ಆರ್ಥಿಕ ಅಭಿವೃದ್ಧಿ ಎಂದರೆ ಬರಿಯ ಜಿಡಿಪಿ ಬೆಳವಣಿಗೆಯಲ್ಲ

ಪ್ರೊ. ಪ್ರಭಾತ್‌ ಪಟ್ನಾಯಕ್‌

ಆರ್ಥಿಕ ಅಭಿವೃದ್ಧಿಯನ್ನು ಜಿಡಿಪಿ ಬೆಳವಣಿಗೆಯೊಂದಿಗೆ ಗುರುತಿಸುವುದು  ನವ-ಉದಾರವಾದಿ ಬಂಡವಾಳಶಾಹಿಯ ಸಿದ್ಧಾಂತವಷ್ಟೇ.  ಇದನ್ನು ಬಹುಪಾಲು ಜನರ ಹಿದೃಷ್ಟಿಯಿಂದ  ಮಾತ್ರವಲ್ಲ, ಸಾಂಪ್ರದಾಯಿಕ ರಾಜಕೀಯ ಅರ್ಥಶಾಸ್ತ್ರದ ದೃಷ್ಟಿಯಿಂದಲೂ, ಸಮರ್ಥಿಸಲಾಗದು. ಆದರೂ ಜನರನ್ನು ರಾಜಕೀಯವಾಗಿ ಸಬಲೀಕರಣಗೊಳಿಸಬೇಕೆಂದು ವಿಧಿಸಿರುವ ಸಂವಿಧಾನದ ಅಡಿಯಲ್ಲಿಯೇ  ಜನರನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ “ಯಶಸ್ವಿ”ಯಾಗಿದೆ ಎನ್ನಲಾದ  ಅರ್ಥವ್ಯವಸ್ಥೆಯನ್ನು ಸ್ಥಾಪಿಸುತ್ತಿರುವ  ವೈರುಧ್ಯವನ್ನು ನಾವಿಂದು ಕಾಣುತ್ತಿದ್ದೇವೆ. ಬಿ.ಆರ್. ಅಂಬೇಡ್ಕರ್‌ ಸಂವಿಧಾನವನ್ನು ಅಂಗೀಕಾರಕ್ಕಾಗಿ ಮಂಡಿಸಿದ ಸಂದರ್ಭದಲ್ಲಿ ಸಂವಿಧಾನ ಸಭೆಗೆ ನೀಡಿದ ತಮ್ಮ ಅಂತಿಮ ಭಾಷಣದಲ್ಲಿ ಈ ವೈರುಧ್ಯದತ್ತ ಗಮನ ಸೆಳೆದಿದ್ದರು ಮತ್ತು ಅದನ್ನು ನಿವಾರಿಸದಿದ್ದರೆ ರಾಜಕೀಯ ಪ್ರಜಾಪ್ರಭುತ್ವವು ಗಂಡಾಂತರಕ್ಕೊಳಗಾಗುತ್ತದೆ ಎಂದು ಎಚ್ಚರಿಸಿದ್ದರು.ವೈರುಧ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಇಡಬೇಕಾದ ಮೊಟ್ಟ ಮೊದಲ ಹೆಜ್ಜೆಯೆಂದರೆ, ಆರ್ಥಿಕ ಅಭಿವೃದ್ಧಿಯ ಒಂದು ಸೂಕ್ತ ಪರಿಕಲ್ಪನೆಯನ್ನು ದೇಶದ ಮುಂದೆ ಸಾರ್ವಜನಿಕ ಚರ್ಚೆಗೆ ಮಂಡಿಸುವುದು.
ಅನು:ಕೆ.ಎಂ.ನಾಗರಾಜ್

