“ವ್ಯವಸ್ಥೆಯನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಒಂದು ಅತ್ಯಗತ್ಯ ಅಂಶ. ಈ ದೇಶವನ್ನು ಉತ್ತಮಗೊಳಿಸಲು ಅದನ್ನು ಮುಂದುವರಿಸಬೇಕು. ”
ದಿಲ್ಲಿ ಪತ್ರಕರ್ತರ ಸಂಘ (ಡಿಯುಜೆ) ದೇಶದ ನಿರುದ್ಯೋಗಿ ಯುವಕರ ಕುರಿತು ದೇಶದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಸೂರ್ಯಕಾಂತ್ ಅವರ ಇತ್ತೀಚಿನ ಟಿಪ್ಪಣಿಗಳು ಅಂಜಿಕೆ ಉಂಟುಮಾಡಿವೆ ಎಂದು ಹೇಳಿದೆ. ಅವರು ತಮ್ಮ ಮುಂದೆ ವಾದಿಸುತ್ತಿದ್ದ ವಕೀಲರಿಗೆ, ಇಂದು ಅನೇಕ ನಿರುದ್ಯೋಗಿ ಜನರು ಜಿರಳೆಗಳು ಎಂದು ಹೇಳಿರುವುದಾಗಿ ವರದಿಯಾಗಿದೆ. ಸಿಜೆಐ, “ಸಮಾಜದಲ್ಲಿ ಈಗಾಗಲೇ ವ್ಯವಸ್ಥೆಯ ಮೇಲೆ ದಾಳಿ ಮಾಡುವ ಪರಾವಲಂಬಿಗಳು ಇದ್ದಾರೆ, ನೀವು ಅವರೊಂದಿಗೆ ಕೈಜೋಡಿಸಲು ಬಯಸುತ್ತೀರಾ? ಯುವಜನರು ಜಿರಳೆಗಳಂತೆ ಇದ್ದಾರೆ, ಅವರಿಗೆ ಯಾವುದೇ ಉದ್ಯೋಗ ಸಿಗುವುದಿಲ್ಲ ಮತ್ತು ವೃತ್ತಿಯಲ್ಲಿ ಯಾವುದೇ ಸ್ಥಾನವಿಲ್ಲ. ಅವರಲ್ಲಿ ಕೆಲವರು ಮಾಧ್ಯಮಗಳಾಗುತ್ತಾರೆ, ಕೆಲವರು ಸಾಮಾಜಿಕ ಮಾಧ್ಯಮಗಳಾಗುತ್ತಾರೆ, ಕೆಲವರು ಆರ್‌ಟಿಐ ಕಾರ್ಯಕರ್ತರಾಗುತ್ತಾರೆ, ಕೆಲವರು ಇತರ ಕಾರ್ಯಕರ್ತರಾಗುತ್ತಾರೆ ಮತ್ತು ಅವರು ಪ್ರತಿಯೊಬ್ಬರ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತಾರೆ…” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿರುದ್ಯೋಗಿ
ಇವು ಸಂಯಮವಿಲ್ಲದ ಟಿಪ್ಪಣಿಗಳು ಎಂದು ಹೇಳಿರುವ ಡಿಯುಜೆ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯವಸ್ಥೆಯನ್ನು ಸಕ್ರಿಯವಾಗಿ ಪ್ರಶ್ನಿಸುವವರ ಬಗ್ಗೆ ಅವರ ದುರದೃಷ್ಟಕರ ತಿರಸ್ಕಾರವನ್ನು ಬಿಂಬಿಸುತ್ತವೆ ಎಂದು ಹೇಳಿದೆ. ಸುಮಾರು ಆರು ತಿಂಗಳ ಹಿಂದೆ, ಅವರು ಕೈಗಾರಿಕಾ ಬೆಳವಣಿಗೆಯನ್ನು ಕುಂಠಿತಗೊಳಿಸಿಸುತ್ತವೆ ಮತ್ತು ಕಾರ್ಖಾನೆಗಳನ್ನು ಮುಚ್ಚಿಸುತ್ತವೆ ಎಂದು ಕಾರ್ಮಿಕ ಸಂಘಗಳನ್ನು ಟೀಕಿಸಿದ್ದರು. ಈಗ, ಬಲಿಪಶುಗಳ ಮೇಲೆ ಆರೋಪ ಮಾಡುವುದನ್ನು ಮುಂದುವರೆಸುತ್ತಾ, ಅವರು ದೇಶದ ನಿರುದ್ಯೋಗಿ ಯುವಕರ ಮೇಲೆ ತಮ್ಮ ಬಂದೂಕನ್ನು ಗುರಿ ಮಾಡಿದ್ದಾರೆ. ಕೇಂದ್ರ ಸರ್ಕಾರದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ಪರಿಣಾಮವಾಗಿ, ಸರ್ಕಾರ ನಡೆಸಿದ ಸಮೀಕ್ಷೆಗಳ ಪ್ರಕಾರವೂ ನಿರುದ್ಯೋಗ ಬೆಳೆಯುತ್ತಿದೆ. ಇಂದು ಸಾಮಾಜಿಕ ಮಾಧ್ಯಮದಲ್ಲಿ ಇಷ್ಟೊಂದು ಜನರು ಸಕ್ರಿಯರಾಗಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ? ಬಹಳ ಸಂಖ್ಯೆಯಲ್ಲಿ ವೃತ್ತಿಪರ ಪತ್ರಕರ್ತರಿದ್ದಾರೆ ಎಂಬುದು ಸಿಜೆಐಗೆ ತಿಳಿದಂತಿಲ್ಲ. ಪತ್ರಿಕೆಗಳು ಮತ್ತು ಟಿವಿ ವಾಹಿನಿಗಳೆರಡರಲ್ಲೂ ದೊಡ್ಡ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಬಹುಪಾಲು ಕಾರ್ಪೊರೇಟ್ ಹಿತಾಸಕ್ತಿಗಳ ಒಡೆತನದಲ್ಲಿ ಮತ್ತು ಹತೋಟಿಯಲ್ಲಿವೆ, ಇವು ಪರವಾನಗಿಗಳು, ಜಾಹೀರಾತುಗಳು ಮತ್ತು ಇತರ ಪ್ರಯೋಜನಗಳಿಗಾಗಿ ಸರ್ಕಾರಕ್ಕೆ ಕಟಿಬದ್ಧವಾಗಿರುತ್ತವೆ. ಅವರು ವ್ಯವಸ್ಥೆಯನ್ನು ಎತ್ತಿಹಿಡಿಯುತ್ತಾರೆ, ಹೆಚ್ಚಾಗಿ ನೀತಿ, ಆಡಳಿತ ಮತ್ತು ಕಾರ್ಯಕ್ಷಮತೆಯ ಬಗ್ಗೆ ಅಧಿಕೃತ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತಾರೆ. ಆದರೆ ಸಾಮಾನ್ಯ ನಾಗರಿಕರು ಗ್ರಹಿಸುವ ಪರ್ಯಾಯ ವಾಸ್ತವವು ವಿಭಿನ್ನವಾಗಿದೆ ಎಂದು ಡಿಯುಜೆ ಮುಖ್ಯ ನ್ಯಾಯಾಧೀಶರ ಗಮನಕ್ಕೆ ತಂದಿದೆ. ನಿರುದ್ಯೋಗಿ
ಇದನ್ನೂ ಓದಿ : ಡಿಜಿಟಲ್ ಪ್ರತಿರೋಧ | ಹೊಸ ತಲೆಮಾರಿನ ಯುವಕರ ಹೊಸ ಹೋರಾಟದ ಭಾಷೆ
ಹಲವು ವರ್ಷಗಳ ವೃತ್ತಿಪರ ಅನುಭವ ಹೊಂದಿರುವ, ಅತ್ಯಂತ ಸಮರ್ಥ ಪತ್ರಕರ್ತರಾದ ಅನೇಕ ಮುಖ್ಯವಾಹಿನಿಯ ಪತ್ರಕರ್ತರು ಕಳೆದ ದಶಕದಲ್ಲಿ ಸರ್ಕಾರವನ್ನು ಅನುಸರಿಸಲು ಇಚ್ಛಿಸದ ಕಾರಣ ಅವರನ್ನು ವ್ಯವಸ್ಥೆಯಿಂದ ಹೊರದಬ್ಬಲಾಗಿದೆ. ಅವರಲ್ಲಿ ಹಲವರು ಡಿಯುಜೆ ಸದಸ್ಯರಾಗಿದ್ದಾರೆ. ಅವರನ್ನು ನಿರುದ್ಯೋಗಿಗಳಾಗಿ ಮಾಡಲಾಗಿದ್ದು, ಅವರು ಯುಟ್ಯೂಬ್ ಚಾನೆಲ್‌ಗಳು, ಫೇಸ್‌ಬುಕ್, ಇನ್ಸ್ಟಾಗ್ರಾಮ್ಮ ತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವೃತ್ತಿಪರ ಕೆಲಸವನ್ನು ಮುಂದುವರಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ಮುಖ್ಯವಾಹಿನಿಯು ಒದಗಿಸುವ ಸಂಪನ್ಮೂಲಗಳಿಲ್ಲದೆ, ಸ್ವತಂತ್ರ ಪತ್ರಕರ್ತರಾಗಿ ತಮ್ಮ ವೃತ್ತಿಯನ್ನು ಮುಂದುವರಿಸಲು ಅವರು ನಡೆಸಿರುವ ಹೋರಾಟಗಳಿಗಾಗಿ ಅವರು ಗೌರವಾರ್ಹರು, ಎಂದು ಡಿಯುಜೆ ಹೇಳಿದೆ.
