ಭಾರತದಲ್ಲಿ ನ್ಯಾಯಾಂಗ ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗಿರುವುದೇಕೆ?

ಪ್ರೊ. ಪ್ರಭಾತ್‌ ಪಟ್ನಾಯಕ್‌
ಸ್ವಾತಂತ್ರ್ಯೋತ್ತರ ಭಾರತದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಸಂವಿಧಾನದ ಅಡಿಯಲ್ಲಿ ಜನರು ಅನುಭವಿಸುವ ಹಕ್ಕುಗಳು, ಅವುಗಳ ರಕ್ಷಣೆಗೆ ನ್ಯಾಯಾಂಗವು ಬಾರದೇ, ಕಸಿದುಕೊಳ್ಳಲ್ಪಡುವ ಅಪಾಯವನ್ನು ಸದಾ ಎದುರಿಸುತ್ತಿರುತ್ತವೆ. ಜನರ ಹಕ್ಕುಗಳನ್ನು ಮೊಟಕುಗೊಳಿಸುವುದನ್ನೇ ಒಂದು ಸಹಜ ಪ್ರವೃತ್ತಿಯಾಗಿ ಹೊಂದಿರುವ ನವ-ಫ್ಯಾಸಿಸ್ಟ್ ಆಳ್ವಿಕೆಯ ಅಡಿಯಲ್ಲಂತೂ ಈ ಅಪಾಯವು ಎಷ್ಟೋ ಪಟ್ಟು  ಹೆಚ್ಚಿರುತ್ತದೆ. ನಾಜಿ ಜರ್ಮನಿಯ ಆರಂಭಿಕ ವರ್ಷಗಳಲ್ಲಿಯೂ ಕಾಣದಿದ್ದ ಮಟ್ಟದಲ್ಲಿ ಭಾರತದ ನ್ಯಾಯಾಂಗವು ಕಾರ್ಯಾಂಗದ ಮುಂದೆ ಏಕೆ ಸಾಷ್ಟಾಂಗ ಪ್ರಣಾಮ ಮಾಡುತ್ತದೆ? ಒಂದು ಗಣರಾಜ್ಯ ಸಂವಿಧಾನದ ಅಡಿಯಲ್ಲಿ ೭೫ ವರ್ಷಗಳು ದಾಟಿದರೂ ಭಾರತದಲ್ಲಿ ನ್ಯಾಯಾಂಗವೂ ಸೇರಿದಂತೆ ನಮ್ಮ ಸಂಸ್ಥೆಗಳು ಇನ್ನೂ ಹೆಚ್ಚು ಬಲಿಷ್ಟವಾಗಲಿಲ್ಲ ಏಕೆ? ಸಮಾಜದಲ್ಲಿನ ಪರಂಪರಾಗತ ಊಳಿಗಮಾನ್ಯ  ಶ್ರೇಣೀಕೃತ ಗ್ರಹಿಕೆಯನ್ನು  ನ್ಯಾಯಾಂಗವೂ  ಬಿಟ್ಟಿಲ್ಲವೇ? ಇಂದು ಭಾರತದಲ್ಲಿ ಜನರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯ ಹೋರಾಟವು ಈ ಗ್ರಹಿಕೆಯನ್ನು ಪ್ರಜ್ಞಾಪೂರ್ವಕವಾಗಿ ಮೀರಿ ಹೋಗುವ ಅಗತ್ಯದ ಬಗ್ಗೆ ನ್ಯಾಯಾಂಗವನ್ನು ಸಂವೇದನಾಶೀಲಗೊಳಿಸುವ ಒಂದು ಹೋರಾಟವನ್ನೂ  ಒಳಗೊಂಡಿರಬೇಕು. ಭಾರತದಲ್ಲಿ
ಅನು: ಕೆ. ಎಂ. ನಾಗರಾಜ್

ಬಲ್ಗೇರಿಯಾದ ಒಬ್ಬ ಮಹೋನ್ನತ ಕಮ್ಯುನಿಸ್ಟ್ ನಾಯಕ, ಕಮ್ಯೂನಿಷ್ಟ್‌ ಅಂತಾರಾಷ್ಟ್ರೀಯದ (ಕಾಮಿಂಟರ್ನ್) ಏಳನೇ ಅಧಿವೇಶನದ ಅಧ್ಯಕ್ಷತೆ ವಹಿಸಿ ಫ್ಯಾಸಿಸಂ ವಿರುದ್ಧ ಹೋರಾಡುವ ಸಂಯುಕ್ತ ರಂಗದ (‘ಯುನೈಟೆಡ್ ಫ್ರಂಟ್’) ತಂತ್ರಗಾರಿಕೆಯನ್ನು ಮುನ್ನಡೆಸಿದ ಜಾರ್ಜಿ ದಿಮಿತ್ರೋವ್, ಅದಕ್ಕೆ ಮುನ್ನ  1933ರಲ್ಲಿ ಜರ್ಮನಿಯಲ್ಲಿ ನಾಜಿಗಳು ಅಧಿಕಾರಕ್ಕೆ ಬಂದ ನಂತರ ಸಂಭವಿಸಿದ ‘ರೈಖ್‌ ಸ್ಟಾಗ್‌ ಫೈರ್ʼ (ಜರ್ಮನಿಯ ಸಂಸತ್‌ ಭವನದಲ್ಲಿನ ಬೆಂಕಿ ಅವಘಡ) ಪ್ರಕರಣದಲ್ಲಿ ಒಬ್ಬ ಆರೋಪಿಯಾಗಿದ್ದರು ಮತ್ತು ಸೆರೆವಾಸ ಅನುಭವಿಸಿದ್ದರು. ನ್ಯಾಯಾಲಯ ಒದಗಿಸಿದ ವಕೀಲರ ಸೇವೆಯನ್ನು ನಿರಾಕರಿಸಿದ ದಿಮಿತ್ರೋವ್, ವಿಚಾರಣೆಯ ಸಮಯದಲ್ಲಿ ತಮ್ಮ ಪರವಾಗಿ ತಾವೇ ವಾದಿಸಿದ್ದರು. ತಮ್ಮ ಸಮರ್ಥನೆಗಾಗಿ, ಅಗ್ರ ನಾಜಿ ನಾಯಕ ಹಾಗೂ ಹಿಟ್ಲರ್‌ನ ಯುದ್ಧ ಸಚಿವರಾಗಿದ್ದ ಹರ್ಮನ್ ಗೋರಿಂಗ್ ರನ್ನು ಪಾಟೀಸವಾಲಿಗೆ ಒಳಪಡಿಸಲು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಿದ್ದರು. ಅವರ ಈ ಕೋರಿಕೆಯನ್ನು ನ್ಯಾಯಾಲಯ ಪುರಸ್ಕರಿಸಿತ್ತು. ದಿಮಿತ್ರೋವ್ ಅವರ ಪಾಟೀಸವಾಲು ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಒಂದು ಹಂತದಲ್ಲಿ ಅವರನ್ನು “ನೀನು ನೀಚ, ನಿನ್ನನ್ನು ಗಲ್ಲಿಗೇರಿಸಬೇಕು” ಎಂದು ಸಿಟ್ಟಿಗೆದ್ದ ಗೋರಿಂಗ್ ಕೂಗಾಡುವಂತಾಯಿತು. ಆದರೆ ದಿಮಿತ್ರೋವ್ ಶಾಂತವಾಗಿ ಮತ್ತು ತೀಕ್ಷ್ಣವಾಗಿ ತಮ್ಮ ಹಾಗೂ ಇತರ ಆರೋಪಿ ಕಮ್ಯುನಿಸ್ಟರ ವಿರುದ್ಧದ ಪ್ರಕರಣದ ಕಪಟ ಸ್ವರೂಪವನ್ನು ಬಯಲು ಮಾಡಿದರು. ಅವರನ್ನು ನ್ಯಾಯಾಲಯ ಅಂತಿಮವಾಗಿ ಬಿಡುಗಡೆ ಮಾಡಿತು.  