1776ರಲ್ಲಿ ಬರೆದ ತಮ್ಮ ಮೇರು ಕೃತಿಯಲ್ಲಿ ಸಂಪತ್ತಿನ ಹೆಚ್ಚಳವನ್ನು ಅದು ಒಂದು ರಾಷ್ಟ್ರದ ನೀತಿ-ಆಶಯ ಎಂದು ಬಗೆದ ಆಡಮ್ ಸ್ಮಿತ್‌, ವಿವಿಧ ವರ್ಗಗಳ ನಡುವಿನ ವರಮಾನ ಹಂಚಿಕೆಯ ಪ್ರಶ್ನೆ ಅಪ್ರಸ್ತುತ ಎಂದೇನೂ ಹೇಳಲಿಲ್ಲ. ಅದೇ ರೀತಿಯಲ್ಲಿ ಡೇವಿಡ್ ರಿಕಾರ್ಡೊ, ಕಾರ್ಮಿಕರ ಜೀವನ ಪರಿಸ್ಥಿತಿಗಳಲ್ಲಿನ ಸುಧಾರಣೆಯ ಬಗ್ಗೆ ಕಾಳಜಿ ಹೊಂದಿರಲಿಲ್ಲ ಎಂದೇನೂ ಅಲ್ಲ. ಆದರೆ, ಸ್ಮಿತ್ ಮತ್ತು ರಿಕಾರ್ಡೊ ಈ ಇಬ್ಬರೂ ಒಂದು ರಾಷ್ಟ್ರದ ವರಮಾನದ ಗಾತ್ರವನ್ನು ನಿರ್ಧರಿಸುವ ಸಂಪತ್ತಿನ (ಬಂಡವಾಳ ದಾಸ್ತಾನಿನ) ಗಾತ್ರದ ಮೇಲೆ ಮಾತ್ರವೇ ಗಮನಹರಿಸಿದರು. ಏಕೆಂದರೆ, ವರಮಾನದ ಹಂಚಿಕೆಯು ನೀತಿಗೆ ಸಂಬಂಧಿಸಿದ ಒಂದು ವಿಷಯವಲ್ಲ ಎಂಬ ದೃಷ್ಟಿಯನ್ನು ಅವರು ಹೊಂದಿದ್ದರು. ಹಾಗೆ ನೋಡಿದರೆ, ಕೂಲಿಯು ಸಾಮಾನ್ಯವಾಗಿ ಜೀವನಾಧಾರ ಮಟ್ಟಕ್ಕೆ ಹೊಂದಿಕೊಂಡಿದೆ ಎಂಬುದಾಗಿ ಕಂಡ ಸಾಂಪ್ರದಾಯಿಕ ರಾಜಕೀಯ ಅರ್ಥಶಾಸ್ತ್ರವು, ಮಾಲ್ಥೂಸ್‌ ಪ್ರತಿಪಾದಿಸಿದ ಜನಸಂಖ್ಯಾ ಸಿದ್ಧಾಂತದ ಪ್ರಕಾರವಾಗಿ ಜೀವನಾಧಾರ ಮಟ್ಟವನ್ನು ಮೀರಿದ  ಕೂಲಿಯ ಹೆಚ್ಚಳವು ಜನಸಂಖ್ಯಾ ಬೆಳವಣಿಗೆಯನ್ನು ಹೆಚ್ಚಿಸುವುದರಿಂದ, ಬೇಡಿಕೆಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿರುವ ಶ್ರಮ ಶಕ್ತಿಯ ಪೂರೈಕೆಯು ಕೂಲಿಯನ್ನು ಜೀವನಾಧಾರ ಮಟ್ಟಕ್ಕೆ ತರುತ್ತದೆ ಎಂದು ನಂಬಿತ್ತು. ಆದ್ದರಿಂದ, ವರಮಾನದ  ಹಂಚಿಕೆಯು ದುಡಿಯುವ ಜನರು ಅನುಸರಿಸುವ ರೂಢಿಗಳು ಮತ್ತು ಜೀವನ ವಿಧಾನಗಳನ್ನು ಅವಲಂಬಿಸಿ ಉತ್ತಮಗೊಳ್ಳುತ್ತಿತ್ತು ಮತ್ತು ಅದು ಪ್ರಭುತ್ವ ನೀತಿಯ ಒಂದು ವಿಷಯವಾಗಿರಲಿಲ್ಲ. ಪ್ರಭುತ್ವವು ಬಂಡವಾಳದ ಹೆಚ್ಚಳವನ್ನು ಮಾತ್ರ ಸುಗಮಗೊಳಿಸುತ್ತಿತ್ತು ಮತ್ತು ಆ ಮೂಲಕ ವರಮಾನವೂ ಹೆಚ್ಚುತ್ತಿತ್ತು.

ಆದ್ದರಿಂದ, ವರಮಾನ ಹಂಚಿಕೆಯ ಬಗ್ಗೆ ಪ್ರಭುತ್ವವು ಏನನ್ನೂ ಮಾಡಲಾರದು ಎಂದು ನಂಬಿದ ಸಾಂಪ್ರದಾಯಿಕ ಅರ್ಥಶಾಸ್ರಜ್ಞರು ಸಂಪತ್ತು ಮತ್ತು ವರಮಾನದ ವಿಷಯದಲ್ಲಿ ಮಗ್ನರಾದರು. ವರಮಾನ ಹಂಚಿಕೆಯ ಮೇಲೆ ಪರಿಣಾಮ ಬೀರಲು ಸಾಧ್ಯವಿದ್ದರೂ ಸಹ ಪ್ರಭುತ್ವವು ವರಮಾನದ ಗಾತ್ರದ ಬಗ್ಗೆ ಮಾತ್ರವೇ  ಕಾಳಜಿ ವಹಿಸಬೇಕು, ಅದೆಷ್ಟು ಎಂದರೆ, ಅದು ಒಟ್ಟಾರೆ ವರಮಾನವನ್ನು ವೃದ್ಧಿಸುವ ಸಾಧ್ಯತೆಯನ್ನು ಒಂದು ವೇಳೆ ಹೆಚ್ಚಿಸಿದರೆ, ವರಮಾನ ಹಂಚಿಕೆಯು ಹದಗೆಡುವಂತೆ ಮಾಡಬೇಕು ಎಂಬ ದೃಷ್ಟಿಕೋನವು ಇತ್ತೀಚಿನದು. ವಾಸ್ತವವಾಗಿ ಇದು ನವ-ಉದಾರವಾದಿ ಬಂಡವಾಳಶಾಹಿಯ ಸಿದ್ಧಾಂತವನ್ನು ಅಭಿವ್ಯಕ್ತಿಸುತ್ತದೆ ಮತ್ತು ಅದರ ಬೇರುಗಳು ಸಾಂಪ್ರದಾಯಿಕ ಅರ್ಥಶಾಸ್ರದಲ್ಲಿದೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ.