ಮಾಧ್ಯಮದಲ್ಲಿನ ಗುತ್ತಿಗೆ ಉದ್ಯೋಗ ವ್ಯವಸ್ಥೆಯು ಅನೇಕ ವೃತ್ತಿಜೀವನದಲ್ಲಿ ಸಾಕಷ್ಟು ದೂರ ನಡೆದು ಬಂದಿರುವ ಪತ್ರಕರ್ತರನ್ನು ಮತ್ತು ಹಿರಿಯ ಪತ್ರಕರ್ತರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ಅವರು ಸಾಮಾಜಿಕ ಮಾಧ್ಯಮದ ಮೂಲಕ ಜೀವನೋಪಾಯವನ್ನು ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಇದಲ್ಲದೆ, ಅನೇಕ ಪತ್ರಿಕೋದ್ಯಮ ಶಾಲೆಗಳಿಂದ ಹೊರಬರುವ ಯುವಕರು ಸಾಮಾನ್ಯವಾಗಿ ಸ್ಥಿರವಾದ ಉದ್ಯೋಗವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರು ಸಾಮಾಜಿಕ ಮಾಧ್ಯಮದಲ್ಲಿ ಕೆಲಸ ಮಾಡುವ ಮೂಲಕ ವೃತ್ತಿಯಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಹೆಚ್ಚಿನ ಹಣದುಬ್ಬರ ಮತ್ತು ವ್ಯಾಪಕ ನಿರುದ್ಯೋಗದ ಸಮಯದಲ್ಲಿ ದೈನಂದಿನ ಬದುಕುಳಿಯಲು ಸೆಣಸುತ್ತಿರುವ ಸರಾಸರಿ ವ್ಯಕ್ತಿ, ವ್ಯವಸ್ಥೆಯನ್ನು ಪ್ರತಿನಿಧಿಸುವ ಮತ್ತು ಅದರಿಂದ ಪ್ರಯೋಜನ ಪಡೆಯುವವರಂತೆ ಸುಂದರ ಬಣ್ಣದ ಕನ್ನಡಕವನ್ನು ಧರಿಸಿರುವುದಿಲ್ಲ. ಸಾಮಾಜಿಕ ಮಾಧ್ಯಮವು ಹೆಚ್ಚಾಗಿ ಪ್ರತಿಬಿಂಬಿಸುವುದು ಮುಖ್ಯವಾಹಿನಿಯ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ವಿರೂಪಗೊಳಿಸುವ ಈ ವಾಸ್ತವವನ್ನೇ. ಇವು ಅಧಿಕಾರದಲ್ಲಿರುವವರನ್ನು ವಿಮರ್ಶಿಸುವ ವಿಭಿನ್ನ ಧ್ವನಿಗಳು ಮತ್ತು ದೃಷ್ಟಿಕೋನಗಳನ್ನು ನೀಡುತ್ತವೆ, ಆ ಅರ್ಥದಲ್ಲಿ ಸಾಮಾಜಿಕ ಮಾಧ್ಯಮವು ಪ್ರಜಾಪ್ರಭುತ್ವಕ್ಕೆ ಒಂದು ನಿಜವಾದ ವೇದಿಕೆಯಾಗಿದೆ. ನ್ಯಾಯಾಂಗದ ಅತ್ಯುನ್ನತ ವ್ಯಕ್ತಿಯಿಂದ ಅಂತಹ ಜನರು ಕಾರ್ಯಕರ್ತರು ಮತ್ತು ಜಿರಳೆಗಳಿಗಿಂತ ಉತ್ತಮರೇನಲ್ಲ ಎನ್ನುವುದು ಅತ್ಯಂತ ಕಳವಳಕಾರಿ ಎಂದು ದಿಲ್ಲಿ ಪತ್ರಕರ್ತರ ಸಂಘ ಹೇಳಿದೆ.