ಉನ್ನತ ನಾಜಿ ನಾಯಕನೊಬ್ಬನನ್ನು ನ್ಯಾಯಾಲಯಕ್ಕೆ ಕರೆಸಿ ಆತನನ್ನು ಪಾಟೀಸವಾಲಿಗೆ ಒಳಪಡಿಸುವಂತೆ ದಿಮಿತ್ರೋವ್‌ ಅವರಿಗೆ ಅವಕಾಶ ನೀಡಿದ ಜರ್ಮನ್ ನ್ಯಾಯಾಧೀಶರು ಮತ್ತು ಆರು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದರೂ ತಮ್ಮ ವಿಚಾರಣೆಯೇ ಪ್ರಾರಂಭವಾಗದ ಕೆಲವು ಯುವ ಆರೋಪಿಗಳಿಗೆ ಜಾಮೀನು ಕೂಡ ನೀಡದ ಭಾರತೀಯ ನ್ಯಾಯಾಂಗದ ನಡುವೆ ಇರುವ ವ್ಯತ್ಯಾಸವು ಬಹಳ ಸ್ಪಷ್ಟವಾಗಿ ಕಾಣುತ್ತದೆ. ಅಂತಹ ಕೈದಿಯೊಬ್ಬ ಅಮಿತ್ ಶಾರನ್ನು ನ್ಯಾಯಾಲಯಕ್ಕೆ ಕರೆಸಿ ಪಾಟೀಸವಾಲಿಗೆ ಒಳಪಡಿಸಬಹುದು ಎಂದು ಊಹಿಸಲೂ ಸಾಧ್ಯವಿಲ್ಲ. ಇಲ್ಲಿ ಉದ್ಭವಿಸುವ ಪ್ರಶ್ನೆ: ಈ ಎರಡು ಪ್ರಕರಣಗಳ ನಡುವೆ ಇಂತಹ ವ್ಯತ್ಯಾಸ ಇರುವುದಾದರೂ ಏಕೆ? ಭಾರತದಲ್ಲಿ

ಉತ್ತರಕ್ಕಾಗಿ ನಾವು ಬಹಳ ಹಿಂದಕ್ಕೇನೂ ಹೋಗಬೇಕಿಲ್ಲ. ತೀರಾ ಇತ್ತೀಚೆಗೆ ಅಮೆರಿಕದ ನ್ಯಾಯಾಲಯವೊಂದು ಡೊನಾಲ್ಡ್ ಟ್ರಂಪ್ ರ ಮೂಲ ಸುಂಕ ಪ್ರಸ್ತಾವನೆಗಳು ಅಮೆರಿಕದ ಸಂವಿಧಾನದ ನಿಬಂಧನೆಗಳನ್ನು ಉಲ್ಲಂಘಿಸುತ್ತವೆ ಎಂಬ ಕಾರಣದ ಮೇಲೆ ಅವುಗಳನ್ನು ಅಸಿಂಧುಗೊಳಿಸುವ ‘ಧೈರ್ಯ’ ತೋರಿತು (ಇದೇ ಕಾರಣದಿಂದ ಪ್ರಸ್ತುತ ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಮರು-ಸಮಾಲೋಚನೆಗೆ ಒಳಪಡಿಸಲಾಗಿದೆ). ಟ್ರಂಪ್ ಸಿಡಿಮಿಡಿಗುಟ್ಟಿದರಾದರೂ, ಅದರ ಬಗ್ಗೆ ಏನೂ ಮಾಡಲಾಗಲಿಲ್ಲ. ಇಲ್ಲಿಯೂ ಉದ್ಭವಿಸುವ ಪ್ರಶ್ನೆ: ಯುಎಸ್‌  ನ್ಯಾಯಾಂಗ ಮತ್ತು ಭಾರತೀಯ ನ್ಯಾಯಾಂಗದ ನಡುವೆ ಇಂತಹ ವ್ಯತ್ಯಾಸ ಇರುವುದಾದರೂ ಏಕೆ?

ಉನ್ನತ ನಾಜಿ ನಾಯಕನೊಬ್ಬನನ್ನು ನ್ಯಾಯಾಲಯಕ್ಕೆ ಕರೆಸಿ ಆತನನ್ನು ಪಾಟೀಸವಾಲಿಗೆ ಒಳಪಡಿಸುವಂತೆ ದಿಮಿತ್ರೋವ್‌ ಅವರಿಗೆ ಅವಕಾಶ ನೀಡಿದ ಜರ್ಮನ್ ನ್ಯಾಯಾಧೀಶರು ಮತ್ತು ಆರು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದರೂ ತಮ್ಮ ವಿಚಾರಣೆಯೇ ಪ್ರಾರಂಭವಾಗದ ಕೆಲವು ಯುವ ಆರೋಪಿಗಳಿಗೆ ಜಾಮೀನು ಕೂಡ ನೀಡದ ಭಾರತೀಯ ನ್ಯಾಯಾಂಗದ ನಡುವೆ ಇರುವ ವ್ಯತ್ಯಾಸವು ಬಹಳ ಸ್ಪಷ್ಟವಾಗಿ ಕಾಣುತ್ತದೆ. ಅಂತಹ ಕೈದಿಯೊಬ್ಬ ಅಮಿತ್ ಶಾರನ್ನು ನ್ಯಾಯಾಲಯಕ್ಕೆ ಕರೆಸಿ ಪಾಟೀಸವಾಲಿಗೆ ಒಳಪಡಿಸಬಹುದು ಎಂದು ಊಹಿಸಲೂ ಸಾಧ್ಯವಿಲ್ಲ. ಇಲ್ಲಿ ಉದ್ಭವಿಸುವ ಪ್ರಶ್ನೆ: ಈ ಎರಡು ಪ್ರಕರಣಗಳ ನಡುವೆ ಇಂತಹ ವ್ಯತ್ಯಾಸ ಇರುವುದಾದರೂ ಏಕೆ?

ಏಕೆ ಈ ಸಾಷ್ಟಾಂಗ ಪ್ರಣಾಮ?

ನಾಜಿ ಜರ್ಮನಿಯ ಆರಂಭಿಕ ವರ್ಷಗಳಲ್ಲಿಯೂ ಕಾಣದಿದ್ದ ಮಟ್ಟದಲ್ಲಿ ಭಾರತದ ನ್ಯಾಯಾಂಗವು ಕಾರ್ಯಾಂಗದ ಮುಂದೆ ಏಕೆ ಸಾಷ್ಟಾಂಗ ಪ್ರಣಾಮ ಮಾಡುತ್ತದೆ? 1918ರಲ್ಲಿ ಸ್ಥಾಪನೆಯಾದ ಜರ್ಮನಿಯ ಗಣರಾಜ್ಯವು ಕೇವಲ 15 ವರ್ಷಗಳಷ್ಟನ್ನು ಪೂರ್ಣಗೊಳಿಸಿದ ಸನ್ನಿವೇಶದಲ್ಲಿ ಅದರ ‘ಸಂಸತ್‌ ಭವನದ ಬೆಂಕಿ ಅವಘಡ”ದ ವಿಚಾರಣೆ ಆರಂಭವಾಗಿತ್ತು; ಅದಕ್ಕಿಂತ ಐದು ಪಟ್ಟು ಹೆಚ್ಚು ಕಾಲ ಒಂದು ಗಣರಾಜ್ಯ ಸಂವಿಧಾನದ ಅಡಿಯಲ್ಲಿ ಕಾರ್ಯಭಾರ ನಿರ್ವಹಿಸಿರುವ ಭಾರತದಲ್ಲಿ ನ್ಯಾಯಾಂಗವೂ ಸೇರಿದಂತೆ ನಮ್ಮ ಸಂಸ್ಥೆಗಳು ಇನ್ನೂ ಹೆಚ್ಚು ಬಲಿಷ್ಟವಾಗಿರಬೇಕಿತ್ತು. ಅದು ಆಗಿಲ್ಲ ಏಕೆ?

ಫ್ಯಾಸಿಸಂ ಅಥವಾ ನವ-ಫ್ಯಾಸಿಸಂ ಎಂಬುದು ಒಂದು ತೀರಾ ಆಧುನಿಕ ವಿದ್ಯಮಾನವೇ. ಇದು ಏಕಸ್ವಾಮ್ಯ ಬಂಡವಾಳಶಾಹಿ ಮತ್ತು ಫ್ಯಾಸಿಸ್ಟ್ “ನವ-ಕುಬೇರರ” (upstarts- ಇದು ಕಲೆಕ್ಕಿಯವರ ಪದಬಳಕೆ) ನಡುವಿನ ಮೈತ್ರಿಯನ್ನು ಆಧರಿಸಿದೆ. ಫ್ಯಾಸಿಸಂ ಅಥವಾ ನವ-ಫ್ಯಾಸಿಸಂ ವಿದ್ಯಮಾನವು ಏಕಸ್ವಾಮ್ಯ ಬಂಡವಾಳಶಾಹಿಯ ಯುಗದಲ್ಲಿ, ಅದೂ ಸಹ ಬಿಕ್ಕಟ್ಟಿಗೆ ಸಿಲುಕಿದ ವ್ಯವಸ್ಥೆಯು ತನ್ನ ಔಚಿತ್ಯವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿರುವ ಅವಧಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಫ್ಯಾಸಿಸಂ ಕುರಿತ ಮಾರ್ಕ್ಸ್‌ವಾದೀ ತಿಳುವಳಿಕೆ ಮತ್ತು ಫ್ಯಾಸಿಸಂ ಕುರಿತ ಉದಾರವಾದಿ ತಿಳುವಳಿಕೆಗಳ ನಡುವೆ ಒಂದು ವ್ಯತ್ಯಾಸವಿದೆ. ಜನತೆಯ ಗಮನವನ್ನು ಬೇರೆಡೆಗೆ ಸೆಳೆಯುವಂತಹ ಕಥನಗಳನ್ನು ಹುಟ್ಟುಹಾಕುವ ಮೂಲಕ ಏಕಸ್ವಾಮ್ಯ ಬಂಡವಾಳಶಾಹಿಯ ಪ್ರಾಬಲ್ಯವನ್ನು ರಕ್ಷಿಸುವಲ್ಲಿ ಫ್ಯಾಸಿಸಂ ವಹಿಸುವ ಪಾತ್ರವನ್ನು ಮಾರ್ಕ್ಸ್‌ವಾದೀ ದೃಷ್ಟಿಕೋನವು ಗುರುತಿಸುತ್ತದೆ. ಇದುವೇ ಫ್ಯಾಸಿಸಂ ಕುರಿತ ಮಾರ್ಕ್ಸ್‌ವಾದೀ ಮತ್ತು ಉದಾರವಾದೀ ತಿಳುವಳಿಕೆಗಳ ನಡುವಿನ ವ್ಯತ್ಯಾಸ. ಈ ವ್ಯತ್ಯಾಸವು ಫ್ಯಾಸಿಸಂಗಿಂತಲೂ ನವ-ಫ್ಯಾಸಿಸಂನ ಸಂದರ್ಭದಲ್ಲಿ ಇನ್ನೂ ಹೆಚ್ಚು ದಿಟವಾಗಿದೆ. ಏಕೆಂದರೆ, ನವಫ್ಯಾಸಿಸಂನಂತಲ್ಲದೆ, ಹಳೆಯ ಫ್ಯಾಸಿಸಂ ಗಮನವನ್ನು ಬೇರೆಡೆಗೆ ಸೆಳೆಯುವ ಕಥನಗಳನ್ನು ಹುಟ್ಟುಹಾಕುವುದರ ಜೊತೆಗೆ, ನಿರುದ್ಯೋಗದ ಸಮಸ್ಯೆಯನ್ನು ನಿವಾರಿಸುವಲ್ಲಿ ಯಶಸ್ವಿಯಾಗಿತ್ತು. ಅದನ್ನು ಯುದ್ಧ ಸಿದ್ಧತೆಯಂತಹ ಕ್ರೂರ ವಿಧಾನಗಳ ಮೂಲಕ ಪ್ರಭುತ್ವದ ಮಿಲಿಟರಿ ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಮತ್ತು ಆ ವೆಚ್ಚವನ್ನು ವಿತ್ತೀಯ ಕೊರತೆಯ ಮೂಲಕ ಭರಿಸುವ ಮೂಲಕ ಹಳೆಯ ಫ್ಯಾಸಿಸಂ ಮಾಡಿತ್ತು. ಭಾರತದಲ್ಲಿ

