ
ಸಹಜವಾಗಿ ನ್ಯಾಯಕ್ಕಾಗಿ ಹೋರಾಡುವ ಮನಸ್ಸುಗಳಿಗೆ, ಅಂತಿಮ ನ್ಯಾಯಕ್ಕಾಗಿ ಹಪಹಪಿಸುವ ಸಂವೇದನಾಶೀಲ ಸಂಘಟನೆಗಳಿಗೆ ವಿಶೇಷ ನ್ಯಾಯಾಲಯದ ಈ ತೀರ್ಪು ಸಮಾಧಾನ ತಂದಿದೆ. “ ಪ್ರಭುತ್ವಕ್ಕೆ ಅಥವಾ ವ್ಯವಸ್ಥೆಗೆ ಜೀವ ಕೊಡುವ ಜವಾಬ್ದಾರಿ ಇರುವುದೇ ಹೊರತು ಜೀವ ತೆಗೆಯುವ ಹಕ್ಕಿಲ್ಲ ” ಎಂಬ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಹಿತೆಯ ದೃಷ್ಟಿಯಿಂದ ಈ ಉಗ್ರ ಶಿಕ್ಷೆಗೆ ತಾತ್ವಿಕ ಆಕ್ಷೇಪ ಸಲ್ಲಿಸಬಹುದೇ ಹೊರತು, ಏನೂ ಅರಿಯದ ಹಸುಳೆಯ ಜೀವ ಹಿಸುಕಿದ ಕ್ರೌರ್ಯ ಮತ್ತು ಹಿಂಸೆಯ ದೃಷ್ಟಿಯಿಂದ ವಿರೋಧಿಸಲು ಸಾಧ್ಯವೇ ಇಲ್ಲ. ಮಾನವ ಹಕ್ಕು ಹೋರಾಟಗಳಲ್ಲಿ ಈ ಜಿಜ್ಞಾಸೆ ಸದಾ ಇದ್ದೇ ಇರುತ್ತದೆ. ಆದಾಗ್ಯೂ ತನ್ನ ಅಂತಿಮ ಗಳಿಗೆಯಲ್ಲಿ ಆ ಕೂಸು ಅನುಭವಿಸಿರಬಹುದಾದ ಯಾತನೆ, ನೋವು, ಉಸಿರುಗಟ್ಟಿದ ವೇದನೆ ಇವುಗಳನ್ನು ನೆನೆಸಿಕೊಂಡಾಗ ಕಾರ್ತಿಕ್ ಗಲ್ಲು ಶಿಕ್ಷೆಗೆ ಒಳಗಾದರೆ ತಪ್ಪೇನಿಲ್ಲ ಎನಿಸುತ್ತದೆ.
ನ್ಯಾಯಶಾಸ್ತ್ರದ ದೃಷ್ಟಿಯಿಂದ ಶಿಕ್ಷೆಗೊಳಗಾದ ವ್ಯಕ್ತಿಗೆ ಮೇಲ್ಮನವಿ ಸಲ್ಲಿಸುವ ಹಕ್ಕು ಇರುತ್ತದೆ. ಈ ಪ್ರಕರಣದಲ್ಲೂ ಅದು ಸಾಧ್ಯವಾಗಬಹುದು. ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಮಾಡಬಹುದು. ಅಂತಿಮ ನ್ಯಾಯದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಇಂತಹ ಪ್ರಕರಣಗಳನ್ನು ನೋಡಿದಾಗ, ಈ ಅಂತಿಮ ನ್ಯಾಯ ಸಂದಾಯವಾಗಬೇಕಾದ್ದು ಯಾರಿಗೆ ಎಂಬ ಪ್ರಶ್ನೆಯೂ ಮೂಡುತ್ತದೆ. ತಾನೇನು ಎಂಬ ಅರಿವು ಮೂಡುವ ಮುನ್ನವೇ ತನ್ನ ದೇಹವನ್ನು ಛಿದ್ರಗೊಳಿಸಿ, ಉಸಿರುಗಟ್ಟಿಸಿ ಗಟಾರಕ್ಕೆ ಎಸೆದ ವ್ಯಕ್ತಿಗೆ ಗಲ್ಲು ಶಿಕ್ಷೆಯಾಗುವುದು ಆ ನತದೃಷ್ಟ ಬಾಲೆಗೆ ತಿಳಿಯಲು ಸಾಧ್ಯವೇ ? ಇದು ಭಾವಾತಿರೇಕ ಪ್ರಶ್ನೆಯಾದರೂ, ಪ್ರಜ್ಞಾವಂತ ಸಮಾಜ ಯೋಚಿಸಬೇಕಿರುವುದು ಇದೇ ದುರ್ಗತಿಗೆ ಒಳಗಾದ, ಒಳಗಾಗುತ್ತಿರುವ ಲಕ್ಷಾಂತರ ಬಾಲಕಿಯರ ಬಗ್ಗೆ. ಅಂತಿಮ ನ್ಯಾಯದ ಪ್ರಶ್ನೆ ಎದುರಾದಾಗ, ಬಲೂನು ಮಾರುವ ಬಾಲೆಯ ಪ್ರಕರಣದಲ್ಲೂ ಸಹ, ಶಿಕ್ಷೆಗೊಳಗಾಗಿರುವ ವ್ಯಕ್ತಿ ಈ ಹಿಂದೆ 2019ರಲ್ಲಿ ಬಾಲಕಿಯೊಬ್ಬಳ ಅತ್ಯಾಚಾರಕ್ಕೆ ಯತ್ನಿಸಿ ಆಕೆಯನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲಲೆತ್ನಿಸಿದ್ದ. ಈ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬಂದ ಮೇಲೆ ಬಲೂನು ಮಾರುವ ಬಾಲೆ ಈತನ ವಿಕೃತಿಗೆ ಬಲಿಯಾಗಿದ್ದಳು. ಕೊನೆಗೂ
ಇದನ್ನೂ ಓದಿ : ಹವಾಮಾನ ಬಿಕ್ಕಟ್ಟು ಎಂದರೆ ಮನಸ್ಸಿನ ಬಿಕ್ಕಟ್ಟೂ ಕೂಡ
ಸಾಮಾಜಿಕ ಚೌಕಟ್ಟಿನ ದ್ವಂದ್ವಗಳು
ಮೈಸೂರಿನ ಪ್ರಕರಣದಲ್ಲಿ ಅಂತಿಮ ತೀರ್ಪು ಪ್ರಕಟವಾಗುವ ದಿನ ಮೃತ ಬಾಲಕಿಯ ಕುಟುಂಬ ಸದಸ್ಯರು ನ್ಯಾಯಾಲಯದಲ್ಲಿ ಉಪಸ್ಥಿತರಿರಲಿಲ್ಲ. ಈ ಕುಟುಂಬ ನೂರಾರು ಕಿಲೋಮೀಟರ್ ದೂರದಿಂದ ಪುನಃ ದಸರೆಯ ಜಾತ್ರೆಯಲ್ಲಿ ಬದುಕು ಕಟ್ಟಿಕೊಳ್ಳಲು ಬಂದಿರುವರೋ ಇಲ್ಲವೋ ? ಹಾಗೆ ಬಂದಿದ್ದರೂ ತಮ್ಮ ಕುಟುಂಬದ ಸುಂದರ ಕುಡಿಯನ್ನು ಎಳೆಯ ಮೊಳಕೆಯಲ್ಲೇ ಕಳೆದುಕೊಂಡ ಪೋಷಕರಿಗೆ ಈ ಶಿಕ್ಷೆ ಸಾಂತ್ವನ ನೀಡಲು ಸಾಧ್ಯವೇ ? ಭಾರತೀಯ ಸಂಸ್ಕೃತಿಯಲ್ಲಿ, ಧರ್ಮ ಸಂಹಿತೆಗಳಲ್ಲಿ “ ಪುತ್ರ ಶೋಕಂ ನಿರಂತರಂ ” ಎಂಬ ನಾಣ್ಣುಡಿ ವ್ಯಾಪಕ ಬಳಕೆಯಲ್ಲಿದೆ. ಮಗನನ್ನು ಕಳೆದುಕೊಂಡ ತಂದೆ ತಾಯಿಯರ ನೋವು ಶಾಶ್ವತ ಎಂದು ಅರ್ಥೈಸಬಹುದಾದ ಈ ಪ್ರಾಚೀನ ತಿಳುವಳಿಕೆಯಲ್ಲಿ ʼ ಪುತ್ರಿ ʼ (ಮಗಳು) ಏಕಿಲ್ಲ ಎಂಬ ಪ್ರಶ್ನೆಗೆ ಸಮಾಜದಲ್ಲಿ ಉತ್ತರ ದೊರೆಯುತ್ತದೆ.