“ನ್ಯಾಯಾಂಗದಲ್ಲಿರುವವರು, ಎಲ್ಲಾ ಹಂತಗಳಲ್ಲಿಯೂ, ಸರಾಸರಿ ವ್ಯಕ್ತಿಗಳ ದೈನಂದಿನ ಹೋರಾಟಗಳ ಬಗ್ಗೆ, ಅವರು ನಿರುದ್ಯೋಗಿ ಮತ್ತು ಅರೆ-ಉದ್ಯೋಗಿ ಪತ್ರಕರ್ತರಿರಲಿ, ಅಥವಾ ಅರೆ-ಉದ್ಯೋಗಿ ವಕೀಲರಾಗಿರಲಿ, ಅವರಿಗೆ ಪರಾವಲಂಬಿಗಳು ಎಂದು ಹಣೆಪಟ್ಟಿ ಕಟ್ಟುವ ಬದಲು, ಅವರ ದೈನಂದಿನ ಹೋರಾಟಗಳ ಬಗ್ಗೆ ಸಹಾನುಭೂತಿ ಹೊಂದಿರಬೇಕೆಂದು ನಾವು ಆಗ್ರಹಿಸುತ್ತೇವೆ. ದೇಶದ ವಿವಿಧ ಪತ್ರಿಕೋದ್ಯಮ ಸಂಸ್ಥೆಗಳಲ್ಲಿ, ವಿವಿಧ ರಾಜ್ಯ ಮತ್ತು ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿ ಪಾಸಾಗಿ ಬರುತ್ತಿರುವ ಸಾವಿರಾರು ಮಾಧ್ಯಮ ವಿದ್ಯಾರ್ಥಿಗಳೊಂದಿಗೂ ನಾವು ನಿಲ್ಲುತ್ತೇವೆ. ಪತ್ರಕರ್ತರ ಅತ್ಯಂತ ಹಳೆಯ ವೃತ್ತಿಪರ ಸಂಘವಾಗಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರಿಗೆ ನಾವು ಹೇಳುವುದೇನೆಂದರೆ, ವ್ಯವಸ್ಥೆಯನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಒಂದು ಅತ್ಯಗತ್ಯ ಅಂಶವಾಗಿದೆ. ಈ ದೇಶವನ್ನು ಉತ್ತಮಗೊಳಿಸಲು ಅವರು ಅದನ್ನು ಮುಂದುವರಿಸಬೇಕು” ಎಂದು ದಿಲ್ಲಿ ಪತ್ರಕರ್ತರ ಸಂಗ ಈ ಸಂದರ್ಭದಲ್ಲಿ ಮನವಿ ಮಾಡಿದೆ.
ಇದನ್ನೂ ನೋಡಿ : ಗ್ರಾಮದ ನೀರು ವ್ಯವಸ್ಥೆ ಹೊತ್ತವರ ಬದುಕೇ ಅಸ್ಥಿರ; ನೀರಗಂಟಿಗಳ ಸಂಕಷ್ಟ Janashakthi Media