ನವ-ಉದಾರವಾದದ ಅಡಿಯಲ್ಲಿ ಶ್ರಮವು ನಿರ್ದಿಷ್ಟ ದೇಶಗಳಿಗೆ ಸೀಮಿತವಾಗಿಯೇ ಉಳಿದಿದ್ದರೂ, ಬಂಡವಾಳವು ಜಾಗತೀಕರಣಗೊಂಡಿರುವುದರಿಂದ, ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾಗುವ ಬಂಡವಾಳದ ಬಯಕೆಯ ಮೇರೆಗೆ ಅದಕ್ಕೆ  ಇತರ ದೇಶಗಳ ಹೋಲಿಕೆಯಲ್ಲಿ ಹೆಚ್ಚು ಆಕರ್ಷಕವಾಗಿರುವ ವಾತಾವರಣವನ್ನು ಸೃಷ್ಟಿಸಬೇಕಾಗುತ್ತದೆ ಮತ್ತು ಕೆಳ ಮಟ್ಟದ ಕೂಲಿಯು ಈ ಹೆಚ್ಚು ಆಕರ್ಷಕ ಪರಿಸರದ ಒಂದು ಪ್ರಮುಖ ಅಂಶವಾಗುತ್ತದೆ. ಆದ್ದರಿಂದ ನವ-ಉದಾರವಾದಿ ಬಂಡವಾಳಶಾಹಿಯನ್ನು ಬೆನ್ನಟ್ಟಿಹೋಗುವ ದೇಶಗಳು ಉನ್ನತ ಜಿಡಿಪಿ ಬೆಳವಣಿಗೆಯನ್ನು ಸಾಧಿಸುವುದಕ್ಕಾಗಿ ಕಾರ್ಮಿಕರ ಕೂಲಿಯನ್ನು ಇಳಿಕೆ ಮಾಡುವ ಮತ್ತು ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕುವ ಕಾರ್ಮಿಕ ವಿರೋಧಿ ನೀತಿಯನ್ನು ತಪ್ಪದೇ ಅನುಸರಿಸುತ್ತವೆ. ಆದ್ದರಿಂದ ಸಾಂಪ್ರದಾಯಿಕ ರಾಜಕೀಯ ಅರ್ಥಶಾಸ್ತ್ರದ ದೃಷ್ಟಿಯಿಂದಲೇ ಆಗಲಿ, ಅಥವಾ ಬಹುಪಾಲು ಜನರ ಹಿತದೃಷ್ಟಿಯಿಂದಲೂ, ಆರ್ಥಿಕ ಅಭಿವೃದ್ಧಿಯನ್ನು ಜಿಡಿಪಿ ಬೆಳವಣಿಗೆಯ ಮಾನದಂಡದ ಮೂಲಕ ಮಾತ್ರವೇ ವ್ಯಾಖ್ಯಾನಿಸುವುದನ್ನು ಸಮರ್ಥಿಸಲಾಗದು. ಇದು ಕೇವಲ ಏಕಸ್ವಾಮ್ಯ ಬಂಡವಾಳದ ಸಿದ್ಧಾಂತವನ್ನು ಮತ್ತು ಈ ಕಾರಣದಿಂದ ಏಕಸ್ವಾಮ್ಯ ಬಂಡವಾಳದ ಪಾರಮ್ಯದಿಂದ ಕೂಡಿರುವ ನವ-ಉದಾರವಾದಿ ಬಂಡವಾಳಶಾಹಿಯನ್ನು ಪ್ರತಿನಿಧಿಸುತ್ತದೆಯಷ್ಟೇ.

ಸೈದ್ಧಾಂತಿಕ ಪ್ರತಿ-ಕ್ರಾಂತಿಯ ತಿರುಳು

ಈ ಸೈದ್ಧಾಂತಿಕ ನಿಲುವನ್ನು, ಅಂದರೆ ಆರ್ಥಿಕ ಅಭಿವೃದ್ಧಿಯನ್ನು ಜಿಡಿಪಿ ಬೆಳವಣಿಗೆಯೊಂದಿಗೆ ಗುರುತಿಸುವ ಕ್ರಮವನ್ನು, ಬ್ರೆಟನ್ ವುಡ್ಸ್ ಸಂಸ್ಥೆಗಳಾದ ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ ಸತತವಾಗಿ ಪ್ರೋತ್ಸಾಹಿಸಿದವು ಮತ್ತು ಇಂತಹ ನಿಲುವಿನ ಈ ಉತ್ಕರ್ಷ ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಉಂಟಾದ ಒಂದು ಸೈದ್ಧಾಂತಿಕ ಪ್ರತಿ-ಕ್ರಾಂತಿಯ ತಿರುಳು. ಆದರೆ, ಇದನ್ನು ಸಾಂಪ್ರದಾಯಿಕ ಅರ್ಥಶಾಸ್ತ್ರವೇ ಬೋಧಿಸಿದೆ ಎಂಬ ಒಂದು ತಪ್ಪು ಕಲ್ಪನೆಯಲ್ಲಿ ಅನೇಕ ಪ್ರಗತಿಪರ ಅರ್ಥಶಾಸ್ತ್ರಜ್ಞರೂ ಸಹ ಈ ಬಲೆಗೆ ಬಿದ್ದರು ಎಂಬುದು ಒಂದು ದುರಂತವೇ ಸರಿ.

