ಡಿಜಿಟಲ್‌ ಪ್ರತಿರೋಧ | ಹೊಸ ತಲೆಮಾರಿನ ಯುವಕರ ಹೊಸ ಹೋರಾಟದ ಭಾಷೆ

 

ಹಿಂದೆ ಒಂದು  ಕಾಲವಿತ್ತು, ಆಡಳಿತದ ವಿರುದ್ಧದ ಧ್ವನಿ ಬೀದಿಗಳಲ್ಲಿ ಕೇಳಿಸುತ್ತಿತ್ತು.  ಇಂದು ಅದು ಬೀದಿಗಳ ಜೊತೆ ಮೊಬೈಲ್‌ ಪರದೆಯಲ್ಲೂ ಧ್ವನಿಸುತ್ತಿದೆ. ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆಯ ಜಾಗಗಳಲ್ಲ; ಅವು ಹೊಸ ತಲೆಮಾರಿನ ರಾಜಕೀಯ ಅಭಿವ್ಯಕ್ತಿಯ ಅಂಗಳಗಳಾಗಿವೆ. ಮೀಮ್ಸ್‌, ವ್ಯಂಗ್ಯ ವಿಡಿಯೊಗಳು, ಹ್ಯಾಶ್‌ಟ್ಯಾಗ್‌ಗಳು ಮತ್ತು ವೈರಲ್‌ ಪೋಸ್ಟ್‌ಗಳ ಮೂಲಕ ಯುವಕರು ತಮ್ಮ ಅಸಮಾಧಾನವನ್ನು ದಾಖಲಿಸುತ್ತಿದ್ದಾರೆ. ಉದ್ಯೋಗದ ಕೊರತೆ, ಶಿಕ್ಷಣದ ಸಂಕಷ್ಟ, ಪರೀಕ್ಷಾ ಹಗರಣಗಳು, ಬೆಲೆ ಏರಿಕೆ ಮತ್ತು ರಾಜಕೀಯ ಅಹಂಕಾರದ ವಿರುದ್ಧ ಹೊಸ ಭಾಷೆಯಲ್ಲಿ ಪ್ರತಿರೋಧ ಹುಟ್ಟುತ್ತಿದೆ.
ಗುರುರಾಜ ದೇಸಾಯಿ

ಆಳುವವರ ವಿರುದ್ಧ, ಅನ್ಯಾಯದ ವಿರುದ್ಧ ಪ್ರತಿಭಟನೆ ಎಂದರೆ ಬೀದಿಗಿಳಿದು ಘೋಷಣೆ ಕೂಗುವುದು, ಧರಣಿ ನಡೆಸುವುದು, ಮೆರವಣಿಗೆ ಮಾಡುವುದು. ಕಾರ್ಮಿಕರು ಕಾರ್ಖಾನೆಗಳ ಕೆಲಸವನ್ನು ಸ್ಥಗಿತಗೊಳಿಸಿ, ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ರಸ್ತೆ ತುಂಬ ಘೋಷಣೆಗಳನ್ನು ಮೊಳಗಿಸುತ್ತಾ ಆಳುವವರ ಎದೆ ನಡುಗಿಸುತ್ತಿದ್ದ ಹೋರಾಟಗಳು ನೆನಪಾಗುತ್ತವೆ.  ಆಡಳಿತದ ವಿರುದ್ಧದ ಅಸಮಾಧಾನ ಜನರ ಕೂಗಿನಲ್ಲಿ, ಗೋಡೆ ಬರಹಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ವ್ಯಕ್ತವಾಗುತ್ತಿತ್ತು. ಆದರೆ ಇಂದಿನ ಯುವಜನರ ಪ್ರತಿಭಟನೆ ಆ ಸಾಂಪ್ರದಾಯಿಕ ಗಡಿಗಳನ್ನು ದಾಟಿದೆ. ಅದು ಈಗ ಕೇವಲ ಬೀದಿಯಲ್ಲಿ ಮಾತ್ರ ನಡೆಯುವುದಿಲ್ಲ; ಡಿಜಿಟಲ್‌ ಪ್ರತಿರೋಧವಾಗಿಯೂ ವ್ಯಕ್ತವಾಗುತ್ತಿದೆ.