ಇದನ್ನೂ ಓದಿ : ಜೀವನ ವೆಚ್ಚದ ಬಿಕ್ಕಟ್ಟಿನ ವಿರುದ್ಧ ದಶಕದಲ್ಲೇ  ಅಭೂತಪೂರ್ವ ಫ್ರೆಂಚ್ ದಂಗೆ

ಓಬೀರಾಯನ ಕಾಲದ ಪೂರ್ವಾಗ್ರಹಗಳ ಬಳಕೆ..

ಫ್ಯಾಸಿಸಂ ಮತ್ತು ನವ-ಫ್ಯಾಸಿಸಂ ಸ್ವತಃ ಆಧುನಿಕ ವಿದ್ಯಮಾನಗಳಾಗಿದ್ದರೂ, ಅವು ಆಧುನಿಕ-ಪೂರ್ವ ಮನಸ್ಥಿತಿಗಳನ್ನು ಪ್ರತಿನಿಧಿಸುವ ವಿಚಾರಗಳ ಮತ್ತು ಪರಿಕಲ್ಪನೆಗಳ ಮೊರೆಹೋಗುತ್ತವೆ. ಅವು ಬಳಸಿಕೊಳ್ಳುವ ನಿಖರ ಆಧುನಿಕ-ಪೂರ್ವದ ಪೂರ್ವಾಗ್ರಹಗಳು ಆಯಾ ದೇಶದ ಇತಿಹಾಸಕ್ಕೆ ಅನುಗುಣವಾಗಿ ಭಿನ್ನವಾಗಿರುತ್ತವೆ. ಈ ರೀತಿಯಲ್ಲಿ, ಬಹುಸಂಖ್ಯಾತ ಜನಾಂಗದವರ ನಡುವೆ ಇಂದು ಯಾರ ವಿರುದ್ಧ ದ್ವೇಷವನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತದೆಯೋ ಆ “ಅನ್ಯರು” (the other), ಯುರೋಪಿನಲ್ಲಿ ವಲಸಿಗರಾಗಿರಬಹುದು, ಇವರಲ್ಲಿ  ಕರಿಯರು ಮತ್ತು ಮುಸ್ಲಿಮರೂ ಇರುತ್ತಾರೆ. ಆದರೆ ಭಾರತದಲ್ಲಿ ಈ “ಅನ್ಯರು” ವಲಸಿಗರಲ್ಲದ ದಲಿತರು ಮತ್ತು ಮುಸ್ಲಿಮರು ಆಗಿರುತ್ತಾರೆ. ಇವರು, ಸಹಸ್ರಾರು ವರ್ಷಗಳಿಂದಲೂ ಈ ದೇಶದಲ್ಲಿ ವಾಸಿಸುತ್ತಿರುವ ಸ್ಥಳೀಯ ನಿವಾಸಿಗಳೇ. ಇದೇ ರೀತಿಯಲ್ಲಿ, “ಅನ್ಯರು” ಎಂದು ಪರಿಗಣಿಸಲ್ಪಟ್ಟ ಸಮುದಾಯದ ವಿರುದ್ಧ ಸೃಷ್ಟಿಸಲಾದ ಕಟ್ಟುಕಥೆಗಳು ಕೂಡ ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತವೆ. ಈ ಕಟ್ಟುಕಥೆಗಳು ಪ್ರತಿ ಸಂದರ್ಭದಲ್ಲಿಯೂ ಆ ದೇಶದ ಇತಿಹಾಸದ ವಿರೂಪಗೊಂಡ ಚಿತ್ರಣವನ್ನು ಪ್ರತಿನಿಧಿಸುತ್ತವೆ ಮತ್ತು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತವೆ. ಆಯಾ ದೇಶಕ್ಕೆ ವಿಶಿಷ್ಟವಾದ ಫ್ಯಾಸಿಸಂ ಮತ್ತು ನವ-ಫ್ಯಾಸಿಸಂನ ಸ್ವರೂಪಕ್ಕೆ ಈ ವ್ಯತ್ಯಾಸವೇ ಕಾರಣವಾಗಿದೆ.