ಆದ್ದರಿಂದ, ಆರ್ಥಿಕ ಅಭಿವೃದ್ಧಿಯನ್ನು ಜಿಡಿಪಿ ಬೆಳವಣಿಗೆಯೊಂದಿಗೆ ಗುರುತಿಸುವ ಕ್ರಮವನ್ನು ತಿರಸ್ಕರಿಸುವುದು ಯಾವುದೇ ವಸ್ತುನಿಷ್ಠ ವಿಮರ್ಶಾತ್ಮಕ ಚಿಂತನೆಯ ಮೊದಲ ಹೆಜ್ಜೆಯಾಗಿರಬೇಕಾಗುತ್ತದೆ. ಇದು ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ನಂತಹ ಸಂಸ್ಥೆಗಳು ಮಾತ್ರವಲ್ಲದೆ, ತಮ್ಮ ದೇಶಗಳ ಆರ್ಥಿಕ “ಯಶಸ್ಸನ್ನು” ನಿರ್ಣಯಿಸುವ ಜಾಗತಿಕ ದಕ್ಷಿಣದ ಸರ್ಕಾರಗಳೂ ಸಹ, ಈ ಮಾನದಂಡವನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂಬುದನ್ನು ಸೂಚಿಸುತ್ತದೆ.

ನವ-ಉದಾರವಾದಿ ಯುಗದ ಭಾರತದ ಸರ್ಕಾರಗಳು ಆರ್ಥಿಕ “ಯಶಸ್ಸು”ನ್ನು ನಿರ್ಣಯಿಸಲು ಜಿಡಿಪಿ ಬೆಳವಣಿಗೆಯನ್ನು ಏಕಮಾತ್ರ ಮಾನದಂಡವಾಗಿ ಬಳಸಿಕೊಂಡಿವೆ ಮತ್ತು ಹಿಂದಿನ ನಿಯಂತ್ರಣ ನೀತಿಗಳ ಆಳ್ವಿಕೆಗೆ ಹೋಲಿಸಿದರೆ ನವ-ಉದಾರವಾದಿ ಆಳ್ವಿಕೆಯಲ್ಲಿ ಜಿಡಿಪಿ ಬೆಳವಣಿಗೆ ದರವು ಚುರುಕುಗೊಂಡಿದೆ ಎಂಬ ನೆಲೆಯಲ್ಲಿ ನವ-ಉದಾರವಾದಿ ಆಳ್ವಿಕೆಯ ಶ್ರೇಷ್ಠತೆಯನ್ನು ಹಾಡಿ ಹೊಗಳಿವೆ. ವಾಸ್ತವವಾಗಿ, ನವ-ಉದಾರವಾದಿ ಆಳ್ವಿಕೆಯಡಿಯಲ್ಲಿ ವರಮಾನ ಅಸಮಾನತೆ ಮತ್ತು ಸಮಗ್ರ ಪೌಷ್ಟಿಕಾಂಶದ ಬಡತನವೂ ಸಹ ತೀವ್ರವಾಗಿ ಹದಗೆಟ್ಟಿದ್ದರೂ, ಅವರು ಅದೇ ರಾಗದಲ್ಲಿ ಹಾಡುತ್ತಾರೆ. ಉದಾಹರಣೆಗೆ, ವಿಶ್ವ ಅಸಮಾನತೆ ದತ್ತಾಂಶ ಸಂಗ್ರಹದ ಪ್ರಕಾರ, ಸ್ವಾತಂತ್ರ್ಯ ಬಂದ ಸಮಯದಲ್ಲಿ ರಾಷ್ಟ್ರೀಯ ವರಮಾನದಲ್ಲಿ ಶೇ. 12ರಷ್ಟಿದ್ದ ಭಾರತದ ಜನಸಂಖ್ಯೆಯ ಮೇಲ್ತುದಿಯ ಶೇ. 1ರಷ್ಟು ಮಂದಿಯ ಪಾಲು, ನಿಯಂತ್ರಣ ನೀತಿಗಳ ಆಳ್ವಿಕೆಯ ಸರಿಸುಮಾರು ಅವಧಿಯನ್ನು ಒಳಗೊಂಡ 1982ರ ವೇಳೆಗೆ ಶೇ.6ಕ್ಕೆ ಇಳಿದಿತ್ತು. ನವ-ಉದಾರವಾದಿ ಅವಧಿಯ 2022-23ರ ವೇಳೆಗೆ ಈ ಪಾಲು ಶೇ. 23ಕ್ಕಿಂತಲೂ ಅಧಿಕವಾಗಿತ್ತು. ಇದು ಹಿಂದಿನ ನೂರು ವರ್ಷಗಳ ಅವಧಿಯಲ್ಲಿ  ತಲುಪಿದ ಅಸಮಾನತೆಯ ಅತ್ಯುನ್ನತ ಮಟ್ಟ!

ಇದನ್ನೂ ಓದಿ : ಯುಎಸ್‌-ಇಸ್ರೇಲಿ ಆಕ್ರಮಣದ ಬಗ್ಗೆ ಮೂರನೇ ಜಗತ್ತಿನ ಸರಕಾರಗಳ ಮೌನ: ನವ-ಉದಾರವಾದ ಉಂಟುಮಾಡಿರುವ ಎರಡು ಬಿರುಕುಗಳು