ಒಂದು ಮೀಮ್‌, ಒಂದು ವ್ಯಂಗ್ಯ ವಿಡಿಯೊ, ಒಂದು ಹ್ಯಾಶ್‌ಟ್ಯಾಗ್‌, ಒಂದು ಇನ್‌ಸ್ಟಾಗ್ರಾಂ ರೀಲ್‌, ಒಂದು ವೈರಲ್‌ ಟ್ವೀಟ್‌ ಇವೆಲ್ಲವೂ ಈಗ ರಾಜಕೀಯ ಪ್ರತಿರೋಧದ ಹೊಸ ಸಾಧನಗಳಾಗಿವೆ. ಡಿಜಿಟಲ್‌ ಜಗತ್ತಿನಲ್ಲಿ ಹುಟ್ಟುವ ಈ ಅಸಮಾಧಾನ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರನ್ನು ತಲುಪುತ್ತದೆ. ಕೆಲವೊಮ್ಮೆ ಅದು ನೈಜ ಬೀದಿ ಹೋರಾಟವಾಗಿ ರೂಪಾಂತರಗೊಳ್ಳುತ್ತದೆ. ಹೀಗಾಗಿ ಇಂದಿನ ಯುವಜನರ ಹೋರಾಟವನ್ನು ಅರ್ಥಮಾಡಿಕೊಳ್ಳಬೇಕಾದರೆ ಕೇವಲ ರಾಜಕೀಯ ಸಭೆಗಳನ್ನು ನೋಡಿದರೆ ಸಾಲದು; ಸಾಮಾಜಿಕ ಜಾಲತಾಣಗಳ ಭಾಷೆಯನ್ನು ಓದಲು ಕಲಿಯಬೇಕಾಗಿದೆ.