ಈ ಪಾರಂಪರಿಕ ತಾರತಮ್ಯವನ್ನು ವರ್ತಮಾನದಲ್ಲಿಟ್ಟು ನೋಡಿದಾಗ, ವೈಯುಕ್ತಿಕವಾಗಿ, ವ್ಯಕ್ತಿಗತ ನೆಲೆಯಲ್ಲಿ ಹೆತ್ತವರಿಗೆ ಹೆಣ್ಣು ಮಕ್ಕಳನ್ನು ಕಳೆದುಕೊಂಡ ನೋವು ಎಷ್ಟೇ ಇದ್ದರೂ, ಬಾಲ್ಯಾವಸ್ಥೆಯಿಂದ ವೃದ್ಧಾಪ್ಯದವರೆಗೂ ಅತ್ಯಾಚಾರ, ಲೈಂಗಿಕ ಹಿಂಸೆ, ಕಿರುಕುಳ ಮತ್ತು ಕ್ರೂರ ಹತ್ಯೆಯನ್ನೂ ಎದುರಿಸುತ್ತಲೇ ಇರುವ ಹೆಣ್ಣು ಕುಲದ ಆಂತರ್ಯದ ವೇದನೆಗಳು ವಿಶಾಲ ಸಮಾಜದ ಪ್ರಜ್ಞೆಯನ್ನು ನಿರೀಕ್ಷಿತ ಮಟ್ಟದಲ್ಲಿ ಕದಡುತ್ತಿಲ್ಲ. ಬಲೂನು ಮಾರುವ ಬಾಲೆ ಎದುರಿಸಿದ ಹೃದಯ ಹಿಂಡುವ ವೇದನೆ ಸಾಂಸ್ಕೃತಿಕ ನಗರಿಯ ಸಮಾಜವನ್ನೂ ಅಷ್ಟಾಗಿ ಕದಡಲಿಲ್ಲ ಅಲ್ಲವೇ ? ಈ ಸಾಮಾಜಿಕ ಮನೋಭಾವ ಮತ್ತು ಸಾಂಸ್ಕೃತಿಕ ಮನಸ್ಥಿತಿ ವಿಕಸಿತ ಭಾರತದ ಉದ್ದಗಲಕ್ಕೂ ಕಾಣಬಹುದಾದ ಕಟು ವಾಸ್ತವ. ದೆಹಲಿಯ ಪೊಲೀಸರು ಪ್ರತಿಭಟನಾ ನಿರತ ಹೆಣ್ಣು ಮಕ್ಕಳನ್ನು ಹಿಂಸಿಸಲು ಕಂಡುಕೊಂಡಿರುವ ಹೊಸ ವಿಧಾನಗಳನ್ನು ಗಮನಿಸಿದಾಗ, ಈ ವ್ಯವಸ್ಥಿತ ಕ್ರೌರ್ಯ (Systemic Cruelty) ಪರಿಚಯವಾಗುತ್ತದೆ. ಕೊನೆಗೂ

ಹೆಣ್ಣು-ಅಪರಾಧ ಮತ್ತು ನ್ಯಾಯ
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಇತ್ತೀಚಿನ ವರದಿಯ ಅನುಸಾರ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವ ಪ್ರಮಾಣ: 22.7% ರಷ್ಟಿದೆ. ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿದ್ದ 2,03,067 ಪ್ರಕರಣಗಳ ಪೈಕಿ 4,464 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. .ಕೊಲೆ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವ ಪ್ರಮಾಣ: 37.7% ರಷ್ಟಿದ್ದು ವಿಚಾರಣೆಯಲ್ಲಿದ್ದ 2,72,198 ಪ್ರಕರಣಗಳ ಪೈಕಿ 7,181 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಇದು ಸಾಧ್ಯವಾಗಿರುವುದು ಕ್ಷಿಪ್ರಗತಿಯ ನ್ಯಾಯಾಲಯಗಳ ಸ್ಥಾಪನೆಯಿಂದ. ಇದೇ ಸಂಸ್ಥೆಯ ‘ಭಾರತದಲ್ಲಿ ಅಪರಾಧಗಳು’ (Crime in India) ವರದಿಗಳು ಮತ್ತು ಇತ್ತೀಚಿನ ಸರ್ಕಾರಿ ದತ್ತಾಂಶದ ಪ್ರಕಾರ, 2022 ರಲ್ಲಿ 31,516 ಮತ್ತು 2023 ರಲ್ಲಿ 29,670 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು; ಇದಾದ ಬಳಿಕ, 2024 ರಲ್ಲಿ ಭಾರತದಲ್ಲಿ 29,536 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.ಅಂದರೆ ಪ್ರತಿದಿನ ಸರಾಸರಿ 80 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. 18 ವರ್ಷದೊಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಕಳೆದ ದಶಕದಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, 2015ರಲ್ಲಿ 10,934ರಷ್ಟಿದ್ದ ಈ ಪ್ರಕರಣಗಳ ಸಂಖ್ಯೆ ಆನಂತರದ ದಶಕದಲ್ಲಿ, ಅಂದರೆ 2024ರಲ್ಲಿ 43,675ಕ್ಕೆ ತಲುಪಿದೆ.