ಈ ರೀತಿಯಲ್ಲಿ ಫ್ಯಾಸಿಸಂ ಮತ್ತು ನವ-ಫ್ಯಾಸಿಸಂಗಳು ಜನಸಮುದಾಯದ ಮೇಲೆ ತೀವ್ರ ದಮನ, ಏಕಸ್ವಾಮ್ಯ ಬಂಡವಾಳದೊಂದಿಗೆ ನಿಕಟ ನಂಟು, “ನಾಯಕ”ನ ವ್ಯಕ್ತಿ ಪೂಜೆ ಮತ್ತು  ಅದೃಷ್ಟಹೀನ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷವನ್ನು ಹುಟ್ಟುಹಾಕುವಂತಹ ಕೆಲವು ಸ್ಪಷ್ಟವಾದ ಸಾಮಾನ್ಯ ಲಕ್ಷಣಗಳನ್ನು ಹೊಂದಿದ್ದರೂ, ಆಯಾ ದೇಶದ ನಿರ್ದಿಷ್ಟ ಸನ್ನಿವೇಶಕ್ಕೆ ಅನುಗುಣವಾಗಿ ಕೆಲವು ಲಕ್ಷಣಗಳು ಭಿನ್ನವಾಗಿರುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಫ್ಯಾಸಿಸಂ ಎಂಬುದು ಒಂದು ಆಧುನಿಕ ವಿದ್ಯಮಾನವಾಗಿದ್ದು, ಅದು ತನ್ನ ಸೈದ್ಧಾಂತಿಕ ನಿಲುವುಗಳನ್ನು ರೂಪಿಸಿಕೊಳ್ಳಲು ರಾಶಿಗಟ್ಟಲೆ ಓಬೀರಾಯನ ಕಾಲದ ಪೂರ್ವಾಗ್ರಹಗಳನ್ನು ಸಾಧನವಾಗಿ ಬಳಸಿಕೊಳ್ಳುತ್ತದೆ; ಈ ವಿದ್ಯಮಾನವು ಹರಿಯಬಿಡುವ ಸಾಮಾಜಿಕ ಪ್ರತಿ-ಕ್ರಾಂತಿಯ ನಿರ್ದಿಷ್ಟ ಸ್ವರೂಪವು ಈ ಪೂರ್ವಾಗ್ರಹಗಳಿಂದಲೇ ನಿರ್ಧಾರವಾಗುತ್ತದೆ.

ಸ್ವಾತಂತ್ರ್ಯೋತ್ತರ ಭಾರತದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಸಂವಿಧಾನದ ಅಡಿಯಲ್ಲಿ ಜನರು ಅನುಭವಿಸುವ ಹಕ್ಕುಗಳು, ಅವುಗಳ ರಕ್ಷಣೆಗೆ ನ್ಯಾಯಾಂಗವು ಬಾರದೇ, ಕಸಿದುಕೊಳ್ಳಲ್ಪಡುವ ಅಪಾಯವನ್ನು ಸದಾ ಎದುರಿಸುತ್ತಿರುತ್ತವೆ. ಜನರ ಹಕ್ಕುಗಳನ್ನು ಮೊಟಕುಗೊಳಿಸುವುದನ್ನೇ ಒಂದು ಸಹಜ ಪ್ರವೃತ್ತಿಯಾಗಿಯೇ ಹೊಂದಿರುವ ನವ-ಫ್ಯಾಸಿಸ್ಟ್ ಆಳ್ವಿಕೆಯ ಅಡಿಯಲ್ಲಂತೂ ಈ ಅಪಾಯವು ಎಷ್ಟೋ ಪಟ್ಟು  ಹೆಚ್ಚಿರುತ್ತದೆ ಎಂಬುದನ್ನು ಹೇಳುವ ಅಗತ್ಯವೇ ಇಲ್ಲ. ಆದ್ದರಿಂದ, ಇಂದು ಭಾರತದಲ್ಲಿ ನಡೆಯುವ ಹೋರಾಟವು, ಒಂದು ನಿರ್ಣಾಯಕ ಅರ್ಥದಲ್ಲಿ, ಜನರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯ ಸಲುವಾಗಿಯೇ ಆಗಿರುತ್ತದೆ ಮತ್ತು ಈ ಹೋರಾಟವು ಸಮಾಜದ ಬಗ್ಗೆ ನ್ಯಾಯಾಂಗವು ಹೊಂದಿರುವ  ಗ್ರಹಿಕೆಯಲ್ಲಿ ಜಾತಿ ಶ್ರೇಣೀಕರಣದ ಮಟ್ಟವನ್ನು ಅದು ತಗ್ಗಿಸಿಕೊಳ್ಳುವಂತೆ ಮಾಡುವ  ಹೋರಾಟವನ್ನೂ ಒಳಗೊಂಡಿದೆ.