ಭಾರತದ ರಾಜಕೀಯ ಈಗ ಒಂದು ಹೊಸ ವಾಸ್ತವಿಕತೆಯನ್ನು ಎದುರಿಸುತ್ತಿದೆ. ಯುವಜನರನ್ನು ಕೇವಲ ಚುನಾವಣಾ ಅಂಕಿಅಂಶಗಳಂತೆ ಕಾಣುವ ಕಾಲ ಮುಗಿದಿದೆ. ಅವರಿಗೆ ಉದ್ಯೋಗ, ಶಿಕ್ಷಣ, ಬದುಕಿನ ಭದ್ರತೆ ಮತ್ತು ಗೌರವಯುತ ಭವಿಷ್ಯದ ಬಗ್ಗೆ ಇರುವ ಅಸಮಾಧಾನ ದಿನೇದಿನೇ ತೀವ್ರವಾಗುತ್ತಿದೆ. ಆದರೆ ಈ ಅಸಮಾಧಾನವನ್ನು ವ್ಯಕ್ತಪಡಿಸುವ ಭಾಷೆ ಮಾತ್ರ ಹಿಂದಿನ ತಲೆಮಾರಿಗಿಂತ ಭಿನ್ನವಾಗಿದೆ. ಇಂದಿನ ಯುವಕರು ವೇಗವಾಗಿ ಪ್ರತಿಕ್ರಿಯಿಸುತ್ತಾರೆ. ಅವರು ಸುದ್ದಿಯನ್ನು ಕೇವಲ ಓದುತ್ತಿಲ್ಲ; ಅದನ್ನು ಮರುರೂಪಿಸುತ್ತಾರೆ. ರಾಜಕೀಯ ಹೇಳಿಕೆಯನ್ನು ಮೀಮ್‌ ಆಗಿ ಪರಿವರ್ತಿಸುತ್ತಾರೆ. ಆಡಳಿತದ ಭಾಷೆಯನ್ನು ಅದೇ ಭಾಷೆಯಲ್ಲಿ ಹಿಂತಿರುಗಿ ಪ್ರಶ್ನಿಸುತ್ತಾರೆ. ಮುಖ್ಯವಾಗಿ, ಅವರು ಈ ಪ್ರತಿರೋಧವನ್ನು ಮುಕ್ತವಾಗಿ ಚರ್ಚಿಸುತ್ತಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ “Cockroach Janata Party (CJP)” ಡಿಜಿಟಲ್‌ ಚಳವಳಿ ಇದಕ್ಕೆ ಸ್ಪಷ್ಟ ಉದಾಹರಣೆ. ಯುವಕರನ್ನು “ಜಿರಳೆ” ಮತ್ತು “ಪರೋಪಜೀವಿ”ಗಳಿಗೆ ಹೋಲಿಸಿದ ಜಸ್ಟೀಸ್‌ರೊಬ್ಬರ ಅಹಂಕಾರಿ ಭಾಷೆಗೆ ಪ್ರತಿಕ್ರಿಯೆಯಾಗಿ ಹುಟ್ಟಿದ ಈ ಚಳವಳಿ, ಕೆಲವೇ ದಿನಗಳಲ್ಲಿ ಲಕ್ಷಾಂತರ ಜನರ ಅಸಮಾಧಾನಕ್ಕೆ ವೇದಿಕೆಯಾಯಿತು. ಜಿರಳೆ ಚಿಹ್ನೆಗಳು, ವ್ಯಂಗ್ಯ ಪೋಸ್ಟರ್‌ಗಳು, ಚುನಾವಣಾ ಘೋಷಣೆಗಳು, AI ಚಿತ್ರಗಳು, ವಿಡಿಯೊಗಳು ಇವೆಲ್ಲವೂ ಸೇರಿ ಒಂದು ಹೊಸ ರಾಜಕೀಯ ಸಂಸ್ಕೃತಿಯನ್ನು ನಿರ್ಮಿಸಿತು. ಇದು ಕೇವಲ ಇಂಟರ್ನೆಟ್‌ನ ಹಾಸ್ಯವಲ್ಲ. ಯುವಜನರನ್ನು ಅವಮಾನ ಮಾಡಿದ ರಾಜಕೀಯಕ್ಕೆ ಕೊಟ್ಟ ದಿಟ್ಟ ಉತ್ತರ. “ನಮ್ಮನ್ನು ಹಾಸ್ಯ ಮಾಡಬಹುದು; ಆದರೆ ಸುಮ್ಮನಿರಿಸಲು ಸಾಧ್ಯವಿಲ್ಲ” ಎಂಬ ಘೋಷಣೆ ಯುವಜನರ ಮನಸ್ಥಿತಿಯನ್ನೇ ಪ್ರತಿಬಿಂಬಿಸಿತು. ಆಳುವವರು ಯುವಜನರ ಕೋಪವನ್ನು ನಿರ್ಲಕ್ಷಿಸಲು ಯತ್ನಿಸಿದಾಗ, ಅದೇ ಕೋಪ ಡಿಜಿಟಲ್‌ ಹೋರಾಟದ ರೂಪದಲ್ಲಿ ಸ್ಫೋಟಗೊಂಡಿತು.