ಸಾಂಸ್ಕೃತಿಕ ನಗರಿಯಲ್ಲಿ ಬಲಿಯಾಧ ಬಲೂನು ಮಾರುವ ಬಾಲೆ ಈ ಸಾವಿರಾರು ಜೀವಗಳಲ್ಲಿ ಒಂದು. NCRB ಇತ್ತೀಚಿನ ವರದಿಯ ಪ್ರಕಾರ, ಇತ್ತೀಚಿನ ಒಂದು ವರ್ಷದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ 4,45,256 ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 4 ರಷ್ಟು ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ, ಪ್ರಸ್ತುತ ರಾಷ್ಟ್ರೀಯ ಸರಾಸರಿಯು ಪ್ರತಿ ಗಂಟೆಗೆ ಸುಮಾರು 51 ಎಫ್ಐಆರ್ಗಳನ್ನು (FIRs) ಒಳಗೊಂಡಿದ್ದು, ಪ್ರತಿ ಒಂದು ಲಕ್ಷ ಮಹಿಳಾ ಜನಸಂಖ್ಯೆಗೆ 66.4 ಅಪರಾಧ ಪ್ರಕರಣಗಳ ದರವನ್ನು ಹೊಂದಿದೆ. NCRB ದತ್ತಾಂಶದ ಪ್ರಕಾರ, ಪತಿ ಅಥವಾ ಆತನ ಸಂಬಂಧಿಕರಿಂದ ಎಸಗಲಾದ ಕ್ರೌರ್ಯಕ್ಕೆ ಸಂಬಂಧಿಸಿದಂತೆ 1,33,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ; ಇದು ಮಹಿಳೆಯರ ವಿರುದ್ಧ ನಡೆಯುವ ಒಟ್ಟು ಅಪರಾಧಗಳಲ್ಲಿ ಸುಮಾರು 31% ರಷ್ಟಿದೆ. ದೇಶದ ಜಿಡಿಪಿ ವೃದ್ಧಿಗೆ ಹೋಲಿಸಿದರೆ ಇದನ್ನು Gross Domestic Attrocities (GOA) ಎಂದು ಲೆಕ್ಕ ಹಾಕಬಹುದು.