ಜಾತಿ ವ್ಯವಸ್ಥೆಯ ಅವಶೇಷ

ಭಾರತದಲ್ಲಿ ನವ-ಫ್ಯಾಸಿಸಂ ಬಳಸುವ ಮಧ್ಯಕಾಲೀನ ಪೂರ್ವಾಗ್ರಹವೆಂದರೆ, ಸಾಮಾಜಿಕ ಶ್ರೇಣಿಯಲ್ಲಿ “ಕೀಳು” ಎಂದು ಹೇಳಲಾದ ಜಾತಿಗಳ ಸದಸ್ಯರನ್ನು ಕೆಳ ದರ್ಜೆಯ ಮನುಷ್ಯರೆಂದು ನೋಡುವ ಕ್ರಮವೇ. ಈ ದಾವೆಯು ವಿಚಿತ್ರವಾಗಿ ತೋರಬಹುದು. ಏಕೆಂದರೆ,  ಭಾರತದ ನವ-ಫ್ಯಾಸಿಸ್ಟರ ಅಸಹನೆಯು ಮುಸ್ಲಿಮರ ವಿರುದ್ಧ ನಿರ್ದೇಶಿತವಾಗಿರುವಂತೆ ಕಾಣುತ್ತದೆ. ಆದರೆ “ಕೆಳ” ಜಾತಿಗಳ ವಿರುದ್ಧ ಇದ್ದ ಪೂರ್ವಾಗ್ರಹವು ಸರಾಗವಾಗಿ ಮುಸ್ಲಿಮರ ವಿರುದ್ಧದ ಒಂದು ಪೂರ್ವಾಗ್ರಹವಾಗಿ ಪರಿವರ್ತನೆ ಹೊಂದುವಲ್ಲಿ ಎರಡು ಸ್ಪಷ್ಟ ಕಾರಣಗಳಿವೆ: ಮುಸ್ಲಿಂ ಜನಸಂಖ್ಯೆಯ ಒಂದು ಬಹು ದೊಡ್ಡ ಭಾಗವು ಮೂಲತಃ ಜಾತಿ ದಬ್ಬಾಳಿಕೆಯಿಂದ ತಪ್ಪಿಸಿಕೊಳ್ಳಲು ಶತಮಾನಗಳ ಹಿಂದೆ ಧರ್ಮ ಬದಲಾಯಿಸಿಕೊಂಡವರ ಸಂತತಿ ಎಂಬುದು ಮೊದಲನೆಯದು. ಅಸಮಾನತೆಯು ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಬಂಧದಲ್ಲಿ ಅಂತರ್ಗತವಾಗಿರುತ್ತದೆ ಎಂಬ ಗ್ರಹಿಕೆಯು ಒಂದು ಚಾರಿತ್ರಿಕ ಸಂದರ್ಭದಿಂದ ಇನ್ನೊಂದಕ್ಕೆ ಮುಂದುವರೆಯುತ್ತದೆ ಎಂಬುದು ಎರಡನೆಯದು. ಸಂಕ್ಷಿಪ್ತವಾಗಿ ಹೇಳುವುದಾದರೆ, ವ್ಯಕ್ತಿಯ ಹಕ್ಕುಗಳ ಬಗ್ಗೆ ನವ-ಫ್ಯಾಸಿಸ್ಟರು ತೋರುವ ನಿರ್ಲಕ್ಷ್ಯವು ಆಚರಣೆಯಲ್ಲಿರುವ ಅಸಮಾನತೆಯಿಂದ ಕೂಡಿರುವ ಜಾತಿ ವ್ಯವಸ್ಥೆಯ ಅವಶೇಷದ ಒಂದು ಮುಂದುವರಿಕೆಯೇ.

ಎಲ್ಲ ಊಳಿಗಮಾನ್ಯ ಸಮಾಜಗಳೂ ಮನುಷ್ಯ ಮನುಷ್ಯರ ನಡುವೆ ಅಸಮಾನತೆ ಅಂತರ್ಗತವಾಗಿದೆ ಎಂಬ ದುರಹಂಕಾರದ ಭಾವನೆಯ ಮೇಲೆ ಆಧಾರಿತವಾಗಿವೆ ಎಂದು ಹೇಳಬಹುದು. ಹಾಗಾಗಿ, ಭಾರತದಲ್ಲಿ ಸಾಮಾನ್ಯ ಜನರ ಬಗ್ಗೆ ಮತ್ತು ಅಧಿಕಾರದಲ್ಲಿರುವವರ ಬಗ್ಗೆ ಉಚ್ಚ ವರ್ಗದವರು ಹೊಂದಿರುವ ಮನೋಭಾವದಲ್ಲಿ ಕಂಡುಬರುವ ಭಿನ್ನತೆಯು ಪಾಶ್ಚಿಮಾತ್ಯ ದೇಶಗಳಿಗಿಂತ ಭಿನ್ನವೇನಲ್ಲ. ಆದ್ದರಿಂದ, ನ್ಯಾಯಾಂಗವು ಕಾರ್ಯಾಂಗಕ್ಕೆ ತಲೆಬಾಗುವ ಪ್ರವೃತ್ತಿಯನ್ನು ಕೇವಲ ಜಾತಿ ವ್ಯವಸ್ಥೆಯ ತಳದಲ್ಲಿರುವಂಥಹ ಪರಂಪರಾಗತ ಊಳಿಗಮಾನ್ಯ ಸಮಾಜದ ಮೌಲ್ಯಗಳನ್ನು ಉಲ್ಲೇಖಿಸುವ ಮೂಲಕ ವಿವರಿಸಲಾಗದು.

ಆದರೆ, ಪಶ್ಚಿಮದ ಅನೇಕ ದೇಶಗಳಲ್ಲಿ ಸಂಭವಿಸಿದ ಆಮೂಲಾಗ್ರ ಬೂರ್ಜ್ವಾ ಕ್ರಾಂತಿಗಳು ಪರಂಪರಾಗತ ಊಳಿಗಮಾನ್ಯ ಮೌಲ್ಯಗಳಿಗೆ ಒಂದು ಬಲವಾದ ಹೊಡೆತ ಕೊಟ್ಟ ಪರಿಣಾಮವಾಗಿ ವ್ಯಕ್ತಿ ವ್ಯಕ್ತಿಗಳ ನಡುವಿನ ಸಮಾನತೆಯ ಬಗ್ಗೆ ಮತ್ತು ಆ ಮೂಲಕ ವ್ಯಕ್ತಿಗತ ಹಕ್ಕುಗಳ ಪಾವಿತ್ರತೆಯ ಬಗ್ಗೆ ಮೇಲ್ವರ್ಗದವರಲ್ಲಿ ಒಂದು ಹೆಚ್ಚು ವ್ಯಾಪಕವಾದ ನಂಬಿಕೆಯನ್ನು ಹುಟ್ಟಿಸಿದವು. ವ್ಯಕ್ತಿ ವ್ಯಕ್ತಿಗಳ ನಡುವಿನ ಸಮಾನತೆಯ ವಿಚಾರಗಳು ವ್ಯಾಪಕ ಜನಮನ್ನಣೆ ಪಡೆದ ಪರಿಣಾಮವಾಗಿ ಇಂಗ್ಲೆಂಡ್ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿ ಆಡಳಿತ ನಡೆಸುತ್ತಿದ್ದ ರಾಜರನ್ನೇ ಗಲ್ಲಿಗೇರಿಸಿದ ಘಟನೆಗಳಿಗೂ ಬೂರ್ಜ್ವಾ ಕ್ರಾಂತಿಗಳು ಸಾಕ್ಷಿಯಾಗಿವೆ. ಸಾಮಾಜಿಕ ಮತ್ತು ರಾಜಕೀಯ ಸಮಾನತೆಯ ಬೂರ್ಜ್ವಾ ವಿಚಾರಗಳು ಭಾರತದ ಮೇಲ್ವರ್ಗದೊಳಗೆ ಅಂತಹ ಪ್ರಮಾಣದಲ್ಲಿ ಬಲಗೊಳ್ಳಲಿಲ್ಲ ಮತ್ತು ಬೂರ್ಜ್ವಾ ವಿಚಾರಗಳು ಭಾರತದಲ್ಲಿ ಆರ್ಥಿಕ ಸಮಾನತೆಯ ವರೆಗೆ ಹೋಗುವುದೇ ಇಲ್ಲ.