ಇದನ್ನೂ ಓದಿ : ‘ಕಾಕ್ರೋಚ್ ಜನತಾ ಪಾರ್ಟಿ’ : ಯುವಜನರ ಅಸಮಾಧಾನದ ಧ್ವನಿಯಾದ ಡಿಜಿಟಲ್ ಚಳವಳಿ

ಅನೇಕ ಗೆಳೆಯರು ಫೋನ್‌ ಮಾಡಿ ಹೇಳುತ್ತಿದ್ದರು. ಮೊಬೈಲ್‌ ಓಪನ್‌ ಮಾಡಿದರೆ ಸಾಕು ಈಗ ಮೊಬೈಲ್‌ ತುಂಬಾ ಕಾಕ್ರೋಚ್‌ ಕಾಣಿಸಿಕೊಳ್ಳುತ್ತಿದೆ ಎಂದು. ವಾಕಿಂಗ್‌ ಸಮಯದಲ್ಲಂತೂ ʼಜಿರಳೆಗಳದ್ದೆ ಸದ್ದುʼ ಸ್ವಚ್ಚ ಇಲ್ಲದ ಜಾಗದಲ್ಲಿ ಜಿರಳೆ ಕಾಣಿಸಿಕೊಳ್ಳುವುದು ಸಾಮಾನ್ಯ ಎಂಬ ಸ್ಟೇಟಸ್‌ಗಳು ಕಾಮನ್‌ ಆಗಿದ್ದವು. ಈ ಡಿಜಿಟಲ್‌ ಹೋರಾಟದ ಹಿಂದೆ ಗಂಭೀರವಾದ ಸಾಮಾಜಿಕ-ಆರ್ಥಿಕ ವಾಸ್ತವಿಕತೆಗಳಿವೆ. ಉದ್ಯೋಗವಿಲ್ಲದ ಭವಿಷ್ಯ, ಏರುತ್ತಿರುವ ಬೆಲೆಗಳು, ಪರೀಕ್ಷಾ ಹಗರಣಗಳು, ಕುಸಿಯುತ್ತಿರುವ ಶಿಕ್ಷಣ ವ್ಯವಸ್ಥೆ, ಒತ್ತಡದ ಜೀವನಶೈಲಿ ಮತ್ತು ಅನಿಶ್ಚಿತತೆಯೊಳಗಿನ ಯುವ ಬದುಕು, ಇವೆಲ್ಲವೂ ಈ ಕೋಪದ ಮೂಲವಾಗಿದೆ. ನಿರುದ್ಯೋಗದ ಪ್ರಶ್ನೆಗೆ “ಪಕೋಡಾ ಮಾರಾಟವೂ ಉದ್ಯೋಗವೇ” ಎಂದು ಹೇಳಿದಾಗ, ಅದೇ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಆಡಳಿತದ ವಿರುದ್ಧದ ವ್ಯಂಗ್ಯ ಶಸ್ತ್ರವಾಯಿತು. “ಎಂಜಿನಿಯರಿಂಗ್‌ ಓದಿ ಪಕೋಡಾ ಮಾರಬೇಕೇ?”, “ಡಿಗ್ರಿ ಪಡೆದು ಚಹಾ ಅಂಗಡಿ ತೆರೆಯೋಣವೇ?” ಎಂಬ ಮೀಮ್ಸ್‌ ದೇಶಾದ್ಯಂತ ವೈರಲ್‌ ಆಗಿದ್ದವು. ಆ ವ್ಯಂಗ್ಯದ ಒಳಗಿದ್ದದ್ದು ಕೇವಲ ಹಾಸ್ಯವಲ್ಲ; ಅದು ಯುವಕರ ಭವಿಷ್ಯದ ಬಗ್ಗೆ ಸರಕಾರ ತೋರಿದ ಅಸಡ್ಡೆಗೆ ತೋರಿಸಿದ  ಆಕ್ರೋಶ. ಪದವಿ ಪಡೆದು ಉದ್ಯೋಗವಿಲ್ಲದೆ ಅಲೆದಾಡುವ ಲಕ್ಷಾಂತರ ಯುವಜನರ ನೋವು ಆ ಮೀಮ್ಸ್‌ಗಳಲ್ಲಿ ವ್ಯಕ್ತವಾಗಿತ್ತು.