ಆರ್ಥಿಕ ಅಭಿವೃದ್ಧಿಯನ್ನು ಜಿಡಿಪಿ ಬೆಳವಣಿಗೆಯೊಂದಿಗೆ ಗುರುತಿಸುವ ಕ್ರಮವನ್ನು ತಿರಸ್ಕರಿಸುವುದು ಯಾವುದೇ ವಸ್ತುನಿಷ್ಠ ವಿಮರ್ಶಾತ್ಮಕ ಚಿಂತನೆಯ ಮೊದಲ ಹೆಜ್ಜೆಯಾಗಿರಬೇಕಾಗುತ್ತದೆ. ಇದು ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ನಂತಹ ಸಂಸ್ಥೆಗಳು ಮಾತ್ರವಲ್ಲದೆ, ತಮ್ಮ ದೇಶಗಳ ಆರ್ಥಿಕ “ಯಶಸ್ಸನ್ನು” ನಿರ್ಣಯಿಸುವ ಜಾಗತಿಕ ದಕ್ಷಿಣದ ಸರ್ಕಾರಗಳೂ ಸಹ, ಈ ಮಾನದಂಡವನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂಬುದನ್ನು ಸೂಚಿಸುತ್ತದೆ.

ಅದೇ ರೀತಿಯಲ್ಲಿ, ಗ್ರಾಮೀಣ ಬಡತನವನ್ನು ವ್ಯಾಖ್ಯಾನಿಸಲು ಹಿಂದಿನ ಯೋಜನಾ ಆಯೋಗದ ಮಾನದಂಡವಾಗಿದ್ದ, ದೈನಿಕ ತಲಾ 2200 ಕ್ಯಾಲೋರಿಗಳನ್ನು ಪಡೆಯದ ಗ್ರಾಮೀಣ ಜನಸಂಖ್ಯೆಯ ಪ್ರಮಾಣವು 1973-74ರಲ್ಲಿ ಭಾರತದಲ್ಲಿ ಬಡತನದ ಅಧ್ಯಯನಗಳು ಪ್ರಾರಂಭವಾದಾಗಿನಿಂದ  1993-94ರ ವರೆಗೂ  ಸರಿಸುಮಾರು ಸ್ಥಿರವಾಗಿತ್ತು. 1993-94ರಲ್ಲಿ ಶೇ. 58ರಷ್ಟಿದ್ದ ಈ ಪ್ರಮಾಣವು 2011-12ರಲ್ಲಿ ಶೇ. 68ಕ್ಕೆ ಏರಿತು. 2017-18ರಲ್ಲಿ ಅದು ಶೇ. 80ರ ಮೇಲಿತ್ತು ಎಂದು ಹೇಳಲಾಗಿದೆ. ಈ ಹೆಚ್ಚಳವು ಅದೆಷ್ಟು ಆಘಾತಕಾರಿಯಾಗಿತ್ತು ಎಂದರೆ, ಭಾರತ ಸರ್ಕಾರವು ಆ ವರ್ಷದ ಅಂಕಿ-ಅಂಶಗಳನ್ನೇ ಹಿಂತೆಗೆದುಕೊಂಡಿತು ಮತ್ತು ಭವಿಷ್ಯದ ದತ್ತಾಂಶ ಸಂಗ್ರಹಣೆಯ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿತು! ಅದೇ ರೀತಿಯಲ್ಲಿ ನಗರ ಬಡತನವನ್ನು ವ್ಯಾಖ್ಯಾನಿಸುವ ಮಾನದಂಡದ ಪ್ರಕಾರ ದೈನಿಕ ತಲಾ 2100 ಕ್ಯಾಲೋರಿಗಳನ್ನು ಪಡೆಯದ ನಗರ ಜನಸಂಖ್ಯೆಯ ಪಾಲು 1993-94ರಲ್ಲಿ ಶೇ. 57 ಇದ್ದದ್ದು, 2011-12ರಲ್ಲಿ ಶೇ. 65ಕ್ಕೆ ಏರಿತು (ಉತ್ಸಾ ಪಟ್ನಾಯಕ್, Exploring the Poverty Question). ಆದರೆ, ಈ ಎಲ್ಲ ಅಂಶಗಳು ನವ-ಉದಾರವಾದಿ ಅವಧಿಯಲ್ಲಿ ಭಾರತವು ಒಂದು ಅತ್ಯಂತ ಪರಿಣಾಮಕಾರಿಯಾದ “ಆರ್ಥಿಕ ಅಭಿವೃದ್ಧಿ”ಯನ್ನು ಕಾಣುತ್ತಿದೆ ಎಂಬ ದಾವೆಯ ಮೇಲೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ಭಾವಿಸಲಾಗಿದೆ!