ಆದುದರಿಂದ, ಸ್ವಾತಂತ್ರ್ಯೋತ್ತರ ಭಾರತದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಸಂವಿಧಾನದ ಅಡಿಯಲ್ಲಿ ಜನರು ಅನುಭವಿಸುವ ಹಕ್ಕುಗಳು, ಅವುಗಳ ರಕ್ಷಣೆಗೆ ನ್ಯಾಯಾಂಗವು ಬಾರದೇ, ಕಸಿದುಕೊಳ್ಳಲ್ಪಡುವ ಅಪಾಯವನ್ನು ಸದಾ ಎದುರಿಸುತ್ತಿರುತ್ತವೆ. ಜನರ ಹಕ್ಕುಗಳನ್ನು ಮೊಟಕುಗೊಳಿಸುವುದನ್ನೇ ಒಂದು ಸಹಜ ಪ್ರವೃತ್ತಿಯಾಗಿಯೇ ಹೊಂದಿರುವ ನವ-ಫ್ಯಾಸಿಸ್ಟ್ ಆಳ್ವಿಕೆಯ ಅಡಿಯಲ್ಲಂತೂ ಈ ಅಪಾಯವು ಎಷ್ಟೋ ಪಟ್ಟು  ಹೆಚ್ಚಿರುತ್ತದೆ ಎಂಬುದನ್ನು ಹೇಳುವ ಅಗತ್ಯವೇ ಇಲ್ಲ. ಆದ್ದರಿಂದ, ಇಂದು ಭಾರತದಲ್ಲಿ ನಡೆಯುವ ಹೋರಾಟವು, ಒಂದು ನಿರ್ಣಾಯಕ ಅರ್ಥದಲ್ಲಿ, ಜನರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯ ಸಲುವಾಗಿಯೇ ಆಗಿರುತ್ತದೆ ಮತ್ತು ಈ ಹೋರಾಟವು ಸಮಾಜದ ಬಗ್ಗೆ ನ್ಯಾಯಾಂಗವು ಹೊಂದಿರುವ  ಗ್ರಹಿಕೆಯಲ್ಲಿ ಜಾತಿ ಶ್ರೇಣೀಕರಣದ ಮಟ್ಟವನ್ನು ಅದು ತಗ್ಗಿಸಿಕೊಳ್ಳುವಂತೆ ಮಾಡುವ  ಹೋರಾಟವನ್ನೂ ಒಳಗೊಂಡಿದೆ. ಭಾರತದಲ್ಲಿ

ನ್ಯಾಯಾಂಗದ ತಲ್ಲಣಕಾರೀ ನಿಲುವು

ಈ ಅಂಶವನ್ನು ಆಳುವವರು ಜನರ ಹಕ್ಕುಗಳನ್ನು ಕಸಿದುಕೊಂಡ ಇತ್ತೀಚಿನ ಎರಡು ನಿದರ್ಶನಗಳು ಸ್ಪಷ್ಟಪಡಿಸುತ್ತವೆ. ಮೊದಲನೆಯದು ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯ ರದ್ದತಿಗೆ ಸಂಬಂಧಿಸಿದೆ. ಸಂಸತ್ತಿನ ಒಂದು ಸರ್ವಾನುಮತದ ನಿರ್ಣಯದ ಮೂಲಕ (ಸಂವಿಧಾನ ತಿದ್ದುಪಡಿಯ ಮೂಲಕವಲ್ಲದಿದ್ದರೂ)ಅಂಗೀಕಾರ ಪಡೆದ ಈ ಯೋಜನೆಯು ಬೇಡಿಕೆಯನ್ನನುಸರಿಸಿ 100 ದಿನಗಳ ಕೆಲಸದ ಖಾತರಿಯನ್ನು ಭಾರತದ ಪ್ರತಿ ಗ್ರಾಮೀಣ ಕುಟುಂಬಕ್ಕೂ ಒದಗಿಸಿತ್ತು. ಆದರೆ ಲೋಕಸಭೆಯಲ್ಲಿ ಒಂದು ದಿನ ಯಾವುದೇ ಚರ್ಚೆ ಇಲ್ಲದೆ ಕೇವಲ ಧ್ವನಿ ಮತದ ಮೂಲಕ ಈ ಹಕ್ಕನ್ನು ಕಸಿದುಕೊಳ್ಳಲಾಯಿತು. ಎರಡನೆಯ ನಿದರ್ಶನವು ಮುಖ್ಯ ಚುನಾವಣಾ ಆಯುಕ್ತರು ಬರೋಬ್ಬರಿ 13 ಕೋಟಿ ಮತದಾರರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ನಡೆಸಿದ ಪ್ರಯತ್ನಕ್ಕೆ ಸಂಬಂಧಿಸಿದೆ. ಇದು ಯಾವುದೇ  ಪ್ರಜಾಪ್ರಭುತ್ವದ ತಳಹದಿಯಾಗಿರುವ ಸಾಂವಿಧಾನಿಕ ಭರವಸೆ ಪಡೆದಿರುವ ಆಧಾರಭೂತ ಹಕ್ಕನ್ನು ರದ್ದು ಮಾಡುವ ಪ್ರಯತ್ನ. ಭಾರತದ ಇಂದಿನ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತರು. ಈ ಪ್ರಯತ್ನವು ಸಾಂವಿಧಾನಿಕವಾಗಿ ಖಾತ್ರಿಪಡಿಸಿದ ಒಂದು ಮೂಲಭೂತ ಹಕ್ಕಿನ ಉಲ್ಲಂಘನೆಯೂ ಹೌದು. ಇಂತಹ ರದ್ದತಿಗಳ ಹಿಂದೆ ಅಡಕವಾಗಿರುವ ಒಂದು ಭಾವನೆಯೆಂದರೆ, ಜನರು ತಮ್ಮ ಹಕ್ಕುಗಳನ್ನು ಆಗ್ರಹಿಸುವ  ಬದಲು ತಮಗೆ ಏನನ್ನು ಕೊಡಲಾಗುತ್ತದೆಯೋ ಅದೇ ತಮ್ಮ ಭಾಗ್ಯ ಎಂದು ಕೃತಜ್ಞರಾಗಿರಬೇಕು ಎಂಬುದು. ಆದರೆ, ಈ ಎರಡೂ ಪ್ರಕರಣಗಳಲ್ಲೂ ಜನರ ಹಕ್ಕುಗಳನ್ನು ರಕ್ಷಿಸಲು ನ್ಯಾಯಾಂಗವು ಮಧ್ಯಪ್ರವೇಶಿಸಲಿಲ್ಲ ಎಂಬುದು ಈ ಎರಡು ವಿದ್ಯಮಾನಗಳಲ್ಲಿರುವ ಒಂದು ಮಹತ್ವದ ಸಂಗತಿ.