ಅದೇ ರೀತಿ ಚುನಾವಣಾ ಬಾಂಡ್‌ ಹಗರಣ ಬಹಿರಂಗವಾದಾಗಲೂ ಸಾಮಾಜಿಕ ಜಾಲತಾಣಗಳು ರಾಜಕೀಯ ವ್ಯಂಗ್ಯದ ಅಖಾಡವಾಗಿದ್ದವು. “ಪಾರದರ್ಶಕ ರಾಜಕೀಯ” ಎನ್ನುವ ಘೋಷಣೆಯನ್ನೇ ಯುವಕರು ಪ್ರಶ್ನಿಸಿದರು.  “ನಾನು ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆಯಂತೂ ರೀ ಪೋಸ್ಟ್‌ ಆಗುತ್ತಲೇ ಇತ್ತು.  ಇದೇನು ತಿನ್ನಲು ಬಿಟ್ಟಿದ್ದಿರಿ…! “ದೇಣಿಗೆ ಕೊಡು, ಒಪ್ಪಂದ ಪಡೆ” ಎಂಬ ವ್ಯಂಗ್ಯ ಸಾಲುಗಳಿಂದ ಹಿಡಿದು ಕಾರ್ಟೂನ್‌ಗಳು, ಮಿಮ್ಸ್‌ ವಿಡಿಯೊಗಳು ಮತ್ತು ಡಿಜಿಟಲ್‌ ಪೋಸ್ಟರ್‌ಗಳವರೆಗೆ ಸಾವಿರಾರು ರಾಜಕೀಯ ಅಭಿವ್ಯಕ್ತಿಗಳು ಹರಿದಾಡಿದವು. ಹಿಂದೆ ರಾಜಕೀಯ ವಿಮರ್ಶೆ ಕೆಲ ಪತ್ರಿಕೆಗಳ ಸಂಪಾದಕೀಯಗಳಿಗೆ ಅಥವಾ ಕಾರ್ಟೂನ್‌ಗಳಿಗೆ ಸೀಮಿತವಾಗಿದ್ದರೆ, ಈಗ ಪ್ರತಿಯೊಬ್ಬ ಮೊಬೈಲ್‌ ಬಳಕೆದಾರನೇ ವಿಮರ್ಶಕನಾಗಿದ್ದಾನೆ. ಇದೇ ಇಂದಿನ ಡಿಜಿಟಲ್‌ ರಾಜಕೀಯದ ದೊಡ್ಡ ಬದಲಾವಣೆ.

ಶ್ರೀಲಂಕದ ಪ್ರಧಾನಿ ವಿರುದ್ಧ ನಡೆದ ಅರಗಲಯ(ಹೋರಾಟ) ಮಾದರಿ

ಡಿಜಿಟಲ್‌ ಪ್ರತಿಭಟನೆಗೆ ನಾಯಕತ್ವದ ಮಾದರಿ ಇಲ್ಲ. ರಾಜಕೀಯ ಪಕ್ಷ, ಸಂಘಟನೆಗಳಂತೆ ಚಿಹ್ನೆ, ಧ್ವಜಗಳು ಇರುವುದಿಲ್ಲ. ಆದರೆ ಅವುಗಳಿಂಗಿಂತಲೂ  ಶಕ್ತಿಶಾಲಿಯಾಗಿ ಕೆಲಸ ಮಾಡುತ್ತಿವೆ.  ಪರಸ್ಪರ ಸಂಪರ್ಕಗೊಂಡಿರುವ ಅಸಂಖ್ಯಾತ ಯುವ ಮನಸುಗಳು ಡಿಜಿಟಲ್‌ ಹೋರಾಟದ ಸಂಘಟನಾ ಶಕ್ತಿ. ಒಂದು ಮೀಮ್‌ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರನ್ನು ತಲುಪುತ್ತದೆ. ಒಂದು ವಿಡಿಯೊ ಜನರ ರಾಜಕೀಯ ಚರ್ಚೆಯ ದಿಕ್ಕನ್ನೇ ಬದಲಾಯಿಸಬಹುದು. ಒಂದು ಹ್ಯಾಶ್‌ಟ್ಯಾಗ್‌ ಸರ್ಕಾರಗಳನ್ನು ಪ್ರತಿಕ್ರಿಯಿಸಲು ಒತ್ತಾಯಿಸಬಹುದು. ಇಂದಿನ ಪ್ರತಿಭಟನೆಗೆ ವೇದಿಕೆ ಕೇವಲ ಬೀದಿ ಅಲ್ಲ; ಅದು ಡಿಜಿಟಲ್‌ ಜಗತ್ತೂ ಹೌದು. ಹೀಗಾಗಿ ಸಾಮಾಜಿಕ ಜಾಲತಾಣಗಳು ಈಗ ರಾಜಕೀಯ ಸಂಘಟನೆಯ ಹೊಸ ಅಂಗಳಗಳಾಗಿವೆ.