ಆರ್ಥಿಕ ಅಭಿವೃದ್ಧಿಯ ಸರಿಯಾದ ಸೂಚ್ಯಂಕ

ಆರ್ಥಿಕ ಅಭಿವೃದ್ಧಿಯ ಸೂಚ್ಯಂಕವಾಗಿ ಭಾರತ ಸರ್ಕಾರವು ಜಿಡಿಪಿ ಬೆಳವಣಿಗೆಯ ಮೇಲೆ ಒತ್ತು ನೀಡುವುದರ ಅಸಂಬದ್ಧತೆಯು ಮತ್ತೊಂದು ಸಂಶೋಧನೆಯಿಂದ ಹೊರಹೊಮ್ಮಿದೆ. ಇತ್ತೀಚಿನ ವರ್ಷದ ಬಾಂಗ್ಲಾದೇಶದ ತಲಾ ಜಿಡಿಪಿಯು ಭಾರತದ ತಲಾ ಜಿಡಿಪಿಗಿಂತಲೂ ತುಸು ಹೆಚ್ಚಿಗೆ ಇದೆ ಎಂಬ ತನ್ನ ಅಂದಾಜನ್ನು ಐಎಂಎಫ್‌ ಇತ್ತೀಚೆಗೆ ಪ್ರಕಟಿಸಿದೆ. ಆರ್ಥಿಕ ಅಭಿವೃದ್ಧಿಯನ್ನು ವ್ಯಾಖ್ಯಾನಿಸುವ ಭಾರತದ ಮಾನದಂಡದ ಪ್ರಕಾರ, ಬಾಂಗ್ಲಾದೇಶವು ಇಂದು ಭಾರತಕ್ಕಿಂತಲೂ ತುಸು ಹೆಚ್ಚು ಅಭಿವೃದ್ಧಿ ಹೊಂದಿದೆ ಎಂದಾಗುತ್ತದೆ. ಆದರೆ, ಪ್ರಧಾನಿಯಿಂದ ಹಿಡಿದು ಕೆಳಗಿನ ಇಡೀ ಹಿಂದುತ್ವದ ಮಹಾಪುರುಷರು ಬಾಂಗ್ಲಾದೇಶದ ನುಸುಳುಕೋರರು ಭಾರತದೊಳಗೆ ನುಗ್ಗುತ್ತಿದ್ದಾರೆ ಎಂದು ಗಂಟಲು ಹರಿಯುವಂತೆ ಕೂಗುತ್ತಾರೆ. ಕೆಲವರಂತೂ  ನುಸುಳುಕೋರರನ್ನು “ಹಿಂದಕ್ಕೆ ತಳ್ಳಬೇಕು” ಎಂದು ಒತ್ತಾಯಿಸುತ್ತಾರೆ. ಇದು ಎತ್ತುವ ಪ್ರಶ್ನೆಯೆಂದರೆ: ಹೆಚ್ಚು ಅಭಿವೃದ್ಧಿ ಹೊಂದಿದ ದೇಶದಿಂದ ಕಡಿಮೆ ಅಭಿವೃದ್ಧಿ ಹೊಂದಿದ ದೇಶಕ್ಕೆ ಅಥವಾ ಹೆಚ್ಚು ಕಡಿಮೆ ಒಂದೇ ಮಟ್ಟದ ಅಭಿವೃದ್ಧಿ ಹೊಂದಿದ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ದೊಡ್ಡ ಪ್ರಮಾಣದ ನುಸುಳಿಕೆ ಇರುವುದಾದರೂ ಏಕೆ? ಆದ್ದರಿಂದ, ಬಾಂಗ್ಲಾದೇಶದಿಂದ ಭಾರತಕ್ಕೆ ದೊಡ್ಡ ಪ್ರಮಾಣದ ನುಸುಳಿಕೆಯಾಗುತ್ತಿದೆ ಎಂಬ ಹಿಂದುತ್ವವಾದಿಗಳ ಹೇಳಿಕೆಗಳು ತಪ್ಪಾಗಿರಬಹುದು ಅಥವಾ ಸರ್ಕಾರವು ಆಣೆ ಪ್ರಮಾಣ ಮಾಡುವ ತಲಾ ಜಿಡಿಪಿಯು, ಆರ್ಥಿಕ ಅಭಿವೃದ್ಧಿಯ ಒಂದು ಶೋಚನೀಯ-ಅಸಮರ್ಪಕ ಸೂಚ್ಯಂಕ ಎಂದಾಗುತ್ತದೆ.

ನಂತರ ಇದು ಹುಟ್ಟುಹಾಕುವ ಪ್ರಶ್ನೆ ಎಂದರೆ: ಹಾಗಿದ್ದರೆ, ಆರ್ಥಿಕ ಅಭಿವೃದ್ಧಿಯ ಸೂಚ್ಯಂಕ ಯಾವುದಾಗಿರಬೇಕು? ಈ ಪ್ರಶ್ನೆಗೆ ನಾವು ಇಲ್ಲಿ ಉತ್ತರಿಸದೆ, ವಿವರಣಾತ್ಮಕ ಉದ್ದೇಶಗಳಿಗಾಗಿ, ಬ್ರೆಟನ್ ವುಡ್ಸ್ ಸಂಸ್ಥೆಗಳು ಪ್ರಸ್ತುತ ಪ್ರೋತ್ಸಾಹಿಸುತ್ತಿರುವ ಮತ್ತು ಭಾರತ ಸರ್ಕಾರವು ಅಂಗೀಕರಿಸಿರುವ ತಲಾ ಜಿಡಿಪಿಗಿಂತ ನಿಜಕ್ಕೂ ಉತ್ತಮವಾಗಿರುವ ಒಂದು ಸ್ಪಷ್ಟ ಸೂಚ್ಯಂಕವನ್ನು ಮಾತ್ರ ಉಲ್ಲೇಖಿಸೋಣ. ರಾಜಕೀಯ ಅಧಿಕಾರವನ್ನು ಒಟ್ಟಾರೆಯಾಗಿ ಜನರ ಕೈಗಳಿಗೆ ವಹಿಸಿರುವ ಒಂದು ಪ್ರಜಾಸತ್ತಾತ್ಮಕ ಸಂವಿಧಾನವನ್ನು ಹೊಂದಿರುವ ದೇಶದಲ್ಲಿ, ಜನರನ್ನು ಆರ್ಥಿಕವಾಗಿ ಬಲಗೊಳಿಸುವ ಒಂದು ಸಮಾನಾಂತರ ಪ್ರಕ್ರಿಯೆಯು ಆರ್ಥಿಕ ಅಭಿವೃದ್ಧಿಯ ಯಾವುದೇ ಪರಿಕಲ್ಪನೆಯ ಸಾರಸತ್ವ ಆಗಿರಬೇಕಾಗುತ್ತದೆ. ಒಟ್ಟು ಜನಸಂಖ್ಯೆಯ ಸರಾಸರಿ ನಿಜ ವರಮಾನಕ್ಕಿಂತ, ಜನಸಂಖ್ಯೆಯ ಅಗಾಧ ಭಾಗವಾಗಿರುವ ದುಡಿಯುವ ಜನರ ಸರಾಸರಿ ನಿಜ ವರಮಾನವು ಅಂತಹ ಆರ್ಥಿಕ ಸಬಲೀಕರಣದ ಒಂದು ಉತ್ತಮ ಸೂಚ್ಯಂಕವಾಗುತ್ತದೆ. ಏಕೆಂದರೆ. ಒಟ್ಟು ಜನಸಂಖ್ಯೆಯನ್ನು ಪರಿಗಣಿಸುವ ಸೂಚ್ಯಂಕದಲ್ಲಿ, ಮೇಲ್ತುದಿಯ ಶೇ. 1ರಷ್ಟು ಮಂದಿ ಅಥವಾ ಮೇಲ್ತುದಿಯ ಶೇ. 10ರಷ್ಟು ಮಂದಿ ಮತ್ತು ಉಳಿದವರ ನಡುವಿನ ಅಗಾಧವಾದ ಮತ್ತು ಬೆಳೆಯುತ್ತಿರುವ ಅಂತರವನ್ನು ಒಂದು ಅನಿಯಂತ್ರಿತ ಬಂಡವಾಳಶಾಹಿ ಪರಿಸ್ಥಿತಿಯಲ್ಲಿ ಮರೆಮಾಡಬಹುದು.