ನ್ಯಾಯಾಂಗದ ನಿಲುವು ಒಂದು ಅತ್ಯಂತ ತಲ್ಲಣಗೊಳಿಸುವ ರೀತಿಯಲ್ಲಿ ವ್ಯಕ್ತಗೊಂಡಿರುವುದನ್ನು ಪಶ್ಚಿಮ ಬಂಗಾಳದ ಅಕ್ಟೋಬರ್‌ ೬ರ ಉಪಚುನಾವಣೆಗಳಲ್ಲಿ ಮತದಾರರನ್ನು ಅವರ ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸಿದ ಪ್ರಕರಣದಲ್ಲಿ ಕಾಣಬಹುದು. ಇವು ಕೇವಲ ಉಪಚುನಾವಣೆಗಳಾಗಿರುವುದರಿಂದ, ಮತದಾನದ ಹಕ್ಕಿನ ವಂಚನೆಗೆ ಸಂಬಂಧಿಸಿದ ದೂರುಗಳ ವಿಚಾರಣೆಯನ್ನು ನ್ಯಾಯಾಲಯವು ಯಾವುದೇ ಬಹಳ ಆತುರದಲ್ಲಿ ಕೈಗೆತ್ತಿಕೊಳ್ಳುವ ಅಗತ್ಯವಿಲ್ಲ ಎಂಬ ನಿಲುವನ್ನು ಸುಪ್ರೀಂ ಕೋರ್ಟ್ ತೆಗೆದುಕೊಂಡಿತು. ಅಂದರೆ, ಉಪಚುನಾವಣೆಗಳಿಗೆ ಹೆಚ್ಚಿನ ಮಹತ್ವ ಇಲ್ಲ ಎಂದಾಗುತ್ತದೆ. ಮೊದಲನೆಯದಾಗಿ, ಇದು ನಿಜವಲ್ಲ, ಏಕೆಂದರೆ, ಕೆಲವೇ ಕೆಲವು ದಿನಗಳ ಹಿಂದೆ, ಬ್ರಿಟನ್‌ನಲ್ಲಿ ನಡೆದ ಒಂದು ಉಪಚುನಾವಣೆಯ ಫಲಿತಾಂಶವೇ ಆ ದೇಶದ ಪ್ರಧಾನ ಮಂತ್ರಿಯ ಬದಲಾವಣೆಗೆ ಕಾರಣವಾಗಿತ್ತು. ಜೊತೆಗೆ, ಜನರು ಸಾಂವಿಧಾನಿಕವಾಗಿ ತಮಗೆ ಸಲ್ಲಬೇಕಾದ ಹಕ್ಕುಗಳನ್ನು ಆಗ್ರಹಿಸುವ ಬದಲು, ತಮಗೆ ಕೊಟ್ಟಿರುವಷ್ಟು ಮಟ್ಟಿನ ಹಕ್ಕುಗಳೊಂದಿಗೆ ತೃಪ್ತಿಪಟ್ಟುಕೊಳ್ಳಬೇಕು ಎಂದು ನಿರೀಕ್ಷಿಸುವ ನ್ಯಾಯಾಂಗದ ಮನೋಭಾವ ಇದರಲ್ಲಿ ಬಯಲಾಗುತ್ತದೆ.

ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕು ಎಂದಾದರೆ, ಅದಕ್ಕಾಗಿ ನಡೆಯುವ ಹೋರಾಟವು, ನ್ಯಾಯಾಂಗವು ಸದ್ಯಕ್ಕೆ ತಳೆದಿರುವ ಧೋರಣೆಯನ್ನು ಹಾಗೆಯೇ ಒಪ್ಪಿಕೊಳ್ಳುವುದರ ಬದಲು, ನ್ಯಾಯಾಂಗವು ಸಮಾಜದಲ್ಲಿ ಪರಂಪರಾಗತ ಶ್ರೇಣೀಕೃತ ಗ್ರಹಿಕೆಯನ್ನು ಪ್ರಜ್ಞಾಪೂರ್ವಕವಾಗಿ ಮೀರಿ ಹೋಗುವ ಅಗತ್ಯದ ಬಗ್ಗೆ  ಅದನ್ನು ಸಂವೇದನಾಶೀಲಗೊಳಿಸುವ ಒಂದು ಹೋರಾಟವನ್ನೂ  ಒಳಗೊಂಡಿರಬೇಕು. ಭಾರತದಲ್ಲಿ

ವ್ಯಂಗ್ಯಚಿತ್ರ ಕೃಪೆ: ಮಂಜುಲ್‌, ಫೇಸ್‌ಬುಕ್

ಇದನ್ನೂ ನೋಡಿ : ಅಕ್ಟೋಬರ್ 23ಕ್ಕೆ ಇಡೀ ದೇಶವೇ ಜಂತರ್ ಮಂತರ್? ಲಕ್ಷಾಂತರ ಜನ ಬೀದಿಗಿಳಿಯುತ್ತಿರುವುದು ಏಕೆ? Janashakthi Media

Donate Janashakthi Media

Leave a Reply

Your email address will not be published. Required fields are marked *