ಈ ಹೊಸ ಪ್ರತಿಭಟನಾ ಭಾಷೆ ಭಾರತಕ್ಕಷ್ಟೇ ಸೀಮಿತವಲ್ಲ. ಶ್ರೀಲಂಕಾದ “ಅರಗಲಯ” ಚಳವಳಿಯಲ್ಲಿ ಹಾಡುಗಳು, ಗ್ರಾಫಿಟಿ, ವ್ಯಂಗ್ಯ ಪೋಸ್ಟ್‌ಗಳು ಮತ್ತು ವೈರಲ್‌ ವಿಡಿಯೊಗಳು ಸರ್ಕಾರವನ್ನೇ ನಡುಗಿಸಿದ್ದವು. ಬಾಂಗ್ಲಾದೇಶದ ವಿದ್ಯಾರ್ಥಿ ಚಳವಳಿಗಳು TikTok ಮತ್ತು Facebook ಮೂಲಕ ಸಂಘಟಿತವಾದವು. ಹಾಂಗ್‌ಕಾಂಗ್‌ನಿಂದ ಲ್ಯಾಟಿನ್‌ ಅಮೆರಿಕಾವರೆಗೆ, ಮೀಮ್ಸ್‌ ಈಗ ಜಾಗತಿಕ ಪ್ರತಿಭಟನಾ ಭಾಷೆಯಾಗಿದೆ. ರಾಜಕೀಯವಾಗಿ ನಿರಾಶೆಗೊಂಡ ಹೊಸ ತಲೆಮಾರು ಹಾಸ್ಯವನ್ನೇ ಆಯುಧವನ್ನಾಗಿ ಬಳಸುತ್ತಿದೆ. ಇದು ಕೇವಲ ತಂತ್ರಜ್ಞಾನದ ಬದಲಾವಣೆ ಅಲ್ಲ; ಇದು ರಾಜಕೀಯ ಸಂಸ್ಕೃತಿಯ ಬದಲಾವಣೆ.

ಭಾರತದಲ್ಲಿಯೂ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ. ಪರೀಕ್ಷಾ ಹಗರಣಗಳಿಂದ ನಿರುದ್ಯೋಗದವರೆಗೆ, ಶಿಕ್ಷಣದಿಂದ ಬದುಕಿನ ವೆಚ್ಚದವರೆಗೆ, ಯುವಜನರ ಅಸಮಾಧಾನ ಹೆಚ್ಚುತ್ತಿದೆ. ಅವರು ಕೇವಲ ಉದ್ಯೋಗ ಕೇಳುತ್ತಿಲ್ಲ; ಗೌರವಯುತ ಬದುಕು ಕೇಳುತ್ತಿದ್ದಾರೆ. ಕೇವಲ ಭರವಸೆ ಬೇಡ; ಉತ್ತರ ಕೇಳುತ್ತಿದ್ದಾರೆ. ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟತೆ ಕೇಳುತ್ತಿದ್ದಾರೆ. ಈ ಅಸಮಾಧಾನವನ್ನು ಆಡಳಿತಗಳು ಕೇವಲ “ಸೋಶಿಯಲ್‌ ಮೀಡಿಯಾ ಟ್ರೆಂಡ್‌” ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಏಕೆಂದರೆ ಅದರ ಹಿಂದೆ ಒಂದು ದೊಡ್ಡ ಸಾಮಾಜಿಕ ವಾಸ್ತವಿಕತೆ ಇದೆ.