ರಾಜಕೀಯ ಅಧಿಕಾರವನ್ನು ಒಟ್ಟಾರೆಯಾಗಿ ಜನರ ಕೈಗಳಿಗೆ ವಹಿಸಿರುವ ಒಂದು ಪ್ರಜಾಸತ್ತಾತ್ಮಕ ಸಂವಿಧಾನವನ್ನು ಹೊಂದಿರುವ ದೇಶದಲ್ಲಿ, ಜನರನ್ನು ಆರ್ಥಿಕವಾಗಿ ಬಲಗೊಳಿಸುವ ಒಂದು ಸಮಾನಾಂತರ ಪ್ರಕ್ರಿಯೆಯು ಆರ್ಥಿಕ ಅಭಿವೃದ್ಧಿಯ ಯಾವುದೇ ಪರಿಕಲ್ಪನೆಯ ಸಾರಸತ್ವ ಆಗಿರಬೇಕಾಗುತ್ತದೆ. ಒಟ್ಟು ಜನಸಂಖ್ಯೆಯ ಸರಾಸರಿ ನಿಜ ವರಮಾನಕ್ಕಿಂತ, ಜನಸಂಖ್ಯೆಯ ಅಗಾಧ ಭಾಗವಾಗಿರುವ ದುಡಿಯುವ ಜನರ ಸರಾಸರಿ ನಿಜ ವರಮಾನವು ಅಂತಹ ಆರ್ಥಿಕ ಸಬಲೀಕರಣದ ಒಂದು ಉತ್ತಮ ಸೂಚ್ಯಂಕವಾಗುತ್ತದೆ.