ವ್ಯವಸ್ಥೆಯ ಒಳಬಿರುಕುಗಳು (Systmic Faultlines)
ಪಿತೃಪ್ರಧಾನತೆಯ ಬಿಗಿ ಹಿಡಿತ ಎಲ್ಲ ವಲಯಗಳಲ್ಲೂ ಮತ್ತಷ್ಟು ಬಿಗಿಯಾಗುತ್ತಿರುವ ಹೊತ್ತಿನಲ್ಲೇ ಹೆಣ್ಣು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಅತ್ಯಾಚಾರ, ದೌರ್ಜನ್ಯಗಳಿಗೆ ಒಳಗಾಗುತ್ತಿರುವುದು ಭಾರತದ ಸಾಮಾಜಿಕ ಸಮೀಕರಣದಲ್ಲಿರುವ (Social Equation) ಲಿಂಗಭೇದ ಮತ್ತು ಲಿಂಗತ್ವ ತಾರತಮ್ಯವನ್ನು ಎತ್ತಿ ತೋರಿಸುತ್ತಿದೆ. ಮೈಸೂರು ಪ್ರಕರಣದಲ್ಲಿ ಆರೋಪಿಗೆ ಗಲ್ಲು ಶಿಕ್ಷೆಯಾಗಿರುವುದನ್ನು ಸ್ವಾಗತಿಸುತ್ತಲೇ ನಮ್ಮ ಸಮಾಜ ಮಹಿಳಾ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ʼ ಅಂತಿಮ ನ್ಯಾಯದ ʼ (Final Justice) ಹಂತವನ್ನು ತಲುಪಿದೆಯೇ ಎಂದು ಯೋಚಿಸಬೇಕಿದೆ. ಧಾರ್ಮಿಕ, ಆಧ್ಯಾತ್ಮಿಕ, ರಾಜಕೀಯ, ಶೈಕ್ಷಣಿಕ ಹೀಗೆ ಎಲ್ಲ ಮಗ್ಗುಲುಗಳಲ್ಲೂ ಅತ್ಯಾಚಾರಿಗಳು-ದೌರ್ಜನ್ಯ ಎಸಗುವವರು ಪುರಾಣದ ರಕ್ತ ಬೀಜಾಸುರರ ಹಾಗೆ ಉಲ್ಬಣಿಸುತ್ತಲೇ ಇದ್ದಾರೆ. ಈ ವಿಪರ್ಯಾಸಗಳ ನಡುವೆ ಮೈಸೂರಿನ ಪೋಕ್ಸೋ ಶೀಘ್ರಗತಿ ವಿಶೇಷ ನ್ಯಾಯಾಲಯ ಒಂದು ಸಮಾಧಾನಕರ ತೀರ್ಪು ನೀಡಿರುವುದು ಸ್ವಾಗತಾರ್ಹ.
ತಮ್ಮ ಮನೆಯ ಹೆಣ್ಣು ಮಗುವಿನ ಕ್ರೂರ ಸಾವು ಮತ್ತು ಈ ಸಾವಿಗೆ ಕಾರಣನಾದ ವ್ಯಕ್ತಿಯ ಗಲ್ಲು ಶಿಕ್ಷೆ, ಇವೆರಡನ್ನೂ ಮಾನಸಿಕ ತಕ್ಕಡಿಯಲ್ಲಿಟ್ಟು ತೂಗಿದಾಗ, ಹೆತ್ತೊಡಲು ಹೇಗೆ ಯೋಚಿಸಬಹುದು ? ಈ ಶಿಕ್ಷೆಯನ್ನು ಸಂಭ್ರಮಿಸುವುದೋ ಅಥವಾ ಕೂಸಿನ ಸಾವನ್ನು ನೆನೆದು ದುಃಖಿಸುತ್ತಲೇ ಇರುವುದೋ ? ಇದೇ ಜಿಜ್ಞಾಸೆಯನ್ನು ಸಮಾಜ ಹೇಗೆ ಎದುರಿಸಬೇಕು ? ಭಾರತದಲ್ಲಿ ಏರುಗತಿಯಲ್ಲಿ ದೌರ್ಜನ್ಯಕ್ಕೊಳಗಾಗುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವುದು ಹೇಗೆ ಎಂದು ಗಂಭೀರವಾಗಿ ಯೋಚಿಸಬೇಕಿದೆ. ಸಾಂಸ್ಕೃತಿಕ ನಗರಿಯಲ್ಲಿ ಮತ್ತೊಂದು ಬಲೂನು ಮಾರುವ ಕೂಸು ಬಲಿಯಾಗದಿರುವಂತೆ ಎಚ್ಚರ ವಹಿಸಬೇಕಿದೆ. ಇದು ಪ್ರಜ್ಞಾವಂತ-ಪ್ರಬುದ್ಧ ಎನಿಸಿಕೊಳ್ಳುವ ಸಮಾಜದ ನೈತಿಕ ಜವಾಬ್ದಾರಿ. ಕೊನೆಗೂ
ಇದನ್ನೂ ನೋಡಿ : 19 ವರ್ಷ ದುಡಿದರೂ ಖಾಯಂ ಇಲ್ಲ! ನ್ಯಾಯ ಕೇಳಿದ ವಿಶೇಷಚೇತನರ ಮೇಲೆ ಪೊಲೀಸರ ದಬ್ಬಾಳಿಕೆ? Janashakthi Media