ಹೀಗಾಗಿ ಈ ಮೀಮ್ಸ್‌ಗಳನ್ನು “ಟೈಂಪಾಸ್‌” ಎಂದು ತಳ್ಳಿಹಾಕುವುದು ಅಪಾಯಕಾರಿ ತಪ್ಪು. ಅವು ಕಾಲದ ರಾಜಕೀಯ ಸಂಕೇತಗಳು. ಅವು ಹೊಸ ತಲೆಮಾರಿನ ಭಾಷಣಗಳು. ಅವುಗಳ ಹಿಂದೆ ಕೋಪ ಇದೆ, ನಿರಾಶೆ ಇದೆ; ಆದರೆ ಜೊತೆಗೆ ಪ್ರತಿರೋಧದ ಕಲ್ಪನೆಯೂ ಇದೆ. ಇಂದಿನ ಯುವಕರು ಕೇವಲ ಮತದಾರರಲ್ಲ. ಅವರು ಕಥನಗಳನ್ನು ನಿರ್ಮಿಸುವವರು. ರಾಜಕೀಯ ಭಾಷೆಯನ್ನು ಬದಲಾಯಿಸುವವರು. ಸಾರ್ವಜನಿಕ ಚರ್ಚೆಯನ್ನು ರೂಪಿಸುವವರು. ಅವರ ಕೈಯಲ್ಲಿ ಈಗ ಘೋಷಣಾ ಫಲಕದ ಜೊತೆಗೆ ಮೀಮ್‌ ಟೆಂಪ್ಲೇಟ್‌ ಕೂಡ ಇದೆ.

“ಒಂದು ಕಾಲದಲ್ಲಿ ಘೋಷಣೆಗಳು ಗೋಡೆಗಳ ಮೇಲೆ ಬರೆಯಲ್ಪಡುತ್ತಿದ್ವು. ಇಂದು ಅವು ಮೀಮ್ಸ್‌ ಆಗಿ ಲಕ್ಷಾಂತರ ಮೊಬೈಲ್‌ ಪರದೆಗಳಲ್ಲಿ ಕಾಣಿಸುತ್ತಿವೆ. ಕೈಯಲ್ಲಿ ಫೋನ್‌ ಹಿಡಿದಿರುವ ಈ ಹೊಸ ತಲೆಮಾರಿಗೆ ಸುಮ್ಮನಿರಿ, ಸಹಿಸಿಕೊಳ್ಳಿ ಎಂದು ಹೇಳುವುದು  ಅಷ್ಟು ಸುಲಭವಿಲ್ಲ.” ಕಾಲಕ್ಕೆ ತಕ್ಕತೆ ಎಲ್ಲವೂ ಬದಲಾಗಬೇಕು ಎಂದು ಕಾರ್ಲ್‌ ಮಾರ್ಕ್ಸ್‌ ಪ್ರತಿಪಾದಿಸಿದ್ದನ್ನು ನಾವು ಗಮನಿಸಬೇಕಿದೆ. “ಐತಿಹಾಸಿಕ ಭೌತವಾದ”ದ (Historical Materialism) ಪ್ರಕಾರ, ಸಮಾಜ, ಆರ್ಥಿಕತೆ ಮತ್ತು ರಾಜಕೀಯ ವ್ಯವಸ್ಥೆಗಳು ಕಾಲಕ್ಕೆ ತಕ್ಕಂತೆ, ಉತ್ಪಾದನಾ ವಿಧಾನಗಳಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗುತ್ತಲೇ ಇರುತ್ತವೆ. ಮತ್ತು ಬದಲಾಗಲೇಬೇಕು.

ಇದನ್ನೂ ನೋಡಿ : ಯುವಜನರನ್ನು “ಕಾಕ್ರೋಚ್” ಎಂದವರ ವಿರುದ್ಧ ಡಿಜಿಟಲ್‌ ಚಳವಳಿ! – ಕಾಕ್ರೋಚ್ ಜನತಾ ಪಾರ್ಟಿ Janashakthi Media

Donate Janashakthi Media

Leave a Reply

Your email address will not be published. Required fields are marked *