ವೈರುಧ್ಯ ಮತ್ತು ಅದರ ನಿವಾರಣೆ

ದುಡಿಯುವ ಜನರ ಸರಾಸರಿ ನಿಜ ವರಮಾನದ ಅಂದಾಜುಗಳನ್ನು ಮಾಡುವಾಗ ಹಲವಾರು ಸಮಸ್ಯೆಗಳಿರುತ್ತವೆ. ಅವುಗಳನ್ನು ನಿವಾರಿಸಬಹುದು: ಆರಂಭಿಕವಾಗಿ, ಒಂದು ದೇಶದ ಆರ್ಥಿಕ ಅಭಿವೃದ್ಧಿಯ ಸೂಚ್ಯಂಕವಾಗಿ ಜನಸಂಖ್ಯೆಯ ಶೇ. 80ರಷ್ಟು ಅಥವಾ ಶೇ. 90ರಷ್ಟು ಜನರ ಸರಾಸರಿ ನಿಜ ವರಮಾನದ ಹೆಚ್ಚಳವನ್ನು ನಾವು ತೆಗೆದುಕೊಳ್ಳಬಹುದು. ಇದು ಎಂಥಹ ವ್ಯತ್ಯಾಸವನ್ನು ಮಾಡಬಹುದು ಎಂಬುದನ್ನು ಒಂದು ಉದಾಹರಣೆಯ ಮೂಲಕ ನೋಡಬಹುದು. 1982 ಮತ್ತು 2022-23ರ ನಡುವಿನ 40 ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ನಿಜ ವರಮಾನದ ಸರಾಸರಿ ಶೇ. 6.5ರ ವಾರ್ಷಿಕ ಬೆಳವಣಿಗೆಯ ದರವನ್ನು ನಾವು ತೆಗೆದುಕೊಂಡರೆ ಮತ್ತು ವಿಶ್ವ ಅಸಮಾನತೆ ದತ್ತಾಂಶ ಸಂಗ್ರಹವು ಅಂದಾಜು ಮಾಡಿದ ವರಮಾನ ಹಂಚಿಕೆಯು ಸಮಂಜಸವಾಗಿದೆ ಎಂದು ಭಾವಿಸಿದರೆ, ಜನಸಂಖ್ಯೆಯ ಮೇಲ್ತುದಿಯ ಶೇ. 1ರಷ್ಟು ಜನರ ತಲಾ ನಿಜ ವರಮಾನದ ವಾರ್ಷಿಕ ಬೆಳವಣಿಗೆಯ ದರವು ಶೇ. 5.5 ಆಗುತ್ತದೆ ಮತ್ತು ಕೆಳಗಿನ ಶೇ. 99ರಷ್ಟು ಜನರ ನಿಜ ವರಮಾನದ ವಾರ್ಷಿಕ ಬೆಳವಣಿಗೆಯ ದರವು ಸರಾಸರಿ ಶೇ. 1.5 ಮಾತ್ರ ಆಗುತ್ತದೆ; ಒಟ್ಟಾರೆ ಜನಸಂಖ್ಯೆಯ ನಿಜ ವರಮಾನದ ವಾರ್ಷಿಕ ಬೆಳವಣಿಗೆಯ ದರವು ಸರಾಸರಿ ಶೇ. 2ರಷ್ಟು ಆಗುತ್ತದೆ. ಅಭಿವೃದ್ಧಿಯ ಒಂದು ಸೂಚ್ಯಂಕವಾಗಿ ಒಟ್ಟಾರೆ ಜಿಡಿಪಿ ಬೆಳವಣಿಗೆಯ ದರವು ಎಷ್ಟರಮಟ್ಟಿಗೆ ದಾರಿತಪ್ಪಿಸುತ್ತದೆ ಎಂಬುದನ್ನು ಈ ಶೇ. 1.5 ಮತ್ತು ಶೇ. 5.5ರ ನಡುವಿನ ಅಂತರವು ಸ್ಪಷ್ಟವಾಗಿ ತೋರಿಸುತ್ತದೆ.

ಅದೇನೇ ಇರಲಿ,  ದುಡಿಯುವ ಜನರ ಸರಾಸರಿ ನಿಜ ವರಮಾನದ ಹೆಚ್ಚಳವನ್ನು ನಮ್ಮ ಅಭಿವೃದ್ಧಿಯ ಸೂಚ್ಯಂಕವಾಗಿ ತೆಗೆದುಕೊಂಡಿದ್ದರೆ, ಜನರನ್ನು ರಾಜಕೀಯವಾಗಿ ಸಬಲೀಕರಣಗೊಳಿಸುವ ಸಂವಿಧಾನದ ಮೇಲೆ ಪ್ರತಿಜ್ಞೆ ಮಾಡುವ ಮತ್ತು ಜನರನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ “ಯಶಸ್ವಿ”ಯಾಗಿದೆ ಎಂದು ಪರಿಗಣಿಸಲಾದ ಆರ್ಥಿಕ ವ್ಯವಸ್ಥೆಯನ್ನು ಸ್ಥಾಪಿಸಿರುವುದರ ನಡುವಿನ ವೈರುಧ್ಯವನ್ನು  ನಿವಾರಿಸಬಹುದಿತ್ತು.

ಸಂವಿಧಾನವನ್ನು ಅಂಗೀಕಾರಕ್ಕಾಗಿ ಮಂಡಿಸಿದ ಸಂದರ್ಭದಲ್ಲಿ ಬಿ.ಆರ್. ಅಂಬೇಡ್ಕರ್‌ ಸಂವಿಧಾನ ಸಭೆಗೆ ನೀಡಿದ ತಮ್ಮ ಅಂತಿಮ ಭಾಷಣದಲ್ಲಿ ಈ ವೈರುಧ್ಯದತ್ತ ಗಮನ ಸೆಳೆದಿದ್ದರು ಮತ್ತು ಅದನ್ನು ನಿವಾರಿಸದಿದ್ದರೆ ರಾಜಕೀಯ ಪ್ರಜಾಪ್ರಭುತ್ವವು ಗಂಡಾಂತರಕ್ಕೊಳಗಾಗುತ್ತದೆ ಎಂದು ಅವರು ಎಚ್ಚರಿಸಿದ್ದುದು ಸರಿಯಾಗಿಯೇ ಇತ್ತು. ಆರ್ಥಿಕ ಅಭಿವೃದ್ಧಿಯ ಒಂದು ಸೂಕ್ತ ಪರಿಕಲ್ಪನೆಯನ್ನು ದೇಶದ ಸಾರ್ವಜನಿಕ ಚರ್ಚೆಗೆ ಮಂಡಿಸುವುದೇ ಈ ವೈರುಧ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಇಡಬೇಕಾದ ಮೊಟ್ಟ ಮೊದಲ ಹೆಜ್ಜೆ.

ಇದನ್ನೂ ನೋಡಿ : ಧರ್ಮದ ಮುಸುಕಿನಲ್ಲಿ ಅಧರ್ಮ – ನಟ ಕಿಶೋರ್ ಜೊತೆ ಬಾತ್ ಚೀತ್ Janashakthi Media

 

 

Donate Janashakthi Media

Leave a Reply

Your email address will not be published. Required fields are marked *