ಗಂಗಾವತಿ: ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ಜಂತರ್ಮಂತರ್ನಿಂದ ಬಲವಂತವಾಗಿ ವಶಕ್ಕೆ ಪಡೆದಿರುವುದನ್ನು ಖಂಡಿಸಿ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ರದ್ದು, ನೀಟ್ ಪರೀಕ್ಷೆ ನಿಷೇಧ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಗಂಗಾವತಿ ತಾಲೂಕು ಸಮಿತಿ ಮಂಗಳವಾರ ಪ್ರತಿಭಟನೆ ನಡೆಸಿತು. ಬಳಿಕ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಸೋನಂ
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ಮೇ 3ರಂದು ನಡೆದ ನೀಟ್–ಯುಜಿ 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ರಾಜಸ್ಥಾನದಲ್ಲಿ ಸೋರಿಕೆಯಾಗಿದ್ದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸಲಾಗಿದೆ. ಈ ಬೆಳವಣಿಗೆಗಳಿಂದ ದೇಶದಲ್ಲಿ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಪರೀಕ್ಷೆಗಳ ನಿರ್ವಹಣೆಯಲ್ಲಿ ಎನ್ಟಿಎ ಸಂಪೂರ್ಣ ವಿಫಲವಾಗಿದೆ. ಈ ಹಿಂದೆಯೂ 89 ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, 48 ಪರೀಕ್ಷೆಗಳನ್ನು ಮರುನಡೆಸಲಾಗಿದೆ. ಹೀಗಾಗಿ ಅಸಮರ್ಥ ಎನ್ಟಿಎಯನ್ನು ತಕ್ಷಣ ರದ್ದುಪಡಿಸಿ, ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಸೋನಂ ವಾಂಗ್ಚುಕ್ ಅವರು ಕಳೆದ ಹಲವು ದಿನಗಳಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಶಾಂತಿಯುತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಅವರೊಂದಿಗೆ ಪ್ರಜಾಸತ್ತಾತ್ಮಕ ಸಂವಾದ ನಡೆಸುವ ಬದಲು ಕೇಂದ್ರ ಸರ್ಕಾರವು ಪೊಲೀಸ್ ಬಲಪ್ರಯೋಗದ ಮೂಲಕ ಹೋರಾಟವನ್ನು ಹತ್ತಿಕ್ಕಲು ಮುಂದಾಗಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಹೇಳಿದರು.
ಇದನ್ನೂ ಓದಿ :ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ‘ಘೋರ ಪಾಪ’; ಮೌನ ಮುರಿದ ಪ್ರಧಾನಿ ಮೋದಿ
ಜುಲೈ 20ರಂದು ನಡೆದ ‘ವಿದ್ಯಾರ್ಥಿಗಳ ಪಾರ್ಲಿಮೆಂಟ್ ಚಲೋ’ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗ ನಡೆಸಿರುವುದನ್ನೂ ಎಸ್ಎಫ್ಐ ತೀವ್ರವಾಗಿ ಖಂಡಿಸಿತು.
ಮನವಿಯಲ್ಲಿ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು, ಎನ್ಟಿಎ ರದ್ದುಪಡಿಸಬೇಕು, ನೀಟ್ ಪರೀಕ್ಷೆ ನಿಷೇಧಿಸಬೇಕು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು, ನೀಟ್ ಹಗರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲೂಕು ಅಧ್ಯಕ್ಷ ನಾಗರಾಜ್ ಯು., ಉಪಾಧ್ಯಕ್ಷ ಶರೀಫ್ ಎಂ.ಪಿ., ಜಂಟಿ ಕಾರ್ಯದರ್ಶಿ ದರ್ಶನ ಹೋಸ್ಕೆರ ಹಾಗೂ ವಿದ್ಯಾರ್ಥಿಗಳಾದ ಉಷಾ, ಪಾರ್ವತಿ, ನಂದಿತಾ, ಸಿಂಧೂ, ರಂಜನ್, ಸುಮಂತ, ನಂದೀಶ, ರಾಜಾಭಕ್ಷಿ ವಿನೋದ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ನೋಡಿ : LIC | ವಿಮಾ ಪಿಂಚಣಿದಾರರ ಸಂಘದ ಸರ್ವ ಸದಸ್ಯರ ಸಭೆ |AIIPA |ICPA
